ಸದ್ಯದ ಪರಿಸ್ಥಿತಿಯಲ್ಲಿ ಎಳೆಯ ಮಕ್ಕಳಿಂದ ವೃದ್ಧರವರೆಗೂ ಮಧುಮೇಹ ಕಾಯಿಲೆ ಬಾಧಿಸುತ್ತಿದೆ. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಜೀವಕ್ಕೇ ಆಪತ್ತು ಬರುತ್ತದೆ. ದೀರ್ಘ ಕಾಲದವರೆಗೆ ಕಾಡುವ ಈ ಕಾಯಿಲೆಯಿಂದ ದೂರವಿರುವುದು ಹೇಗೆ? ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೇಗೆ? ಯಾವ ಆಹಾರ ಸೇವಿಸಬೇಕು? ಜೀವನ ಕ್ರಮ ಹೇಗಿರಬೇಕು ಎಂಬಿತ್ಯಾದಿ ಅವಶ್ಯಪೂರ್ಣ ಮಾಹಿತಿಯನ್ನು ವಿವಿಧ ತಜ್ಞರು ಹಂಚಿಕೊಂಡಿದ್ದಾರೆ. ಶನಿವಾರ ವಿಶ್ವದಾದ್ಯಂತ ಮಧುಮೇಹ ದಿನ ಆಚರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸಮಗ್ರ ಮಾಹಿತಿ.
ಜೀವನಶೈಲಿ ಕಟ್ಟುನಿಟ್ಟಾಗಿರಲಿ
ಮಧುಮೇಹಕ್ಕೆ ತುತ್ತಾಗುವ ಮುನ್ನ ಆರೋಗ್ಯಯುತ ವ್ಯಕ್ತಿ ಪ್ರಿ ಡಯಾಬಿಟಿಸ್ ಹಂತದಲ್ಲಿರುತ್ತಾನೆ. ಈ ಸಂದರ್ಭದಲ್ಲಿ
ಕಟ್ಟುನಿಟ್ಟಿನ ಜೀವನಶೈಲಿ ಹಾಗೂ ಪಥ್ಯಾಹಾರ ಮೂಲಕ ಒಂದೆರಡು ವರ್ಷಗಳವರೆಗೆ ಇರಬಹುದು. ಮಧುಮೇಹಕ್ಕೆ ಮುನ್ನ ಸಕ್ಕರೆ ಮಟ್ಟ ಎಷ್ಟು ಇರಬೇಕು ಹಾಗೂ ಮಧುಮೇಹ ತಡೆಯಲು ಏನೇನು ಕ್ರಮ ಅನುಸರಿಸಬೇಕು ಎಂಬುದರ ಬಗ್ಗೆ ಜನರಿಗೆ ಅರಿವು ಇರಬೇಕು. ನಿಯಮಿತ ಆರೋಗ್ಯ ತಪಾಸಣೆ ಮೂಲಕ ಜನರು ಮಧುಮೇಹದಿಂದ ದೂರವಿರಬಹುದು ಹಾಗೂ ಪ್ರಿ ಡಯಾಬಿಟಿಸ್ ವ್ಯಕ್ತಿಯು ಮುಂದೆ ಎದುರಾಗುವ ಮಧುಮೇಹವನ್ನು ತಡೆಯಲು ಸಹಾಯವಾಗುತ್ತದೆ.
