ColonCancer  
ಆಹಾರ

ನಿಮ್ಮ ಬಾಯಿಯಲ್ಲಿ ಈ ಬದಲಾವಣೆಗಳಿವೆಯೇ? ಇದು ಕೊಲೊನ್ ಕ್ಯಾನ್ಸರ್‌ನ ಮುನ್ಸೂಚನೆಯಾಗಿರಬಹುದು! | colon cancer

ಲಂಡನ್/ನವದೆಹಲಿ: ಕ್ಯಾನ್ಸರ್ ಎಂಬ ಮಹಾಮಾರಿ ಮನುಷ್ಯನ ದೇಹವನ್ನು ಆವರಿಸುವ ಮುನ್ನ ಹತ್ತು ಹಲವು ಮುನ್ಸೂಚನೆಗಳನ್ನು ನೀಡುತ್ತದೆ. ಸಾಮಾನ್ಯವಾಗಿ ಕೊಲೊನ್ ಕ್ಯಾನ್ಸರ್ (ಕರುಳಿನ ಕ್ಯಾನ್ಸರ್) ಎಂದ ಕೂಡಲೇ ನಮಗೆ ಹೊಟ್ಟೆ ನೋವು(colon cancer) ಅಥವಾ ಜೀರ್ಣಕ್ರಿಯೆಯ ಸಮಸ್ಯೆಗಳು ನೆನಪಾಗುತ್ತವೆ. ಆದರೆ, ಇತ್ತೀಚಿನ ಸಂಶೋಧನೆಗಳು ಬೆಚ್ಚಿಬೀಳಿಸುವ ಸತ್ಯವೊಂದನ್ನು ಹೊರಹಾಕಿವೆ. ನಿಮ್ಮ ಬಾಯಿಯಲ್ಲಿ ಕಂಡುಬರುವ ಸಣ್ಣಪುಟ್ಟ ಬದಲಾವಣೆಗಳು ಕೂಡ ಕರುಳಿನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಾಗಿರಬಹುದು!
ಯುಕೆಯಲ್ಲಿ ಪ್ರತಿ 12 ನಿಮಿಷಕ್ಕೊಬ್ಬರಿಗೆ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತಿದೆ. ವರ್ಷಕ್ಕೆ ಸುಮಾರು 17,000 ಜನರು ಈ ಕಾಯಿಲೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಂಶೋಧನೆಯ ಪ್ರಕಾರ, ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳ ಅಸಮತೋಲನವು ಕರುಳಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಲ್ಲು ಮತ್ತು ಒಸಡುಗಳ ಸರಿಯಾದ ಆರೈಕೆ ಮಾಡದಿದ್ದರೆ, ಅಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾಗಳು ರಕ್ತಪ್ರವಾಹದ ಮೂಲಕ ಜೀರ್ಣಾಂಗವ್ಯೂಹವನ್ನು ತಲುಪಿ ಉರಿಯೂತ (Inflammation) ಉಂಟುಮಾಡುತ್ತವೆ. ಇದು ಕ್ರಮೇಣ ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಗೆ ದಾರಿಯಾಗಬಹುದು.

