ಸಾಂದರ್ಭಿಕ ಚಿತ್ರ 
ಆಹಾರ

ನೀವು ಪ್ರತಿದಿನ ತಿನ್ನುವ ಈ ಆಹಾರಗಳು ನಿಮ್ಮ ಹೃದಯದ ರಕ್ತನಾಳಗಳನ್ನೇ ಬ್ಲಾಕ್​ ಮಾಡ್ತವೆ...Heart health

ಪ್ರಮುಖ ಮುಖ್ಯಾಂಶಗಳು

  • ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಈ ಸಮಸ್ಯೆಗಳೇ ಹೃದಯ ಸಮಸ್ಯೆಗೆ ಪ್ರಮುಖ ಕಾರಣ
  • ನಾವು ತಿನ್ನುವ ಆಹಾರಗಳು ನಮ್ಮ ಮೂತ್ರಪಿಂಡಗಳು, ಯಕೃತ್ತು ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತವೆ
  • ಜನರು ಜಂಕ್ ಫುಡ್ ಮತ್ತು ಕರಿದ ಆಹಾರವನ್ನು ಅತಿ ಹೆಚ್ಚಾಗಿ ತಿನ್ನುತ್ತಾರೆ
  • ಅತಿ ಹೆಚ್ಚು ಸಕ್ಕರೆ ಪಾನೀಯ ಕುಡಿಯುವುದರಿಂದ ಇದು ಬೊಜ್ಜು ಮತ್ತು ಮೆಟಬಾಲಿಕ್ ಸಿಂಡ್ರೋಮ್ ಅಪಾಯ ಹೆಚ್ಚಿಸುತ್ತದೆ
Heart health: ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿಯೇ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಈ ಸಮಸ್ಯೆಗಳೇ ಹೃದಯ ಸಮಸ್ಯೆಗೆ ಪ್ರಮುಖ ಕಾರಣ ಎಂದು ತಿಳಿಯಬಹುದು. ನಾವು ತಿನ್ನುವ ಆಹಾರಗಳು ನಮ್ಮ ಮೂತ್ರಪಿಂಡಗಳು, ಯಕೃತ್ತು ಮತ್ತು ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ, ನಾವು ಏನನ್ನು ಸೇವಿಸಬೇಕು ಎಂಬುದರ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು.
ಇತ್ತೀಚಿನ ದಿನಗಳಲ್ಲಿ, ಕಾರ್ಯನಿರತ ವೇಳಾಪಟ್ಟಿಯಿಂದಾಗಿ, ಜನರು ಜಂಕ್ ಫುಡ್ ಮತ್ತು ಕರಿದ ಆಹಾರವನ್ನು ಅತಿ ಹೆಚ್ಚಾಗಿ ತಿನ್ನುತ್ತಾರೆ. ಅವು ತಮ್ಮ ಜೀವನಶೈಲಿಯ ಭಾಗವಾಗಿ ಇರುತ್ತವೆ. ಆದಾಗ್ಯೂ, ಇದು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಅಪಾಯಕಾರಿ ಸಮಸ್ಯೆಯಿಂದ ನೀವೇನಾದರೂ ದೂರವಿರಬೇಕು ಎಂದು ಬಯಸಿದರೆ, ಈ ಆಹಾರಗಳನ್ನು ಇಂದೇ ತಪ್ಪಿಸಿ.

