ಮಟನ್ ಪ್ರಿಯರೇ ಎಚ್ಚರ..; ಊಟದ ನಂತರ ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕಾದಿದೆ ಅಪಾಯ..!
ಬೆಂಗಳೂರು: ಭಾನುವಾರ ಬಂತು ಅಂದರೆ ಸಾಕು, ಬಹುತೇಕ ಮನೆಗಳಲ್ಲಿ ಮಟನ್(Mutton Side Effects) ಘಮಘಮಿಸುತ್ತದೆ. ರುಚಿಯಾದ ಮಟನ್ ಸಾರು ಅಥವಾ ಬಿರಿಯಾನಿಯನ್ನು ಹೊಟ್ಟೆ ತುಂಬಾ ತಿನ್ನುವುದೇ ಒಂದು ಸಂಭ್ರಮ. ಆದರೆ, ಮಟನ್ ಸೇವಿಸಿದ ತಕ್ಷಣ ನಾವು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ನಮ್ಮ ಜೀರ್ಣಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಆರೋಗ್ಯ ತಜ್ಞರ ಪ್ರಕಾರ, ಮಟನ್ ತಿಂದ ತಕ್ಷಣ ಕೆಲವು ಕೆಲಸಗಳನ್ನು ಮಾಡುವುದು ನೇರವಾಗಿ ಹೃದ್ರೋಗ ಮತ್ತು ಜೀರ್ಣಾಂಗವ್ಯೂಹದ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು.
ತಕ್ಷಣವೇ ಟೀ ಅಥವಾ ಕಾಫಿ ಕುಡಿಯಬೇಡಿ
ಅನೇಕರಿಗೆ ಊಟದ ನಂತರ ಬಿಸಿಬಿಸಿ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಮಟನ್ ತಿಂದ ತಕ್ಷಣ ಟೀ ಕುಡಿಯುವುದು ಅತ್ಯಂತ ಅಪಾಯಕಾರಿಯಾಗುತ್ತದೆ. ಟೀ ಎಲೆಗಳಲ್ಲಿ 'ಟ್ಯಾನಿನ್' ಎಂಬ ಅಂಶವಿರುತ್ತದೆ, ಇದು ಮಟನ್‌ನಲ್ಲಿರುವ ಪ್ರೋಟೀನ್ ಜೊತೆಗೆ ಸೇರಿ ಜೀರ್ಣಕ್ರಿಯೆಯನ್ನು ಕಠಿಣಗೊಳಿಸುತ್ತದೆ. ಇದು ಮಲಬದ್ಧತೆ ಮತ್ತು ಕಬ್ಬಿಣದಂಶದ ಕೊರತೆಗೆ ಕಾರಣವಾಗಬಹುದು.
ತಣ್ಣೀರು ಕುಡಿಯುವುದಕ್ಕೆ ನೋ ಹೇಳಿ
ಮಟನ್‌ನಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಇರುತ್ತದೆ. ಊಟದ ನಂತರ ತಕ್ಷಣವೇ ತಣ್ಣೀರು ಕುಡಿದರೆ, ಆ ಕೊಬ್ಬು ಹೊಟ್ಟೆಯಲ್ಲಿ ಗಟ್ಟಿಯಾಗುತ್ತದೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಿ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣದ ಸಮಸ್ಯೆಗಳು ತಲೆದೂರುತ್ತವೆ. ಬದಲಿಗೆ ಸ್ವಲ್ಪ ಉಗುರುಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮವಾಗುತ್ತದೆ.
ತಕ್ಷಣದ ನಿದ್ದೆ ಬೇಡ
ಮಟನ್ ತಿಂದ ನಂತರ ಮೈ ಭಾರವಾಗಿ ನಿದ್ದೆ ಬರುವುದು ಸಹಜ. ಆದರೆ ತಿಂದ ತಕ್ಷಣ ಮಲಗುವುದು ಎದೆ ಉರಿಗೆ ಕಾರಣವಾಗುತ್ತದೆ. ಮಟನ್ ಜೀರ್ಣವಾಗಲು ದೇಹಕ್ಕೆ ಹೆಚ್ಚು ಸಮಯ ಮತ್ತು ಶಕ್ತಿ ಬೇಕು. ನೀವು ಮಲಗಿದಾಗ ಜೀರ್ಣಕ್ರಿಯೆ ನಿಧಾನವಾಗಿ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗುತ್ತವೆ. ಕನಿಷ್ಠ 2 ಗಂಟೆಗಳ ನಂತರವಷ್ಟೇ ನಿದ್ದೆ ಮಾಡುವುದು ಸೂಕ್ತ.
ಹಣ್ಣುಗಳ ಸೇವನೆ ತಪ್ಪಿಸಿ
ಮಟನ್ ತಿಂದ ತಕ್ಷಣ ಹಣ್ಣುಗಳನ್ನು ತಿನ್ನುವುದು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಹಣ್ಣುಗಳು ಬೇಗ ಜೀರ್ಣವಾಗುತ್ತವೆ, ಆದರೆ ಮಟನ್ ತಡವಾಗಿ ಜೀರ್ಣವಾಗುವುದರಿಂದ ಹಣ್ಣುಗಳು ಹೊಟ್ಟೆಯಲ್ಲೇ ಕೊಳೆಯಲು ಶುರುವಾಗಿ ಗ್ಯಾಸ್ ಬಿಡುಗಡೆ ಮಾಡುತ್ತವೆ,(ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.