Salt To Watermelon 
ಆಹಾರ

ಕಲ್ಲಂಗಡಿ ಹಣ್ಣಿನ ಮೇಲೆ ಉಪ್ಪು ಉದುರಿಸೋದು ಯಾಕೆ?; ಇದಕ್ಕಿರುವ ವೈಜ್ಞಾನಿಕ ನಂಟೇನು?..Salt To Watermelon

ಪ್ರಮುಖ ಮುಖ್ಯಾಂಶಗಳು

  • ಕಲ್ಲಂಗಡಿ ಹಣ್ಣನ್ನು ತಿನ್ನೋವಾಗ ಕೊಂಚ ಉಪ್ಪು ಹಾಕಿಕೊಳ್ಳಬೇಕು ಯಾಕೆ ಗೊತ್ತಾ?
  • ಕಲ್ಲಂಗಡಿಯಲ್ಲಿ ಇರದ ಸೋಡಿಯಂ ಅಂಶವನ್ನು ಉಪ್ಪು ನೀಡುತ್ತದೆ
  • ಉಪ್ಪನ್ನು ಉದುರಿಸಿ ಕಲ್ಲಂಗಡಿ ಸೇವಿಸುವುದು ಜೀರ್ಣಕ್ರಿಯೆಗೆ ಅನುಕೂಲ
Salt To Watermelon Uses:ಕರ್ನಾಟಕದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕಲ್ಲಂಗಡಿ ಹಣ್ಣುಗಳು  ಬೀದಿ ಬೀದಿಯಲ್ಲಿ ರಾರಾಜಿಸುತ್ತಿದ್ದವು.ಡಿ ಹೈಡ್ರೇಶನ್​ ನೀಗಿಸಲು  ಕೆಲಸ ಮಾಡುವ ಇದರಲ್ಲಿ ವಿಟಮಿನ್ ಎ, ಸಿ, ಬಿ1, ಬಿ6, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ ಇದೆ. ಹೃದಯದ ಸಮಸ್ಯೆ, ಚರ್ಮದ ಕಾಂತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಇಷ್ಟೆಲ್ಲ ಆರೋಗ್ಯಕಾರಿಯಾದ ಕಲ್ಲಂಗಡಿಯ ಬಗ್ಗೆ ಮತ್ತೊಂದು ಅತೀ ಸೂಕ್ಷ್ಮ ವಿಚಾರ ತಿಳಿದುಕೊಳ್ಳಬೇಕು.
ಕೆಲವು ಬೀದಿಗಳಲ್ಲಿ ಅಥವಾ ಮನೆಗಳಲ್ಲೇ ನೋಡಿದ್ದೇವೆ. ಕಲ್ಲಂಗಡಿ ಕತ್ತರಿಸಿ ದೊಡ್ಡ ಗಾತ್ರದ ಪೀಸ್​ ಭಾಗ ಮಾಡಿ ಅದಕ್ಕೆ, ಮೆಣಸು, ಉಪ್ಪು ಹಾಕಿ ಸೇವಿಸಿದರೆ..ಆಹಾ ಅದರ ರುಚಿಯೇ ಬೇರೆ. ಸಾಮಾನ್ಯವಾಗಿ ಹಣ್ಣು ಮಾತ್ರ ಸೇವನೆ ಮಾಡಿದ್ರೆ ಸಾಕಲ್ವೆ? ಅದಕ್ಕೆ ಉಪ್ಪು ಸೇರಿಸೋದ್ಯಾಕೆ, ದೇಹದ ಆರೋಗ್ಯಕ್ಕೆ ನಂಟೇನಾದ್ರೂ ಇದೆಯೇ ಅನ್ನೋದನ್ನ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ

