ಲೈಫ್‌ಸ್ಟೈಲ್

ಧನ್ವಂತರಿ: ಜೀವರಕ್ಷಕ ಪಂಚ ಪದಾರ್ಥಗಳು

ಡಾ. ವೆಂಕಟ್ರಮಣ ಹೆಗಡೆ

ಹೊರಗಡೆಯ ವಾತಾವರಣದಲ್ಲಿ ಬದಲಾವಣೆ ಆಗುತ್ತಿದ್ದಂತೆಯೇ ದೇಹದಲ್ಲಿ ಕೂಡ ಅನೇಕ ರೀತಿಯ ಬದಲಾವಣೆಗಳಾಗುತ್ತವೆ. ಮಳೆಗಾಲದಲ್ಲಿ ಜೀರ್ಣಶಕ್ತಿ ತುಂಬ ಕಡಿಮೆಯಾಗುತ್ತದೆ. ದೇಹದಲ್ಲಿ ವಾತ-ಕಫದೋಷಗಳು ಹೆಚ್ಚಾಗಿ ರೋಗಗಳನ್ನು ತರುತ್ತವೆ. ಹಾಗಾಗಿ ಈ ಸಮಯದಲ್ಲಿ ಆಹಾರದ ವಿಷಯದಲ್ಲಿ ಅತ್ಯಂತ ಕಾಳಜಿ ಅವಶ್ಯ. ಈ ಸಮಯದಲ್ಲಿ ಆರೋಗ್ಯ ಕಾಪಾಡಲು ಹೆಚ್ಚಾಗಿ ತೆಗೆದುಕೊಳ್ಳಬೇಕಾದ ಐದು ರೀತಿಯ ಪದಾರ್ಥಗಳ ಬಗ್ಗೆ ತಿಳಿಯೋಣ.

ಜೇನುತುಪ್ಪ: ಉಷ್ಣ ಗುಣ ಹೊಂದಿದ್ದು, ಜೀರ್ಣಕಾರಿಯಾದ ಜೇನುತುಪ್ಪವನ್ನು ನಿತ್ಯ ಸೇವಿಸುವುದರಿಂದ ಅಜೀರ್ಣ, ಆಮಶಂಕೆ, ಅಲರ್ಜಿ, ಆಮವಾತ, ಅಸ್ತಮಾದಂತಹ ಸಮಸ್ಯೆಗಳನ್ನು ದೂರವಿಡಬಹುದು. ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚಾಗುವ ದೋಷಗಳನ್ನು ಹತೋಟಿಯಲ್ಲಿಡುವುದರಿಂದ ಮತ್ತು ವಿಶೇಷವಾಗಿ ಕಫದೋಷವನ್ನು ನಿಯಂತ್ರಿಸುವುದರಿಂದ ಇದನ್ನು ಬಳಸಲೇಬೇಕು. ಕಂಠಶುದ್ಧಿ ಮಾಡಿ ಸ್ವರವನ್ನು ಚೆನ್ನಾಗಿರುವಂತೆ ಮಾಡುತ್ತದೆ. ಗಾಯಗಳು ಬೇಗ ಗುಣವಾಗುವಂತೆ ಮಾಡುತ್ತದೆ. ಮೇಧಾಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮರೋಗ, ಕೆಮ್ಮು, ರಕ್ತವಿಕಾರ, ಕ್ರಿಮಿರೋಗ, ಬೊಜ್ಜು, ಪದೇಪದೆ ಕಾಡುತ್ತಿರುವ ಭೇದಿ - ಹೀಗೆ ಹಲವಾರು ಸಮಸ್ಯೆಗಳಲ್ಲಿ ಇದು ಉಪಯುಕ್ತ. ಇದಕ್ಕೆ ಯೋಗವಾಹಿ ಗುಣವಿದೆ. ಅಂದರೆ ಇದರ ಜೊತೆಗೆ ಸೇವಿಸಿದ ಆಹಾರ ಅಥವಾ ಔಷಧದ ಗುಣವನ್ನು ಹೆಚ್ಚಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಆದರೆ ಉಷ್ಣ ಪ್ರಕೃತಿಯವರು ಮತ್ತು ತುಂಬ ಕೃಶಕಾಯದವರು ಅತಿಯಾಗಿ ಬಳಸಬಾರದು.

