Glowing Skin Tips 
ಲೈಫ್‌ಸ್ಟೈಲ್

ಮಂಕಾದ ಮುಖಕ್ಕೆ ದುಬಾರಿ ಕ್ರೀಂ ಹಚ್ಚೋದು ಬಿಡಿ; ಈ ಹೆಲ್ದಿ ಫುಡ್ ತಿನ್ನುವುದು ರೂಢಿಸಿಕೊಳ್ಳಿ..Glowing Skin Tips

ಪ್ರಮುಖ ಮುಖ್ಯಾಂಶಗಳು

  • ಕಾಂತಿಯುತ ತ್ವಚೆಗಾಗಿ ನಿತ್ಯ ದುಬಾರಿ ಕ್ರೀಂ ಕೊಂಡು ಹಚ್ಚಿಕೊಳ್ಳುವ ಅವಶ್ಯಕತೆ ಇಲ್ಲ
  • ವಿಟಮಿನ್​ ಸಿ, ಕೊಬ್ಬಿನಾಮ್ಲ, ಹೆಲ್ದಿ ಆಹಾರ ತಿನ್ನುವುದು ಬೆಸ್ಟ್
  • ದಿನಕ್ಕೆ ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಯುವುದರಿಂದ ಮುಖದ ಕಾಂತಿ ಕಾಪಾಡಿಕೊಳ್ಳಬಹುದು
Glowing Skin Tips: ಚರ್ಮದ ತುರಿಕೆ, ಟ್ಯಾನಿಂಗ್​ ಸಮಸ್ಯೆ ಕಾಣಿಸಿಕೊಂಡಾಗ ದಿಢೀರನೇ ಡಾಕ್ಟರ್​ ಬಳಿ ತೆರಳಿ ಫೀಸ್​ ಕೊಟ್ಟು ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಕ್ರೀಂಗಳನ್ನು ಮುಖಕ್ಕೆ ಲೇಪಿಸಿಕೊಳ್ಳುತ್ತೇವೆ. ನಂತರ ಕೆಮಿಕಲ್​ನಿಂದ ಚರ್ಮ ಹಾಳಾಯ್ತು ಎಂದು ಒದ್ದಾಡುತ್ತೇವೆ. ಚರ್ಮದ ಸೌಂದರ್ಯ ಕಾಪಾಡಿಕೊಳ್ಳಲು ಬೇಕಾಗಿರುವುದು ಕ್ರೀಂಗಳು ಮಾತ್ರವಲ್ಲ ಬದಲಾಗಿ, ತಿನ್ನುವ ಆಹಾರದಿಂದ.
ಹೌದು, ದೆಹಲಿ ಮೂಲದ ಪ್ರಸಿದ್ಧ ಪೌಷ್ಟಿಕ ತಜ್ಞೆ ಲವ್ನೀತ್ ಬಾತ್ರಾ ಅವರು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ನಾವು ದಿನನಿತ್ಯ ಸೇವಿಸುವ ಆಹಾರ ಮತ್ತು ಅದರಲ್ಲಿರುವ ಪೋಷಕಾಂಶಗಳು ನಮ್ಮ ಚರ್ಮದ ಕಾಂತಿಯನ್ನು ನೇರವಾಗಿ ನಿರ್ಧರಿಸುತ್ತವೆ. ಹೊಳಪು ಕಳೆದುಕೊಳ್ಳಲು ಕಾರಣವೇನು. ಯಾವ ಆಹಾರ ತಿನ್ನಬೇಕು ಎನ್ನುವುದರ ಸಲಹೆಯನ್ನು ಕೊಟ್ಟಿದ್ದಾರೆ.

