ಲೈಫ್‌ಸ್ಟೈಲ್

ಬ್ರೇಕಪ್​ ಭಯ; ಕಿರಿಕಿರಿಯಿಲ್ಲದ ಡೇಟಿಂಗ್‌ಗಾಗಿ AI ಸಲಹೆ ಕೇಳುತ್ತಿರುವ Gen Z, ಇಂಟರ್ನೆಟ್​ನಲ್ಲೊಂದು ಹೊಸ ಟ್ರೆಂಡ್​​

  • ಬ್ರೇಕಪ್​ ಆಗುವ ಭಯದಲ್ಲಿ ಪ್ರೇಮಿಯನ್ನು ಉಳಿಸಿಕೊಳ್ಳುವ ಸಲುವಾಗಿ ಎಐ ಸಲಹೆ ಪಡೆಯುತ್ತಿರುವ ಸಿಂಗಲ್ಸ್

  • ಸಾಕಷ್ಟು ಜೆನ್​ ಜೀಗೆ ಫಿಲ್ಟರ್ ಇಲ್ಲದ, ನೈಜತೆಯಿಂದ ಕೂಡಿರುವ ಪ್ರೊಫೈಲ್ ಫೋಟೋಗಳೇ ಇಷ್ಟ.

  • ತಂತ್ರಜ್ಞಾನಕ್ಕಿಂತ ತಮ್ಮ 'ಮನಸ್ಸಿನ ಮಾತಿಗೇ' ಹೆಚ್ಚು ಬೆಲೆ ಕೊಡುವ ಭಾರತೀಯರು

ಬೆಂಗಳೂರು: ಜೆನ್​​ ಜೀಗಳ ಡೇಟಿಂಗ್​ ನಿಯಮ ಕೆಲ ಪ್ರೇಮಿಗಳಿಗೆ ನುಂಗಲಾರದ ಬಿಸಿ ತುಪ್ಪ ಇದ್ದಂತೆ. ಒಂದು ತಪ್ಪು ಮೆಸೇಜ್ ಕಳುಹಿಸಿದರೂ ಸಹ ರೆಡ್​ ಪ್ಲ್ಯಾಗ್​ ಎಂದು ಯುವತಿ-ಯುವಕರು ಬ್ರೇಕಪ್ ಮಾಡಿಕೊಂಡು ಬಿಡ್ತಾರೆ. ಹೀಗಾಗಿ ಪ್ರೀತಿಯಲ್ಲಿ ಎಡವಟ್ಟಾಗದಂತೆ ತಡೆಯಲು, ಪ್ರೇಮಿಸಿದವರನ್ನು ಉಳಿಸಿಕೊಳ್ಳಲು ಭಾರತದಲ್ಲಿರುವ ಸಿಂಗಲ್ಸ್, ಕೃತಕ ಬುದ್ಧಿಮತ್ತೆಯ (ಎಐ) ಮೊರೆ ಹೋಗುತ್ತಿದ್ದಾರೆ ಎಂಬ ಅಚ್ಚರಿಯ ವಿಚಾರ ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ.

ಏನಿದೆ ವರದಿಯಲ್ಲಿ

ಭಾರತದ ಜನಪ್ರಿಯ ಡೇಟಿಂಗ್ ಆ್ಯಪ್ 'ಐಲ್' (Aisle) ಬಿಡುಗಡೆ ಮಾಡಿರುವ ಹೊಸ ವರದಿಯಲ್ಲಿ, ಭಾರತೀಯರು ಪ್ರೀತಿ ಮತ್ತು ಡೇಟಿಂಗ್‌ಗಾಗಿ ಎಐ ಬಳಸುತ್ತಿರುವ ಕುತೂಹಲಕಾರಿ ಮಾಹಿತಿಯನ್ನು ಹೊರಹಾಕಿದೆ. ಭಾರತದ ಪ್ರಮುಖ ನಗರಗಳಲ್ಲಿರುವ 18 ರಿಂದ 45 ವರ್ಷದೊಳಗಿನ ಸುಮಾರು 8,240 ಸಿಂಗಲ್ಸ್ (ಅವಿವಾಹಿತರು) ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.

