Bangude Pulimunchi (ಸಾಂದರ್ಭಿಕ ಚಿತ್ರ) 
ಆಹಾರ

ಸಂಡೇ ಅಂದ್ರೆನೇ ಸಾಟಿಯಿಲ್ಲದ ಬಾಡೂಟ; ಬಂಗುಡೆ ಪುಳಿಮುಂಚಿ ಜೊತೆಗಿರಲಿ ಹರಟೆ-ಊಟ! Bangude Pulimunchi

Bangude Pulimunchi: ತುಳುನಾಡಿನ ಅತ್ಯಂತ ಜನಪ್ರಿಯ, ಬಾಯಿಯಲ್ಲಿ ನೀರೂರಿಸುವ 'ಬಂಗುಡೆ ಪುಳಿಮುಂಚಿ' ಮಾಡುವ ಸುಲಭ ವಿಧಾನ ಇಲ್ಲಿದೆ. 'ಪುಳಿ' ಎಂದರೆ ಹುಳಿ, 'ಮುಂಚಿ' ಎಂದರೆ ಮೆಣಸಿನಕಾಯಿ. ಹೆಸರೇ ಸೂಚಿಸುವಂತೆ ಇದು ಹುಳಿ ಮತ್ತು ಖಾರವಾಗಿರುವ ಅದ್ಭುತ ರೆಸಿಪಿ ಇದಾಗಿದ್ದು, ಭಾನುವಾರದ ಬಾಡೂಟಕ್ಕೆ ಈ ರೆಸಿಪಿ ಅದ್ಭುತವಾಗಿರುತ್ತದೆ.

ಬೇಕಾಗುವ ಪದಾರ್ಥಗಳು

* 4-5 ಬಂಗುಡೆ ಮೀನು
* 10-12 ಒಣ ಮೆಣಸಿನಕಾಯಿ
* 2 ಚಮಚ ಧನಿಯಾ
* 1 ಚಮಚ ಜೀರಿಗೆ
* 1/2 ಚಮಚ ಸಾಸಿವೆ
* ಒಂದು ಚಿಟಿಕೆ ಓಮ
* 1/4 ಚಮಚ ಮೆಂತ್ಯ ಕಾಳು
* 1/2 ಚಮಚ ಕಾಳು ಮೆಣಸು
* 1/2 ಚಮಚ ಅರಿಶಿನ ಪುಡಿ
* ಹುಣಸೆಹಣ್ಣು
* 1 ದೊಡ್ಡ ಈರುಳ್ಳಿ
* 8-10 ಎಸಳು ಬೆಳ್ಳುಳ್ಳಿ
* 1 ಇಂಚು ಶುಂಠಿ
* 2 ಹಸಿಮೆಣಸಿನಕಾಯಿ
* ಸ್ವಲ್ಪ ಕರಿಬೇವು
* 2-3 ಚಮಚ ತೆಂಗಿನ ಎಣ್ಣೆ
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

ಮೊದಲು ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಒಣ ಮೆಣಸಿನಕಾಯಿ, ಧನಿಯಾ, ಜೀರಿಗೆ, ಸಾಸಿವೆ, ಮೆಂತ್ಯ ಮತ್ತು ಕಾಳು ಮೆಣಸನ್ನು ಘಮ ಬರುವವರೆಗೆ ಹುರಿದುಕೊಳ್ಳಿ. ಇವು ತಣ್ಣಗಾದ ಮೇಲೆ ಮಿಕ್ಸಿ ಜಾರ್‌ಗೆ ಹಾಕಿ, ಜೊತೆಗೆ ಬೆಳ್ಳುಳ್ಳಿ, ಅರಿಶಿನ ಮತ್ತು ನೆನೆಸಿಟ್ಟ ಹುಣಸೆಹಣ್ಣನ್ನು ಸೇರಿಸಿ ಮಸಾಲೆ ದಪ್ಪವಾಗುವವರೆಗೆ ನುಣ್ಣಗೆ ರುಬ್ಬಿಕೊಳ್ಳಿ.
ಇದಾದ ಬಳಿಕ ಮತ್ತೊಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ತೆಂಗಿನ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಕರಿಬೇವು, ಸೀಳಿದ ಹಸಿಮೆಣಸಿನಕಾಯಿ, ಶುಂಠಿ ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಈರುಳ್ಳಿ ಕೆಂಪಾಗುವವರೆಗೆ ಹುರಿಯಿರಿ.
ಈಗ ರುಬ್ಬಿದ ಮಸಾಲೆಯನ್ನು ಪಾತ್ರೆಗೆ ಹಾಕಿ, ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಮಿಕ್ಸ್​ ಮಾಡಿ. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಸಾಲೆ ಹಸಿ ವಾಸನೆ ಹೋಗುವವರೆಗೂ ಚೆನ್ನಾಗಿ ಕುದಿಸಿ. ಮಸಾಲೆ ಕುದಿಯುತ್ತಿರುವಾಗ ತೊಳೆದಿಟ್ಟ ಬಂಗುಡೆ ಮೀನುಗಳನ್ನು ಒಂದೊಂದಾಗಿ ಹಾಕಿ ಮಿಕ್ಸ್​ ಮಾಡಿ. 5- 8 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
ಬೆಂದ ಮೇಲೆ ಸ್ವಲ್ಪ ಹಸಿ ತೆಂಗಿನ ಎಣ್ಣೆ ಮತ್ತು ಹಸಿ ಕರಿಬೇವನ್ನು ಮೇಲೆ ಸಿಂಪಡಿಸಿ ಪಾತ್ರೆಯನ್ನು ಕೆಳಗಿಳಿಸಿ ಬಿಸಿಬಿಸಿ ಕುಚ್ಚಲಕ್ಕಿ ಅನ್ನ ಅಥವಾ ನೀರು ದೋಸೆಯ ಜೊತೆ ಸವಿಯಿರಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.