Obeda for Diabetes 
ಲೈಫ್‌ಸ್ಟೈಲ್

ಟೈಪ್ 2 ಮಧುಮೇಹಿಗಳಿಗಾಗಿ ಮಾರುಕಟ್ಟೆಗೆ ಬಂದಿದೆ ಹೊಸ ಮಾತ್ರೆ, ಏನಿದರ ವಿಶೇಷತೆ?

ಭಾರತೀಯರನ್ನು ಹೆಚ್ಚಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆ ಎಂದರೆ ಅದು ಮಧುಮೇಹ. ದೇಶದಲ್ಲಿ 77ಕ್ಕೂ ಹೆಚ್ಚು ಮಿಲಿಯನ್​​ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡ ಔಷಧ ತಯಾರಿಕಾ ಕಂಪನಿ 'ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ʼ ಭಾರತದಲ್ಲಿ ಟೈಪ್ 2 ಮಧುಮೇಹ ಹೊಂದಿರುವ ರೋಗಿಗಳ ಚಿಕಿತ್ಸೆಗಾಗಿ 'ಓಬೆಡಾ' ಎಂಬ ಹೊಸ ಮಾತ್ರೆಯನ್ನು ಬಿಡುಗಡೆ ಮಾಡಿದೆ. ಇದು 'ಓರಲ್ ಸೆಮಾಗ್ಲುಟೈಡ್ ಬಯೋಸಿಮಿಲರ್' ಔಷಧವಾಗಿದ್ದು, ಬಾಯಿಯ ಮೂಲಕ ಸೇವಿಸುವ ಮಾತ್ರೆಯಾಗಿದೆ.
ಇತ್ತೀಚೆಗಷ್ಟೇ ಡಾ. ರೆಡ್ಡೀಸ್ ಕಂಪನಿಯು ಭಾರತ ಮತ್ತು ಕೆನಡಾದಲ್ಲಿ ಮಧುಮೇಹಕ್ಕಾಗಿ 'ಸೆಮಾಗ್ಲುಟೈಡ್ ಇಂಜೆಕ್ಷನ್' ಅನ್ನು ಬಿಡುಗಡೆ ಮಾಡಿತ್ತು. ಇದೀಗ ಅದೇ ಔಷಧಿಯನ್ನು ಮಾತ್ರೆಯ ರೂಪದಲ್ಲಿ ಪರಿಚಯಿಸುವ ಮೂಲಕ ರೋಗಿಗಳಿಗೆ ಚಿಕಿತ್ಸೆಯನ್ನು ಇನ್ನಷ್ಟು ಸುಲಭಗೊಳಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ನಡೆಸಿದ 'ಇಂಡಿಯಾಬ್' ಅಧ್ಯಯನದ ಪ್ರಕಾರ, ವಿಶ್ವದಲ್ಲೇ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಭಾರತದಲ್ಲಿ ಪ್ರಸ್ತುತ 10.1 ಕೋಟಿಗೂ ಹೆಚ್ಚು ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದಕ್ಕಿಂತ ಆತಂಕಕಾರಿ ವಿಚಾರವೆಂದರೆ, ಸುಮಾರು 13.6 ಕೋಟಿ ಜನರು ಮಧುಮೇಹದ ಅಂಚಿನಲ್ಲಿದ್ದಾರೆ ಅಂದರೆ ಪ್ರೀ-ಡಯಾಬಿಟಿಕ್ ಆಗಿದ್ದಾರೆ. ಜೊತೆಗೆ, ಶೇ. 40ರಷ್ಟು ವಯಸ್ಕರು ಹೊಟ್ಟೆಯ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದು, ಇವರಿಗೂ ಮಧುಮೇಹ ಬರುವ ಅಪಾಯ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಮಧುಮೇಹವನ್ನು ನಿಯಂತ್ರಿಸುವುದು ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲಾಗಿದೆ.

ಓಬೆಡಾ ಮಾತ್ರೆಯ ಉಪಯೋಗವೇನು?

ಓರಲ್ ಸೆಮಾಗ್ಲುಟೈಡ್ ಔಷಧಿಯು ಜಿಎಲ್‌ಪಿ-1 ಆರ್‌ಎ (ಗ್ಲುಕಗನ್-ಲೈಕ್ ಪೆಪ್ಟೈಡ್-1 ರಿಸೆಪ್ಟರ್ ಅಗೊನಿಸ್ಟ್) ವರ್ಗಕ್ಕೆ ಸೇರಿದೆ. ಟೈಪ್ 2 ಮಧುಮೇಹ ಹೊಂದಿರುವ ವಯಸ್ಕರು ಸರಿಯಾದ ಆಹಾರ ಮತ್ತು ವ್ಯಾಯಾಮದ ಜೊತೆಗೆ ಈ ಮಾತ್ರೆಯನ್ನು ಸೇವಿಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ಅತ್ಯುತ್ತಮವಾಗಿ ನಿಯಂತ್ರಣಕ್ಕೆ ಬರುತ್ತದೆ. ಇದು ಭವಿಷ್ಯದಲ್ಲಿ ಬರಬಹುದಾದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಕ್ಲಿನಿಕಲ್ ಪ್ರಯೋಗಗಳಲ್ಲಿ ಯಶಸ್ವಿ

ಭಾರತದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಅನುಮತಿಯೊಂದಿಗೆ ಡಾ. ರೆಡ್ಡೀಸ್ ಕಂಪನಿಯು 288 ಮಧುಮೇಹ ರೋಗಿಗಳ ಮೇಲೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿತ್ತು. ಈ ಪ್ರಯೋಗಗಳಲ್ಲಿ 'ಓಬೆಡಾ' ಮಾತ್ರೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವಲ್ಲಿ, ತೂಕ ಇಳಿಸುವಲ್ಲಿ ಮತ್ತು ಒಟ್ಟಾರೆ ಮಧುಮೇಹ ನಿಯಂತ್ರಣದಲ್ಲಿ (ಎಚ್‌ಬಿಎ1ಸಿ ಮಟ್ಟವನ್ನು ಶೇ. 7ಕ್ಕಿಂತ ಕಡಿಮೆ ಮಾಡುವಲ್ಲಿ) ಅತ್ಯುತ್ತಮವಾಗಿ ಕೆಲಸ ಮಾಡಿದೆ. ಅಲ್ಲದೆ, ಇದು ಸೇವಿಸಲು ಸಂಪೂರ್ಣ ಸುರಕ್ಷಿತವಾಗಿದೆ ಎಂಬುದು ದೃಢಪಟ್ಟಿದೆ.

ಮಾತ್ರೆಯ ದರ ಎಷ್ಟು?

ಈ 'ಓಬೆಡಾ' ಮಾತ್ರೆಗಳನ್ನು ದಿನಕ್ಕೊಮ್ಮೆ ತೆಗೆದುಕೊಳ್ಳುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಇದು 3 mg, 7 mg ಮತ್ತು 14 mg ಸಾಮರ್ಥ್ಯಗಳಲ್ಲಿ ಲಭ್ಯವಿದೆ. 3 mg ಮಾತ್ರೆಯ ಬೆಲೆ 99 ರೂ. ಆಗಿದ್ದು, 7 mgಗೆ 135 ರೂ. ಹಾಗೂ 14 mgಗೆ 225 ರೂ. ದರವಿದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.