ಉಪ್ಪು ಅಧಿಕವಾಗಿರುವ ಆಹಾರಗಳು

ನಮ್ಮ ಆಹಾರದಲ್ಲಿ ಹೆಚ್ಚಿನ ಉಪ್ಪು ಸೇವನೆಯು ಮೂತ್ರಪಿಂಡಗಳಿಗೆ ಒಳ್ಳೆಯದಲ್ಲ. ಸೋಡಿಯಂ ಅಧಿಕವಾಗಿರುವ ಆಹಾರಗಳು ರಕ್ತದೊತ್ತಡವನ್ನು ಹೆಚ್ಚಿಸಿ, ಹೃದಯದ ತೊಂದರೆಗೆ ಒಳಪಡಿಸುತ್ತದೆ. ಆದ್ದರಿಂದ ಸಂಸ್ಕರಿಸಿದ ಆಹಾರಗಳು, ಡಬ್ಬಿಯಲ್ಲಿ ತಯಾರಿಸಿದ ಸೂಪ್‌ಗಳು, ಉಪ್ಪಿನಕಾಯಿ ಮತ್ತು ಉಪ್ಪುಸಹಿತ ಬೀಜಗಳಂತಹ ಹೆಚ್ಚಿನ ಸೋಡಿಯಂ ಆಹಾರಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಇದರ ಬದಲಿಗೆ ಅಡುಗೆ ಮಾಡಲು ಉಪ್ಪಿನ ಬದಲಿಗೆ ಗಿಡಮೂಲಿಕೆಯ ಮಸಾಲೆಗಳನ್ನು ಬಳಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಟ್ರಾನ್ಸ್ ಕೊಬ್ಬುಗಳು

ದೇಹಕ್ಕೆ ಕೆಲವು ಕೊಬ್ಬು ಅತ್ಯಗತ್ಯ, ಆದರೆ ಹುರಿದ ಆಹಾರಗಳು, ಪೇಸ್ಟ್ರಿಗಳು ಮತ್ತು ಮಾರ್ಗರೀನ್‌ಗಳಲ್ಲಿನ ಕೊಬ್ಬು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಆದ್ದರಿಂದ, ಆಲಿವ್ ಎಣ್ಣೆ ಮತ್ತು ಆವಕಾಡೊದಂತಹ ಹೆಚ್ಚು ಆರೋಗ್ಯಕರ ಕೊಬ್ಬನ್ನು ಸೇವಿಸುವುದು ದೇಹಕ್ಕೆ ಉತ್ತಮ. ಆದರಿಂದ ಹುರಿದ ಆಹಾರಗಳನ್ನು ಸಾಧ್ಯವಾದಷ್ಟು ಸೇವಿಸುವುದನ್ನು ನಿಲ್ಲಿಸಿ.

ಸೋಡಾ, ಸಕ್ಕರೆ ಪಾನೀಯಗಳನ್ನು ಕುಡಿಯುವುದು

ಅತಿ ಹೆಚ್ಚು ಸಕ್ಕರೆ ಪಾನೀಯಗಳನ್ನು ಕುಡಿಯುವುದರಿಂದ ಇದು ಬೊಜ್ಜು ಮತ್ತು ಮೆಟಬಾಲಿಕ್ ಸಿಂಡ್ರೋಮ್ ಅಪಾಯವನ್ನು ಹೆಚ್ಚಿಸುತ್ತದೆ. ಇದು ಹೃದಯದ ಕಾಯಿಲೆಗೆ ಒಳಪಡಿಸುತ್ತದೆ. ಇದರ ಬದಲಾಗಿ  ನೀರು, ಗಿಡಮೂಲಿಕೆ ಚಹಾ ಹಾಗೂ ನೈಸರ್ಗಿಕ ರಸಗಳನ್ನು ಸಕ್ಕರೆ ಇಲ್ಲದೇ ಕುಡಿಯಿರಿ. ಇದು ಹೃದಯದ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆ.

 ಸರಳ ಕಾರ್ಬೋಹೈಡ್ರೇಟ್‌ಗಳ ಸೇವನೆ

ಬಿಳಿ ಬ್ರೆಡ್​, ಸಂಸ್ಕರಿಸಿದ ಆಹಾರ, ಕಡಿಮೆ ಕಾರ್ಬೋಹೈಡ್ರೇಟ್​ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಬಹುದು. ದೀರ್ಘಾವಧಿಯಲ್ಲಿ ಇದು ಮಧುಮೇಹ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು. ನಿಮ್ಮ ಆಹಾರದಲ್ಲಿ ಕಂದು ಅಕ್ಕಿ, ಕಂದು ಬ್ರೆಡ್ ಅಥವಾ ಧಾನ್ಯಗಳನ್ನು ಸೇರಿಸಿಕೊಳ್ಳುವುದರಿಂದ ಈ ರೀತಿಯ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ಎಂದು ಡಾ. ಕುಮಾರ್ ಹೇಳಿದ್ದಾರೆ.

