ಕರೊನಾ ವೈರಸ್ ಸಮಾಜದಲ್ಲಿ ಹತ್ತು ಹಲವು ಬದಲಾವಣೆ ತಂದಿದ್ದು ಈಗ ಜನಜನಿತ. ಹಲವರಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ಇದ್ದರೆ, ಇನ್ನು ಕೆಲವರಿಗೆ ಅನಿವಾರ್ಯವಾಗಿ ಹೊರಗಡೆ ಕೆಲಸಕ್ಕೆ ಹೋಗಬೇಕಿದೆ. ವಿದ್ಯಾರ್ಥಿಗಳ ಪಾಲಿಗಂತೂ ಈ ಸಂದರ್ಭ ಒಂದು ದೃಷ್ಟಿಯಲ್ಲಿ ಮಾನಸಿಕವಾಗಿ ಬಲಿಷ್ಠವಾಗಲು ಪೂರಕ ಎಂತಲೇ ಹೇಳಬಹುದು. ಚಿಕ್ಕ ವಯಸ್ಸಿನಲ್ಲಿಯೇ ಸವಾಲು ಎದುರಿಸುವ ಅನಿವಾರ್ಯತೆ ಬಂದದ್ದು ವಿದ್ಯಾರ್ಥಿಗಳ ಧೀಶಕ್ತಿ, ಇಚ್ಛಾಶಕ್ತಿ ಮತ್ತು ಮನೋಸಾಮರ್ಥ್ಯ ವೃದ್ಧಿಸಲೆಂದೇ ಹೇಳಬಹುದು.
ಲಾಕ್ಡೌನ್ನಿಂದ ಶಾಲೆ, ಕಾಲೇಜುಗಳು ಬಂದ್ ಆಗಿವೆ. ಇನ್ನೇನು ಪರೀಕ್ಷೆ ಬರೆಯಲು ಸನ್ನದ್ಧರಾಗಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಸಹಜವಾಗಿಯೇ ಈ ಅನಿರೀಕ್ಷಿತ ಸ್ಥಿತಿ ಬರಸಿಡಿಲು ಬಡದಂತಾಗಿದೆ. ಆದರೆ ವಾಸ್ತವದಲ್ಲಿ ಇದು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಮನೋಸಿದ್ಧತೆ ಮಾಡಿಕೊಳ್ಳಲು ಒಂದು ಒಳ್ಳೆಯ ಅವಕಾಶ ಮಾಡಿಕೊಟ್ಟಿದೆ. ಪರೀಕ್ಷೆಗಳ ದಿನವೇ ನಿಗದಿಯಾಗಿದ್ದಾಗ ಪರೀಕ್ಷೆ ನಡೆಯುತ್ತವೋ ಇಲ್ಲವೋ ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡದಿರದು. ಇದರಿಂದ ಪಾಲಕರಲ್ಲೂ ಮಗನ ಭವಿಷ್ಯ ಮತ್ತು ಓದಿನ ಬಗ್ಗೆ ಆತಂಕ ಮೂಡುವುದು ಖಚಿತ. ಇದರಿಂದ ಆತಂಕಗೊಂಡ ಅನೇಕ ಪಾಲಕರು ತಮ್ಮ ಮಕ್ಕಳೊಡನೆ ನನ್ನ ಬಳಿ ಬಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅವರೆಲ್ಲರಿಗೂ ನಾನು ಹೇಳಿದ್ದು ಇಷ್ಟೇ. ಹೆಚ್ಚಿನ ಫಲಿತಾಂಶ ಪಡೆಯಲು ಇದೊಂದು ಸದಾವಕಾಶ ಎಂದುಕೊಳ್ಳಿ. ಈ ಬಾರಿ ಹೆಚ್ಚುವರಿಯಾಗಿ ಓದಲು ಇದು ಬಯಸದೆ ಬಂದೊದಗಿದ ಭಾಗ್ಯ ಇದು ಎಂದು ಅಂದುಕೊಳ್ಳಬೇಕು. ಕೆಲವರಿಗೆ ಓದಿದ್ದು ಮರೆತೇಹೋಗುವ ಸಾಧ್ಯತೆ ಇರುತ್ತದೆ. ಇನ್ನು ಹಲವರಲ್ಲಿ ನಾನು ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬಲ್ಲನೇ? ಹೇಗೆ ಎಂಬ ಕೀಳರಿಮೆ ಆತಂಕ ಕಾಡುತ್ತಿರುತ್ತದೆ. ಇವೆಲ್ಲವನ್ನೂ ಮೆಟ್ಟಿ ನಿಲ್ಲಲು ಮಾನಸಿಕವಾಗಿ ಸಶಕ್ತರಾಗಿ. ಪರೀಕ್ಷಾ ಮುನ್ನ ಮನೋಸಿದ್ಧತೆ ಮಾಡಿಕೊಳ್ಳಿ.