| ಡಾ. ಸುಜಯ್ ಪ್ರಸಾದ್ ವೈದ್ಯಕೀಯ ನಿರ್ದೇಶಕ, ನ್ಯೂಬರ್ಗ್ ಆನಂದ್ ಆಸ್ಪತ್ರೆ
ದೀರ್ಘಕಾಲದ ಮಧುಮೇಹ ದೇಹದ ಬಹು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ವೈದ್ಯರ ಸಲಹೆ ಯನ್ನು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಔಷಧ ಪಡೆಯಬೇಕು. ನಿಯಮಿತ ವ್ಯಾಯಾಮ ಹಾಗೂ ಸಕ್ರಿಯ ಜೀವನಶೈಲಿಯಿಂದ ಇದನ್ನು ನಿಯಂತ್ರಿಸಬಹುದು. ಕಡಿಮೆ ರಕ್ತದೊತ್ತಡ, ಕಡಿಮೆ ಹೃದಯ ಬಡಿತ ಹಾಗೂ ಸುಧಾರಿತ ರಕ್ತ ಪರಿಚಲನೆಗೆ ವ್ಯಾಯಾಮ ಸಹಾಯ ಮಾಡುತ್ತದೆ. ನಿಯಮಿತ ವ್ಯಾಯಾಮ ದೇಹದ ಇನ್ಸುಲಿನ್ಗೆ ಸೂಕ್ಷ್ಮತೆಯನ್ನು ಸುಧಾರಿಸಲು ನೆರವಾಗುತ್ತದೆ. ಗ್ಲೂಕೋಸ್ನ ಪರಿಚಲನೆ ಸುಲಭವಾಗುತ್ತದೆ. ಮಧುಮೇಹ ಇರುವವರು ಆರೋಗ್ಯ ಕರ ಆಹಾರ ಪದ್ಧತಿ ಅನುಸರಿಸುವುದು ಮುಖ್ಯ. ಹಣ್ಣು ಹಾಗೂ ಪೋಷಕಾಂಶ ಆಹಾರಗಳಿಂದ ಸಕ್ಕರೆ ಸೇರಿ ಕೊಬ್ಬು ತಡೆಯಬಹುದು. ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಕ್ಕರೆ ಇಲ್ಲದೆ ಕಾಫಿ ಸೇವಿಸುವ ಅಭ್ಯಾಸ ಬೆಳಸಿಕೊಳ್ಳಿ.
| ಡಾ. ರಾಧಿಕಾ ವಿ.ಕುಮಾರ್ ಹಿರಿಯ ಎಂಡ್ರೋಕ್ರೖೆನಾಲಜಿಸ್ಟ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ
ಸಕ್ಕರೆ ಅಂಶ ಹೆಚ್ಚಾಗದಿರಲಿ...
ಮಧುಮೇಹಿಗಳಿಗೆ ಕರೊನಾ ಸೋಂಕು ತಗುಲಿದರೆ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ಮಧುಮೇಹಿಗಳು ಆಹಾರ ಹಾಗೂ ಜೀವನ ಶೈಲಿಯಲ್ಲಿ ಅಗತ್ಯ ಬದಲಾವಣೆ ತಂದುಕೊಂಡು ಕಾಲಕಾಲಕ್ಕೆ ರಕ್ತ, ಮೂತ್ರ ತಪಾಸಣೆ ಮಾಡಿಸಿಕೊಂಡು ಸಕ್ಕರೆ ಅಂಶ ನಿಯಂತ್ರಣದಲ್ಲಿ ಇದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಹೆಚ್ಚಿದಲ್ಲಿ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಮಧುಮೇಹಿಗಳಿಗೆ ಕರೊನಾ ಸೋಂಕು ತಗುಲಿದರೆ ಅಂತಹವರ ದೇಹದಲ್ಲಿ ಕೀಟೋ ಆಸಿಡೋಸಿಸ್ ಎಂಬ ವಿಷಕಾರಿ ಅಂಶ ಹೆಚ್ಚಾಗುತ್ತದೆ. ಇದು ಟೈಪ್ -1 ಮಧುಮೇಹಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಬಾಯಿಯಲ್ಲಿ ವಾಸನೆ, ಪದೇಪದೆ ಮೂತ್ರ ವಿಸರ್ಜನೆ, ಬಾಯಾರಿಕೆ, ವಾಕರಿಕೆ, ದಣಿವು ಪ್ರಮುಖ ಲಕ್ಷಣಗಳು. ಹಾಗಾಗಿ ಮಧುಮೇಹಿಗಳು ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ಹಾಗೂ ಕರೊನಾ ತಗುಲದಂತೆಯೂ ಎಚ್ಚರಿಕೆ ವಹಿಸಬೇಕು.
