ಲೈಫ್‌ಸ್ಟೈಲ್

ಕೆಮ್ಮು, ನೆಗಡಿ ಜೋರಾಗಿದೆಯೇ?- ಕಫ ಕರಗಿಸೋಕೆ ಇಷ್ಟು ಮಾಡಿ ಸಾಕು..

lakshmihegde

ಸಾಮಾನ್ಯವಾಗಿ ಸಾಂಬಾರ ಸೊಪ್ಪು ಎಂದೇ ಕರೆಯಲ್ಪಡುವ ದೊಡ್ಡಪತ್ರೆ ದಕ್ಷಿಣ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿದೆ. ಇದರ ಸಸ್ಯಶಾಸ್ತ್ರೀಯ ಹೆಸರು Plectranthus amboinicus.  ಗಿಡವು ಮೃದುವಾಗಿದ್ದು, ಎಲೆಗಳು ದಪ್ಪವಾಗಿರುತ್ತವೆ. ದಟ್ಟ ಹಸಿರು ಬಣ್ಣದ ಎಲೆಗಳು ಗಾಢ ಪರಿಮಳವನ್ನು ಹೊಂದಿದ್ದು, ನೀಲಿಬಣ್ಣದ ಹೂವುಗಳು ಚಿಕ್ಕದಾಗಿರುತ್ತವೆ. ಸುಲಭವಾಗಿ ಮನೆಯಂಗಳದಲ್ಲಿ ಬೆಳೆಯಬಹುದಾದ ದೊಡ್ಡಪತ್ರೆಯ ಬಳಕೆಯಿಂದ ಅನೇಕ ರೋಗಗಳನ್ನು ನಿವಾರಿಸಬಹುದು. ಇದನ್ನು ಹೆಚ್ಚಾಗಿ ತಂಬುಳಿ, ಗೊಜ್ಜು, ಚಟ್ನಿ, ಮುಂತಾದ ಆಹಾರಪದಾರ್ಥಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ದೊಡ್ಡಪತ್ರೆಗೆ ಕಫ ಕರಗಿಸುವ ಗುಣವಿದೆ. ಇದರ ಎಲೆಯನ್ನು ಬಿಸಿ ಮಾಡಿ, ರಸ ತೆಗೆದು, ಜೇನುತುಪ್ಪದೊಡನೆ ಸೇವಿಸಿದರೆ ಜ್ವರ, ಶೀತ, ಕೆಮ್ಮು, ಗಂಟಲುನೋವು ಕಡಿಮೆಯಾಗುತ್ತವೆ. ದೊಡ್ಡಪತ್ರೆಯನ್ನು ಸ್ವಲ್ಪ ಬಾಡಿಸಿ, ನೆತ್ತಿಯ ಮೇಲಿಟ್ಟು ಬಟ್ಟೆ ಕಟ್ಟಿ ಮಲಗಿಸಿದರೆ ಮಕ್ಕಳ ಜ್ವರ ಕಡಿಮೆಯಾಗುತ್ತದೆ. ನೆಗಡಿಯಾದಾಗ ಮೂಗು ಕಟ್ಟಿಕೊಳ್ಳುವುದು ಸಾಮಾನ್ಯ. ಇಂಥ ಸಂದರ್ಭದಲ್ಲಿ ದೊಡ್ಡಪತ್ರೆಯನ್ನು ಮುರಿದಾಗ ಬರುವ ಗಾಢ ಪರಿಮಳವನ್ನು ಆಘ್ರಾಣಿಸುವುದರಿಂದ ಕಟ್ಟಿಕೊಂಡ ಮೂಗು ಬೇಗ ಸರಿಯಾಗುತ್ತದೆ. ಬೆಂಕಿಯಲ್ಲಿ ದೊಡ್ಡಪತ್ರೆಯನ್ನು ಬಾಡಿಸಿ, ರಸ ತೆಗೆದು, ಜೇನುತುಪ್ಪದೊಂದಿಗೆ ಸೇರಿಸಿ ಕುಡಿಸುವುದರಿಂದ ಚಿಕ್ಕಮಕ್ಕಳಲ್ಲಿನ ಕಫವು ವಾಂತಿ ಅಥವಾ ಭೇದಿಯ ಮುಖಾಂತರ ಹೊರಹೋಗುತ್ತದೆ.

ದೊಡ್ಡಪತ್ರೆಯ ಜತೆಗೆ ಉಪ್ಪನ್ನು ಸೇರಿಸಿ ಜಗಿದು ತಿನ್ನುವುದರಿಂದ ಅಜೀರ್ಣ ಸಮಸ್ಯೆಯನ್ನು ತೊಲಗಿಸಬಹುದು. ದೊಡ್ಡಪತ್ರೆಯ ರಸಕ್ಕೆ ಸಮಪ್ರಮಾಣದಲ್ಲಿ ಎಳ್ಳೆಣ್ಣೆ ಸೇರಿಸಿ, ಪ್ರತಿನಿತ್ಯ ರಾತ್ರಿ ಮಲಗುವಾಗ ತಲೆಗೆ ಹಾಕುವುದರಿಂದ ತಲೆ ತಂಪಾಗಿ, ಕಣ್ಣುರಿ ಶಮನವಾಗುತ್ತದೆ. ದೊಡ್ಡಪತ್ರೆಯ ರಸವನ್ನು ಚರ್ಮದ ಮೇಲೆ ಲೇಪಿಸಿಕೊಳ್ಳುವುದರಿಂದ ಚರ್ಮದ ಮೇಲಿನ ಗಂದೆ ಮತ್ತು ತುರಿಕೆಗಳು ಗುಣವಾಗುತ್ತವೆ. ದೊಡ್ಡಪತ್ರೆಯ ರಸಕ್ಕೆ ಹಸಿ ಶುಂಠಿ ರಸವನ್ನು ಸೇರಿಸಿ ಸೇವಿಸುವುದರಿಂದ ಹಸಿವನ್ನು ಹೆಚ್ಚಿಸಬಹುದು.

ದೊಡ್ಡಪತ್ರೆಯನ್ನು ಚಿಕ್ಕ ತುಂಡುಗಳಾಗಿ ಮಾಡಿ ಬಿಸಿಗಿರಿಸಿದ ಎಳ್ಳೆಣ್ಣೆಯಲ್ಲಿ ಹಾಕಿ ಮಂದ ಉರಿಯಲ್ಲಿ ಕಾಯಿಸಿ ಸೋಸಿ ಇಟ್ಟುಕೊಳ್ಳಬೇಕು. ನೋವಿರುವ ಭಾಗಕ್ಕೆ ಇದನ್ನು ಲೇಪಿಸಿ ಮಸಾಜ್ ಮಾಡಿಕೊಳ್ಳುವುದರಿಂದ ನೋವು ನಿವಾರಣೆಯಾಗುತ್ತದೆ. ಗಂಟುನೋವನ್ನು ಕಡಿಮೆ ಮಾಡಲು ನೆರವಾಗುವ ಗಾಮಾ ಲೆನೊಲೆನಿಕ್ ಆಮ್ಲ ದೊಡ್ಡಪತ್ರೆಯಲ್ಲಿದೆ. ದೊಡ್ಡಪತ್ರೆಯನ್ನು ಆಹಾರದಲ್ಲಿ ನಿಯತವಾಗಿ ಬಳಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.