ಕತ್ತಲೆ ಕಳೆದ ನಂತರ ಬೆಳಕು ಆವರಿಸುವಂತೆ ಕೋವಿಡ್-19 ಕಾಮೋಡ ತೆರೆಗೆ ಸರಿದೇ ಸರಿಯುತ್ತದೆ. ಪರೀಕ್ಷೆ ಇಂದಿಲ್ಲ ನಾಳೆ ನಡೆದೇ ನಡೆಯುತ್ತದೆ. ಆ ಪರೀಕ್ಷೆಯಲ್ಲಿ ಹೆಚ್ಚು ಸಾಧನೆ ಮಾಡಲು ಈ ಗ್ಯಾಪ್ ಅಥವಾ ಬಿಡುವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ಓದಿನಿಂದ ವಿಷಯವನ್ನು ಮನನ ಮಾಡಿಕೊಳ್ಳಿ. ಅದೇ ರೀತಿ ಪಾಲಕರು ಸಹ ಮಕ್ಕಳ ಓದಿನ ಮೇಲೆ ನಿಗಾ ಇಡಿ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಪರ್ಯಾಯ ಮಾರ್ಗಗಳು ಅನೇಕ ಇವೆ. ಪದವಿ ಮತ್ತು ಉನ್ನತ ಶಿಕ್ಷಣದ ಕೋರ್ಸ್ಗಳಿಗೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಆನ್ಲೈನ್ ಕ್ಲಾಸ್ ಆಯೋಜಿಸುತ್ತಿವೆ. ಈಗಾಗಲೇ ಕೆಲವೆಡೆ ಇದು ಆರಂಭ ಕೂಡ ಆಗಿದೆ. ಹೀಗಾಗಿ ಪರೀಕ್ಷೆ ನನೆಗುದಿಗೆ ಎಂಬ ಆತಂಕ ಬೇಡ. ಇಂತಹ ಸಂಕಷ್ಟದ ಸಂದರ್ಭದಲ್ಲೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಖಾಸಗಿ ಹಾಗೂ ಸರ್ಕಾರಿ ವಿಶ್ವವಿದ್ಯಾಲಯಗಳು ಪರ್ಯಾಯ ಕ್ರಮಕ್ಕೆ ಮುಂದಾಗಿರುವುದು ಶ್ಲಾಘನೀಯ.
ಇದೀಗ ಕರೊನಾದಿಂದ ಪಾಲಕರಿಗೂ ತಮ್ಮ ಮಕ್ಕಳ ಮೇಲೆ ವೈಯಕ್ತಿಕ ಕಾಳಜಿ ವಹಿಸುವ ಅವಕಾಶ ಸೃಷ್ಟಿಯಾಗಿದೆ. ಇದರ ಸದ್ಬಳಕೆಯಾಗಲಿ. ತಾಳ್ಮೆಯ ಫಲ ಸಿಹಿಯಾಗಿರುತ್ತದೆ ಎನ್ನುವ ವಾಸ್ತವವನ್ನು ಮಕ್ಕಳಿಗೆ ತಿಳಿಹೇಳಿ. ಅವರು ಮಾನಸಿಕ ವೇದನೆಗೆ ಒಳಗಾಗದಂತೆ ನೋಡಿಕೊಳ್ಳಿ. ಜಂಕ್ಫುಡ್ನಿಂದ ದೂರ ಉಳಿದು ಮನೆ ಆಹಾರ ಕೊಡಿ. ನಿಯಮಿತ ವ್ಯಾಯಾಮ, ಯೋಗ , ಧ್ಯಾನ ಮಾಡಿಸಿ. ಇಡೀ ದಿನ ಓದಲೇಬೇಕು ಎನ್ನುವ ಕಠಿಣ ಹೇರಿಕೆ ಬೇಡ. ಸ್ವಲ್ಪ ಬಿಡುವಿರಲಿ. ಸಂಕಷ್ಟಗಳು ತಾತ್ಕಾಲಿಕ. ಶ್ರಮದ ಫಲ ಶಾಶ್ವತ.