ಹುಳಿ ಪದಾರ್ಥಗಳು: ನಿಂಬೆಹಣ್ಣು, ಮುರುಗಲ ಹಣ್ಣು (ಪುನರ್ಪಳಿ / ಕೋಕಂ), ಹುಣಸೆಹಣ್ಣಿನಂತಹ ಹುಳಿ ಪದಾರ್ಥಗಳಿಂದ ತಯಾರಿಸಿದ ಅಡುಗೆಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ಸೇವಿಸಬೇಕು. ವಿಶೇಷವಾಗಿ, ಇಡೀ ದಿನ ಮೋಡ ಕವಿದು ಮಳೆಯಿರುವ ದಿನ ಹೆಚ್ಚು ಹುಳಿ ಮತ್ತು ಸಾಂಬಾರಪದಾರ್ಥಗಳಿಂದ ಖಾರವಾಗಿರುವ ಸೂಪ್​ಗಳಿಗೆ ಸ್ವಲ್ಪ ತುಪ್ಪ ಹಾಕಿ ಸೇವಿಸಬೇಕು ಎನ್ನುತ್ತದೆ ಆಯುರ್ವೆದ. ಹುಳಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ವಿಶೇಷವಾಗಿ ಹೃದಯಕ್ಕೆ ಬಲ ಬರುತ್ತದೆ. ಜ್ಞಾನೇಂದ್ರಿಯಗಳ ಶಕ್ತಿಯನ್ನು ಹೆಚ್ಚಿಸುವ ಮತ್ತು ಮಾನಸಿಕವಾಗಿ ಉತ್ಸಾಹವನ್ನು ಹೆಚ್ಚಿಸುವ ಗುಣ ಹುಳಿಗಿದೆ. ಆದರೆ ಅತಿ ಬಳಕೆಯಿಂದ ದೇಹದಲ್ಲಿ ಪಿತ್ತ ಹೆಚ್ಚಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಖಾಲಿಹೊಟ್ಟೆಯಲ್ಲಿ ಹುಳಿಯ ಸೇವನೆ ಮಾಡಬಾರದು.

ಕಾಳುಮೆಣಸು: ಮಲೆನಾಡಿನಲ್ಲಿ ಮಳೆಗಾಲದಲ್ಲಿ ಖಟ್ನೆ ಎಂಬ ಒಂದು ಥರದ ಸೂಪ್ ಮಾಡಿ ಊಟದಲ್ಲಿ ಬಳಸುತ್ತಾರೆ. ಅದಕ್ಕೆ ವಿಶೇಷವಾಗಿ ಬಳಸುವುದು ಕಾಳುಮೆಣಸು. ಮಳೆಗಾಲದ ತಂಪಿನಿಂದ ಬರುವ ಹಲವು ಸಮಸ್ಯೆಗಳನ್ನು ಪ್ರತಿ ಬಾರಿ ಎದುರಿಸುವವರು ಕೇವಲ ಕಾಳುಮೆಣಸಿನ ಉಪಯೋಗದಿಂದ ಈ ಕಾಲವನ್ನು ಆರಾಮವಾಗಿ ಕಳೆಯಬಹುದು. ಇದಕ್ಕೆ ವೈರಸ್ ನಿರೋಧಕ ಗುಣ ತುಂಬ ಚೆನ್ನಾಗಿದೆ. ಆದರೆ ಇದು ಉಷ್ಣ ಮತ್ತು ಪಿತ್ತಕಾರಕವಾಗಿರುವುದರಿಂದ ಬಿಸಿಲಿನ ದಿನಗಳಲ್ಲಿ ಮತ್ತು ಉಷ್ಣ ಪ್ರಕೃತಿಯವರು ಅತಿಯಾಗಿ ಬಳಸಬಾರದು.

ದೊಡ್ಡಪತ್ರೆ: ಹಿತ್ತಿಲಿನಲ್ಲಿ ಕಳೆಯಂತೆ ಬೆಳೆದುಕೊಳ್ಳುವ ಇದನ್ನು ಮಳೆಗಾಲದಲ್ಲಿ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚಿ ಆರೋಗ್ಯವೃದ್ಧಿಯಾಗುತ್ತದೆ. ಆಮಶಂಕೆ, ಲಿವರ್ ಸಮಸ್ಯೆಗಳು, ಕ್ರಿಮಿರೋಗ, ಮೂತ್ರಪಿಂಡದ ಕಲ್ಲುಗಳು, ಸೈನಸೈಟಿಸ್, ಕಫ, ಕೆಮ್ಮು, ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಇದು ಪ್ರಯೋಜನಕಾರಿ. ಹೃದಯಕ್ಕೆ ಬಲ ನೀಡುತ್ತದೆ. ಚಟ್ನಿ, ಸೂಪ್, ಭಾತ್, ಸಾಂಬಾರ್ ಮಾಡಿದರೆ ರುಚಿಯಾಗಿರುತ್ತದೆ.

ನುಗ್ಗೆಸೊಪ್ಪು: ದೊಡ್ಡ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್​ಗಳನ್ನು ಹೊಂದಿರುವ ನುಗ್ಗೆಸೊಪ್ಪಿಗೆ ಹಲವಾರು ಸಮಸ್ಯೆಗಳನ್ನು ತಡೆಯುವ ಶಕ್ತಿಯಿದೆ. ವಿಷವನ್ನು ಹೋಗಲಾಡಿಸುವ ಗುಣವಿದೆ. ಚರ್ಮರೋಗಗಳಲ್ಲಿ ಸಹಕಾರಿ. ಹಾಗಾಗಿ ಇದನ್ನು ಮಳೆಗಾಲದಲ್ಲಿ ಹೆಚ್ಚು ಸೇವಿಸಬೇಕು. ಇದರ ಎಲೆಗಳ ಪೇಸ್ಟ್​ಗೆ ಅರಿಶಿಣ ಸೇರಿಸಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಫಂಗಲ್ ಚರ್ಮರೋಗದಲ್ಲಿ ಹಚ್ಚಬೇಕು. ಫೇಸ್ ಪ್ಯಾಕ್ ಕೂಡ ಮಾಡಿಕೊಳ್ಳಬಹುದಾಗಿದೆ.