ಗಾಜಿನ ಬಾಟಲ್‌ನಲ್ಲಿರುವ ಪಾನೀಯ ಪ್ಲಾಸ್ಟಿಕ್ ಸೀಸೆಗಿಂತ ಹೆಚ್ಚು ರುಚಿ ಯಾಕೆ?
Glass Bottle vs Plastic Bottle: ಚಹಾ ಕಪ್‌ನಲ್ಲಾ, ಫ್ಲಾಸ್ಕ್‌ನಲ್ಲಾ? ಫ್ರೆಶ್ ಕಾಫಿನಾ, ಇನ್‌ಸ್ಟಂಟ್ ಕಾಫಿನಾ? ಇಂಥ ಸಣ್ಣ-ಪುಟ್ಟ ವಿಚಾರಗಳಿಗೂ ಜನರ ನಡುವೆ ಚರ್ಚೆ, ವಾದ ನಡೆಯೋದು ಸಾಮಾನ್ಯ. ಇದೇ ಪಟ್ಟಿಗೆ ಈಗ ಮತ್ತೊಂದು ಪ್ರಶ್ನೆ ಸೇರಿಸಬಹುದು. ಹಾಗೆಯೇ ತಂಪು ಪಾನೀಯ ಗಾಜಿನ ಸೀಸೆಯಲ್ಲಾ, ಪ್ಲಾಸ್ಟಿಕ್ ಬಾಟಲ್‌ನಲ್ಲಾ?
ಎರಡೂ ಒಂದೇ ಬ್ರ್ಯಾಂಡ್. ಒಂದೇ ಫ್ಲೇವರ್. ಒಂದೇ ಪ್ರಮಾಣದ ಸಕ್ಕರೆ. ಹಾಗಿದ್ದರೂ ಗ್ಲಾಸ್ ಬಾಟಲ್‌ನಿಂದ ಕುಡಿದಾಗ ಪಾನೀಯ ಇನ್ನೂ ಜಾಸ್ತಿ ರುಚಿ ಅನಿಸುತ್ತೆ ಅಂತ ಹಲವರು ಹೇಳುತ್ತಾರೆ. ಇದು ಬರೀ ಹಳೆಯ ನೆನಪುಗಳ ಪ್ರಭಾವ ಮಾತ್ರ ಅಲ್ಲ. ಬಾಟಲ್ ತಯಾರಿಸಲು ಬಳಸುವ ವಸ್ತುವೇ ಡ್ರಿಂಕ್‌ನ ರುಚಿ ಮತ್ತು ಅನುಭವದ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುತ್ತದೆ.
ಗಾಜು ಪಾನೀಯದ ರುಚಿಗೆ ಅಡ್ಡಿಯಾಗಲ್ಲ
ಗಾಜು ಸ್ಥಿರವಾದ, ರಂಧ್ರಗಳಿಲ್ಲದ ವಸ್ತು. ಸಾಮಾನ್ಯ ಪರಿಸ್ಥಿತಿಯಲ್ಲಿ ಇದು ಒಳಗಿರುವ ಪಾನೀಯದ ಜೊತೆ ಸುಲಭವಾಗಿ ರಾಸಾಯನಿಕ ಪ್ರತಿಕ್ರಿಯೆ ನಡೆಸುವುದಿಲ್ಲ. ಇದು ತಂಪು ಪಾನೀಯಗಳ ವಿಚಾರದಲ್ಲಿ ಮುಖ್ಯ. ತಂಪು ಪಾನೀಯದಲ್ಲಿ ಬರೀ ನೀರು, ಸಕ್ಕರೆ ಮಾತ್ರ ಇರಲ್ಲ. ಅದರಲ್ಲಿ ಹುಳಿ ಅಂಶ, ರುಚಿ-ಸುವಾಸನೆ ನೀಡುವ ಪದಾರ್ಥಗಳು ಮತ್ತು ಕಾರ್ಬನ್ ಡೈಆಕ್ಸೈಡ್ ಸೇರಿದಂತೆ ಹಲವು ಅಂಶಗಳಿರುತ್ತವೆ. ಗಾಜು ಈ ಅಂಶಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಹೀಗಾಗಿ ಪಾನೀಯದ ಮೂಲ ರುಚಿ ಮತ್ತು ವಾಸನೆ ಹಾಗೆಯೇ ಉಳಿಯಲು ಗಾಜು ಸಹಾಯ ಮಾಡುತ್ತದೆ.
