Kitchen Hacks 
ಲೈಫ್‌ಸ್ಟೈಲ್

Kitchen Hacks: ಫ್ರಿಡ್ಜ್‌ನಿಂದ ಕೆಟ್ಟ ವಾಸನೆ ಬರ್ತಿದೆಯೇ? ಇಲ್ಲಿದೆ ನಿಮಿಷಗಳಲ್ಲಿ ಪರಿಹಾರ ನೀಡುವ ಸಿಂಪಲ್ ಟಿಪ್ಸ್!

ಬೆಂಗಳೂರು: ಅತಿಯಾದ ತಾಪಮಾನದ ಕಾರಣದಿಂದಾಗಿ ಹಾಲು, ತರಕಾರಿ ಸೇರಿದಂತೆ ದಿನಬಳಕೆಯ ಆಹಾರ ಪದಾರ್ಥಗಳು ಬೇಗನೆ(Kitchen Hacks) ಹಾಳಾಗುತ್ತಿವೆ. ಇದರಿಂದಾಗಿ ಅನೇಕರ ಮನೆಯ ರೆಫ್ರಿಜರೇಟರ್ (ಫ್ರಿಡ್ಜ್) ತೆರೆದ ತಕ್ಷಣ ವಿಚಿತ್ರವಾದ ಕೆಟ್ಟ ವಾಸನೆ ಬರುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಈ ಸಮಸ್ಯೆಯಿಂದ ಇಡೀ ಅಡುಗೆಮನೆಯ ವಾತಾವರಣವೇ ಕೆಡುತ್ತಿದ್ದು, ಇದಕ್ಕೆ ಸರಳ ಮನೆಮದ್ದುಗಳ ಮೂಲಕ ಹೇಗೆ ಮುಕ್ತಿ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

ಫ್ರಿಡ್ಜ್‌ನಲ್ಲಿ ಕೆಟ್ಟ ವಾಸನೆ ಬರಲು ಕಾರಣವೇನು?

ಬೇಸಿಗೆಯಲ್ಲಿ ತಾಪಮಾನ ಹೆಚ್ಚಾದಾಗ ಆಹಾರ ಪದಾರ್ಥಗಳು ಬೇಗನೆ ಕೊಳೆಯಲು ಅಥವಾ ಹುಳಿಯಾಗಲು ಪ್ರಾರಂಭಿಸುತ್ತವೆ. ಫ್ರಿಡ್ಜ್‌ನಲ್ಲಿ ಇಡುವ ಕತ್ತರಿಸಿದ ಹಣ್ಣುಗಳು, ತರಕಾರಿಗಳು, ಉಳಿದ ಅನ್ನ ಅಥವಾ ಸಾರನ್ನು ಸರಿಯಾಗಿ ಮುಚ್ಚಿಡದಿದ್ದರೆ, ಅವುಗಳ ವಾಸನೆ ಇಡೀ ಫ್ರಿಡ್ಜ್‌ ತುಂಬಾ ಹರಡುತ್ತದೆ. ಇದರೊಂದಿಗೆ ಫ್ರಿಡ್ಜ್‌ನೊಳಗಿನ ತೇವಾಂಶವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ (ಫಂಗಸ್) ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಅಡುಗೆಮನೆಯಲ್ಲಿ ಸರಿಯಾದ ಗಾಳಿಯ ಸಂಚಾರ ಇಲ್ಲದಿದ್ದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
ನಿಮ್ಮ ಮನೆಯ ಫ್ರಿಡ್ಜ್ ಕಲೆ ರಹಿತವಾಗಿ ಹಾಗೂ ಸದಾ ತಾಜಾವಾಗಿರಲು ಅಡುಗೆಮನೆಯಲ್ಲಿಯೇ ಸಿಗುವ ಈ 3 ವಸ್ತುಗಳನ್ನು ಬಳಸಿ.

