Junk Food: ರಸ್ತೆಬದಿ ಸಿಗುವ ಬಗೆಬಗೆಯ ತಿಂಡಿ-ತಿನಿಸುಗಳನ್ನು ತಿನ್ನುವ ಮಂದಿ ನಮ್ಮಲ್ಲೇ ಅಧಿಕ. ಮನೆಯಲ್ಲಿ ಮಾಡುವ ಬಿಸಿ ಬಿಸಿ, ಆರೋಗ್ಯಕ ಆಹಾರವನ್ನು ಮುಟ್ಟದೆಯೇ, ಹೊರಗಡೆ ಸಿಗುವ ಸಮೋಸ, ಕಚೋರಿ ಮತ್ತು ಬೇಕರಿ ತಿನಿಸುಗಳನ್ನು ನಾಲಿಗೆ ಚಪ್ಪರಿಸುವಂತೆ, ಹೊಟ್ಟೆ ಇನ್ನೂ ಕೇಳುವಂತೆ ತಿನ್ನುವ ಮಂದಿಗೆ ಗೊತ್ತಿಲ್ಲ, ತಾವು ತಮ್ಮದೇ ಮಿದುಳಿಗೆ ಸ್ಲೋ ಪಾಯ್ಸನ್ ನೀಡುತ್ತಿದ್ದೀವಿ ಎಂದು. ಈ ಬಗ್ಗೆ ಇಲ್ಲಿವೆ ಕೆಲವು ಅಚ್ಚರಿ ಸಂಗತಿಗಳು.
ಜಂಕ್ ಫುಡ್ ಬೊಜ್ಜು ಮತ್ತು ಹೃದಯ ಸ್ತಂಭನದಂತಹ ರೋಗಗಳಿಗೆ ಮಾತ್ರ ಕಾರಣವಲ್ಲ. ಇದು ನಮ್ಮ ಮಿದುಳಿನ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚಿನ ಸಕ್ಕರೆ ಅಂಶವಿರುವ ಹುರಿದ ಆಹಾರಗಳು ಮತ್ತು ಕೂಲ್ ಡ್ರಿಂಕ್ಸ್ಗಳನ್ನು ಸೇವಿಸುವುದರಿಂದ ಮಿದುಳಿನಲ್ಲಿನ ರಾಸಾಯನಿಕ ಸಮತೋಲನಕ್ಕೆ ಹೊಡೆತ ಬೀಳುತ್ತದೆ. ಇದರ ಪರಿಣಾಮವಾಗಿ, ಒತ್ತಡ ಮತ್ತು ಆತಂಕದಂತಹ ಸಮಸ್ಯೆಗಳು ನಮ್ಮ ಅರಿವಿಗೆ ಬಾರದಂತೆ ಉದ್ಭವಿಸುತ್ತವೆ. ಅಷ್ಟಕ್ಕೂ ಏನೆಲ್ಲ ಕಾಯಿಲೆಗಳು ಕಾಡುತ್ತವೆ ಎಂಬುದರ ಕುರಿತು ಇಲ್ಲಿದೆ ನೋಡಿ ವಿವರವಾದ ಮಾಹಿತಿ.
1. ಖಿನ್ನತೆಯ ಅಪಾಯ
ಸಂಶೋಧನೆಯ ಪ್ರಕಾರ, ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸುವ ಬಹುತೇಕ ಜನ್ನರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಶೇ.50ರಷ್ಟು. ಜಂಕ್ ಫುಡ್‌ನಲ್ಲಿರುವ ಟ್ರಾನ್ಸ್ ಕೊಬ್ಬುಗಳು ಮಿದುಳಿನಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ. ಇದು ಮನಸ್ಥಿತಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.
2. ತೀವ್ರ ಆತಂಕ
ಜಂಕ್ ಫುಡ್‌ನಲ್ಲಿರುವ ಕೃತಕ ಬಣ್ಣಗಳು ಮತ್ತು ಪ್ರಿಸರ್ವೆಟಿವ್ಸ್ಗಳು ನರಮಂಡಲದ ಮೇಲೆ ಪರಿಣಾಮ ಬೀರುತ್ತವೆ. ಇದು ಅರಿವಿಗೆ ಬಾರದಂತೆ, ಯಾವುದೇ ಕಾರಣವಿಲ್ಲದೆ ಆತಂಕ ಮತ್ತು ಭಯದಂತಹ ಲಕ್ಷಣಗಳನ್ನು ಉಂಟು ಮಾಡುತ್ತದೆ.