ಪ್ಲಾಸ್ಟಿಕ್‌ನಲ್ಲಿ ಯಾಕೆ ಸ್ವಲ್ಪ ಡಿಫರೆಂಟ್?
ಪ್ಲಾಸ್ಟಿಕ್ ಬಾಟಲಿ ಸಂಪೂರ್ಣವಾಗಿ ವಾಸನೆ ಅಥವಾ ಅನಿಲಗಳನ್ನು ತಡೆಯುವುದಿಲ್ಲ. ಕೆಲವು ಪ್ಲಾಸ್ಟಿಕ್‌ಗಳು ಹೊರಗಿನ ವಾಸನೆ ಹಾಗೂ ರುಚಿಯ ಅಂಶಗಳೊಂದಿಗೆ ಸಂವಹನ ನಡೆಸಬಹುದು. ಬಿಸಿಲು, ಹೆಚ್ಚಿನ ತಾಪಮಾನ ಹಾಗೂ ಪದೇಪದೆ ಬಳಕೆಯಿಂದ ಈ ಪರಿಣಾಮ ಹೆಚ್ಚಾಗಬಹುದು. ಹೀಗಾಗಿ ಒಂದೇ ಪಾನೀಯವಾಗಿದ್ದರೂ, ಗ್ಲಾಸ್ ಬಾಟಲಿಯಿಂದ ಕುಡಿದಾಗ ರುಚಿ ಹೆಚ್ಚು ಸ್ವಚ್ಛ ಮತ್ತು ತಾಜಾ ಅನಿಸಬಹುದು.
ಗಾಜಿನ ಬಾಟಲಿಯ ಪಾನೀಯದಲ್ಲಿ ಹೆಚ್ಚು ನೊರೆ ಯಾಕೆ?
ಇಲ್ಲಿ ಪ್ರಮುಖ ಪಾತ್ರ ವಹಿಸೋದು ಕಾರ್ಬನ್ ಡೈಆಕ್ಸೈಡ್ (CO₂). ತಂಪು ಪಾನೀಯಕ್ಕೆ ನೊರೆ ಮತ್ತು ಗುಳ್ಳೆ ನೀಡೋದು ಇದೇ ಅನಿಲ. ಆದರೆ ಇದನ್ನು ಬಾಟಲಿಯೊಳಗೆ ಹೆಚ್ಚು ಕಾಲ ಉಳಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಗಾಜು ಅನಿಲಗಳು ಹೊರಹೋಗದಂತೆ ಉತ್ತಮ ತಡೆಗೋಡೆಯಾಗಿ ಕೆಲಸ ಮಾಡುತ್ತದೆ. ಹೀಗಾಗಿ ಕಾರ್ಬನ್ ಡೈಆಕ್ಸೈಡ್ ಬಾಟಲಿಯೊಳಗೆ ಉಳಿಯಲು ಸಹಾಯವಾಗುತ್ತೆ. ಪ್ಲಾಸ್ಟಿಕ್‌ನಲ್ಲಿ ಅನಿಲಗಳು ನಿಧಾನವಾಗಿ ಹೊರಹೋಗುವ ಸಾಧ್ಯತೆ ಇರುವುದರಿಂದ, ಕಾಲ ಕಳೆದಂತೆ ಪಾನೀಯದಲ್ಲಿನ ನೊರೆ ಕಡಿಮೆಯಾಗಬಹುದು.
