ಸಾಂದರ್ಭಿಕ ಚಿತ್ರ 
ಫ್ಯಾಷನ್

ವಾಟ್ಸ್ಆ್ಯಪ್​ ಜಮಾನದಲ್ಲೂ ಜೆನ್​ಜೀಗಳಲ್ಲಿ ಹೆಚ್ಚಿದ ಪತ್ರಗಳ ಕ್ರೇಜ್! ಏನಿದು 'ಸ್ನೇಲ್ ಮೇಲ್'? | Snail Mail

ಪ್ರಮುಖ ಮುಖ್ಯಾಂಶಗಳು

  • ವಾಟ್ಸ್ಆ್ಯಪ್​ ಜಮಾನದಲ್ಲೂ ಜೆನ್​ಜೀಗಳಲ್ಲಿ ಹೆಚ್ಚಿದ ಕೈಬರಹದ ಪತ್ರಗಳ ಕ್ರೇಜ್
  • ಡಿಜಿಟಲ್ ಹಾವಳಿಯಿಂದ ಹೊರಬರಲು ಹೊಸ ಮಾರ್ಗ; ಮಾನವೀಯ ಸಂಬಂಧಗಳ ಹುಡುಕಾಟ
  • ಪತ್ರಗಳೊಂದಿಗೆ ಸ್ಟಿಕ್ಕರ್, ಪೋಸ್ಟ್‌ಕಾರ್ಡ್, ಬುಕ್‌ಮಾರ್ಕ್ ಹಾಗೂ ಸಣ್ಣ ಉಡುಗೊರೆಗಳೂ ಟ್ರೆಂಡ್‌
Snail Mail: ಶರವೇಗದಲ್ಲಿ ತಲುಪುವ ಡಿಜಿಟಲ್​ ಮೆಸೇಜ್‌ಗಳ ಕಾಲದಲ್ಲಿ ಅಂದು ತಡವಾಗಿ ಕೈಸೇರುತ್ತಿದ್ದ ಲಿಖಿತ ಪತ್ರಗಳು ಈಗ ಮತ್ತೆ ಹೊಸ ಕ್ರೇಜ್ ಸೃಷ್ಟಿಸಿವೆ. ವಾಟ್ಸ್ಆ್ಯಪ್, ಇಮೇಲ್​​ ಮತ್ತು ಸೋಷಿಯಲ್ ಮೀಡಿಯಾ ಕಾಲದಲ್ಲಿ ​ ಯುವಜನತೆ ಇದೀಗ ಪತ್ರಗಳ ಮೂಲಕ ಮಾತನಾಡುವತ್ತ ಮುಖ ಮಾಡಿರುವುದು ಅಚ್ಚರಿಯ ಬೆಳವಣಿಗೆ ಎನ್ನಬಹುದು. ಅಷ್ಟಕ್ಕೂ ಏನಿದು ಸ್ನೇಲ್​ ಮೇಲ್​ ಎಂಬ ಇಂಟ್ರೆಸ್ಟಿಂಗ್ ಮಾಹಿತಿ ಬಗ್ಗೆ ಇಲ್ಲಿದೆ ನೋಡಿ​ ವರದಿ.
ಒಂದು ಕಾಲದಲ್ಲಿ ಪೋಸ್ಟ್‌ಮ್ಯಾನ್ ಮನೆ ಬಾಗಿಲಿಗೆ ಬಂದರೆ ಸಾಕು, ‘ಯಾರ ಪತ್ರ ಇರಬಹುದು?’ ಅದರಲ್ಲಿ ಏನು ವಿಷಯ ಇರಬಹುದು?’ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತಿತ್ತು. ಸಂಗಾತಿಯ ಸಂದೇಶಕ್ಕಾಗಿ ಕಾಯುತ್ತಿದ್ದ ಪ್ರೇಮಿಗಳು, ಲವ್​ಲೋಕದಲ್ಲಿ ಈ ಪತ್ರಕ್ಕೆ ವಿಷೇಶ ಸ್ಥಾನವಿದೆ. ಅಷ್ಟೆ ಅಲ್ಲದೇ ನಮ್ಮ ತಾತ-ಅಜ್ಜಿಯ ಕಾಲದಲ್ಲಿ ಅಕ್ಷರಸ್ತರು ಕಡಿಮೆ. ಊರಲ್ಲಿ ಯಾರೋ ಒಬ್ಬಿಬ್ಬರು ಅಷ್ಟಿಷ್ಟು ಓದಿದವರಿತ್ತಿದ್ದರು. ಅವರನ್ನು ಹಿಡಿದು ಪತ್ರ ಓದಿಸುವುದೇ ಒಂದು ರೀತಿ ದೊಡ್ಡ ಸರ್ಕಸ್. ಆ ಪತ್ರದ ಬಗ್ಗೆ ಕಾತರ, ಖುಷಿ ಅಥವಾ ಕೌತುಕ ಎಲ್ಲವೂ ಇರುತ್ತಿದ್ದವು. ಆದರೆ ಈಗ ಡೋರ್‌ಬೆಲ್ ಬಾರಿಸುವ ಮೊದಲೇ ಅಮೆಜಾನ್, ಬ್ಲಿಂಕಿಟ್ ಅಥವಾ ಸ್ವಿಗ್ಗಿ ಡೆಲಿವರಿ ಬಂದಿದೆ ಅಂತ ಮೊಬೈಲ್‌ ನೋಟಿಫಿಕೇಶನ್ ಬರುತ್ತೆ. ಇಂತಹ ಚಟ್-ಪಟ್​ಡಿಜಿಟಲ್ ಜೀವನದಲ್ಲಿ ಈಗ ಹಳೆಯ ಕಾಲದ ಪತ್ರಗಳೇ ಹೊಸ ಟ್ರೆಂಡ್ ಆಗಿರುವುದು ನಿಜಕ್ಕೂ ಅಚ್ಚರಿಯೇ.