ಗಮನಿಸಬೇಕಾದ ಪ್ರಮುಖ 4 ಲಕ್ಷಣಗಳು

1. ಒಸಡುಗಳಲ್ಲಿ ರಕ್ತಸ್ರಾವ: ಒಸಡುಗಳಿಂದ ರಕ್ತ ಬರುತ್ತಿದ್ದರೆ ಅದನ್ನು ಕೇವಲ ಹಲ್ಲಿನ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ. ಹಾರ್ವರ್ಡ್ ಸಂಶೋಧನೆಯ ಪ್ರಕಾರ, ಒಸಡು ಕಾಯಿಲೆ ಇರುವವರಲ್ಲಿ ಕ್ಯಾನ್ಸರ್ ಪೂರ್ವದ 'ಕೊಲೊನ್ ಪಾಲಿಪ್ಸ್' ಕಂಡುಬರುವ ಸಾಧ್ಯತೆ 17 ರಿಂದ 21 ಪ್ರತಿಶತ ಹೆಚ್ಚಿರುತ್ತದೆ. ಇದು ಬ್ಯಾಕ್ಟೀರಿಯಾಗಳು ದೇಹದ ಒಳಭಾಗಕ್ಕೆ ಪ್ರವೇಶಿಸಲು ಇರುವ ಮುಕ್ತ ದಾರಿಯಾಗಿದೆ.
2. ನಿರಂತರ ಬಾಯಿಯ ದುರ್ವಾಸನೆ: ಎಷ್ಟೇ ಸ್ವಚ್ಛಗೊಳಿಸಿದರೂ ಬಾಯಿಯ ವಾಸನೆ ಹೋಗದಿದ್ದರೆ, ಅದು 'ಫ್ಯೂಸೊಬ್ಯಾಕ್ಟೀರಿಯಂ ನ್ಯೂಕ್ಲಿಯೇಟಮ್' ಎಂಬ ಬ್ಯಾಕ್ಟೀರಿಯಾದ ಸಂಕೇತವಾಗಿರಬಹುದು. ಈ ಬ್ಯಾಕ್ಟೀರಿಯಾವು ಕೊಲೊನ್ ಕ್ಯಾನ್ಸರ್ ಗೆಡ್ಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
3. ನಾಲಿಗೆಯ ಮೇಲೆ ಬಿಳಿ ಅಥವಾ ಹಳದಿ ಪದರ: ನಾಲಿಗೆಯ ಮೇಲೆ ಪದರ ಕಟ್ಟುವುದು ಕೇವಲ ನಿರ್ಜಲೀಕರಣದ ಲಕ್ಷಣವಲ್ಲ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳಲ್ಲಿನ ದೊಡ್ಡ ಬದಲಾವಣೆಯನ್ನು ಸೂಚಿಸುತ್ತದೆ, ಇದು ಕರುಳಿನ ಆರೋಗ್ಯ ಹದಗೆಡುತ್ತಿರುವುದರ ಮುನ್ಸೂಚನೆಯಾಗಿರಬಹುದು.
4. ಹಲ್ಲುಗಳು ಉದುರುವುದು: ನೀವು ಈಗಾಗಲೇ 4 ಅಥವಾ ಅದಕ್ಕಿಂತ ಹೆಚ್ಚು ಹಲ್ಲುಗಳನ್ನು ಕಳೆದುಕೊಂಡಿದ್ದರೆ, ನಿಮಗೆ ಕೊಲೊನ್ ಪಾಲಿಪ್ಸ್ ಬರುವ ಅಪಾಯ 20 ಪ್ರತಿಶತ ಹೆಚ್ಚಿರುತ್ತದೆ. ಇದು ದೀರ್ಘಕಾಲದ ಒಸಡು ಕಾಯಿಲೆಯ ಪರಿಣಾಮವಾಗಿದ್ದು, ಮುಂದೆ ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆ ಇರುತ್ತದೆ.

ತಡೆಗಟ್ಟುವುದು ಹೇಗೆ?

ಧೂಮಪಾನ, ಅತಿಯಾದ ಮದ್ಯಪಾನ, ಸಕ್ಕರೆ ಅಂಶದ ಆಹಾರವನ್ನು ಕಡಿಮೆ ಮಾಡಿ, ಹೆಚ್ಚಿನ ಫೈಬರ್ (ನಾರಿನಂಶ) ಇರುವ ಆಹಾರ ಸೇವಿಸುವುದು ಮತ್ತು ಮೌಖಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಈ ಅಪಾಯದಿಂದ ಪಾರಾಗಲು ಇರುವ ಏಕೈಕ ದಾರಿ,(ಏಜೆನ್ಸೀಸ್).