- ಪದೇಪದೇ ಬಿಸಿ ಮಾಡಿದರೆ ಅಡುಗೆ ಎಣ್ಣೆಯ ಗುಣಮಟ್ಟ ಕುಸಿಯಬಹುದು
- ಟಿಪಿಸಿ ಪ್ರಮಾಣವು ಎಣ್ಣೆಯ ಗುಣಮಟ್ಟ ತಿಳಿಯುವ ಪ್ರಮುಖ ಮಾನದಂಡ
- ಬಳಸಿದ ಅಡುಗೆ ಎಣ್ಣೆ (UCO) ಮತ್ತೆ ಆಹಾರ ತಯಾರಿಕೆಗೆ ಬಳಕೆಯಾಗುತ್ತಾ?
Used Cooking Oil: ಸಂಜೆ ಆಗುತ್ತಿದ್ದಂತೆ ರಸ್ತೆ ಬದಿಯ ಬಜ್ಜಿ, ಬೋಂಡಾ, ಪಕೋಡ ಅಂಗಡಿಗಳ ಮುಂದೆ ಜನಜಂಗುಳಿ ಸಾಮಾನ್ಯ. ಕುದಿಯುವ ಎಣ್ಣೆಯಲ್ಲಿ ಮೆಣಸಿನಕಾಯಿ, ಈರುಳ್ಳಿ, ಆಲೂಗಡ್ಡೆ ಬೀಳುತ್ತಿದ್ದಂತೆ ಬಿಸಿ ಬಿಸಿ ತಿಂಡಿ ಕೆಲವೇ ನಿಮಿಷಗಳಲ್ಲಿ ತಿನ್ನುವವರ ಕೈ ಸೇರುತ್ತೆ. ರುಚಿ, ಬೆಲೆ ಎಲ್ಲವೂ ಚೆನ್ನಾಗಿದ್ದರೂ, ಬಾಣಲೆಯಲ್ಲಿರುವ ಎಣ್ಣೆ ಎಷ್ಟು ಸೇಫ್? ಅನ್ನೋ ಪ್ರಶ್ನೆ ಮಾತ್ರ ಉಳಿಯುತ್ತೆ.
ಹಳೆಯ ಎಣ್ಣೆ ಬಳಕೆ ಎಷ್ಟು ಸುರಕ್ಷಿತ?
ಅಡುಗೆ ಎಣ್ಣೆಯನ್ನು ಪದೇಪದೇ ಬಿಸಿ ಮಾಡಿದಾಗ ಅದರ ಗುಣಮಟ್ಟದಲ್ಲಿ ಬದಲಾವಣೆಯಾಗುತ್ತೆ. ಇದನ್ನು ಅಳೆಯಲು ಟೋಟಲ್ ಪೋಲಾರ್ ಕಂಪೌಂಡ್ಸ್ (TPC) ಪ್ರಮುಖ ಸೂಚಕವಾಗಿದೆ. ನಿಗದಿತ ಮಿತಿಗಿಂತ ಟಿಪಿಸಿ ಹೆಚ್ಚಿರುವ ಎಣ್ಣೆಯನ್ನು ಆಹಾರ ತಯಾರಿಕೆಯಲ್ಲಿ ಬಳಸಬಾರದು. ಹೀಗಾಗಿ ಎಣ್ಣೆ ಕಪ್ಪಾಗಿದ್ದರೆ ಅಪಾಯಕಾರಿ, ಅದೇ ರೀತಿ ನೋಡಲು ಸ್ವಚ್ಛವಾಗಿದೆ ಅಂತ ಸುರಕ್ಷಿತ ಅಂತಲೂ ಹೇಳಲಾಗದು. ಎಣ್ಣೆಯ ನಿಜವಾದ ಗುಣಮಟ್ಟ ತಿಳಿಯಲು ವೈಜ್ಞಾನಿಕ ಪರೀಕ್ಷೆ ಮುಖ್ಯ.
RUCO ಅಂದ್ರೇನು?
ಆರ್ಯುಸಿಒ ಅಂದರೆ ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಆಹಾರ ತಯಾರಿಕೆಗೆ ಬಳಸದೆ, ಬಯೋಡೀಸೆಲ್ ಸೇರಿದಂತೆ ಕೈಗಾರಿಕಾ ಉದ್ದೇಶಗಳಿಗೆ ಮರುಬಳಕೆ ಮಾಡುವ ವ್ಯವಸ್ಥೆ.
ಸಾಮಾನ್ಯವಾಗಿ ವ್ಯವಸ್ಥೆ ಹೀಗಿರಬೇಕು
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಂದ ಸಂಗ್ರಹಿಸಲಾಗುವ ಬಳಸಿದ ಅಡುಗೆ ಎಣ್ಣೆ (UCO) ಅಧಿಕೃತವಾಗಿ ಸಂಗ್ರಹಣೆಗೊಂಡು ಕೈಗಾರಿಕಾ ಬಳಕೆಗೆ ಹೋಗಬೇಕು. ಆದರೆ, ಈ ಬಳಸಿದ ಎಣ್ಣೆ ಮತ್ತೆ ಆಹಾರ ತುಯಾರಿಕೆಯಲ್ಲಿ ಬಳುಸುತ್ತಾರಾ? ಎಂಬುದನ್ನು ಪರಿಶೀಲಿಸುವುದು ಅತ್ಯಂತ ಪ್ರಮುಖ ಪ್ರಶ್ನೆಯಾಗಿದೆ.
