ಸಾಂದರ್ಭಿಕ ಚಿತ್ರ  
ಆಹಾರ

ಒಂದೇ ಒಂದು ಹನಿ ಎಣ್ಣೆ ಹಾಕದೇ ಕೇವಲ 5 ನಿಮಿಷದಲ್ಲಿ ಮಾಡಬಹುದಾದ ಆರೋಗ್ಯಕರ ಆಹಾರ ಇಲ್ಲಿವೆ...Oil Free Tiffins

ಪ್ರಮುಖ ಮುಖ್ಯಾಂಶಗಳು

  • ಎಣ್ಣೆ ಇಲ್ಲದೇ ಯಾವುದೇ ಅಡುಗೆ ಪೂರ್ಣವಾಗದು ಅನ್ನೋ ಭಾವನೆ ಜನರಲ್ಲಿದೆ
  • ಆದರೆ, ಮಾರುಕಟ್ಟೆಯಲ್ಲಿ ಪ್ರಸ್ತುತ ಲಭ್ಯವಿರುವ ಎಣ್ಣೆಗಳು ತುಂಬಾ ಅಪಾಯಕಾರಿ
  • ಒಂದು ಹನಿ ಎಣ್ಣೆಯೂ ಇಲ್ಲದೆ, ಕೇವಲ 5 ನಿಮಿಷಗಳಲ್ಲಿ ಆರೋಗ್ಯಕರ ಆಹಾರ ತಯಾರಿಸಬಹುದು
Oil Free Tiffins : ಇಂದು ಅಡುಗೆ ಎಣ್ಣೆ ಎಲ್ಲರ ಮನೆಯನ್ನು ಹಾಸು ಹೊಕ್ಕಿದೆ. ಎಣ್ಣೆ ಇಲ್ಲದೇ ಯಾವುದೇ ಅಡುಗೆ ಪೂರ್ಣವಾಗದು ಅನ್ನೋ ಭಾವನೆ ಇದೆ. ಹೀಗಾಗಿ, ಮನೆಯಲ್ಲಿ ಎಣ್ಣೆ ಖಾಲಿಯಾದಾಗ ಅನೇಕ ಜನರು ಒತ್ತಡಕ್ಕೆ ಒಳಗಾಗುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಪ್ರಸ್ತುತ ಲಭ್ಯವಿರುವ ಎಣ್ಣೆಗಳು ತುಂಬಾ ಅಪಾಯಕಾರಿ ಅನ್ನೋದು ಅನೇಕ ಮಂದಿಗೆ ಗೊತ್ತಿದೆ. ಆದರೆ, ಎಣ್ಣೆ ಇಲ್ಲದೇ ಅಡುಗೆ ಸಾಧ್ಯವಿಲ್ಲ ಎಂಬ ಮನಸ್ಥಿತಿ ಬಹಳಷ್ಟು ಜನರಲ್ಲಿದೆ. ಹೀಗಾಗಿ, ಆ ಮನಸ್ಥಿತಿ ಬದಲಾಗಬೇಕಿದೆ. ಒಂದು ಹನಿ ಎಣ್ಣೆಯೂ ಇಲ್ಲದೆ, ಕೇವಲ 5 ನಿಮಿಷಗಳಲ್ಲಿ ರುಚಿಕರವಾದ ಮತ್ತು ಆರೋಗ್ಯಕರ ಟಿಫಿನ್‌ಗಳನ್ನು ತಯಾರಿಸಬಹುದು ಎಂಬ ವಿಚಾರ ನಿಮಗೆ ತಿಳಿದಿರಲಿ.
ಉತ್ತಮ ಆರೋಗ್ಯಕ್ಕಾಗಿ ಎಣ್ಣೆಯಿಂದ ಆದಷ್ಟು ದೂರ ಇರುವುದು ಉತ್ತಮ ಅನ್ನೋ ಮಾತಿದೆ. ಇದನ್ನು ಫಾಲೋ ಮಾಡೋದು ಕಷ್ಟವಲ್ಲ. ಇದಕ್ಕಾಗಿ ಬದ್ಧತೆ ಬೇಕು. ಕನಿಷ್ಠ ಪದಾರ್ಥಗಳೊಂದಿಗೆ ರುಚಿಕರ ಆಹಾರವನ್ನು ತಯಾರಿಸುವುದು ತುಂಬಾನೇ ಸುಲಭ. ಇದು ಕೇವಲ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಹಾಗಾದರೆ ತಡಮಾಡುವುದೇಕೆ? ಈ ಎಣ್ಣೆ ರಹಿತ ಟಿಫಿನ್‌ಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.

