World Costliest Mango 
ಆಹಾರ

World Costliest Mango: 1 ಕೆಜಿ ಮಾವಿಗೆ ಬರುತ್ತೆ ಲಕ್ಸುರಿ ಬೈಕ್! ಜಗತ್ತಿನ ಅತ್ಯಂತ ಕಾಸ್ಟ್ಲಿ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರು: ಮಾವಿನ ಹಣ್ಣು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವಿನಲ್ಲಿ ನೂರಾರು ತಳಿಗಳಿವೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಕೆಜಿಗೆ 100 ರಿಂದ 500 ರೂಪಾಯಿ ಬೆಲೆ ಇರುತ್ತದೆ. ಆದರೆ, ಜಗತ್ತಿನಲ್ಲಿ ಅಂತಹದೊಂದು(World Costliest Mango) ಮಾವಿನ ತಳಿಯಿದೆ, ಅದರ ಒಂದು ಕೆಜಿ ಬೆಲೆಯಲ್ಲಿ ನೀವು ಒಂದು ಐಷಾರಾಮಿ ಬೈಕ್ ಅಥವಾ ಸಣ್ಣ ಕಾರನ್ನೇ ಖರೀದಿಸಬಹುದು! ಹೌದು, ಇದು 'ಮಿಯಾಜಾಕಿ' (Miyazaki) ಎಂಬ ಜಗತ್ತಿನ ಅತ್ಯಂತ ದುಬಾರಿ ಮಾವು.

ಏನಿದು ಮಿಯಾಜಾಕಿ ಮಾವು? ಇದರ ವಿಶೇಷತೆ ಏನು?

ಜಪಾನ್ ದೇಶದ ಮಿಯಾಜಾಕಿ ನಗರದಲ್ಲಿ ಮೊದಲು ಬೆಳೆಯಲಾದ ಈ ಮಾವಿನ ಹಣ್ಣನ್ನು 'ಸೂರ್ಯನ ಮೊಟ್ಟೆ' (Egg of the Sun) ಎಂದು ಕರೆಯಲಾಗುತ್ತದೆ. ಸಾಮಾನ್ಯ ಮಾವಿನ ಹಣ್ಣುಗಳು ಹಳದಿ ಅಥವಾ ಹಸಿರು ಬಣ್ಣದಲ್ಲಿದ್ದರೆ, ಮಿಯಾಜಾಕಿ ಮಾವು ದಟ್ಟವಾದ ಕೆಂಪು ಅಥವಾ ನೇರಳೆ ಬಣ್ಣದಲ್ಲಿರುತ್ತದೆ.
ಬೆಲೆ ಎಷ್ಟು?: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾವಿನ ಹಣ್ಣಿನ ಬೆಲೆ ಒಂದು ಕೆಜಿಗೆ ಸುಮಾರು 2.5 ಲಕ್ಷದಿಂದ 3 ಲಕ್ಷ ರೂಪಾಯಿಗಳವರೆಗೆ ಇರುತ್ತದೆ!
ತೂಕ ಮತ್ತು ಗಾತ್ರ: ಒಂದೊಂದು ಹಣ್ಣು ಸುಮಾರು 350 ಗ್ರಾಂನಿಂದ 900 ಗ್ರಾಂವರೆಗೆ ತೂಕವಿರುತ್ತದೆ. ಅಂದರೆ ಕೇವಲ ಎರಡು ಹಣ್ಣುಗಳು ಸೇರಿ ಒಂದು ಕೆಜಿಯಾಗಬಹುದು.
ರುಚಿ: ಇದರಲ್ಲಿ ಸಕ್ಕರೆಯ ಪ್ರಮಾಣ ಶೇ. 15ಕ್ಕಿಂತ ಹೆಚ್ಚಿರುತ್ತದೆ. ಅತಿ ಹೆಚ್ಚಿನ ಸಿಹಿ ಮತ್ತು ಯಾವುದೇ ನಾರಿನಂಶವಿಲ್ಲದ ಬೆಣ್ಣೆಯಂತಹ ತಿರುಳು ಇದರ ವಿಶೇಷ.