ಕೆಂಪು ಮಾಂಸ ಮತ್ತು ಅನಿಯಮಿತ ಆಹಾರ

ಕೆಂಪು ಮಾಂಸದ ಅತಿಯಾದ ಸೇವನೆಯು ಹೃದಯಕ್ಕೆ ಹಾನಿಕಾರಕವಾಗಿದೆ.  ಹಾಗಾಗಿ ಮಿತವಾಗಿ ಕೆಂಪು ಮಾಂಸವನ್ನು ತಿನ್ನುವುದು ಉತ್ತಮವಾಗಿದೆ. ಆದಾಗ್ಯೂ, ಕೆಂಪು ಮಾಂಸವನ್ನು ಹೆಚ್ಚಾಗಿ ಸೇವಿಸುವುದರಿಂದ ಇದು ತೂಕ ಹೆಚ್ಚಾಗಲು ಮತ್ತು ಒತ್ತಡಕ್ಕೆ ಕಾರಣವಾಗಬಹುದು. ಆದ್ದರಿಂದ, ಸಮತೋಲಿತ ಆಹಾರವನ್ನು ಸೇವಿಸುವುದರಿಂದ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಸಿಹಿತಿಂಡಿಗಳು 

ಅನೇಕ ಜನರು ಪೇಸ್ಟ್ರಿಗಳು ಮತ್ತು ಸಿಹಿತಿಂಡಿಗಳು ತಿನ್ನಲು ಇಷ್ಟ ಪಡುತ್ತಾರೆ. ಇವೆಲ್ಲವೂ  ತ್ವರಿತ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ. ಈ ಸಿಹಿತಿಂಡಿಗಳು ಹೃದಯಕ್ಕೆ ಹಾನಿಕಾರಕವಾಗಬಹುದು. ಹೃದಯದ ಸುರಕ್ಷತೆಗಾಗಿ, ನೀವು ಹಣ್ಣುಗಳು ಮತ್ತು ನೈಸರ್ಗಿಕ ಆಹಾರಗಳಿಂದ ತಯಾರಿಸಿದ ಸಿಹಿತಿಂಡಿಗಳನ್ನು ಸೇವಿಸುವುದು ಉತ್ತಮ.

ಜೀವನಶೈಲಿಯಲ್ಲಿ ಬದಲಾವಣೆ ಅಗತ್ಯ

ಧೂಮಪಾನ, ಅತಿಯಾದ ಮದ್ಯಪಾನ ಮತ್ತು ವ್ಯಾಯಾಮದ ಕೊರತೆಯು ಹೃದಯದ ಆರೋಗ್ಯವನ್ನು ಹದಗೆಡಿಸುತ್ತದೆ. ಆದರಿಂದ ನಿಮ್ಮ ಹೃದಯವನ್ನು ರಕ್ಷಿಸಿಕೊಳ್ಳಲು ಆಹಾರ ಗುಣಮಟ್ಟದ ಮೇಲೂ ಗಮನಹರಿಸುವುದು ಉತ್ತಮ. ಹಾಗಾಗಿ ಆರೋಗ್ಯಕರ ಅಭ್ಯಾಸಗಳಾದ ವ್ಯಾಯಾಮ, ಓಡುವುದು, ನಡೆಯುವುದು, ಯೋಗ ಮಾಡುವುದರಿಂದ ಆರೋಗ್ಯವಾಗಿರಬಹುದು (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.