ಹಣ್ಣಿನ ಸಲಾಡ್​

ನಿಮ್ಮ ಆಯ್ಕೆಯ ಹಣ್ಣುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ದೊಡ್ಡ ಬಟ್ಟಲಿನಲ್ಲಿ ಹಾಕಿ. ಅದಕ್ಕೆ ಚಾಟ್ ಮಸಾಲ, ಸ್ವಲ್ಪ ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಹಣ್ಣಿನ ಸಲಾಡ್​ ಸಿದ್ಧ. ನೀವು ನಿಮ್ಮ ಆಯ್ಕೆಯ ಯಾವುದೇ ಹಣ್ಣನ್ನು ಸೇರಿಸಬಹುದು.

ಮಸಾಲ ಪಾಪಡ್​

ಮಸಾಲಾ ಪಾಪಡ್​ ತಯಾರಿಸಲು, ಮೊದಲು ಪಾಪಡ್​​​ ಅನ್ನು ಒಲೆಯ ಮೇಲೆ ಅಥವಾ ಮೈಕ್ರೋವೇವ್‌ನಲ್ಲಿ ಸ್ವಲ್ಪ ಬೇಯಿಸಿ ಕ್ರಿಸ್ಪಿಯಾಗಿಸಿ. ನಂತರ ಅದರ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಕತ್ತರಿಸಿದ ಟೊಮ್ಯಾಟೋ, ಕೊತ್ತಂಬರಿ, ಹಸಿ ಮೆಣಸಿನಕಾಯಿ, ಚಟ್ನಿ ಪುಡಿ, ಕಾಳು ಮೆಣಸು ಪುಡಿ ಮತ್ತು ಸ್ವಲ್ಪ ನಿಂಬೆ ರಸ ಹಾಕಿದರೆ ಮಸಾಲ ಪಾಪಡ್​ ತಿನ್ನಲು ರೆಡಿ.

ಹೆಸರುಬೇಳೆ ಮಸಾಲಾ ಚಾಟ್

ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು 30 ರಿಂದ 35 ನಿಮಿಷಗಳ ಕಾಲ ನೆನೆಸಿಡಿ. ನಂತರ ಕುಕ್ಕರ್ ಅಥವಾ ಪ್ಯಾನ್‌ನಲ್ಲಿ ನೀರು ಸುರಿಯಿರಿ ಮತ್ತು ಬೇಯಿಸಿ. ಬೇಯಿಸಿದ ಹೆಸರುಬೇಳೆ ತಣ್ಣಗಾದ ನಂತರ, ಒಂದು ಬಟ್ಟಲಿನಲ್ಲಿ ಈರುಳ್ಳಿ, ಟೊಮ್ಯಾಟೋ, ಹಸಿರು ಮೆಣಸಿನಕಾಯಿ, ಉಪ್ಪು, ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ, ಹೆಸರುಬೇಳೆ ಮಸಾಲಾ ಚಾಟ್ ರೆಡಿ.