ಭಾರತದಲ್ಲೂ ಬೆಳೆಯಲಾಗುತ್ತಿದೆ ಈ 'ಚಿನ್ನದ' ಹಣ್ಣು!

ಹಿಂದೆ ಕೇವಲ ಜಪಾನ್‌ಗೆ ಸೀಮಿತವಾಗಿದ್ದ ಈ ತಳಿ ಈಗ ಭಾರತದ ರೈತರ ಗಮನವನ್ನೂ ಸೆಳೆದಿದೆ. ಮಧ್ಯಪ್ರದೇಶ, ಬಿಹಾರ ಮತ್ತು ಒಡಿಶಾದ ಕೆಲವು ರೈತರು ಮಿಯಾಜಾಕಿ ಮಾವನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. ಮಧ್ಯಪ್ರದೇಶದ ರೈತರೊಬ್ಬರು ತಮ್ಮ ತೋಟದಲ್ಲಿ ಬೆಳೆದಿರುವ ಈ ಮಾವನ್ನು ಕಳ್ಳರಿಂದ ರಕ್ಷಿಸಲು ಸಿಕುರಿಟಿ ಗಾರ್ಡ್‌ಗಳು ಮತ್ತು ನಾಯಿಗಳನ್ನು ನೇಮಿಸಿಕೊಂಡ ಸುದ್ದಿ ಈ ಹಿಂದೆ ಭಾರಿ ವೈರಲ್ ಆಗಿತ್ತು.

ಇಷ್ಟೊಂದು ದುಬಾರಿ ಏಕೆ?

ಕಟ್ಟುನಿಟ್ಟಿನ ಪೋಷಣೆ: ಈ ಮಾವನ್ನು ಬೆಳೆಯುವುದು ಅಷ್ಟು ಸುಲಭವಲ್ಲ. ಪ್ರತಿ ಹಣ್ಣಿಗೂ ಪ್ರತ್ಯೇಕವಾದ ನೆಟ್ (ಜಾಲರಿ) ಕಟ್ಟಿ ಸೂರ್ಯನ ಬೆಳಕು ಎಲ್ಲಾ ಕಡೆ ಸಮಾನವಾಗಿ ಬೀಳುವಂತೆ ನೋಡಿಕೊಳ್ಳಲಾಗುತ್ತದೆ.
ಗುಣಮಟ್ಟದ ಪರೀಕ್ಷೆ: ಪ್ರತಿ ಹಣ್ಣನ್ನು ತೂಕ, ಬಣ್ಣ ಮತ್ತು ಸಕ್ಕರೆಯ ಪ್ರಮಾಣದ ಆಧಾರದ ಮೇಲೆ ಕಟ್ಟುನಿಟ್ಟಾಗಿ ಪರಿಶೀಲಿಸಿದ ನಂತರವೇ ಮಾರುಕಟ್ಟೆಗೆ ಬಿಡಲಾಗುತ್ತದೆ.
ಔಷಧೀಯ ಗುಣ: ಇದರಲ್ಲಿ ಆಂಟಿ-ಆಕ್ಸಿಡೆಂಟ್‌ಗಳು, ಬೀಟಾ-ಕ್ಯಾರೋಟಿನ್ ಮತ್ತು ಫೋಲಿಕ್ ಆಸಿಡ್ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಅತ್ಯಂತ ಉತ್ತಮ ಎಂದು ಪರಿಗಣಿಸಲಾಗಿದೆ.
ಸಾಮಾನ್ಯವಾಗಿ ಹರಾಜಿನ ಮೂಲಕ ಮಾರಾಟವಾಗುವ ಈ ಮಾವನ್ನು ಶ್ರೀಮಂತರು ಉಡುಗೊರೆಯಾಗಿ ನೀಡಲು ಬಳಸುತ್ತಾರೆ. ಮಾವು ಪ್ರಿಯರಿಗಂತೂ ಇದು ಕೇವಲ ಹಣ್ಣಲ್ಲ, ಒಂದು ಅದ್ಭುತ ಕನಸಾಗಿದೆ,(ಏಜೆನ್ಸೀಸ್).