‘ಅಸ್ತಮಾ’ ಇದು ದೀರ್ಘಕಾಲದ ಉಸಿರಾಟದ ಸಮಸ್ಯೆಯಾಗಿದ್ದು, ಮಕ್ಕಳು ಮತ್ತು ಹಿರಿಯರಲ್ಲಿ ಅತಿ ಹೆಚ್ಚು ಪರಿಣಾಮ ಬೀರುವ ಕಾಯಿಲೆ. ಇದು ಶ್ವಾಸಕೋಶದಲ್ಲಿ ಉರಿಯೂತ ಉಂಟು ಮಾಡುತ್ತದೆ ಹಾಗೂ ಶ್ವಾಸನಾಳ (ಶ್ವಾಶನಾಳದಲ್ಲಿ ಸಣ್ಣ ವಾಯುಮಾರ್ಗಗಳು)ವನ್ನು ಕಿರಿದಾಗಿಸುತ್ತದೆ. ಇದರಿಂದ ಗಾಳಿ ಸಂಚರಿಸಲು ತೊಡಕುಂಟಾಗಿ ಅಸ್ತಮಾಗೆ ಕಾರಣವಾಗುತ್ತದೆ.
ಜಾಗತಿಕವಾಗಿ ಹೆಚ್ಚು ಹರಡುತ್ತಿರುವ ಕಾಯಿಲೆಗಳಲ್ಲಿ ಅಸ್ತಮಾ ಸಹ ಒಂದಾಗಿದ್ದು, ವಿಶ್ವದಾದ್ಯಂತ 260 ದಶಲಕ್ಷಕ್ಕೂ ಅಧಿಕ ಜನರು ಅಸ್ತಮಾದಿಂದ ಬಳಲುತ್ತಿದ್ದು, ಇದರಿಂದ ಪ್ರತಿ ವರ್ಷ 4.50 ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸುತ್ತಿವೆ. ಇದು ಹೆಚ್ಚಿನದಾಗಿ ತಡೆಗಟ್ಟಬಹುದಾದ ಆರೋಗ್ಯ ಸಮಸ್ಯೆಯಾಗಿದೆ. ಹಾಗಾಗಿ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಇದರ ಅಪಾಯಗಳನ್ನು ನಿಯಂತ್ರಿಸಲು ಇನ್ಹೇಲರ್ಗಳನ್ನು ಬಳಸುವಂತೆ ಗ್ಲೋಬಲ್ ಇನಿಶಿಯೇಟಿವ್ ಫಾರ್ ಅಸ್ತಮಾ (ಜಿಐಎನ್ಎ)ಸಂಸ್ಥೆಯು ಹೇಳಿದೆ.
ಇನ್ಹೇಲರ್ ಜತೆಗೆ ತ್ವರಿತಕಾರ್ಯನಿರ್ವಹಿಸುವ ನಿವಾರಕ ಎರಡನ್ನೂ ಹೊಂದಿರುವ 2g 1 ಇನ್ಹೇಲರ್ ಸಂಯೋಜನೆಯಾಗಿರಬೇಕು. ಇದರಿಂದ ಆಸ್ತಮಾ ದಾಳಿ ತಡೆಯಲಿದ್ದು, ಆಸ್ಪತ್ರೆ ದಾಖಲಾತಿಯನ್ನು ತಗ್ಗಿಸಲಿದೆ. ಹಾಗಾಗಿ ಈ ವರ್ಷ ಇನ್ಹೇಲರ್ನ ಬಳಕೆ ಕುರಿತು ಅರಿವು ಮೂಡಿಸಲು ‘ಅಸ್ತಮಾ ಇರುವ ಪ್ರತಿಯೊಬ್ಬರಿಗೂ ಉರಿಯೂತದ ಇನ್ಹೇಲರ್ಗಳ ಪ್ರವೇಶ - ಇನ್ನೂ ತುರ್ತು ಅಗತ್ಯ’ ಎಂದು ಥೀಮ್ೊಂದಿಗೆ ವಿಶ್ವ ಅಸ್ತಮಾ ದಿನ ಆಚರಿಸಲಾಗುತ್ತಿದೆ.
ಅಸ್ತಮಾ ಆಘಾತ ಯಾವುದೇ ಮುನ್ನಚ್ಚೆರಿಕೆ ಇಲ್ಲದೆಯೇ ಎರಗುತ್ತದೆ. ಹಾಗಾಗಿ, ಈ ರೋಗದಿಂದ ಬಳಲುತ್ತಿರುವವರು ವೈದ್ಯರ ಸಲಹೆಯಂತೆ ಸದಾ ಜತೆಯಲ್ಲಿಯೇ ಇನ್ಹೇಲರ್ ಅನ್ನು ಇಟ್ಟುಕೊಂಡಿರುವುದು ಒಳ್ಳೆಯದು. ಅದು ಸದಾ ಭರ್ತಿಯಾಗಿರುವಂತೆ ಎಚ್ಚರವಹಿಸಬೇಕು. ಅಂದರೆ ಒಂದು ಕಾಲಿಯಾಗುವ ಮುನ್ನವೇ ಹೆಚ್ಚುವರಿಯಾಗಿ ಒಂದನ್ನು ಹೊಂದಿರಬೇಕು. ಹಾಗೆಂದು ಇದನ್ನು ಮನಬಂದಂತೆ ಬಳಕೆ ಮಾಡುವುದರಿಂದ ಅಡ್ಡಪರಿಣಾಮಗಳು ಉಂಟಾಗುತ್ತವೆ. ಆದ್ದರಿಂದ ವೈದ್ಯರ ಸಲಹೆ ಆಧರಿಸಿ ಉಪಯೋಗಿಸಬೇಕು. ಅಸ್ತಮಾ ರೋಗಿಗಳು ಆಯಾ ಹವಾಮಾನಕ್ಕೆ ಅನುಗುಣವಾಗಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅಂದರೆ ಮಳೆಗಾಲದಲ್ಲಿ ನೆನೆಯದಂತೆ ಎಚ್ಚರವಹಿಸಬೇಕು.
