ಲೈಫ್‌ಸ್ಟೈಲ್

ಮೆಂತ್ಯಸೊಪ್ಪು ಎಂಬ ಆರೋಗ್ಯದ ಕಣಜ: ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಮಿಸ್​ ಮಾಡಿಕೊಂಡ್ರೆ ನಿಮಗೆ ನಷ್ಟ!

ಮೆಂತ್ಯಕಾಳಿನಂತೆ ಮೆಂತ್ಯಸೊಪ್ಪು ಕೂಡ ತರಕಾರಿ ಮಾತ್ರವಲ್ಲ, ಔಷಧಿಯುಕ್ತ ಆಹಾರವೂ ಆಗಿದೆ. ಹಾಗಾಗಿಯೇ ಸೊಪ್ಪುಗಳಲ್ಲಿ ಮೆಂತ್ಯಸೊಪ್ಪಿಗೆ ವಿಶಿಷ್ಟ ಸ್ಥಾನವಿದೆ. ಮನೆಯಲ್ಲೇ ಮೆಂತ್ಯಸೊಪ್ಪು ಬೆಳೆಸಿದರೆ ನಮಗೆ ಬೇಕಾದಾಗ, ಬೇಕಾದಷ್ಟನ್ನೇ ತಾಜಾ ಆಗಿ ಬಳಸಬಹುದು. ಹೆಚ್ಚಾಗಿ ಬೆಳೆದ ಸೊಪ್ಪನ್ನು ನಿರ್ಜಲೀಕರಿಸಿ ದಾಸ್ತಾನು ಮಾಡುತ್ತಾರೆ. ಇದು ಖಸೂರಿ ಮೇಥಿ ಎಂಬ ಹೆಸರಿನಿಂದ ಮಾರಾಟವಾಗುತ್ತದೆ. ಪಾಕಿಸ್ತಾನದ ಖಸೂರ್​ನಿಂದ ಬರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಉತ್ತರ ಭಾರತದಲ್ಲಿ ಇದು ಬಹು ಜನಪ್ರಿಯ.

ಮೆಂತ್ಯಸೊಪ್ಪಿನೊಂದಿಗೆ ಮಸಾಲೆ ಹಾಕಿ ಮಾಡುವ ಪರಾಠ ಸಹ ಬೇಡಿಕೆಯುಳ್ಳ ಆಹಾರಪದಾರ್ಥ. ಮೇಥಿ ಕಾಖರ ಎಂಬುದು ದೂರಪ್ರಯಾಣದಲ್ಲಿ ಪ್ರಯೋಜನಕಾರಿಯಾದ ಕುರುಕಲು ತಿಂಡಿ. ಮೆಂತ್ಯಸೊಪ್ಪನ್ನು ಬೇಯಿಸುವಾಗ ನೀರು ಚಿಮುಕಿಸಿದರೆ ಕಹಿ ಹೆಚ್ಚಾಗುತ್ತದೆ. ನೀರು ಹಾಕದೆ ಸಣ್ಣ ಉರಿಯಲ್ಲಿ ಬೇಯಿಸುವುದರಿಂದ ಕಹಿ ಕಡಿಮೆಯಾಗುತ್ತದೆ. ಕಡಲೆಬೇಳೆ ಜೊತೆಯಲ್ಲಿ ಮೆಂತ್ಯಸೊಪ್ಪು, ಮಸಾಲೆ ಹಾಕಿ ಮಾಡುವ ಪಲ್ಯ ಉತ್ತರ ಕರ್ನಾಟಕದವರ ಅಚ್ಚುಮೆಚ್ಚಿನ ತಿಂಡಿ. ಮೆಂತ್ಯಸೊಪ್ಪಿನಿಂದ ಭಾತ್, ಸೂಪ್, ಪನ್ನೀರ್ ಕರಿ, ಪಲ್ಯಗಳನ್ನು ತಯಾರಿಸಲಾಗುತ್ತದೆ.

ಮೆಂತ್ಯಸೊಪ್ಪನ್ನು ಆಗಾಗ ಬಳಸುವುದರಿಂದ ಮೈಕೈನೋವು, ಬೆನ್ನು ನೋವು, ಸೊಂಟನೋವು ಹತೋಟಿಯಲ್ಲಿರುತ್ತದೆ. ಇದನ್ನು ಹಬೆಯಲ್ಲಿ ಬೇಯಿಸಿ ತಿಂದರೆ ಸಂಧಿವಾತ ರೋಗಗಳ ನೋವು ಶಮನವಾಗುವುದು. ಮೆಂತ್ಯಸೊಪ್ಪನ್ನು ಹೆಚ್ಚಿ ಬೇಳೆಯೊಂದಿಗೆ ಬೇಯಿಸಿ ಹುಳಿ ಮಾಡಿಕೊಂಡು ನಿಯಮಿತವಾಗಿ ಸೇವಿಸುವುದರಿಂದ ಹೃದಯ ಮತ್ತು ಶ್ವಾಸಕೋಶಗಳಿಗೆ ಸಂಬಂಧಿಸಿದ ರೋಗಿಗಳು ದೂರವಾಗುತ್ತವೆ.

ಮೆಂತ್ಯಸೊಪ್ಪು ಮತ್ತು ಮೂಲಂಗಿಯನ್ನು ಸಣ್ಣಗೆ ಹೆಚ್ಚಿ ಉಪ್ಪು ಬೆರೆಸಿ, ಮೆಣಸು ಮತ್ತು ಜೀರಿಗೆಯ ಒಗ್ಗರಣೆ ಹಾಕಿ ತಿನ್ನುವುದರಿಂದ ಜ್ಞಾಪಕಶಕ್ತಿ ವೃದ್ಧಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ಮೆಂತ್ಯ ಸೊಪ್ಪು ಔಷಧದಂತೆ ಕಾರ್ಯನಿರ್ವಹಿಸುತ್ತದೆ. ಮೆಂತ್ಯಸೊಪ್ಪಿನ ರಸಕ್ಕೆ ನಿಂಬೆರಸ ಸೇರಿಸಿ ಊತ ಬಂದಿರುವ ಜಾಗಕ್ಕೆ ಹಚ್ಚಿದರೆ ಬೇಗ ಊತ ಕಡಿಮೆಯಾಗುತ್ತದೆ ಎಂಬುದು ನಾಟಿವೈದ್ಯರ ಅಭಿಪ್ರಾಯ.