ಏನಿದು 'ಸ್ನೇಲ್ ಮೇಲ್' ಟ್ರೆಂಡ್?

’ಸ್ನೇಲ್ ಮೇಲ್’ ಎಂದರೆ ಸಾಂಪ್ರದಾಯಿಕ ಅಂಚೆ ಮೂಲಕ ಕಳುಹಿಸುವ ಪತ್ರಗಳು. ಆದರೆ, ಈಗ ಇದು ಕೇವಲ ಪತ್ರವಲ್ಲ, ಒಂದು ವಿಶೇಷ ಅನುಭವ ಅಂತ ಹೇಳಬಹುದು. ಭಾರತ ಸೇರಿ ಹಲವು ದೇಶಗಳಲ್ಲಿ ಈಗ ಸ್ನೇಲ್ ಮೇಲ್ ಕ್ಲಬ್‌ಗಳು (Snail Mail Clubs) ಆರಂಭವಾಗಿವೆ. ಈ ಕ್ಲಬ್‌ಗಳಿಗೆ ಸದಸ್ಯತ್ವ ಪಡೆಯುವವರು ಪ್ರತಿ ತಿಂಗಳು ತಮ್ಮ ಮನೆಗೆ ಸುಂದರವಾಗಿ ಅಲಂಕರಿಸಿದ, ಕೈಬರಹದ ಲಕೋಟೆಗಳನ್ನು ಪಡೆಯುತ್ತಾರೆ. ಈ ಪತ್ರಗಳ ಜತೆಗೆ ಬಣ್ಣಬಣ್ಣದ ಸ್ಟಿಕ್ಕರ್‌ಗಳು, ಪೋಸ್ಟ್‌ಕಾರ್ಡ್‌ಗಳು, ಬುಕ್‌ಮಾರ್ಕ್‌ಗಳು, ಒಣಗಿಸಿದ ಹೂವುಗಳು, ಫ್ರಿಜ್ ಮ್ಯಾಗ್ನೆಟ್‌ಗಳು ಸೇರಿದಂತೆ ಹಲವು ಸಣ್ಣ ಉಡುಗೊರೆಗಳೂ ಇದರಲ್ಲಿರುತ್ತದೆ.

ಹಳೆಯ ಕಾಲದ ಪತ್ರಗಳೇ ಹೊಸ ಟ್ರೆಂಡ್

ಪತ್ರಗಳಿಗೆ ಹಣ ಖರ್ಚು ಮಾಡ್ತಿರುವ ಯುವಪೀಳಿಗೆ

ಈ ಸೇವೆ ಉಚಿತವಲ್ಲ. ಸಾಮಾನ್ಯವಾಗಿ ತಿಂಗಳಿಗೆ 300ರಿಂದ 500 ರೂ.ವರೆಗೆ ಸದಸ್ಯತ್ವ ಶುಲ್ಕವಿರುತ್ತದೆ. ಕೆಲವು ವಿಶೇಷ ಥೀಮ್‌ಗಳ ಸ್ನೇಲ್ ಮೇಲ್ ಕ್ಲಬ್‌ಗಳಲ್ಲಿ ಇದರ ಶುಲ್ಕ ಇನ್ನೂ ಹೆಚ್ಚಿರಬಹುದು. ಪ್ರತಿ ತಿಂಗಳು ವಿಭಿನ್ನ ವಿಷಯದ ಪತ್ರಗಳು ಬರುತ್ತವೆ. ಕೆಲವು ಪ್ರವಾಸ ಕಥೆಗಳಾಗಿದ್ದರೆ, ಕೆಲವು ಪ್ರೇರಣಾದಾಯಕ ಸಂದೇಶಗಳು, ಸಾಹಿತ್ಯ, ಹಾಸ್ಯ ಅಥವಾ ಕಲೆ ಆಧಾರಿತ ವಿಷಯಗಳನ್ನು ಒಳಗೊಂಡಿರುತ್ತವೆ.

