Drinking cococola: ಕೋಕೋ ಕೋಲಾ ಪಾನೀಯವು ಅನೇಕರು ಪ್ರತಿದಿನ ಸೇವಿಸಲು ಇಷ್ಟಪಡುವ ಪಾನೀಯವಾಗಿದೆ. ಅನೇಕ ಜನರು ಇದನ್ನು ತಮ್ಮ ಆಹಾರದ ಜೊತೆಯಲ್ಲಿ ಸೇವಿಸುವ ಇಷ್ಟಪಡುತ್ತಾರೆ. ಇನ್ನೂ ಕೆಲವರು ಇದನ್ನು ಕೂಲ್ ಆಗಲು ಅಥವಾ ನೀರಿಗೆ ಪರ್ಯಾಯವಾಗಿ ಸೇವಿಸಲು ಇಷ್ಟಪಡುತ್ತಾರೆ.
ಮಾರುಕಟ್ಟೆಯಲ್ಲಿ ಸಕ್ಕರೆ ರಹಿತ ಕೋಲಾಗಳು ಸಿಗುವುದರಿಂದ, ಕೋಲಾ ಕುಡಿಯುವವರಲ್ಲಿ ಎರಡು ವರ್ಗಗಳಿವೆ. ಅಂದರೆ, ನಿಯಮಿತವಾಗಿ ಕುಡಿಯುವವರು ಹಾಗೂ ಸಕ್ಕರೆ ರಹಿತ ಕೋಲಾವನ್ನು ಕುಡಿಯುವವರು. ಈ ರೀತಿಯ ಚರ್ಚೆಗಳು ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಲೇ ಇರುತ್ತವೆ.
ಸಕ್ಕರೆ ರಹಿತ ಕೋಲಾ ಸಾಮಾನ್ಯ ಕೋಲಾಕ್ಕಿಂತ ಆರೋಗ್ಯಕರವೇ?
ಅಮೆರಿಕದ ಮಿಯಾಮಿಯಲ್ಲಿ ನೆಲೆಸಿರುವ ಬೋರ್ಡ್-ಪ್ರಮಾಣೀಕೃತ ಆಂಕೊಲಾಜಿಸ್ಟ್ ಡಾ. ರವಿ ಕೆ ಗುಪ್ತಾ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, 350 ಮಿಲಿ ಸಾಮಾನ್ಯ ಕೋಲಾದಲ್ಲಿ 10 ಟೀ ಚಮಚ ಸಕ್ಕರೆ, ಸುಮಾರು 40 ಗ್ರಾಂ, ಅಂದರೆ, 140 ಕ್ಯಾಲೊರಿಗಳಿವೆ ಎಂದು ಹೇಳಿದ್ದಾರೆ. ಹಾಗಾಗಿ ಪ್ರತಿನಿತ್ಯ ಸೇವಿಸುವುದರಿಂದ ಇದು ದೇಹದ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡುತ್ತವೆ ಎಂದು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಬೇಸತ್ತು, ಜನರು ಸಕ್ಕರೆ ರಹಿತ ಪಾನೀಯದತ್ತ ಮುಖ ಮಾಡಿದ್ದಾರೆ. ಇದನ್ನು ಆರೋಗ್ಯಕರ ಆಯ್ಕೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಡಾ. ಗುಪ್ತಾ ಸೂಚಿಸಿದಂತೆ, ಸಕ್ಕರೆಯ ಬದಲಿಗೆ, ಈ ಪಾನೀಯಗಳು ಆಸ್ಪರ್ಟೇಮ್ ಮತ್ತು ಅಸೆಸಲ್ಫೇಮ್ ಪೊಟ್ಯಾಸಿಯಮ್‌ನಂತಹ ಕೃತಕ ಸಿಹಿಕಾರಕಗಳನ್ನು ಹೊಂದಿರುತ್ತವೆ. ಈ ಸಿಹಿಕಾರಕಗಳು ಕ್ಯಾಲೋರಿ ಸೇವನೆ ಕಡಿಮೆ ಮಾಡಿದರೂ, ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ಎಂದಿದ್ದಾರೆ. ಇನ್ನು ಈ ವಿಚಾರದ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ ಎಂದು ತಿಳಿಸಿದ್ದಾರೆ.
ಕೋಲಾದ ನಿಯಮಿತ ಸೇವೆಯು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ನಿಯಮಿತ ಕೋಲಾ ಸೇವನೆಗೆ ಸಂಬಂಧಿಸಿದಂತೆ, ಡಾ. ಗುಪ್ತಾ ದತ್ತಾಂಶವನ್ನು ಉಲ್ಲೇಖಿಸಿದ್ದು, ವಾರಕ್ಕೆ 21 ಅಥವಾ ಅದಕ್ಕಿಂತ ಹೆಚ್ಚು ಕೋಲಾ ಪಾನೀಯವನ್ನು ಸೇವಿಸುವ ಜನರಿಗೆ ಮಧುಮೇಹ ಮತ್ತು ಬೊಜ್ಜು ಬರುವ ಅಪಾಯ ಎರಡರಷ್ಟಿದೆ ಎಂದು ಹೇಳಿದ್ದಾರೆ.
ಹಲ್ಲಿನ ಆರೋಗ್ಯವು ಮತ್ತೊಂದು ಪ್ರಮುಖ ಕಾಳಜಿಯಾಗಿದೆ. ಅವರು ಸೂಚಿಸಿದಂತೆ ನಿಯಮಿತ ಸಕ್ಕರೆ ರಹಿತ ಸೇವನೆಯು ಹಲ್ಲುಗಳ ಸವೆತ ಹಾಗೂ ಹುಳುಕಾಗುವಂತೆ ಮಾಡುತ್ತದೆ. ಇದರಿಂದ ಹಾನಿಯಾಗುವ ಸಂಭವವೇ ಜಾಸ್ತಿ ಎಂದು ತಿಳಿದುಬಂದಿದೆ.
ಮಿತವಾಗಿರುವುದು ಮುಖ್ಯ
ಯಾವುದೇ ವ್ಯಕ್ತಿಯು ಕೋಲಾವನ್ನು ಕುಡಿಯಲು ಬಯಸಿದರೆ, ಮಿತವಾಗಿ ಕುಡಿಯುವುದು ಮುಖ್ಯವಾಗಿರುತ್ತದೆ. ಅತಿಯಾದ ಕೋಲಾ ಸೇವನೆಯು ದೀರ್ಘಕಾಲಿನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುವುದಾಗಿ ತಿಳಿದುಬಂದಿದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.