ಕಲ್ಲಂಗಡಿಗೆ ಉಪ್ಪು ಹಾಕ್ರೋದ್ರ ಹಿಂದಿದೆ ಗುಟ್ಟು

ಕತ್ತರಿಸಿದ ಕಲ್ಲಂಗಡಿಗೆ ಉಪ್ಪನ್ನು ಉದುರಿಸುವುದರಿಂದ, ಹಣ್ಣಲ್ಲಿರುವ ಸಕ್ಕರೆ ಅಂಶವನ್ನು ಇನ್ನಷ್ಟು ಹೆಚ್ಚುಗೊಳಿಸಿ, ತಿನ್ನುವವರ ಬಾಯನ್ನು ಸಿಹಿಗೊಳಿಸುತ್ತದೆ. 2023ರಲ್ಲಿ ಇ ಲೈಫ್​ ರೀಸರ್ಚ್​ ಸಂಸ್ಥೆ ನಡೆಸಿರುವ ಸಂಶೋಧನೆಯಿಂದ ತಿಳಿದುಬಂದಿದೆ. ಉಪ್ಪಲ್ಲಿರುವ ಕ್ಲೋರೈಡ್ ಐಯಾನ್​ ಅಂಶವು ನಾಲಿಗೆಯಲ್ಲಿರುವ ಸಿಹಿ ಅಂಶದ ಗ್ರಾಹಕಗಳೊಂದಿಗೆ ರಿಯಾಕ್ಟ್​ ಮಾಡುತ್ತವೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಇದು ಹಣ್ಣಿನಲ್ಲಿರುವ ಕಹಿ ತೆಗೆದು ಮತ್ತಷ್ಟು ಸಿಹಿ ಮಾಡಿ ರಸಭರಿತವನ್ನಾಗಿ ಮಾಡಿ ತಿನ್ನಲು ಆಕರ್ಷಿಸುತ್ತದೆ ಎಂದು ಹೇಳಲಾಗಿದೆ.

ಸೋಡಿಯಂ ವೃದ್ಧಿಸುತ್ತದೆ

ದೇಹದಲ್ಲಿರುವ ಸೋಡಿಯಂ ಅಂಶವೂ ಬೇಸಿಗೆಯಲ್ಲಿ ಅಧಿಕ ಬೆವರಿನ ಮೂಲಕ ದೇಹದಿಂದ ಹೊರ ಹಾಕಲ್ಪಡುತ್ತದೆ. ಕಲ್ಲಂಗಡಿಯಲ್ಲಿ ನೀರಿನ ಅಂಶ ಹೆಚ್ಚಿದ್ದರೂ ಸಹ, ಸೋಡಿಯಂ ಅಂಶವು ಕಡಿಮೆ ಇರುತ್ತದೆ. ಹೀಗಾಗಿ, ಉಪ್ಪಿನಲ್ಲಿರುವ ಸೋಡಿಯಂ ಹಣ್ಣಿನೊಂದಿಗೆ ನೈಸರ್ಗಿಕವಾಗಿ ದೇಹ ಸೇರುತ್ತದೆ ಎನ್ನುತ್ತಾರೆ ಸಂಶೋಧಕರು.
 ನ್ಯೂಟ್ರಿಯೆಂಟ್ಸ್​ ಜರ್ನಲ್​​ನಲ್ಲಿ ಪ್ರಕಟಣೆಯಾಗಿದ್ದ ಸಂಶೋಧನೆಯ ಪ್ರಕಾರ ಸೋಡಿಯಂ ಪ್ಲಾಸ್ಮಾ ಪರಿಮಾಣವನ್ನು ಹಾಗೂ ದೇಹಕ್ಕೆ ಸೇರುವ ನೀರು ತ್ವರಿತವಾಗಿ ಹೊರ ಹೋಗದಂತೆ ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.   

ಜೀರ್ಣಕ್ರಿಯೆಗೆ ಹೇಗೆ ಸಹಕಾರಿ?