ಡಿಜಿಟಲ್ ಹಾವಳಿಯಿಂದ ಹೊರಬರಲು ಹೊಸ ಮಾರ್ಗ

ತಜ್ಞರ ಪ್ರಕಾರ, ನಿರಂತರ ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣಗಳು ಮತ್ತು ಎಐ ಆಧಾರಿತ ಸಂವಹನದಿಂದ ಅನೇಕ ಯುವಕರು ಡಿಜಿಟಲ್ ಆಯಾಸ (Digital Burnout) ಅನುಭವಿಸುತ್ತಿದ್ದಾರೆ. ಈ ಕಾರಣದಿಂದಲೇ ಮುಟ್ಟಬಹುದಾದ, ಕೈಯಲ್ಲಿ ಹಿಡಿದು ಓದಬಹುದಾದ ಪತ್ರಗಳು ಮತ್ತೆ ಜನಪ್ರಿಯವಾಗುತ್ತಿವೆ. ಒಂದು ಪತ್ರವನ್ನು ನಿಧಾನವಾಗಿ ಓದುವುದು, ಅದರ ಕಲಾತ್ಮಕ ವಿನ್ಯಾಸಕ್ಕೆ ಕಣ್ಣರಳಿಸುವುದು ಮತ್ತು ಅದನ್ನು ನೆನಪಾಗಿ ಉಳಿಸಿಕೊಳ್ಳುವುದು ಯುವಜನತೆಗೆ ಹೊಸ ಅನುಭವ ನೀಡುತ್ತಿದೆಯಂತೆ.

ಲಕೋಟೆಯೇ ಏಕೆ ಇಷ್ಟ?

ಇಂದಿನ ಯುವ ಪೀಳಿಗೆಗೆ ಇದು ಕೇವಲ ಹಳೆ ನೆನಪುಗಳ ವಿಚಾರವಲ್ಲ. ಅವರಲ್ಲಿ ಬಹಳಷ್ಟು ಮಂದಿ ಪತ್ರಗಳ ಕಾಲವನ್ನೇ ನೋಡಿಲ್ಲ. ಆದರೂ ನಿಧಾನವಾಗಿ ಬರುವ ಒಂದು ಕೈಬರಹದ ಪತ್ರ, ಅದರಲ್ಲಿ ಇರುವ ಸ್ಪರ್ಶ, ಭಾವನೆ ಮತ್ತು ಕಲಾತ್ಮಕತೆ ಅವರನ್ನು ಸೆಳೆಯುತ್ತಿರುವುದು ವಿಶೇಷ. ವೇಗದ ಡಿಜಿಟಲ್ ಜಗತ್ತಿನಲ್ಲಿ ಕ್ಷಣಕಾಲ ನಿಂತು, ಒಂದು ಪತ್ರದೊಂದಿಗೆ ಸಮಯ ಕಳೆಯುವ ಚಂದದ ಅನುಭವಕ್ಕಾಗಿ ಜೆನ್​ಜೀ ಹಿಂದೆ ಮುಂದೆ ಹೆಚ್ಚು ಯೋಚಿಸದೆ, ಹಣ ಖರ್ಚು ಮಾಡುತ್ತಿದೆ. ತಕ್ಷಣ ತಲುಪುವ ವಾಟ್ಸ್ಆ್ಯಪ್ ಮೆಸೇಜ್‌ಗಳು ಮತ್ತು ಇಮೇಲ್‌ಗಳ ಡಿಜಿಟಲ್​ಕಾಲದಲ್ಲೂ ಕೈಬರಹ, ಪತ್ರಗಳ ಮೌಲ್ಯ ಕಡಿಮೆಯಾಗಿಲ್ಲ ಎಂಬುದನ್ನು 'ಸ್ನೇಲ್ ಮೇಲ್' ಟ್ರೆಂಡ್ ಸಾಬೀತುಪಡಿಸುತ್ತಿದೆ. ಡಿಜಿಟಲ್ ಯುಗದಲ್ಲೂ ಮಾನವೀಯ ಸಂಬಂಧ, ಪ್ರೀತಿಯ ಹುಡುಕಾಟವೇ ಈ ಹೊಸ ಟ್ರೆಂಡ್‌ಗೆ ಜೀವ ತುಂಬಿದೆ ಎಂದೇ ಹೇಳಬಹುದು (ಏಜೆನ್ಸೀಸ್).