Fast Food : ಇಂದಿನ ತ್ವರಿತಗತಿಯ ಜೀವನ ಶೈಲಿಯಿಂದಾಗಿ ಫಾಸ್ಟ್ ಫುಡ್ಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಫಾಸ್ಟ್ ಫುಡ್ ಸುಲಭವಾಗಿ ಲಭ್ಯವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಬಾಯಿಗೆ ತುಂಬಾ ರುಚಿಕರವಾಗಿಯೂ ಇರುತ್ತದೆ. ಫಾಸ್ಟ್ ಫುಡ್ ಕಡಿಮೆ ಸಮಯದಲ್ಲಿ ಲಭ್ಯವಾಗುವ ಕಾರಣದಿಂದ ಇಂದು ಅನೇಕ ಮಂದಿಯ ದಿನನಿತ್ಯದ "ಫಸ್ಟ್ ಫುಡ್"ಗಳಾಗಿವೆ.
ಅಂದಹಾಗೆ, ಈ ಆಹಾರಗಳು ತಾತ್ಕಾಲಿಕವಾಗಿ ತೃಪ್ತಿ ನೀಡಿದರೂ ದೀರ್ಘಕಾಲದಲ್ಲಿ ನಮ್ಮ ಆರೋಗ್ಯದ ಮೇಲೆ ತೀವ್ರವಾದ ದುಷ್ಪರಿಣಾಮಗಳನ್ನು ಉಂಟು ಮಾಡುವುದರಲ್ಲಿ ಸಂದೇಹವೇ ಇಲ್ಲ. ಈ ಆಹಾರಗಳಲ್ಲಿ ಹೆಚ್ಚಿನ ಕೊಬ್ಬಿನಾಂಶಗಳು, ಉಪ್ಪು ಮತ್ತು ಸಕ್ಕರೆ ಇರುವುದರಿಂದ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಅದೇ ರೀತಿ ಇಂತಹ ತಿಂಡಿ ತಿನ್ನುವ ಅಭ್ಯಾಸಗಳು ಕರುಳಿನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಹಾಗಾದರೆ, ಯಾವ ತಿಂಡಿಗಳು ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ? ಈ ಪ್ರಶ್ನೆಗೆ ಉತ್ತರ ಗೊತ್ತಾಗಬೇಕೇ? ಹಾಗಿದ್ದರೆ ಈ ಕೆಳಗಿನ ಅಂಶಗಳನ್ನು ತಪ್ಪದೇ ತಿಳಿದುಕೊಳ್ಳಿ.
ಬೆಳಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಟೀ ಕುಡಿಯುವಾಗ ಪಕೋಡಾಗಳಿಂದ ಹಿಡಿದು ಬೀದಿ ಬದಿಯ ಚಾಟ್ಸ್ವರೆಗೆ ನಿಮ್ಮ ಹಂಬಲ ಹೆಚ್ಚಾಗುತ್ತದೆ. ತಿಂಡಿಗಳು ಮಸಾಲೆಯಿಂದ ಸುತ್ತುವರೆದಿರುತ್ತವೆ ಮತ್ತು ತುಂಬಾ ರುಚಿಯಾಗಿರುತ್ತವೆ. ಆದರೆ, ನೀವಿಲ್ಲಿ ಒಂದು ಅಂಶವನ್ನು ಮರೆತಿದ್ದೀರಿ ಅದೇನೆಂದರೆ, ಅದರಕ್ಕೆ ಕಹಿ ಉದರಕ್ಕೆ ಸಿಹಿ ಎಂಬ ಮಾತಿದೆ. ಯಾವುದು ಬಾಯಿಗೆ ರುಚಿಯನ್ನು ಕೊಡುತ್ತದೆಯೋ ಅದು ಖಂಡಿತವಾಗುಯೂ ನಮ್ಮ ಹೊಟ್ಟೆಗೆ ಒಳ್ಳೆಯದಲ್ಲ. ಅದೇ ರೀತಿ ಬಾಯಿಗೆ ಯಾವುದು ರುಚಿಸುವುದಿಲ್ಲವೋ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದು.
ಜೀರ್ಣಕಾರಿ ಆರೋಗ್ಯದ ಮೇಲೆ ಫಾಸ್ಟ್ ಫುಡ್ಗಳು ಪರಿಣಾಮ ಬೀರುತ್ತದೆ. ಕರಿದ, ಹುರಿದ, ಸಂಸ್ಕರಿಸಿದ, ಉಪ್ಪು ಅಥವಾ ಸಕ್ಕರೆಯಿಂದ ಈ ಆಹಾರಗಳು ತುಂಬಿರುತ್ತದೆ. ಈ ಆಹಾರಗಳ ಆಗಾಗ್ಗೆ ಸೇವನೆಯು ನಿಮ್ಮ ಕರುಳಿನ ಸೂಕ್ಷ್ಮಜೀವಿಗಳನ್ನು ತೊಂದರೆಗೊಳಿಸುತ್ತದೆ. ಹಾಗೆಯೇ ಕಾಲಾನಂತರದಲ್ಲಿ ಕರುಳಿನ ತಡೆಗೋಡೆಯನ್ನು ದುರ್ಬಲಗೊಳಿಸುತ್ತದೆ. ಅಷ್ಟೇ ಅಲ್ಲದೇ ಉರಿಯೂತ, ಬೊಜ್ಜು ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಮೂಲವಾಗುತ್ತದೆ ಎಂದು ಆಹಾರ ತಜ್ಞರು ಹೇಳಿದ್ದಾರೆ.
