ಗುಲಾಬಿ ಬಣ್ಣದ ತುಟಿಗೆ ಸರಳ ಮನೆ ಮದ್ದು 
ಆಹಾರ

ತುಟಿ ಕಪ್ಪಾಗಲು ನೀವು ಮಾಡುವ ಈ ಮಿಸ್ಟೇಕ್​ಗಳೇ ಕಾರಣ! ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Lips Tips

ಪ್ರಮುಖ ಮುಖ್ಯಾಂಶಗಳು

  • ಚಳಿಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ತುಟಿಯ ಬಣ್ಣ ಕಪ್ಪಾಗುತ್ತದೆ
  • ಕಪ್ಪಾದ ತುಟಿ ಗುಲಾಬಿ ಬಣ್ಣಕ್ಕೆ ತಿರುಗಲು ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್
Lips Tips: ಮನುಷ್ಯನ ಮುಖ ನೋಡಲು ಎಷ್ಟು ಚೆಂದವೋ, ಅವರ ಮುಖದಲ್ಲಿನ ತುಟಿ ಕೂಡ ಅಷ್ಟೇ ಚೆಂದ. ಮುಖದ ಲಕ್ಷಣ, ಸೌಂದರ್ಯ ಹೇಗೆ ಸೆಳೆಯುತ್ತದೋ, ಅಂತೆಯೇ ತುಟಿಯ ಬಣ್ಣ ಸಹ ಹಲವರ ಗಮನವನ್ನು ಸೆಳೆಯುತ್ತದೆ. ಕೆಂದುಟಿಯನ್ನು ನೋಡುವ ಮಂದಿ, ನಮಗೇಕೆ ಆ ರೀತಿಯ ಲಿಪ್ಸ್​ ಇಲ್ಲ ಎಂದು ಮನದೊಳಗೆ ಸಂಕಟ ಪಡುತ್ತಿರುತ್ತಾರೆ. ಲಿಪ್​ಸ್ಟಿಕ್​ ಇಲ್ಲದ ಬಹುತೇಕ ಸ್ಟಾರ್​ ನಟಿಯರು ಮತ್ತು ಮಾಡೆಲ್​ಗಳ ಲಿಪ್ಸ್​ಗಳನ್ನು ನೋಡುವ ಮಂದಿ, ಕಪ್ಪಾಗಿರುವ ನಮ್ಮ ತುಟಿಗಳನ್ನು ಅವರಂತೆ ಮಾಡಿಕೊಳ್ಳುವುದು ಹೇಗೆ? ಎಂಬ ಚಿಂತೆ ಅನೇಕರಲ್ಲಿ ಕಾಡುತ್ತಿರುತ್ತದೆ.
ಬೇಸಿಗೆಯಲ್ಲಿ ಒಣ, ಒಡೆದ ತುಟಿಗಳು ಮತ್ತು ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳುವಂತಹ ಸಮಸ್ಯೆಗಳು ಕಾಡುವುದು ತೀರ ಸಾಮಾನ್ಯ. ಈ ಸಮಸ್ಯೆಗಳು ಚಳಿಗಾಲದಲ್ಲಿ ಮಾತ್ರ ಸಂಭವಿಸುತ್ತವೆ ಎಂದು ಹಲವರು ಭಾವಿಸುತ್ತಾರೆ. ಆದರೆ, ಅದು ತಪ್ಪು ಕಲ್ಪನೆ. ಬಿಸಿ ಗಾಳಿ, ಸುಡುವ ಸೂರ್ಯನ ಶಾಖ ಮತ್ತು ಬೇಸಿಗೆಯ ಹಾನಿಕಾರಕ ಯುವಿ ಕಿರಣಗಳು ಸಹ ತುಟಿಗಳನ್ನು ಹಾನಿಗೊಳಿಸುತ್ತವೆ. ಮುಖದ ಇತರ ಭಾಗಗಳಿಗೆ ಹೋಲಿಸಿದರೆ ಲಿಪ್ಸ್​ ಮೇಲಿನ ಚರ್ಮವು ತುಂಬಾ ತೆಳ್ಳಗಿರುತ್ತದೆ. ಹೀಗಾಗಿ, ಇದು ಬೇಗನೆ ತೇವಾಂಶವನ್ನು ಕಳೆದುಕೊಳ್ಳುತ್ತದೆ.
ಕಪ್ಪಾಗಿರುವ ತುಟಿಗಳನ್ನು ಕೆಂದುಟಿಯಾಗಿ ಮಾಡಿಕೊಳ್ಳಲು ಇಲ್ಲಿವೆ ಕೆಲವು ಸರಳ ಮನೆ ಮದ್ದುಗಳು. ಇದನ್ನು ಅನುಸರಿಸುವ ಮೂಲಕ ನೀವು ನಿಮ್ಮ ತುಟಿಗಳನ್ನು ಮೃದು (ಸಾಫ್ಟ್​) ಮತ್ತು ಗುಲಾಬಿ ಬಣ್ಣವನ್ನು ಪಡೆಯಬಹುದು. ನಾವಿಲ್ಲಿ ತಿಳಿಸಿರುವ ಕೆಲವು ಸಿಂಪಲ್​ ಟಿಪ್ಸ್​ಗಳನ್ನು ಫಾಲೋ ಮಾಡುವ ಮೂಲಕ ದುಬಾರಿ ಸೌಂದರ್ಯ ಉತ್ಪನ್ನಗಳಿಗೆ ಹೇಳಿ ಗುಡ್​ಬೈ.