ಸಮೀಕ್ಷೆಯಲ್ಲಿ ಕಂಡು ಬಂತು ಅಚ್ಚರಿಯ ಅಂಶ

ಭಾರತೀಯರು ಎಐ ಅನ್ನು 'ಮ್ಯಾಚ್ ಮೇಕರ್' (ಜೋಡಿ ಹುಡುಕುವ ಯಂತ್ರ) ಆಗಿ ಬಳಸುತ್ತಿಲ್ಲ, ಬದಲಾಗಿ ತಮ್ಮ 'ವಿಂಗ್‌ಮ್ಯಾನ್' (ಸಹಾಯ ಮಾಡುವ ಆಪ್ತ ಸ್ನೇಹಿತ) ಆಗಿ ಬಳಸುತ್ತಿದ್ದಾರೆ. ಶೇ. 46ರಷ್ಟು ಜನ ಡೇಟಿಂಗ್ ಆ್ಯಪ್‌ಗಳಲ್ಲಿ ತಮ್ಮ ಪ್ರೊಫೈಲ್ 'ಬಯೋ' ಬರೆಯಲು ಮತ್ತು ಆಕರ್ಷಕವಾಗಿ ಕಾಣಲು ಎಐ ಬಳಸಿದ್ದಾರೆ.

ಶೇ. 51.2ರಷ್ಟು ಮಂದಿ, ತಾವು ಇಷ್ಟಪಟ್ಟವರಿಗೆ ಮೆಸೇಜ್ ಕಳುಹಿಸುವ ಮುನ್ನ, "ನಾನು ಟೈಪ್ ಮಾಡಿರೋದು ಸರಿಯಾಗಿದೆಯಾ?" ಎಂದು ಎಐನಲ್ಲಿ ಚೆಕ್ ಮಾಡಿ, ನಂತರ ಕಳುಹಿಸುತ್ತಾರೆ.

ಶೇ. 53.1ರಷ್ಟು ಹುಡುಗಿಯರು ತಮ್ಮ ಭಾವನೆಗಳನ್ನು ಮತ್ತು ಪ್ರೀತಿಯ ಗೊಂದಲಗಳನ್ನು ಪರಿಹರಿಸಿಕೊಳ್ಳಲು ತಮ್ಮ ಸ್ನೇಹಿತರಿಗಿಂತ ಹೆಚ್ಚಾಗಿ ಎಐ ಅನ್ನು ನಂಬುತ್ತಾರಂತೆ. "ಸ್ನೇಹಿತರ ಬಳಿ ಹೇಳಿಕೊಂಡರೆ ಜಡ್ಜ್ ಮಾಡ್ತಾರೆ, ಆದ್ರೆ ಎಐ ನಮ್ಮ ಕಥೆ ಕೇಳಿ ಒಳ್ಳೆ ಸಲಹೆ ಕೊಡುತ್ತೆ" ಎಂಬುದು ಅವರ ವಾದ.

ಹುಡುಗರು ಮತ್ತು ಹುಡುಗಿಯರ ಎಐ ಬಳಕೆಯಲ್ಲಿ ಭಾರೀ ವ್ಯತ್ಯಾಸ!

ಶೇ. 48ರಷ್ಟು ಹುಡುಗರು ಆಕರ್ಷಕ ಪ್ರೊಫೈಲ್ ಬರೆಯಲು ಎಐ ಬಳಸಿದರೆ, ಶೇ. 38.6ರಷ್ಟು ಹುಡುಗರು ಹುಡುಗಿಗೆ ಕಳುಹಿಸುವ 'ಮೊದಲ ಮೆಸೇಜ್' ಡ್ರಾಫ್ಟ್ ಮಾಡಲು ಎಐ ಸಹಾಯ ಪಡೆಯುತ್ತಾರೆ.ಆದರೆ ಹುಡುಗಿಯರು ಸಂಪೂರ್ಣ ಭಿನ್ನ. ಶೇ. 60.5ರಷ್ಟು ಹುಡುಗಿಯರ ಪ್ರಕಾರ ʼನಮ್ಮ ಮನಸ್ಸಿನ ಮಾತನ್ನು ಎಐ ಮೂಲಕ ಹೇಳಿದರೆ, ಅದರಲ್ಲಿ ನೈಜತೆ ಇರುವುದಿಲ್ಲʼ. ಶೇ. 51.9ರಷ್ಟು ಹುಡುಗಿಯರು ಎಐ ಬರೆದಂತೆ ಕಾಣುವ ಮೊದಲ ಮೆಸೇಜ್‌ಗಳನ್ನು ರಿಜೆಕ್ಟ್ ಮಾಡುತ್ತಾರಂತೆ.

ಫೋಟೋ ಎಡಿಟ್ ಮಾಡಿದ್ರೆ ಬ್ರೇಕಪ್ ಗ್ಯಾರಂಟಿ!