ಹೆಚ್ಚೆಚ್ಚು ನೀರು ಕುಡಿಯುವುದು ಅವಶ್ಯಕ

ಇಂದಿನ ವೇಗದ ಶೈಲಿಯ ಜೀವನ, ಒತ್ತಡ, ಕಳಪೆ ಗುಣಮಟ್ಟದ ಆಹಾರ, ಪೌಷ್ಟಿಕಾಂಶಗಳು ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ. ಜೊತೆಗೆ ನಿರ್ಜಲೀಕರಣ ಮತ್ತು ತೇವಾಂಶದ ಕೊರತೆಯಿಂದಾಗಿ ದೇಹದ ನೈಸರ್ಗಿಕ ಹೊಳಪನ್ನು ಕಳೆದುಕೊಂಡು ಮಂಕಾಗಿ ಕಾಣಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಯಾವಾಗಲೂ ಸಮಸ್ಯೆ ಎದುರಾದಾಗ ಅದರ ಮೂಲವನ್ನು ಹುಡುಕಿ ಅದನ್ನು ನಿಭಾಯಿಸಲು ಮುಂದಾಗಬೇಕು. ಅದು ಚರ್ಮ, ದೇಹ, ಮತ್ಯಾವುದೋ ಸಮಸ್ಯೆಯಾಗಲಿ. ಚರ್ಮದ ಸಮಸ್ಯೆ ಕಾಣಿಸಿಕೊಂಡಾಗ, ಟ್ಯಾನ್ ಆದಾಗ, ಹೊಳಪು ಕುಂದು ಹೋದಾಗ ಸ್ಕಿನ್‌ಕೇರ್ ಬದಲಿಗೆ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕಾದ 6 ಅತ್ಯಗತ್ಯ ಪೋಷಕಾಂಶಗಳನ್ನು ಅಳವಡಿಸಿಕೊಳ್ಳಬೇಕು.

ವಿಟಮಿನ್​ ಸಿ

ಆ್ಯಂಟಿಆಕ್ಸಿಡೆಂಟ್ ಇರುವ ವಿಟಮಿನ್​ ಸಿ. ಚರ್ಮದಲ್ಲಿರುವ ಕೊಲಾಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ತ್ವಚೆಯನ್ನು ಬಿಗಿಗೊಳಿಸಿ, ಮುಖಕ್ಕೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ. ಬೆಟ್ಟದ ನೆಲ್ಲಿಕಾಯಿ, ಸೀಬೆ ಹಣ್ಣು, ಆರೆಂಜ್​ ಹಾಗೂ ನಿಂಬೆ ಹಣ್ಣು ತಿನ್ನುವುದು ಚರ್ಮಕ್ಕೆ ಒಳ್ಳೆಯದು.

ಕೊಬ್ಬಿನಾಮ್ಲಗಳು ಏಕೆ ಬೇಕು?

ಒಮೆಗಾ-3 ಒಣ ಚರ್ಮವನ್ನು ದೂರವಿಟ್ಟು ತೇವಾಂಶ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಅಗಸೆ ಬೀಜ, ಅಕ್ರೋಟ್​​, ಮೀನು, ಬಾದಾಮಿ,ವಾಲ್​ ನಟ್​ ತಿನ್ನುವುದು ಉತ್ತಮ ಎನ್ನಲಾಗಿದೆ.

ಆರೋಗ್ಯಕರ ಪೋಷಕಾಂಶಗಳು

ಮೊಟ್ಟೆಮ ಪನ್ನೀರ್​, ಬೇಳೆ ಕಾಳುಗಳು, ಗ್ರೀಕ್​ ಯೋಗರ್ಟ್​ ತಿನ್ನುವುದು ಚರ್ಮವನ್ನು ಯೌವನಯುತವಾಗಿ ಇಡಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಕಬ್ಬಿಣಾಂಶ ಮತ್ತು ಜಿಂಕ್​ಗಾಗಿ ಇದನ್ನು ತಿನ್ನಿ