ಅಧಿಕ ಪ್ರಮಾಣದಲ್ಲಿ ನೀರು

ನಿರ್ಜಲೀಕರಣವು ನಿಮ್ಮ ತುಟಿಗಳನ್ನು ಬೇಗನೆ ಒಣಗಿಸುತ್ತದೆ. ಹೀಗಾಗಿ, ದಿನಕ್ಕೆ ಕನಿಷ್ಠ 8ರಿಂದ 10 ಗ್ಲಾಸ್ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನಿಮ್ಮ ತುಟಿಗಳನ್ನು ನಿಧಾನವಾಗಿ ಮೃದುವಾಗಿ ಕಾಣುವಂತ ಮಾಡುತ್ತವೆ.

ಜೇನುತುಪ್ಪ-ಸಕ್ಕರೆ

ಸ್ವಲ್ಪೇ ಸ್ವಲ್ಪ ಜೇನುತುಪ್ಪಕ್ಕೆ ಸಕ್ಕರೆಯನ್ನು ಬೆರೆಸಿ ವಾರಕ್ಕೆ ಎರಡು ಬಾರಿ ನಿಮ್ಮ ತುಟಿಗಳ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಅಂದರೆ ಸ್ಕ್ರಬ್​ ಮಾಡಿ. ಹೀಗೆ ಮಾಡುವುದರಿಂದ ಸತ್ತ ಚರ್ಮ ಉದುರುತ್ತವೆ. ನಿಮ್ಮ ತುಟಿಗಳು ಕಾಂತಿಯುತ ಮತ್ತು ನಯವಾಗಿ ಕಾಣಲು ಚಮತ್ಕಾರಿಯಾಗಿ ಕೆಲಸ ಮಾಡುತ್ತದೆ.

SPF ಅಂಶವುಳ್ಳ ಲಿಪ್ ಬಾಮ್

ಬಿಸಿಲಿಗೆ ಹೋಗುವ ಮೊದಲು ಎಸ್​ಪಿಎಫ್​ ಅಂಶವಿರುವ ಲಿಪ್ ಬಾಮ್​ಗಳನ್ನು ತುಟಿಗೆ ಹಚ್ಚುವುದು ಒಳಿತು. ಇದು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಿಮ್ಮ ತುಟಿಗಳು ಕಪ್ಪಾಗುವುದನ್ನು ರಕ್ಷಿಸುತ್ತದೆ ಹಾಗೂ ಲಿಪ್ಸ್​ಗಳನ್ನು ಗುಲಾಬಿ ಬಣ್ಣಕ್ಕೆ ತಿರುಗಿಸುತ್ತದೆ.

ಹೊಕ್ಕುಳಕ್ಕೆ ಎಣ್ಣೆ

ಆಯುರ್ವೇದದ ಪ್ರಕಾರ, ರಾತ್ರಿ ಮಲಗುವ ಮೊದಲು ಹೊಕ್ಕುಳಕ್ಕೆ ಸ್ವಲ್ಪ ಸಾಸಿವೆ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಹಚ್ಚುವುದರಿಂದ ದೇಹವು ತೇವವಾಗಿರುತ್ತದೆ ಮತ್ತು ತುಟಿಗಳ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ ಎನ್ನಲಾಗಿದೆ.

ಸೌತೆಕಾಯಿ ರಸ

ಸೌತೆಕಾಯಿ ರಸವನ್ನು ತುಟಿಗಳ ಮೇಲೆ ಲೇಪಿಸುವುದರಿಂದ ಕಪ್ಪು ಬಣ್ಣ ಕಡಿಮೆಯಾಗುವುದಲ್ಲದೆ, ತಂಪಾಗಿಸುವ ಪರಿಣಾಮವನ್ನು ಸಹ ನೀಡುತ್ತದೆ. ಇದು ಬೇಸಿಗೆಯಲ್ಲಿ ಉತ್ತಮ ನೈಸರ್ಗಿಕ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ.

ತುಟಿಗಳನ್ನು ನೆಕ್ಕಬೇಡಿ

ಅನೇಕರು ತಮ್ಮ ನಾಲಿಗೆಯಿಂದ ಆಗಾಗ್ಗೆ ತುಟಿಗಳನ್ನು ನೆಕ್ಕುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಲಾಲಾರಸದಲ್ಲಿರುವ ಕಿಣ್ವಗಳು ತುಟಿಗಳನ್ನು ಇನ್ನಷ್ಟು ಡ್ರೈ ಮಾಡುತ್ತವೆ. ಆದ್ದರಿಂದ, ಈ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸುವುದು ಒಳಿತು. ಒಟ್ಟಾರೆಯಾಗಿ, ಇಲ್ಲಿ ತಿಳಿಸಲಾದ ಸಿಂಪಲ್​ ಟಿಪ್ಸ್​ಗಳನ್ನು ಅನುಸರಿಸಿದರೆ, ಬೇಸಿಗೆಯಲ್ಲಿಯೂ ನಿಮ್ಮ ತುಟಿಗಳು ಮೃದು, ಗುಲಾಬಿ ಬಣ್ಣ ಮತ್ತು ಆರೋಗ್ಯಕರವಾಗಿರುತ್ತವೆ,(ಏಜೆನ್ಸೀಸ್).
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಸದಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.