Village Home Doors: ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬರು ತಮ್ಮ ಕನಸಿನ ಮನೆಯನ್ನು ಬಹಳ ದೊಡ್ಡದಾಗಿ, ಇನ್ನೊಬ್ಬರಿಗಿಂತ ಚೆನ್ನಾಗಿ ಕಟ್ಟಬೇಕು, ದುಬಾರಿ ವೆಚ್ಚದಲ್ಲಿ ನಿರ್ಮಿಸಬೇಕು ಎಂಬ ಆಸೆಯಿಂದಲೇ ಬೃಹತ್ ಆಕಾರದ ಕಿಟಿಕಿಗಳು, ಬಾಗಿಲುಗಳನ್ನು ಹಾಕಿಸುತ್ತಾರೆ. ಇದು ಸಿಟಿ ಮಂದಿಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿ ಜನರು ಕೂಡ ಈಗ ಇದೇ ಮಾರ್ಗವನ್ನು ಫಾಲೋ ಮಾಡುತ್ತಿದ್ದಾರೆ. ಹೀಗಾಗಿಯೇ, ಹಿಂದಿನ ಪದ್ಧತಿ, ಸಂಪ್ರದಾಯಗಳು ಅರಿವಿಗೆ ಬಾರದಂತೆ ಕಣ್ಮರೆಯಾಗುತ್ತಿವೆ.
ಸಾಮಾನ್ಯವಾಗಿ ಮನೆಗಳಿಗೆ ದೊಡ್ಡ, ಎತ್ತರದ ಬಾಗಿಲುಗಳನ್ನು ಹಾಕಿಸಿದರೆ ಸುಲಭವಾಗಿ ಓಡಾಡಬಹುದು, ಒಂದಷ್ಟು ವಸ್ತುಗಳನ್ನು ಒಳಗೆ ಯಾವುದೇ ಕಿರಿಕಿರಿ ಇಲ್ಲದೇ ತರಬಹುದು ಎಂಬುದು ಮನೆ ಕಟ್ಟಿಸುವವರ ಲೆಕ್ಕಾಚಾರ. ನಿಮಗೆ ನೆನಪಿದ್ದರೆ, ಕಳೆದ 15ರಿಂದ 20 ವರ್ಷಗಳ ಹಿಂದೆಲ್ಲ, ನಮ್ಮ ಪೂರ್ವಜರ ಹಳ್ಳಿ ಮನೆಗಳ ಬಾಗಿಲುಗಳು ಬಹಳ ಕಿರಿದಾಗಿ ಹಾಗೂ ತಗ್ಗಾಗಿಯೇ ಇರುತ್ತಿದ್ದವು. ಈ ಮನೆಯೊಳಗೆ ಹೋಗುವಾಗಲೇ ನಮ್ಮ ತಲೆಗಳು ಅದೆಷ್ಟು ಬಾರಿ ಪೆಟ್ಟು ತಿಂದಿವೆಯೋ ನಮಗೆ ಗೊತ್ತಿಲ್ಲ.
ಇಂತಹ ಬಾಗಿಲುಗಳನ್ನು ಆದಷ್ಟು ಎಚ್ಚರಿಕೆಯಿಂದ ಬಗ್ಗಿಕೊಂಡು ಒಳಗೆ ಹೋಗಬೇಕಿತ್ತು. ಅನೇಕರು, ಆಗೆಲ್ಲ ಗ್ರಾಮೀಣ ಭಾಗದವರಿಗೆ ಅಷ್ಟೊಂದು ಟೆಕ್ನಿಕ್ ಗೊತ್ತಿರಲಿಲ್ಲ, ಈಗಿನಂತೆ ಸೋಷಿಯಲ್ ಮೀಡಿಯಾ ಅಥವಾ ಜನಸಂಪರ್ಕದ ಅನುಕೂಲ ಇರಲಿಲ್ಲ. ಮತ್ತು ಸ್ಥಳಾವಕಾಶದ ಕೊರತೆಯಿಂದಾಗಿ ಅವುಗಳನ್ನು ಹೀಗೆ ಚಿಕ್ಕದಾಗಿ ನಿರ್ಮಾಣ ಮಾಡಿದ್ದಾರೆ ಎಂದು ಭಾವಿಸುತ್ತಾರೆ. ಅಷ್ಟಕ್ಕೂ, ಇದರ ಹಿಂದಿರುವ ಅಸಲಿ ಸಂಗತಿ ಬೇರೆಯೇ ಇದೆ.