ಮೂಗು ಸೋರುವಿಕೆ, ಹೆಚ್ಚಾದ ಸೀನು, ಮೂಗಿನ ಹೊಳ್ಳೆಗಳು ಊದಿಕೊಳ್ಳುವುದು, ಎದೆ ಕಟ್ಟಿಕೊಳ್ಳುವಿಕೆ, ನೀರು ತುಂಬಿದ ಕಣ್ಣುಗಳು ಮತ್ತು ಗಂಟಲು ಕೆರೆತ ಹೆಚ್ಚಾಗುತ್ತದೆ. ವ್ಯಾಯಮ ಮಾಡುವಾಗ ಕೆಮ್ಮು ಬರುವುದು, ಮುಂಜಾನೆ ಮತ್ತು ಸಂಜೆ ನಿಯಮಿತವಾಗಿ ಕೆಮ್ಮು, ನಿದ್ರಾಹೀನತೆ, ಉಸಿರಾಟದ ತೊಂದರೆ, ಶ್ವಾಶಕೋಶದ ಶ್ವಾಶನಾಳದಲ್ಲಿ ಬಿಗಿತ ಇತ್ಯಾದಿ ಅಸ್ತಮಾದ ಲಕ್ಷಣಗಳಾಗಿವೆ. ಇಂತಹವರು ದೇಹಕ್ಕೆ ಹೆಚ್ಚು ಆಯಾಸ ಆಗದಂತೆ ನೋಡಿಕೊಳ್ಳಬೇಕು.
ಅಸ್ತಮಾ ಸಾಂಕ್ರಾಮಿಕವಲ್ಲದಿದ್ದರೂ, ಉಸಿರಾಟದ ಸೋಂಕುಗಳು (ನೆಗಡಿ ಮತ್ತು ಜ್ವರ ಮುಂತಾದವು) ಅಸ್ತಮಾ ದಾಳಿಗೆ ಕಾರಣವಾಗಬಹುದು. ವಂಶವಾಹಿ, ಜೀವನ ಶೈಲಿ, ಆಹಾರ ಪದ್ಧತಿ, ನವಜಾತ ಶಿಶುವಿಗೆ ತಾಯಿಯ ಆಹಾರ ಕ್ರಮ ಕಾರಣ. ಇದಲ್ಲದೆ ವಾಯುಮಾಲಿನ್ಯ (ಸಾರ್ವಜನಿಕವಾಗಿ ಧೂಮಪಾನ, ವಾಹನಗಳಿಂದ ಹೊರಹೊಮ್ಮುವ ಹೊಗೆ, ಗ್ರಾಮೀಣ ಪ್ರದೇಶಗಳಲ್ಲಿ ಒಲೆ ಉರಿಸಲು ಬಳಸುವ ವಸ್ತುಗಳು, ರಾಸಾಯನಿಕ ಅಂಶಗಳಿರುವ ಸಣ್ಣ ಸಣ್ಣ ಧೂಳಿನ ಕಣಗಳು ನೇರವಾಗಿ ಮನುಷ್ಯನ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಉಸಿರಾಡುವ ಸ್ಥಳದಲ್ಲಿ ಉರಿಯೂತಕ್ಕೆ ಕಾರಣವಾಗುತ್ತವೆ. ತಣ್ಣನೆ ವಾತಾವರಣದಲ್ಲಿ ಈ ಸಮಸ್ಯೆ ಹೆಚ್ಚಾಗುತ್ತದೆ.
1993ರಲ್ಲಿ ಸ್ಥಾಪನೆಯಾದ ಗ್ಲೋಬಲ್ ಇನಿಶಿಯೇಟಿವ್ ಫಾರ್ ಅಸ್ತಮಾ (ಜಿಐಎನ್ಎ) ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಸಹಯೋಗದಲ್ಲಿ ಪ್ರತಿ ವರ್ಷ ಮೇ ತಿಂಗಳ ಮೊದಲ ಮಂಗಳವಾರ ವಿಶ್ವ ಅಸ್ತಮಾ ದಿನ ಆಚರಿಸಲಾಗುತ್ತದೆ. ಮೊದಲಿಗೆ ಇದನ್ನು 1998 ರಲ್ಲಿ 35ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತಿತ್ತು. ಈಗ ಬಹಳಷ್ಟು ದೇಶಗಳಲ್ಲಿ ಈ ಬಗ್ಗೆ ಅರಿವು ಮೂಡಿದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಯಾಗಿರುವ ಅಸ್ತಮಾ ಕಾರಣ, ರೋಗಲಕ್ಷಣ, ತಪಾಸಣೆ, ಚಿಕಿತ್ಸೆ ಮತ್ತು ಆರೈಕೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.