ಬಾಣಲೆಯಿಂದ ಪೂರೈಕೆದಾರನವರೆಗೆ ತನಿಖೆ
ಯಾವುದಾದರೂ ಅಂಗಡಿಯಲ್ಲಿ ಅನುಮಾನಾಸ್ಪದ ಎಣ್ಣೆ ಪತ್ತೆಯಾದರೆ ತನಿಖೆ ಅಲ್ಲಿಗೇ ನಿಲ್ಲಬಾರದು. ಎಣ್ಣೆ ಎಲ್ಲಿಂದ ಬಂತು? ಯಾರು ಪೂರೈಸಿದರು? ಖರೀದಿ ಬಿಲ್ ಇದೆಯಾ? ಬ್ರ್ಯಾಂಡ್ ಮತ್ತು ಬ್ಯಾಚ್ ವಿವರ ಏನು? ಎಂಬುದನ್ನು ಪರಿಶೀಲಿಸಬೇಕು. ಅಗತ್ಯವಿದ್ದರೆ ಎಣ್ಣೆಯ ಮಾದರಿ ಪಡೆದು ಎಣ್ಣೆ ಎಷ್ಟು ಹಾಳಾಗಿದೆ ಅಥವಾ ಮರುಬಳಕೆಗೆ ಯೋಗ್ಯವಾಗಿದೆಯಾ ಅನ್ನೋದನ್ನು(TPC) ಪರೀಕ್ಷೆ ನಡೆಸಿ, ಪ್ರಯೋಗಾಲಯದ ವರದಿ ಹಾಗೂ ದಾಖಲೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಬಹುದು.
ಎಲ್ಲ ಬಜ್ಜಿ ಅಂಗಡಿಗಳೂ ತಪ್ಪಿತಸ್ಥರಲ್ಲ
ಇಲ್ಲಿ ಒಂದು ವಿಷಯ ಸ್ಪಷ್ಟ. ಎಲ್ಲ ರಸ್ತೆಬದಿ ಆಹಾರ ವ್ಯಾಪಾರಿಗಳೂ ಹಳೆಯ ಅಥವಾ ಕಳಪೆ ಎಣ್ಣೆ ಬಳಸುತ್ತಾರೆ ಎಂದು ಹೇಳಲಾಗದು. ನಿಯಮ ಪಾಲಿಸಿ ಸ್ವಚ್ಛತೆ ಕಾಪಾಡಿಕೊಂಡು ವ್ಯಾಪಾರ ಮಾಡುವ ಸಾವಿರಾರು ಸಣ್ಣ ಉದ್ಯಮಿಗಳಿದ್ದಾರೆ. ಆದ್ದರಿಂದ ರೂಲ್ಸ್ ಪಾಲಿಸುವವರಿಗೆ ಕೊಡುವುದಕ್ಕಿಂತ, ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚುವುದು ಮುಖ್ಯ.
ಮತ್ತೆ ಬಾಣಲೆಗೆ ಬರುತ್ತಾ ಹಳೆಯ ಎಣ್ಣೆ?
ಬಳಸಿದ ಅಡುಗೆ ಎಣ್ಣೆ ಆಹಾರ ಸರಪಳಿಯಿಂದ ಹೊರಗೆ ಹೋಗಬೇಕು. ಆದ್ರೆ ಕಳಪೆ ಅಥವಾ ಬಳಕೆಗೆ ಯೋಗ್ಯವಲ್ಲದ ಎಣ್ಣೆ ಮತ್ತೆ ಆಹಾರ ತಯಾರಿಕೆಗೆ ಬರುತ್ತಿದ್ದರೆ, ಅದು ಯಾವ ಹಂತದಲ್ಲಿ ಮರಳುತ್ತಿದೆ ಅನ್ನೋದನ್ನು ಪತ್ತೆಹಚ್ಚಬೇಕು.
ಯಾಕಂದ್ರೆ, ಗ್ರಾಹಕರ ತಟ್ಟೆಗೆ ಬರುವ ಪ್ರತಿಯೊಂದು ಬಜ್ಜಿ ಹಿಂದೆ ಒಂದು ಎಣ್ಣೆಯ ಕಥೆ ಇದೆ. **ಆ ಎಣ್ಣೆ ಸುರಕ್ಷಿತವೇ ಅನ್ನೋದನ್ನು ಖಚಿತಪಡಿಸೋದು ಆಹಾರ ಸುರಕ್ಷತಾ ಅಧಿಕಾರಿಗಳ ಜವಾಬ್ದಾರಿ; ಎಚ್ಚರಿಕೆಯಿಂದಿರುವುದು ಗ್ರಾಹಕರ ಹಕ್ಕು,(ಏಜೆನ್ಸೀಸ್).