ಅಲ್ಲದೆ ಅನೇಕ ಜನರು ಅರಿವಿಲ್ಲದೆ ಉಬ್ಬುವಿಕೆ ಅಥಾವಾ ಆಯಾಸವನ್ನು ಅನುಭವಿಸುತ್ತಾರೆ. ಇದು ಕಳಪೆ ಆಹಾರ ಆಯ್ಕೆಗಳಿಂದ ರೂಪಗೊಂಡ ಅನಾರೋಗ್ಯಕರ ಕರುಳಿನ ವಾತಾವರಣದ ಆರಂಭಿಕ ಚಿಹ್ನೆಗಳಾಗಿವೇ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಂದಹಾಗೆ, ಬಾಡಿದ ಹೂವನ್ನು ನಾವು ಅರಳಿಸಲು ಆಗದು ಆದರೆ, ಕೆಟ್ಟ ಹೋದ ನಿಮ್ಮ ಕರುಳು ಮತ್ತೆ ಚೇತರಿಸಿಕೊಳ್ಳಬಹುದು. ಅದಕ್ಕೆ ಹುರಿದ ದ್ವಿದಳ ಧಾನ್ಯಗಳು, ಬೀಜಗಳು, ಹಣ್ಣಗಳನ್ನು ತಿನ್ನುವ ಮೂಲಕ ಆರೋಗ್ಯಯುತ ಆಹಾರದ ಕಡೆ ಗಮನ ಹರಿಸಿ ಕರುಳಿನ ತಡೆಗೋಡೆಯನ್ನು ಬಲಪಡಿಸಿಕೊಳ್ಳಬಹುದು.
ಇಲ್ಲಿ ಜಲಸಂಚಯವೂ ಬಹು ಮುಖ್ಯವಾಗಿದೆ. ಪ್ರತಿದಿನ ಕನಿಷ್ಠ ಎರಡು ಲೀಟರ್ ನೀರು ಕುಡಿಯುವುದರಿಂದ ಕರುಳಿನ ಚಲನೆಯು ಸರಿಯಾಗಿ ನಡೆಯಲು ನೆರವಾಗುತ್ತದೆ. ಇದರೆ ಜತೆಗೆ ಊಟದ ನಡುವೆ ವಿಶ್ರಾಂತಿ ಪಡೆಯಬೇಕು. ಅಂದರೆ, ಜೀರ್ಣಾಂಗ ವ್ಯವಸ್ಥೆಗೆ ಸಮಯವನ್ನು ನೀಡುವುದರಿಂದ ಕರುಳಿನ ಕಾರ್ಯ ಮತ್ತು ಒಟ್ಟಾರೆ ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸಿಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.
ಒಟ್ಟಾರೆ ನೋಡಿದರೆ ನಿಮಗೆ ರುಚಿಕರ ತಿಂಡಿಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಇಲ್ಲಿ ಹೇಳುತ್ತಿಲ್ಲ. ಆದರೆ ಅವುಗಳನ್ನು ಜಾಣ್ಮೆಯಿಂದ ಆಯ್ಕೆ ಮಾಡಬೇಕು. ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಪೋಷಕಾಂಶಗಳನ್ನು ಹೊಂದಿರುವ ಸಮೃದ್ಧ ಆಹಾರಗಳ ಕಡೆಗೆ ಮರಳುವುದು ಬಹು ಮುಖ್ಯವಾಗಿದೆ. ನಿಮ್ಮ ಕರುಳು ಆರೋಗ್ಯವಾಗಿದ್ದರೆ ನಿಮ್ಮಲ್ಲಿ ದೀರ್ಘಕಾಲೀನ ಚೈತನ್ಯ, ತೂಕ ನಿಯಂತ್ರಣ ಹಾಗೂ ಇಮ್ಯುನಿಟಿ ಪವರ್ ಎಲ್ಲವೂ ಸಹಜವಾಗಿ ಉತ್ತಮವಾಗಿರುತ್ತದೆ. ಹೀಗಾಗಿ, ಮುಂದಿನ ಬಾರಿ ಚಿಪ್ಸ್ ಅಥವಾ ಪಕೋಡಾ ತಿನ್ನಬೇಕೆಂಬ ಆಲೋಚನೆ ಬಂದಾಗ, ನಿಮ್ಮ ಜೀರ್ಣಕೋಶದ ಆರೋಗ್ಯವನ್ನೂ ಒಂದು ಬಾರಿ ಪರಿಗಣಿಸಿ. ಪ್ರತಿಬಾರಿ ಜಾಗರೂಕರಾಗಿ ನಿಮ್ಮ ಹಸಿವನ್ನು ತಣಿಸಿ.(ಏಜೆನ್ಸೀಸ್)