ಗಣಪತಿಗೆ ಕಡುಬಿನ ಹಿಂದೆ ಇದೆ ಪುರಾಣದ ಕುತೂಹಲಕಾರಿ ಕಥೆ 
ಆಹಾರ

ಗಣಪನಿಗೆ ಕಡುಬು ಯಾಕೆ ಇಷ್ಟ? ಇದರ ಹಿಂದೆ ಇದೆ ಇಂಟರೆಸ್ಟಿಂಗ್ ಪುರಾಣದ ಕಥೆ | Ganesha Kadubu Story

ಪ್ರಮುಖ ಮುಖ್ಯಾಂಶಗಳು

  • ಗಣಪತಿಗೆ ಕಡುಬು, ಮೋದಕ ಯಾಕೆ ಪ್ರಿಯ?
  • ಗಣೇಶ-ಕಾರ್ತಿಕೇಯರ ದಿವ್ಯ ಮೋದಕದ ಕಥೆ
  • ಕಡುಬಿನ ಒಳಗಿನ ಹೂರಣಕ್ಕೂ ಇದೆ ಆಧ್ಯಾತ್ಮಿಕ ಅರ್ಥ
Ganesha Kadubu Story: ಗಣೇಶ ಚತುರ್ಥಿ ಬಂತೆಂದರೆ ಗಣಪತಿಗೆ ಕಡುಬು, ಮೋದಕ, ಪಂಚಕಜ್ಜಾಯ ಸೇರಿದಂತೆ ಹಲವು ಸಿಹಿ ತಿನಿಸುಗಳನ್ನು ನೈವೇದ್ಯವಾಗಿ ಅರ್ಪಿಸುವುದು ಸಾಮಾನ್ಯ. ಅದರಲ್ಲೂ ಕಡುಬು ಮತ್ತು ಮೋದಕ ಗಣಪತಿಗೆ ತುಂಬಾ ಪ್ರಿಯ ಎಂಬ ನಂಬಿಕೆ ಹಿಂದಿನಿಂದಲೂ ಇದೆ. 
ಇನ್ನು, ಗಣೇಶನನ್ನು ‘ಮೋದಕಪ್ರಿಯ’ ಎಂದೂ ಕರೆಯಲಾಗುತ್ತದೆ. ಆದ್ರೆ ಗಣಪತಿಗೆ ಕಡುಬು ಯಾಕೆ ಇಷ್ಟ? ಇದರ ಹಿಂದೆ ಪುರಾಣಗಳಲ್ಲಿ ಹಲವು ಕುತೂಹಲಕಾರಿ ಕಥೆಗಳಿವೆ.

ಜ್ಞಾನಕ್ಕಾಗಿ ಸಿಕ್ಕಿತಂತೆ ದಿವ್ಯ ಮೋದಕ

ಪುರಾಣದ ಕಥೆಯೊಂದರ ಪ್ರಕಾರ, ದೇವತೆಗಳು ಶಿವ-ಪಾರ್ವತಿಗೆ ದಿವ್ಯ ಮೋದಕ ನೀಡುತ್ತಾರೆ. ಇದನ್ನು ತಿಂದವರಿಗೆ ಅಪಾರ ಜ್ಞಾನ ಮತ್ತು ಬುದ್ಧಿವಂತಿಕೆ ಸಿಗುತ್ತದೆ ಎಂಬ ನಂಬಿಕೆ ಇತ್ತು. ಮೋದಕ ಯಾರಿಗೆ ಕೊಡಬೇಕು ಎಂಬ ಪ್ರಶ್ನೆ ಬಂದಾಗ, ಜಗತ್ತನ್ನು ಮೂರು ಬಾರಿ ಸುತ್ತಿ ಮೊದಲು ಬರುವವರಿಗೆ ಮೋದಕ ಎಂದು ಶಿವ-ಪಾರ್ವತಿ ಹೇಳುತ್ತಾರೆ.