ತಾಪಮಾನವೂ ರುಚಿಯ ಮೇಲೆ ಪರಿಣಾಮ ಬೀರುತ್ತೆ
ಡ್ರಿಂಕ್ ಎಷ್ಟು ತಣ್ಣಗಿದೆ ಅನ್ನೋದು ಅದರ ರುಚಿಯ ಅನುಭವದ ಮೇಲೆ ಪರಿಣಾಮ ಬೀರುತ್ತೆ. ಚೆನ್ನಾಗಿ ಚಿಲ್ ಮಾಡಿದ ಗ್ಲಾಸ್ ಬಾಟಲಿ ತಾಪಮಾನವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ತಂಪು ಮತ್ತು ಕಾರ್ಬೊನೇಷನ್‌ನಿಂದ ಡ್ರಿಂಕ್ ಇನ್ನಷ್ಟು ಫ್ರೆಶ್ ಹಾಗೂ ಟೇಸ್ಟಿಯಾಗಿ ಅನಿಸಬಹುದು. *ಹೀಗಾಗಿ, ಚೆನ್ನಾಗಿ ತಣ್ಣಗಾದ ಪಾನೀಯ ಸರಿಯಾದ ಫಿಜ್ ಮತ್ತು ಗ್ಲಾಸ್ ಬಾಟಲಿಯ ಕಾಂಬಿನೇಷನ್ ಡ್ರಿಂಕ್‌ನ ರುಚಿಯನ್ನು ಇನ್ನಷ್ಟು ಹೆಚ್ಚಿಸಬಹುದು
ಹಾಗಾದ್ರೆ ಪ್ಲಾಸ್ಟಿಕ್ ಬಾಟಲಿ ಅಂದ್ರೆ ಅಪಾಯನಾ?
ಇಲ್ಲಿ ಸ್ವಲ್ಪ ಜಾಗ್ರತೆ ಬೇಕು. ಕೆಲವು ಪ್ಲಾಸ್ಟಿಕ್‌ಗಳಲ್ಲಿ ಬಳಸುವ ರಾಸಾಯನಿಕಗಳ ಬಗ್ಗೆ ಹಲವು ವರ್ಷಗಳಿಂದ ಅಧ್ಯಯನಗಳು ನಡೆಯುತ್ತಿವೆ. ಉದಾಹರಣೆಗೆ, ಬಿಪಿಎ (BPA) ಎಂಬ ರಾಸಾಯನಿಕ ದೇಹದ ಹಾರ್ಮೋನ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಬಗ್ಗೆ ಸಂಶೋಧನೆಗಳಿವೆ. ಆದರೆ ಎಲ್ಲಾ ಪ್ಲಾಸ್ಟಿಕ್ ಬಾಟಲ್‌ಗಳು ಅಪಾಯಕಾರಿ" ಅಂತ ಹೇಳುವುದು ಸರಿಯಲ್ಲ. ಪೆಟ್ (PET) ಪ್ಲಾಸ್ಟಿಕ್‌ನ್ನು ಪಾನೀಯಗಳ ಬಾಟಲ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ರುಚಿಯಲ್ಲಿ ಮನಸ್ಸಿನ ಪಾತ್ರವೂ ಇದೆ
ಇದರಲ್ಲಿ ವಿಜ್ಞಾನ ಮಾತ್ರವಲ್ಲ, ನಮ್ಮ ಮನಸ್ಸಿನ ಪಾತ್ರವೂ ಇದೆ. ಗಾಜಿನ ಬಾಟಲಿಯ ತೂಕ, ಅದರ ಆಕಾರ, ಮುಚ್ಚಳ ತೆಗೆಯುವಾಗ ಕೇಳಿಸುವ ಶಬ್ದ ಹಾಗೂ ಕೈಗೆ ಸಿಗುವ ತಂಪು, ಇವೆಲ್ಲವೂ ಪಾನೀಯವನ್ನು ನಾವು ಹೇಗೆ ಅನುಭವಿಸುತ್ತೇವೆ ಎನ್ನುವುದರ ಮೇಲೆ ಪರಿಣಾಮ ಬೀರುತ್ತವೆ. ಇದರ ಜೊತೆಗೆ ಬಾಲ್ಯದ ನೆನಪುಗಳು ಕೂಡ ಗಾಜಿನ ಬಾಟಲಿಯ ಪಾನೀಯಕ್ಕೆ ಒಂದು ವಿಶೇಷ ಅನುಭವ ನೀಡಬಹುದು.
ಹೀಗಾಗಿ, ‘ಗಾಜಿನ ಬಾಟಲಿಯಲ್ಲೇ ರುಚಿ ಬೇರೆ ಇದೆ‘ ಅನ್ನೋ ಮಾತನ್ನು ಬರೀ ಭ್ರಮೆ ಅಂತ ತಳ್ಳಿಹಾಕಬೇಕಿಲ್ಲ. ಇದರ ಹಿಂದೆ ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಮನಸ್ಸಿನ ಅನುಭವ, ಈ ಮೂರರ ಪಾತ್ರವೂ ಇರಬಹುದು,(ಏಜೆನ್ಸೀಸ್).