| ಡಾ. ಮಂಜುನಾಥ್ ಮಲ್ಲಿಗೆ ಎಂಡೊಕ್ರೊನಾಲಜಿಸ್, ಆಸ್ಟರ್ ಆರ್. ವಿ. ಆಸ್ಪತ್ರೆ
ಊಟಕ್ಕೂ ಮುನ್ನ ರಕ್ತದಲ್ಲಿ ಸಕ್ಕರೆ ಪ್ರಮಾಣ 80-110 ಹಾಗೂ ಆಹಾರ ಸೇವನೆ ನಂತರ 140-180 ಇರಬೇಕು. ಎಚ್ಬಿಎ1ಸಿ (ಕೆಂಪು ಕಣಗಳಲ್ಲಿ ಸಕ್ಕರೆ) ಪ್ರಮಾಣ 7ಕ್ಕಿಂತ ಕಡಿಮೆ ಇದ್ದರೆ ಮಧುಮೇಹ ನಿಯಂತ್ರಣದಲ್ಲಿದೆ ಎಂದರ್ಥ. ಎಚ್ಬಿಎ1ಸಿ ಪ್ರಮಾಣ 8 (ಶೇ.25), 9 (ಶೇ.45), 10 (ಶೇ.65), 11 (ಶೇ.85) ಹೀಗೆ ಏರದಂತೆ ಎಚ್ಚರವಹಿಸಬೇಕು. ಆರೋಗ್ಯಕರ ಆಹಾರ ಸೇವನೆಯೊಂದಿಗೆ ಸದಾ ಚಟುವಟಿಕೆಯು ಜೀವನಶೈಲಿ ಮೂಲಕ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಆರೋಗ್ಯ ಸಮಸ್ಯೆ ಉಲ್ಬಣಿಸಲಿದೆ. ಹೃದಯ, ಕಿಡ್ನಿ, ಲಿವರ್ ಹಾಗೂ ಕಣ್ಣು ಸೇರಿ ಇತರ ಅಂಗಾಂಗಗಳಿಗೂ ಹಾನಿಯಾಗಲಿದೆ.
| ಡಾ. ಕೆ.ಎಂ.ಪ್ರಸನ್ನ ಕುಮಾರ್ ಎಂಡ್ರೋಕ್ರೖೆನಾಲಜಿಸ್ಟ್, ಬೆಂಗಳೂರು ಡಯಾಬಿಟಿಸ್ ಆಸ್ಪತ್ರೆ
ಟೈಪ್ 2 ಡಯಾಬಿಟಿಸ್ ರೋಗಿಗಳು ದೈನಂದಿನ ಆರೋಗ್ಯ ತಪಾಸಣೆಗಳನ್ನು ನಿರ್ಲಕ್ಷಿಸಬಾರದು. ಕೋವಿಡ್ ಸಂದರ್ಭದಲ್ಲಿ ಧೈರ್ಯವಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿ ಕೊಳ್ಳಬೇಕು. ದೀರ್ಘಕಾಲದ ಕಾಯಿಲೆಯಾಗಿರುವ ಇದನ್ನು ಸಮರ್ಪಕವಾಗಿ ನಿಯಂತ್ರಿಸಬೇಕು. ಒಂದು ವೇಳೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗದಿದ್ದರೆ ಆನ್ಲೈನ್ ಸೇವೆ ಪಡೆದುಕೊಳ್ಳಬೇಕು. ಡಯಾಬಿಟಿಸ್ ಇತ್ತೀಚಿಗೆ ಅಧಿಕವಾಗುತ್ತಿದೆ. ಶರೀರದಲ್ಲಿ ಇನ್ಸುಲಿನ್ ಉತ್ಪಾದನೆ ಇಲ್ಲದಿರುವುದರಿಂದ ಚಿಕ್ಕ ಪ್ರಾಯದಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಈ ರೋಗವನ್ನು ಸಂಪೂರ್ಣವಾಗಿ ಗುಣಮುಖವಾಗಿ ಮಾಡುವ ಸಾಧ್ಯತೆ ಕಡಿಮೆಯಿದ್ದರೂ ನಿಯಂತ್ರಣದಲ್ಲಿಡಬಹುದು. ನಿಯಮಿತ ಆಹಾರ ಸೇವನೆ, ಯೋಗ, ಧ್ಯಾನಗಳನ್ನು ಮಾಡುವುದರ ಮೂಲಕ ನಿಯಂತ್ರಿಸಬಹುದು. ಜೀವನ ಶೈಲಿಯ ಬದಲಾವಣೆ, ಆಹಾರ ಕ್ರಮ, ಬೊಜ್ಜುತನ ಮೊದಲಾದವುಗಳಿಂದ ಹಾಗೂ ವಂಶ ಪಾರಂಪರಿಕವಾಗಿಯೂ ಈ ರೋಗ ಬರುತ್ತದೆ.