ಸೇವನೆಯಾದ ಆಹಾರವನ್ನು ಸುಲಭವಾಗಿ ಜೀರ್ಣವಾಗುವಂತೆ ಮಾಡಲು ಉಪ್ಪು ಉತ್ತೇಜಿಸುತ್ತದೆ. ದೇಹವು ಆಹಾರವನ್ನು ಸುಲಭವಾಗಿ ಸಂಸ್ಕರಿಸುವಂತೆ ಮಾಡುತ್ತದೆ. ಉಪ್ಪು ಸೇರಿಸಿ ಕಲ್ಲಂಗಡಿ ಹಣ್ಣನ್ನು ತಿನ್ನುವಾಗ ಅದು ಗಬಗಬನೆ ಖಾಲಿ ಮಾಡಲು ಬಿಡೋದಿಲ್ಲ.
ನಿಧಾನವಾಗಿ ಸಿಹಿ, ಉಳಿ, ಉಪ್ಪು ಖಾರದ ಸ್ವಾದವನ್ನು ಮನದಲ್ಲೇ ಆಸ್ವಾದಿಸುತ್ತಾ ಮೆಲ್ಲನೇ ತಿನ್ನುವಂತೆ ಮಾಡುತ್ತದೆ. ತಿಂದಷ್ಟು ತೃಪ್ತಿಕರವಾಗಿ ಇರುವಂತೆ ಮಾಡುತ್ತದೆ. ಜೊತೆಗೆ ನಿಧಾನವಾಗಿ ಊಟ ಮಾಡುವುದು ಯಾವುದೇ ಪದಾರ್ಥ ತಿನ್ನುವುದು ಹೆಚ್ಚು ಅಗತ್ಯ.

ಎಷ್ಟು ಉಪ್ಪು ಬಳಸಬೇಕು?

ಕಲ್ಲಂಗಡಿ ತಿನ್ನುವ ಗಾತ್ರದ ಮೇಲೆ ಉಪ್ಪು ಉದುರಿಸಿಕೊಳ್ಳಬೇಕಾಗುತ್ತದೆ. ಆದರೆ, ಅನಾವಶ್ಯಕವಾಗಿ ಹೆಚ್ಚಚ್ಚು ಉಪ್ಪು ಸೇವನೆಯೂ ದೇಹಕ್ಕೆ ಒಳ್ಳೇದಲ್ಲ. ಜೊತೆಗೆ ಹಣ್ಣಿನ ಸ್ವಾದವನ್ನು ಹೋಗಲಾಡಿಸುತ್ತದೆ. ಕಲ್ಲಂಗಡಿ ಹಣ್ಣಿನ ಜೊತೆ ನಿಂಬೆ ಹುಳಿಯನ್ನು ಸಹ ಹಿಂಡಿಕೊಳ್ಳಬಹುದು ಎಂದು ಸಂಶೋಧಕರು ಹೇಳುತ್ತಾರೆ.

ರುಚಿ ಹೆಚ್ಚಿಸಲು ಸಹಕಾರಿ

ಕಲ್ಲಂಗಡಿ ಹಣ್ಣುಗಳು ಕೆಲವೊಮ್ಮೆ ಸರಿಯಾದ ವಿಧಾನದಲ್ಲಿ ಹಣ್ಣಾಗದೇ ಹೋದರೆ, ಅಥವಾ ಹೆಚ್ಚು ನೀರಿನಾಂಶದಿಂದ ಕೂಡಿದ್ದರೆ ತಿನ್ನುವುದಕ್ಕೆ ಸಪ್ಪೆಯಾಗಿರುತ್ತದೆ. ಆದರೆ. ಇಂತಹ ಹಣ್ಣಿನೊಂದಿಗೆ ಉಪ್ಪು ಸೇರಿಸಿ ತಿಂದರೆ ರುಚಿಯನ್ನು ಇನ್ನಷ್ಟು ತೀಕ್ಷ್ಣಗೊಳಿಸುತ್ತದೆ ಎನ್ನಲಾಗಿದೆ, (ಏಜೆನ್ಸೀಸ್​).