ನಾಲಿಗೆಗೆ ರುಚಿ ನೀಡುವ ಬ್ರೆಡ್
- ಬೆಳಗ್ಗೆ ಎದ್ದ ತಕ್ಷಣವೇ ಟೀ-ಕಾಫಿ ಇದ್ದರೆ ಚೆಂದ
- ಅದರಲ್ಲೂ ಬಿಸಿ ಬಿಸಿ ಚಹಾ ಜತೆ ಬ್ರೆಡ್ ಮಸ್ತ್ ಕಾಂಬಿನೇಷನ್
- ನಾಲಿಗೆಗೆ ರುಚಿ ನೀಡುವ ಬ್ರೆಡ್ ಆರೋಗ್ಯಕ್ಕೆ ತರಲಿದೆ ಕುತ್ತು
- ಬ್ರೆಡ್ ಸೇವನೆಯಿಂದ ಏನೆಲ್ಲ ಸಮಸ್ಯೆ? ಇಲ್ಲಿದೆ ವಿವರ
Bread: ಬೆಳಗ್ಗೆ ಎದ್ದ ಕೂಡಲೇ ಬಿಸಿ ಬಿಸಿ ಕಾಫಿ ಅಥವಾ ಟೀ ಕುಡಿದುಬಿಟ್ಟರೆ ಸಾಕಪ್ಪ! ನಮ್ಮ ಇಡೀ ದಿನ ಅದ್ಭುತ ಎಂದು ಭಾವಿಸುವ ಮಂದಿಯೇ ನಮ್ಮಲ್ಲಿ ಹೆಚ್ಚು. ಬೇಕರಿ ತಿನಿಸುಗಳಲ್ಲಿ ಬಹಳ ವೇಗವಾಗಿ ಹಾಗೂ ಹೆಚ್ಚು ಮಾರಾಟವಾಗುವ ಬ್ರೆಡ್ ಮತ್ತು ಬನ್ ಇಂದು ಬಹುತೇಕರ ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆಯ ನೆಚ್ಚಿನ ತಿನಿಸಾಗಿ ಮಾರ್ಪಟ್ಟಿದೆ ಎಂಬುದರಲ್ಲಿ ಕಿಂಚಿತ್ತು ಅನುಮಾನ ಬೇಡ. ಪ್ರತಿದಿನ ಬೆಳಗ್ಗಿನ ಚಹಾ/ ಕಾಫಿ ಜತೆಗೆ ಅಥವಾ ಜಾಮ್/ ಸಾಸ್ನೊಂದಿಗೆ ತಿನ್ನುವ ಅಭ್ಯಾಸ ಇಂದಿಗೂ ಹಲವರಿಗಿದೆ. ಅಸಲಿಗೆ ಬ್ರೆಡ್ ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯೇ? ಇದರಿಂದ ಏನೆಲ್ಲ ಸಮಸ್ಯೆಗಳು? ಎಂಬುದರ ವಿವರ ಹೀಗಿದೆ ಗಮನಿಸಿ.
ಇರಲಿ ಎಚ್ಚರ!
ಯಾರಿಗಾದರೂ ಹುಷಾರಿಲ್ಲ ಎಂದು ಅವರು ಆಸ್ಪತ್ರೆ ಪಾಲಾದರೆ, ಅವರಿಗೆ ಹಾಲು ಮತ್ತು ಬ್ರೆಡ್ ಕೊಡುವ ಪ್ರವೃತ್ತಿ ನಮ್ಮಲ್ಲಿದೆ. ಹೆಚ್ಚಾಗಿ ಹಳ್ಳಿಯ ಕಡೆ ಈ ಅಭ್ಯಾಸವಿದೆ. ಚಿಕ್ಕ ಮಕ್ಕಳಿಗೆ ಬ್ರೆಡ್ ಅಚ್ಚುಮೆಚ್ಚಿನ ತಿನಿಸು. ನಾಲಿಗೆಗೆ ರುಚಿ ನೀಡುವ ಬ್ರೆಡ್ ನಿಜಕ್ಕೂ ಉತ್ತಮ ಆಹಾರವಲ್ಲ. ಕಾರಣ, ಇದು ಮೈದಾ, ಪಾಮ್ ಆಯಿಲ್/ಡಾಲ್ಡಾ, ಈಸ್ಟ್ ಪುಡಿ ಸೇರಿ ಇನ್ನಿತರ ಸಾಮಾಗ್ರಿಗಳಿಂದ ತಯಾರಿಸ್ಪಲಟ್ಟ ಆಹಾರ ಅನ್ನೋದೇ ಆತಂಕಕಾರಿ ಸಂಗತಿ. ಬ್ರೆಡ್ ತಿನ್ನುವುದರಿಂದ ನಮ್ಮ ದೇಹಕ್ಕೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ಜೀರ್ಣಾಂಗ ವ್ಯವಸ್ಥೆಗೆ ಪೆಟ್ಟು
ವಾಸ್ತವವಾಗಿ, ಬ್ರೆಡ್ ಅನ್ನು ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರಲ್ಲಿ ಫೈಬರ್ ಇರುವುದಿಲ್ಲ. ಆದ್ದರಿಂದ, ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳುವಲ್ಲಿ ಫೈಬರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಮಲಬದ್ಧತೆ ಉಂಟಾಗುವುದಿಲ್ಲ. ಆದ್ರೆ, ಬ್ರೆಡ್ನಲ್ಲಿ ಫೈಬರ್ ಅಂಶದ ಕೊರತೆಯಿಂದಾಗಿ, ಮಲಬದ್ಧತೆಯ ಸಾಧ್ಯತೆ ಹೆಚ್ಚು. ಜೀರ್ಣಕ್ರಿಯೆಗೂ ತೊಂದರೆ. ಹೆಚ್ಚು ಬ್ರೆಡ್ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಮತ್ತು ವಾಯು, ಆಮ್ಲೀಯತೆ ಮತ್ತು ಗ್ಯಾಸ್ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಬ್ರೆಡ್ ಸೇವನೆಯಿಂದ ಕ್ಯಾನ್ಸರ್ ಬರುತ್ತಾ?
ಇತ್ತೀಚೆಗೆ ಬ್ರೆಡ್ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆಯೇ ಎಂಬ ಪ್ರಶ್ನೆ ಉದ್ಬವಿಸಿದೆ? ಆದರೆ, ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧ್ಯಯನಗಳು ಇದನ್ನು ಸಾಬೀತುಪಡಿಸಿಲ್ಲ. ಬ್ರೆಡ್ ಯಾವುದೇ ರೀತಿಯ ಕ್ಯಾನ್ಸರ್ ಅಂಶಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ, ಬ್ರೆಡ್ ಅನ್ನು ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುವ ಅಪಾಯವೇನಿಲ್ಲ ಎಂದು ಹೇಳಲಾಗಿದೆ,(ಏಜೆನ್ಸೀಸ್).
ವಿಶೇಷ ಸೂಚನೆ: ಇಲ್ಲಿರುವ ಮಾಹಿತಿ ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ. ನಿಮಗೆ ಅನುಮಾನ ಅಥವಾ ಹೆಚ್ಚಿನ ಮಾಹಿತಿಯ ಅಗತ್ಯವಿದ್ದಲ್ಲಿ, ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.