ದೇಹಕ್ಕೆ ಕಬ್ಬಿಣಾಂಶ ಅಗತ್ಯವಿದ್ದರೆ, ಕುಂಬಳಕಾಯಿ ಬೀಜ, ಬೀಟ್​ರೂಟ್, ಎಳ್ಳು , ಪಾಲಾಕ್​ ಸೊಪ್ಪು ಚರ್ಮದ ಜೀವಕೋಶಗಳ ದುರಸ್ತಿ ಮತ್ತು ಉರಿಯೂತ ನಿವಾರಣೆಗೆ ಜಿಂಕ್ ಪ್ರಮುಖ ಪಾತ್ರ ವಹಿಸುತ್ತದೆ. ಮುಖದ ಮೇಲಿನ ಕಲೆಗಳನ್ನು ಹಾಗೂ ಮೊಡವೆಗಳನ್ನು ನಿಯಂತ್ರಿಸಲು ಇದು ದೇಹಕ್ಕೆ ಸಿಗುವುದು ಮುಖ್ಯವಾಗಿದೆ.‘

ಆ್ಯಂಟಿಆಕ್ಸಿಡೆಂಟ್‌ಗಾಗಿ ಇವು ಬೆಸ್ಟ್ ಆಹಾರ

ದೇಹದಲ್ಲಿರುವ ಮುಕ್ತ ರಾಡಿಕಲ್​ ವಿರುದ್ಧ ಹೋರಾಡಲು ಮತ್ತು ಚರ್ಮವು ಬೇಗನೆ ವಯಸ್ಸಾಗದಂತೆ ತಡೆಯಲು ನಾವು ತಿನ್ನುವ ಆಹಾರ ಮುಖ್ಯವಾಗುತ್ತದೆ. ಆಕಾರಣದಿಂದ ತರಹೇವಾರಿ ತರಕಾರಿಗಳು, ದಾಳಿಂಬೆ, ಬ್ಲೂ ಬೆರ್ರಿ, ಡಾರ್ಕ್​ ಕೊಕೊ ಹಾಗೂ ಗ್ರೀನ್​ ಟೀಯನ್ನು ಕುಡಿಯುವುದು ಬೆಸ್ಟ್​ ಎನ್ನುತ್ತಾರೆ ಆಹಾರ ತಜ್ಞರು.

ವಿಟಮಿನ್ ಇ ಹೇಗೆ ಕೆಲಸ ಮಾಡುತ್ತದೆ

ನೇರವಾಗಿ ದೇಹ ಮತ್ತು ಮುಖದ ಮೇಲೆ ಬೀಳುವ ಸೂರ್ಯನ ಯುವಿ ಕಿರಣಗಳು ಚರ್ಮಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ವಿಟಮಿನ್ ಇ ಇದನ್ನು ತಡೆಗಟ್ಟುತ್ತದೆ. ಮುಖದ ಸುಕ್ಕು ನಿವಾರಣೆಗೆ ಬಾದಾಮಿ ಮತ್ತು ಸೂರ್ಯಕಾಂತಿ ಬೀಜಗಳನ್ನು ತಿನ್ನುವುದು ಉತ್ತಮ ಎನ್ನಲಾಗುತ್ತಿದೆ.

ನೀರು ಕುಡಿಯುವುದು ಮರೆಯದಿರಿ

ಪೋಷಕಾಂಶಗಳ ಜೊತೆಗೆ ದೇಹದಲ್ಲಿ ಸಮರ್ಪಕ ನೀರಿನಂಶ ಇರುವುದು ಅತ್ಯಂತ ಕಡ್ಡಾಯ. ದಿನಕ್ಕೆ 2 ರಿಂದ 3 ಲೀಟರ್​ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹೋಗಿ, ತ್ವಚೆಯು ನೈಸರ್ಗಿಕವಾಗಿ ಒಳಗಿನಿಂದಲೇ ಹೊಳೆಯಲು ಆರಂಭಿಸುತ್ತದೆ, (ಏಜೆನ್ಸೀಸ್).
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.