1. ಅಡುಗೆ ಸೋಡಾದ ಮ್ಯಾಜಿಕ್ (Baking Soda)

ಫ್ರಿಡ್ಜ್‌ನ ದುರ್ವಾಸನೆ ಹೋಗಲಾಡಿಸಲು ಅಡುಗೆ ಸೋಡಾ (ಬೇಕಿಂಗ್ ಸೋಡಾ) ಅತ್ಯಂತ ಪರಿಣಾಮಕಾರಿ.
ಬಳಕೆ ಹೇಗೆ?: ಒಂದು ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಅಡುಗೆ ಸೋಡಾವನ್ನು ಹಾಕಿ, ಅದನ್ನು ಫ್ರಿಡ್ಜ್‌ನ ಒಂದು ಮೂಲೆಯಲ್ಲಿ ಇಡಿ. ಇದು ಒಳಗಿರುವ ಎಲ್ಲಾ ಕೆಟ್ಟ ವಾಸನೆಯನ್ನು ತಾನಾಗಿಯೇ ಹೀರಿಕೊಳ್ಳುತ್ತದೆ.
ಶುಚಿತ್ವಕ್ಕೆ: ಫ್ರಿಡ್ಜ್ ಒಳಗಿನ ಟ್ರೇ ಅಥವಾ ಶೆಲ್ಫ್‌ಗಳ ಮೇಲೆ ಕಲೆಗಳಾಗಿದ್ದರೆ, ಅಡುಗೆ ಸೋಡಾಕ್ಕೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ಮಾಡಿ ಒರೆಸಿದರೆ ಕಲೆಗಳು ನಿಮಿಷಗಳಲ್ಲಿ ಮಾಯವಾಗುತ್ತವೆ.

2. ನಿಂಬೆಹಣ್ಣಿನ ನೈಸರ್ಗಿಕ ತಾಜಾತನ (Lemon)

ಬಳಕೆ ಹೇಗೆ?: ನಿಂಬೆಹಣ್ಣಿನ ರಸವನ್ನು ಅಥವಾ ಕೇವಲ ಅದರ ಸಿಪ್ಪೆಗಳನ್ನು ಫ್ರಿಡ್ಜ್‌ನೊಳಗೆ ಇಡುವುದರಿಂದ ಕೆಟ್ಟ ವಾಸನೆ ದೂರವಾಗಿ ತಾಜಾತನ ಮೂಡುತ್ತದೆ. ಇನ್ನು ಹೆಚ್ಚಿನ ಫಲಿತಾಂಶಕ್ಕಾಗಿ, ಅಡುಗೆ ಸೋಡಾ ಇರುವ ಬಟ್ಟಲಿಗೆ ಕೆಲವು ಹನಿ ನಿಂಬೆ ರಸವನ್ನು ಹಿಂಡಿ ಸಹ ಫ್ರಿಡ್ಜ್‌ನಲ್ಲಿ ಇಡಬಹುದು.

3. ಕಾಫಿ ಪುಡಿಯ ಕಮಾಲ್ (Coffee Powder)

ಫ್ರಿಡ್ಜ್‌ನಲ್ಲಿ ಮಾಂಸಾಹಾರಿ ಅಡುಗೆ ಅಥವಾ ಬಲವಾದ ಮಸಾಲೆ ವಾಸನೆ ದೀರ್ಘಕಾಲ ಉಳಿದುಕೊಂಡಿದ್ದರೆ ಕಾಫಿ ಪುಡಿ ಬೆಸ್ಟ್ ಐಡಿಯಾ.
ಬಳಕೆ ಹೇಗೆ?: ಒಂದು ಸಣ್ಣ ಕಪ್‌ನಲ್ಲಿ ಒಣಗಿದ ಕಾಫಿ ಪುಡಿಯನ್ನು ತುಂಬಿಸಿ ಫ್ರಿಡ್ಜ್‌ನಲ್ಲಿಡಿ. ಕಾಫಿ ಪುಡಿಯು ಅಹಿತಕರ ವಾಸನೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಫ್ರಿಡ್ಜ್‌ನೊಳಗೆ ಸೌಮ್ಯವಾದ ಮತ್ತು ಹಿತಕರವಾದ ಸುವಾಸನೆ ಇರುವಂತೆ ನೋಡಿಕೊಳ್ಳುತ್ತದೆ,
ಬೇಸಿಗೆಯಲ್ಲಿ ಫ್ರಿಡ್ಜ್‌ನಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ಇಡುವಾಗ ಗಾಳಿಯಾಡದ ಡಬ್ಬಿಗಳಲ್ಲಿ (Air Tight Containers) ಮುಚ್ಚಿಡುವುದು ಒಳ್ಳೆಯದು. ವಾರಕ್ಕೊಮ್ಮೆ ಫ್ರಿಡ್ಜ್ ಸ್ವಚ್ಛಗೊಳಿಸುವ ಅಭ್ಯಾಸ ರೂಢಿಸಿಕೊಂಡರೆ ದುರ್ವಾಸನೆಯ ಸಮಸ್ಯೆಯೇ ಬರುವುದಿಲ್ಲ,(ಏಜೆನ್ಸೀಸ್​).