| ಡಾ. ಎಚ್.ಎಸ್. ಸಂತೋಷ್ ಹಿರಿಯ ಎಂಡ್ರೋಕ್ರೖೆನಾಲಜಿಸ್ಟ್, ಮಣಿಪಾಲ್ ಆಸ್ಪತ್ರೆ
ಶೇ.30ರಿಂದ ಶೇ.50 ಮಧುಮೇಹ ರೋಗಿಗಳು ಕರೊನಾಗೆ ತುತ್ತಾಗಿದ್ದಾರೆ. ಸೋಂಕಿನಿಂದ ಮಧುಮೇಹ ರೋಗಿಗಳು ಉಸಿರಾಟ ತೊಂದರೆ ಹಾಗೂ ಅಂಗಾಂಗಗಳ ವೈಫಲ್ಯ ಸೇರಿ ತೀವ್ರ ತೊಂದರೆ ಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ, ಕರೊನಾ ಬಗ್ಗೆ ಮಧುಮೇಹ ರೋಗಿಗಳು ಎಚ್ಚರ ವಹಿಸಬೇಕು. 20 ಸೆಕೆಂಡ್ಗಿಂತ ಹೆಚ್ಚು ಕಾಲ ಕೈ ತೊಳೆ ಯಬೇಕು, ನಂತರ ಮುಖ ಮುಟ್ಟಿಕೊಳ್ಳ ಬಾರದು. ಆಹಾರ, ಕನ್ನಡಕ, ಟವೆಲ್ ಮತ್ತಿತರರ ವಸ್ತುಗಳನ್ನು ಇತರರ ಜತೆ ಹಂಚಿಕೊಳ್ಳಬಾರದು. ಜ್ವರ ಇದ್ದರೆ ಕೂಡಲೇ ಆಸ್ಪತ್ರೆಗೆ ತೆರಳಬೇಕು. ಆರೋಗ್ಯಕರ ಆಹಾರ ಸೇವನೆಯಿಂದ ಗ್ಲೂಕೋಸ್ ನಿಯಂತ್ರಿಸಬಹುದು. ಸೂಕ್ತ ಔಷಧದಿಂದ ಮಧುಮೇಹ ನಿಯಂತ್ರಿಸಬಹುದು.
| ಡಾ. ಡಿ.ಎಂ.ಮಹೇಶ್ ಎಂಡ್ರೋಕ್ರೖೆನಾಲಜಿಸ್ಟ್, ಆಸ್ಟರ್ ಸಿಎಂಐ ಆಸ್ಪತ್ರೆ
ಗರ್ಭಾವಸ್ಥೆಯಲ್ಲಿ ಜಾಗ್ರತೆ ಇರಲಿ
ಗರ್ಭಿಣಿಯರಲ್ಲಿ ಗರ್ಭಾವಸ್ಥೆಯ ಡಯಾಬಿಟಿಸ್ ಮೆಲ್ಲಿಟಸ್ ಶೇ.9 ಬೆಳವಣಿಗೆಯಾಗುತ್ತದೆ. ಇದರಿಂದ ರಕ್ತದೊತ್ತಡ, ಟೈಪ್ 2 ಡಯಾಬಿಟಿಸ್, ಅಕಾಲಿಕ ಜನನ, ಶಿಶು ತೂಕ ಹೆಚ್ಚುವುದು ಹಾಗೂ ಜನನ ಸಮಯದಲ್ಲಿ ಮಗುವಿನ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಇನ್ನಿತರ ಸಮಸ್ಯೆ ಉಂಟಾಗಲಿದೆ. ಗರ್ಭಾವಸ್ಥೆಯಲ್ಲಿ ಜೀವಕೋಶಗಳು ಹೆಚ್ಚು ಇನ್ಸುಲಿನ್ ಪ್ರತಿರೋಧ ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿಸುವುದರಿಂದ ಮಗುವಿಗೆ ಹೆಚ್ಚಿನ ಪೋಷಕಾಂಶ ತಯಾರಿಸಲು ಸಹಾಯಮಾಡುತ್ತದೆ. ಪಥ್ಯಾಹಾರ, ವ್ಯಾಯಾಮ ಹಾಗೂ ಔಷಧಗಳಿಂದ ಇದನ್ನು ನಿಯಂತ್ರಿಸಬಹುದು. ಆರಂಭದಲ್ಲೇ ಇದನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಅಪಾಯಗಳಿಂದ ಪಾರಾಗಬಹುದು.