3. ಏಕಾಗ್ರತೆಯ ಕೊರತೆ
ಅಧಿಕ ಪ್ರಮಾಣದ ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸಿದಾಗ, ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ದಿಢೀರ್ ಏರುತ್ತದೆ. ಇದು ಮಿದುಳಿನ ಚುರುಕುತನಕ್ಕೆ ಬ್ರೇಕ್ ಹಾಕುತ್ತದೆ ಮತ್ತು ಯಾವುದರ ಮೇಲೂ ಗಮನಹರಿಸಿದಂತೆ ಕಟ್ಟಿಹಾಕುತ್ತದೆ.
4. ಸ್ಮರಣಶಕ್ತಿ ನಷ್ಟ
ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರವು 'ಹಿಪೊಕ್ಯಾಂಪಸ್' (ಸ್ಮರಣಶಕ್ತಿಯನ್ನು ನಿಯಂತ್ರಿಸುವ ಮಿದುಳಿನ ಭಾಗ) ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಇದು ವಿಷಯಗಳನ್ನು ತ್ವರಿತವಾಗಿ ಮರೆತುಬಿಡಲು ಮತ್ತು ಕಲಿಯುವ ಸಾಮರ್ಥ್ಯದಲ್ಲಿ ಇಳಿಕೆಗೆ ಕಾರಣವಾಗುತ್ತದೆ.
5. ಮನಸ್ಥಿತಿಯಲ್ಲಿ ಬದಲಾವಣೆ
ಜಂಕ್ ಫುಡ್ ತಿಂದಾಗ, ಮಿದುಳಿನಲ್ಲಿ 'ಡೋಪಮೈನ್' ಎಂಬ ಹಾರ್ಮೋನ್ ರಿಲೀಸ್ ಆಗುತ್ತದೆ. ಇದು ನಮಗೆ ತಾತ್ಕಾಲಿಕ ಸಂತೋಷವನ್ನು ನೀಡುವುದೇ ಆದರೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆ ಕ್ಷಣಕ್ಕೆ ಉಂಟಾಗುವ ಖುಷಿ, ಕಡಿಮೆಯಾದ ತಕ್ಷಣ ಕಿರಿಕಿರಿ, ಕೋಪ ಮತ್ತು ಖಿನ್ನತೆಯಂತಹ ಭಾವನೆಗಳಿಗೆ ಕಾರಣವಾಗುತ್ತದೆ.
6. ನಿದ್ರಾಹೀನತೆಯ ಸಮಸ್ಯೆ
ಜಂಕ್ ಫುಡ್‌ನಲ್ಲಿ ಕೆಫೀನ್ ಮತ್ತು ಹೆಚ್ಚಿನ ಸೋಡಿಯಂ ಅಂಶವಿರುವ ಹಿನ್ನೆಲೆ, ಇದು ಗಾಢವಾದ ನಿದ್ರೆಗೆ ಅಡ್ಡಿಯಾಗಬಹುದು. ಸರಿಯಾದ ಅಂದರೆ 7ರಿಂದ 8 ಗಂಟೆಗಳ ನಿದ್ರೆಗೆ ಕೊರತೆ ಮತ್ತು ಮಾನಸಿಕ ನೆಮ್ಮದಿಗೂ ಕಿರಿಕಿರಿ ಉಂಟು ಮಾಡುತ್ತದೆ.
8. ಮಿದುಳಿನಲ್ಲಿ ಉರಿಯೂತ
ಅತಿಯಾದ ಸಕ್ಕರೆ ಮತ್ತು ಕೆಟ್ಟ ಕೊಬ್ಬುಗಳಿಂದ ಮಿದುಳಿನ ಅಂಗಾಂಶದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ದೀರ್ಘಾವಧಿಯಲ್ಲಿ ಆಲ್ಝೈಮರ್ನಂತಹ ಕಾಯಿಲೆಗಳನ್ನು ತಂದಿಡುವ ಸಾಧ್ಯತೆಗಳು ಹೆಚ್ಚಿವೆ,(ಏಜೆನ್ಸೀಸ್).
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.