ಎಐ ಬಳಸಿ ಬರೆದ ಮೆಸೇಜ್‌ಗಳನ್ನು ಸಹಿಸಿಕೊಳ್ಳುವ ಭಾರತೀಯರು, ಫೋಟೋದ ವಿಚಾರಕ್ಕೆ ಬಂದರೆ ಮಾತ್ರ ರಾಜಿ ಆಗುವುದಿಲ್ಲ. ಶೇ. 47.9ರಷ್ಟು ಮಂದಿಗೆ ಯಾವುದೇ ಫಿಲ್ಟರ್ ಇಲ್ಲದ, ನೈಜತೆಯಿಂದ ಕೂಡಿರುವ ಪ್ರೊಫೈಲ್ ಫೋಟೋಗಳೇ ಇಷ್ಟ.

ತಾವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಯ ಭಾವಚಿತ್ರ ಎಐ ಮೂಲಕ ಎಡಿಟ್ ಆಗಿದ್ದು ಅಥವಾ ನಕಲಿ ಎಂದು ಗೊತ್ತಾದರೆ, ಶೇ. 40.2ರಷ್ಟು ಮಂದಿ ತಮಗೆ ಮೋಸವಾಯ್ತು ಎಂದು ಭಾವಿಸಿ ತಕ್ಷಣವೇ 'ಅನ್‌ಮ್ಯಾಚ್' ಮಾಡಿಬಿಡುತ್ತಾರಂತೆ.

ಅಂತಿಮವಾಗಿ ಗೆಲ್ಲುವುದು 'ನೈಜ ಪ್ರೀತಿ' ಮಾತ್ರ!

ಇದೆಲ್ಲದರ ನಡುವೆಯೂ ಡೇಟಿಂಗ್ ವಿಚಾರದಲ್ಲಿ ಭಾರತೀಯರು ತಂತ್ರಜ್ಞಾನಕ್ಕಿಂತ ತಮ್ಮ 'ಮನಸ್ಸಿನ ಮಾತಿಗೇ' ಹೆಚ್ಚು ಬೆಲೆ ಕೊಡುತ್ತಾರೆ ಎಂಬ ಸಂಗತಿ ಸಮೀಕೆಯಲ್ಲಿ ತಿಳಿದು ಬಂದಿದೆ. ಶೇ. 64.2ರಷ್ಟು ಜನ ಈಗಲೂ ಎಐಗಿಂತ ತಮ್ಮ ಸ್ವಂತ ಬುದ್ಧಿ ಮತ್ತು ಒಳಮನಸ್ಸಿನ ಭಾವನೆಗಳನ್ನೇ ಹೆಚ್ಚು ನಂಬುತ್ತಾರೆ.

"ಮೆಸೇಜ್ ಬರೆಯಲು ಎಐ ಸಹಾಯ ಮಾಡಬಹುದು. ಆದರೆ ಎದುರಿಗಿರುವ ವ್ಯಕ್ತಿಯ ಮೇಲಿನ ನಂಬಿಕೆ, ಪ್ರಾಮಾಣಿಕತೆ ಮತ್ತು ನೈಜತೆಯನ್ನು ಯಾವುದೇ ತಂತ್ರಜ್ಞಾನ ಸೃಷ್ಟಿಸಲು ಸಾಧ್ಯವಿಲ್ಲ," ಎನ್ನುತ್ತಾರೆ ಐಲ್ ಆ್ಯಪ್‌ನ ಕೌನ್ಸೆಲಿಂಗ್ ಸೈಕಾಲಜಿಸ್ಟ್ ಅರೌಬಾ ಕಬೀರ್.

ಒಟ್ಟಿನಲ್ಲಿ, ಈಗಿನ ಯುವಜನತೆ ಎಐ ಅನ್ನು ತಮ್ಮ ಪ್ರೀತಿಯ 'ಸಹಾಯಕ'ನಾಗಿ ಬಳಸುತ್ತಿದ್ದಾರೆಯೇ ಹೊರತು, ಅದನ್ನೇ 'ಪ್ರೀತಿ' ಎಂದು ನಂಬಿಲ್ಲ. ತಂತ್ರಜ್ಞಾನ ಎಷ್ಟೇ ಬೆಳೆದರೂ, ಇಬ್ಬರು ವ್ಯಕ್ತಿಗಳ ನಡುವಿನ ನೈಜ ಪ್ರೀತಿ ಮತ್ತು ನಂಬಿಕೆಗೆ ಯಾವುದೇ ಪರ್ಯಾಯವಿಲ್ಲ ಎಂಬುದನ್ನು ಈ ವರದಿ ಸಾಬೀತುಪಡಿಸಿದೆ, (ಏಜೆನ್ಸೀಸ್).