ಬೆಂಗಳೂರು: ಚಳಿಗಾಲ ಬಂತೆಂದರೆ ಮಾರುಕಟ್ಟೆಯಲ್ಲಿ ತರಕಾರಿಗಳ ಸುರಿಮಳೆ. ಸಾಮಾನ್ಯವಾಗಿ ನಾವು ಹಸಿರು ಎಲೆಕೋಸನ್ನೇ (Cabbage) ಹೆಚ್ಚು ಬಳಸುತ್ತೇವೆ, ಆದರೆ ಇತ್ತೀಚಿನ ದಿನಗಳಲ್ಲಿ ನೇರಳೆ ಬಣ್ಣದ ಎಲೆಕೋಸು ಕೂಡ ಗ್ರಾಹಕರನ್ನು ಸೆಳೆಯುತ್ತಿದೆ. ಬಣ್ಣದಲ್ಲಿ ಮಾತ್ರವಲ್ಲದೆ, ಇವು ಗುಣದಲ್ಲೂ ವಿಭಿನ್ನವಾಗಿವೆ. ಹಾಗಾದರೆ ಆರೋಗ್ಯಕ್ಕೆ ಯಾವುದು ಶ್ರೇಷ್ಠ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್...
ನೇರಳೆ ಬಣ್ಣದ ಎಲೆಕೋಸು:
ನೋಡಲು ಆಕರ್ಷಕವಾಗಿರುವ ನೇರಳೆ ಅಥವಾ ಹಸಿರು ಎಲೆಕೋಸು ಕೇವಲ ಸಲಾಡ್‌ಗೆ ಸೀಮಿತವಲ್ಲ, ಇದರಲ್ಲಿ ಅದ್ಭುತ ಔಷಧೀಯ ಗುಣಗಳಿವೆ. ಇದರಲ್ಲಿರುವ ‘ಆಂಥೋಸಯಾನಿನ್’ ಎಂಬ ಅಂಶವು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಹಸಿರು ಎಲೆಕೋಸಿಗೆ ಹೋಲಿಸಿದರೆ ನೇರಳೆ ಬಣ್ಣದ ಎಲೆಕೋಸಿನಲ್ಲಿ ವಿಟಮಿನ್ ಸಿ ಪ್ರಮಾಣ ದುಪ್ಪಟ್ಟಿದೆ. ಇದು ಚರ್ಮದ ಯೌವನವನ್ನು ಕಾಪಾಡಲು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಕಾರಿ.
ನೇರಳೆ ಬಣ್ಣದ ಎಲೆಕೋಸಿನಲ್ಲಿ ವಿಟಮಿನ್ ಎ ಪ್ರಮಾಣ 10 ಪಟ್ಟು ಹೆಚ್ಚಿರುವುದರಿಂದ ದೃಷ್ಟಿ ದೋಷ ಇರುವವರಿಗೆ ಇದು ಹೇಳಿಮಾಡಿಸಿದ ತರಕಾರಿ.
ರಕ್ತಹೀನತೆ ಇರುವವರಿಗೆ ನೇರಳೆ ಎಲೆಕೋಸು ಹೆಚ್ಚು ಪ್ರಯೋಜನಕಾರಿಯಾಗಿದೆ.
ಹಸಿರು ಎಲೆಕೋಸು
ಹಸಿರು ಎಲೆಕೋಸು ನಮ್ಮ ನಿತ್ಯದ ಸಾಂಬಾರ್, ಪಲ್ಯ ಮತ್ತು ಪಕೋಡಗಳಿಗೆ ಹೆಚ್ಚು ಬಳಕೆಯಾಗುವ ಹಸಿರು ಎಲೆಕೋಸಿನ ಶಕ್ತಿಯೂ ಕಡಿಮೆಯೇನಲ್ಲ.
ಹಸಿರು ಎಲೆಕೋಸಿನಲ್ಲಿ ವಿಟಮಿನ್ ಹೇರಳವಾಗಿದೆ. ಇದು ಮೂಳೆಗಳನ್ನು ಗಟ್ಟಿಗೊಳಿಸಲು ಮತ್ತು ಗಾಯವಾದಾಗ ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ.
ಹಸಿರು ಎಲೆಕೋಸು ಉತ್ತಮ ನಾರಿನಂಶವಿದ್ದು (Fiber), ಮಲಬದ್ಧತೆ ಸಮಸ್ಯೆಯಿಂದ ಬಳಲುವವರಿಗೆ ಇದು ಉತ್ತಮ ಮನೆಮದ್ದು.
ಗರ್ಭಿಣಿಯರಿಗೆ ಮತ್ತು ಹೊಸ ಜೀವಕೋಶಗಳ ರಚನೆಗೆ ಅಗತ್ಯವಾದ ಫೋಲೇಟ್ ಇದರಲ್ಲಿ ಅಧಿಕವಾಗಿರುತ್ತದೆ.
ನಿಮ್ಮ ಆಯ್ಕೆ ಯಾವುದಾಗಿರಬೇಕು?
ನೀವು ಕೇವಲ ರುಚಿ ಮತ್ತು ಅಡುಗೆಗಾಗಿ ಬಳಸುವುದಾದರೆ ಹಸಿರು ಎಲೆಕೋಸು ಬೆಸ್ಟ್. ಆದರೆ, ಅತಿ ಹೆಚ್ಚಿನ ಪೋಷಕಾಂಶಗಳು ಮತ್ತು ಆಂಟಿ-ಆಕ್ಸಿಡೆಂಟ್ ಬಯಸುವುದಾದರೆ ನೇರಳೆ ಎಲೆಕೋಸು ಒಳ್ಳೆಯದಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಕೇವಲ ಒಂದು ಬಣ್ಣದ ತರಕಾರಿಗೆ ಸೀಮಿತವಾಗದೆ, ವಾರದಲ್ಲಿ ಎರಡೂ ವಿಧದ ಎಲೆಕೋಸುಗಳನ್ನು ಬಳಸುವುದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಅತ್ಯಂತ ಹಿತಕರ. ನೀವು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮತ್ತು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಬಯಸಿದರೆ ನೇರಳೆ ಎಲೆಕೋಸು ಉತ್ತಮ ಆಯ್ಕೆ. ಆದರೆ ಮೂಳೆಗಳ ಬಲವರ್ಧನೆಗೆ ಮತ್ತು ನಿತ್ಯದ ಅಡುಗೆಗೆ ಹಸಿರು ಎಲೆಕೋಸು ಸೂಕ್ತ.