ಗಣೇಶ-ಕಾರ್ತಿಕೇಯರ ಮೋದಕದ ಕಥೆ

ಕಾರ್ತಿಕೇಯ ನವಿಲಿನ ಮೇಲೆ ಕುಳಿತು ಜಗತ್ತನ್ನು ಸುತ್ತಲು ಹೊರಡುತ್ತಾರೆ. ಆದರೆ ಗಣೇಶ ‘ತಂದೆ-ತಾಯಿಯೇ ನನಗೆ ಇಡೀ ಜಗತ್ತು’ ಎಂದು ಹೇಳಿ ಶಿವ-ಪಾರ್ವತಿಗೆ ಮೂರು ಬಾರಿ ಪ್ರದಕ್ಷಿಣೆ ಹಾಕುತ್ತಾನೆ. ಗಣೇಶನ ಬುದ್ಧಿವಂತಿಕೆ ಮತ್ತು ಭಕ್ತಿಗೆ ಮೆಚ್ಚಿದ ಪಾರ್ವತಿ ದೇವಿ ದಿವ್ಯ ಮೋದಕವನ್ನು ಏಕದಂತನಿಗೆ ನೀಡುತ್ತಾಳೆ. ಹೀಗಾಗಿ ಮೋದಕ ಗಣಪತಿಗೆ ಪ್ರಿಯವಾಯಿತು ಎಂಬ ನಂಬಿಕೆ ಇದೆ.
 ಶಿವ-ಪಾರ್ವತಿಗೆ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಗಣಪ

ಅನುಸೂಯ ದೇವಿಯ ಮನೆಯಲ್ಲೂ ನಡೆದಿತ್ತಂತೆ ವಿಶೇಷ ಘಟನೆ

ಇನ್ನೊಂದು ಪುರಾಣ ಕಥೆಯ ಪ್ರಕಾರ, ಅನುಸೂಯ ದೇವಿ ಶಿವ, ಪಾರ್ವತಿ ಹಾಗೂ ಬಾಲ ಗಣೇಶನನ್ನು ಊಟಕ್ಕೆ ಕರೆಯುತ್ತಾರೆ. ಎಷ್ಟು ಊಟ ಬಡಿಸಿದರೂ ಗಣೇಶನ ಹಸಿವು ತೀರಲ್ಲ. ಕೊನೆಗೆ ಅನುಸೂಯ ದೇವಿ ನೀಡಿದ ಒಂದು ಸಣ್ಣ ಮೋದಕ ತಿಂದ ಕೂಡಲೇ ಗಣೇಶನಿಗೆ ಸಂಪೂರ್ಣ ತೃಪ್ತಿಯಾಗುತ್ತದೆ. ಹೀಗಾಗಿ ಮೋದಕ ಗಣೇಶನಿಗೆ ವಿಶೇಷವಾಗಿ ಪ್ರಿಯವಾಯಿತು ಎಂಬ ನಂಬಿಕೆ ಇದೆ.

ಕಡುಬಿನಲ್ಲೂ ಇದೆ ಒಂದು ಅರ್ಥ

ಕಡುಬಿನ ಹೊರಗಿನ ಅಕ್ಕಿ ಹಿಟ್ಟಿನ ಪದರವನ್ನು ಅಹಂಕಾರ ಮತ್ತು ಲೌಕಿಕ ಜೀವನದ ಸಂಕೇತವಾಗಿ, ಒಳಗಿನ ಬೆಲ್ಲ-ಕಾಯಿ ಹೂರಣವನ್ನು ಜ್ಞಾನ, ತೃಪ್ತಿ ಮತ್ತು ಆನಂದದ ಸಂಕೇತವಾಗಿ ನೋಡಲಾಗುತ್ತದೆ. ಅಂದರೆ, ಅಹಂಕಾರ ಬಿಟ್ಟು ಒಳಗಿನ ಜ್ಞಾನ ಮತ್ತು ಸಂತೋಷ ಕಂಡುಕೊಳ್ಳಬೇಕು ಎಂಬ ಸಂದೇಶವನ್ನು ಕಡುಬು ಸಾರುತ್ತದೆ ಎಂಬ ನಂಬಿಕೆಯಿದೆ.
ಕಡುಬಿನ ಹೂರಣಕ್ಕೂ ಆಧ್ಯಾತ್ಮಿಕ ಅರ್ಥ
ಹೀಗಾಗಿ ಗಣೇಶ ಚತುರ್ಥಿಯಂದು ಗಣಪತಿಗೆ ಕಡುಬು ಅರ್ಪಿಸುವುದು ಕೇವಲ ಸಿಹಿ ತಿನಿಸು ನೀಡುವ ಸಂಪ್ರದಾಯವಲ್ಲ. ಜ್ಞಾನ, ಬುದ್ಧಿವಂತಿಕೆ, ಭಕ್ತಿ ಮತ್ತು ಸಂತೋಷದ ಸಂಕೇತವಾಗಿಯೂ ಕಡುಬನ್ನು ನೋಡಲಾಗುತ್ತದೆ.