| ಡಾ. ಪೂರ್ಣಿಮಾ ರಾಮಕೃಷ್ಣ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಅಪೋಲೊ ಕ್ರೆಡೆಲ್ ಆಸ್ಪತ್ರೆ
ಕಣ್ಣಿನ ರೆಟಿನಾ ಟೆಸ್ಟ್ ಅಗತ್ಯ
ಮಧುಮೇಹ ಇರುವುದು ಖಾತ್ರಿಯಾದರೆ ಕೂಡಲೇ ಕಣ್ಣಿನ ರೆಟಿನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಂತರದಲ್ಲಿ ವರ್ಷಕ್ಕೆ ಒಮ್ಮೆ ಅಥವಾ ವೈದ್ಯರ ಸಲಹೆ ಮೇರೆಗೆ ಡಯಾಬಿಟಿಸ್ ಐ ಟೆಸ್ಟ್ ಮಾಡಿಸಿಕೊಳ್ಳಬೇಕು. ಮಧುಮೇಹ ನಿಯಂತ್ರಣದಲ್ಲಿದ್ದವರಲ್ಲೂ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮಧುಮೇಹಿಗಳಿಗೆ ಕಣ್ಣಿನ ಹಿಂಭಾಗದ ನರಗಳು ದುರ್ಬಲಗೊಂಡು ರೆಟಿನಾದಲ್ಲಿ ರಕ್ತ ಸಂಚಾರ ಕುಂಠಿತವಾಗುತ್ತದೆ. ಇದರಿಂದಾಗಿ ಕಣ್ಣಿನ ಒಳಗೆ ರಕ್ತಸ್ರಾವವಾಗಿ ಸೋಂಕು ಹರಡಿ ದೃಷ್ಟಿಗೆ ಹಾನಿಯಾಗುವ ಸಾಧ್ಯತೆಗಳಿವೆ. ನಿರ್ಲಕ್ಷ್ಯ ಮಾಡಿದರೆ ರೆಟಿನಾದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಎಲ್ಲ ವಯೋಮಾನದ ಮಧುಮೇಹಿಗಳಿಗೆ ಕಣ್ಣಿನ ಸಮಸ್ಯೆ ಕಾಡಲಿದೆ. ಆರಂಭದಲ್ಲೇ ಪರೀಕ್ಷೆ ಮಾಡಿಸಿದರೆ ಮುಂದೆ ಆಗುವ ಅನಾಹುತದಿಂದ ಪಾರಾಗಬಹುದು.
| ಡಾ. ಸುಜಾತಾ ರಾಥೋಡ್ ನಿರ್ದೇಶಕಿ, ಮಿಂಟೋ ಕಣ್ಣಿನ ಆಸ್ಪತ್ರೆ
ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ದೃಷ್ಟಿ ಮಸುಕಾಗಿ, ಕಣ್ಣಿನ ಪೊರೆ, ಗ್ಲ್ಲಾಕೊಮಾ ಮತ್ತು ರೆಟಿನೋಪಥಿ ಸಮಸ್ಯೆಗೆ ಕಾರಣವಾಗಲಿದೆ. ಇತ್ತೀಚೆಗೆ ಯುವ ಜನರಲ್ಲೂ ಮಧುಮೇಹ ಕಾಣಿಸಿಕೊಳ್ಳುತ್ತಿದೆ. 20-75 ವರ್ಷ ವಯೋಮಾನದವರಲ್ಲಿ ಕುರುಡುತನಕ್ಕೆ ಮಧುಮೇಹ ಪ್ರಮುಖ ಕಾರಣವಾಗಿದೆ. ಮಧುಮೇಹದಿಂದಾಗಿ ರೆಟಿನೋಪತಿ ಸಮಸ್ಯೆಗೆ ಒಳಗಾದವರಲ್ಲಿ ಶೇ.50 ಮಂದಿಗೆ ನಿಖರ ಕಾರಣವೇ ತಿಳಿದಿರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ನಿಯಮಿತವಾಗಿ ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಧುಮೇಹ ಹೊಂದಿದವರು ತಪ್ಪದೇ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈ ರೀತಿಯ ಎಚ್ಚರಿಕೆ ಕ್ರಮಗಳಿಂದ ಮಧುಮೇಹ ನಿಯಂತ್ರಣದ ಜತೆಗೆ ಅದರಿಂದ ಉಂಟಾಗುವ ಇತರೆ ಆರೋಗ್ಯ ಸಮಸ್ಯೆಗಳಿಂದಲೂ ದೂರ ಇರಬಹುದು.
| ಡಾ.ಶಾಲಿನಿ ಶೆಟ್ಟಿ ನೇತ್ರ ತಜ್ಞೆ, ಅಪೋಲೊ ಆಸ್ಪತ್ರೆ