ಭೇಲ್​ ಪುರಿ

ಭೇಲ್ ಪುರಿ ತಯಾರಿಸಲು, ಮೊದಲು ಒಂದು ದೊಡ್ಡ ಬಟ್ಟಲಿನಲ್ಲಿ ಮಂಡಕ್ಕಿ (ಪಫ್ಡ್ ರೈಸ್), ಬೇಯಿಸಿದ ಆಲೂಗಡ್ಡೆ, ನುಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮ್ಯಾಟೋ, ಹುರಿದ ಕಡಲೆಕಾಯಿ ಮತ್ತು ಪುಡಿಮಾಡಿದ ಪಾಪಡ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಹುಣಸೆ ಚಟ್ನಿ, ಹಸಿರು ಚಟ್ನಿ, ಚಾಟ್ ಮಸಾಲ, ಸ್ವಲ್ಪ ಉಪ್ಪು, ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಕೊತ್ತಂಬರಿ ಸಿಂಪಡಿಸಿದರೆ, ಭೇಲ್​ ಪುರಿ ರೆಡಿ.

ಮಸಾಲ ಜೋಳ

ಜೋಳದ ಕಾಳುಗಳನ್ನು ಚೆನ್ನಾಗಿ ಬೇಯಿಸಿ. ನಂತರ ನೀರನ್ನು ಸೋಸಿ ಒಂದು ಬಟ್ಟಲಿನಲ್ಲಿ ಹಾಕಿ ತಣ್ಣಗಾಗಲು ಬಿಡಿ. ಅದಕ್ಕೆ ಮೆಣಸಿನ ಪುಡಿ, ಚಾಟ್ ಮಸಾಲ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ, ಮಸಾಲಾ ಜೋಳ ಸವಿಯಲು ಸಿದ್ಧ.

ಮೊಳಕೆ ಕಾಳುಗಳ ಸಲಾಡ್

ಮೊಳಕೆಯೊಡೆದ ಕಡಲೆ ಕಾಳುಗಳಿಗೆ, ಬಟಾಣಿ, ಈರುಳ್ಳಿ, ಟೊಮ್ಯಾಟೋ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪುಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಉಪ್ಪು ಮತ್ತು ನಿಂಬೆ ರಸ ಸೇರಿಸಿ. ಇದು ಆರೋಗ್ಯಕರ ತಿಂಡಿ ಮಾತ್ರವಲ್ಲ. ಉಪಾಹಾರವಾಗಿಯೂ ತೆಗೆದುಕೊಳ್ಳಬಹುದು.

ಓಟ್ಸ್​ ಸಲಾಡ್​

ಓಟ್ಸ್, ಹಾಲು, ಚಿಯಾ ಬೀಜಗಳು, ಅಗಸೆ ಬೀಜಗಳು, ಡ್ರೈ ಫ್ರೂಟ್ಸ್​ ಮತ್ತು ತಾಜಾ ಹಣ್ಣುಗಳನ್ನು ಗಾಜಿನ ಬಟ್ಟಲಿನಲ್ಲಿ ಹಾಕಿ ರಾತ್ರಿಯಿಡೀ ರೆಫ್ರಿಜರೇಟರ್‌ನಲ್ಲಿಡಿ. ಬೆಳಗ್ಗೆ, ನೀವು ಎದ್ದ ತಕ್ಷಣ, ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬಡಿಸಿ. ಆರೋಗ್ಯಕರ ಉಪಹಾರಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಸ್ಪೈಸಿ ಪೈನಾಪಲ್​

ಒಂದು ಬಟ್ಟಲಿನಲ್ಲಿ ಅನಾನಸ್ ತುಂಡುಗಳು, ನಿಂಬೆ ರಸ, ಕರಿಮೆಣಸಿನ ಪುಡಿ, ಉಪ್ಪು ಮತ್ತು ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೇವಲ ಎರಡು ನಿಮಿಷಗಳಲ್ಲಿ ಮಸಾಲೆಯುಕ್ತ ಅನಾನಸ್ ಸಲಾಡ್ ಸಿದ್ಧವಾಗುತ್ತದೆ, (ಏಜೆನ್ಸೀಸ್​),