ಅಂದಿನ ಕಾಲಘಟ್ಟದಲ್ಲಿ ವಿದ್ಯುತ್ ಅಥವಾ ಹೀಟರ್‌ಗಳು ಇರಲಿಲ್ಲ. ಅದಕ್ಕಾಗಿಯೇ ಜನರು ನೈಸರ್ಗಿಕ ವಿಧಾನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ಸಣ್ಣ ಬಾಗಿಲುಗಳು ಬೇಸಿಗೆಯಲ್ಲಿ ಹೊರಗಿನಿಂದ ಬರುತ್ತಿದ್ದ ಬಿಸಿ ಗಾಳಿಯನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಮನೆಯೊಳಗೆ ಹೋಗಲು ಬಿಡುತ್ತಿತ್ತು. ಅದೇ ಚಳಿಗಾಲದಲ್ಲಿ, ಮನೆಯ ಒಳಗಿನ ಶಾಖವು ಅಷ್ಟು ಬೇಗ ಹೊರಹೋಗುತ್ತಿರಲಿಲ್ಲ. ಇದು ಮನೆಯೊಳಗಿನ ತಾಪಮಾನವನ್ನು ಸ್ವಲ್ಪಮಟ್ಟಿಗೆ ಸುಧಾರಿಸುತ್ತಿತ್ತು. ಯಾವುದೇ ಆಧುನಿಕ ಉಪಕರಣಗಳಿಲ್ಲದೆ ಮನೆಯಲ್ಲಿ ಆರಾಮದಾಯಕ ವಾತಾವರಣವನ್ನು ಸೃಷ್ಟಿಸಿತ್ತಿತ್ತು ಎಂಬುದೇ ರೋಚಕ.
ಮನೆಗೆ ಭದ್ರತೆ
ಈ ಹಿಂದೆ, ಕಳ್ಳತನಗಳು ಮತ್ತು ಖದೀಮರ ಕೈಚಳಕ ಜೋರಾಗಿಯೇ ಇತ್ತು. ಸಣ್ಣ ಬಾಗಿಲಿನಿಂದಾಗಿ, ಯಾರೂ ಅಷ್ಟು ಬೇಗನೆ ಮನೆಯೊಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಒಳಗೆ ಪ್ರವೇಶಿಸಲು ತಲೆ ಬಗ್ಗಿಸಲೇಸಬೇಕಿತ್ತು. ಇದು ಮನೆಯಲ್ಲಿರುವ ಜನರಿಗೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಘಟನೆಗೆ ತಕ್ಕಂತೆ ಪ್ರತಿಕ್ರಿಯಿಸಲು ಸಹಾಯ ಮಾಡುತ್ತಿತ್ತು. ಈ ಬಾಗಿಲುಗಳು ಕುಟುಂಬದ ಸದಸ್ಯರ ಸುರಕ್ಷತೆಗಾಗಿ ಒಂದು ರೀತಿ ಸುರಕ್ಷತೆ ನೀಡುತ್ತಿತ್ತು ಎಂದರೆ ಖಂಡಿತ ತಪ್ಪಾಗಲಾರದು.
ಮನೆಯ ಗೋಡೆಗಳಿಗೆ ಬಲ
ಆ ದಿನಗಳಲ್ಲಿ, ಹೆಚ್ಚಿನ ಮನೆಗಳನ್ನು ಮಣ್ಣು, ಕಲ್ಲುಗಳ ಮಿಶ್ರಣದಿಂದಲೇ ಕಟ್ಟಲಾಗುತ್ತಿತ್ತು. ಬಾಗಿಲುಗಳನ್ನು ಭಾರವಾದ ಮರದಿಂದ ತಯಾರಿಸಲಾಗುತ್ತಿತ್ತು. ದೊಡ್ಡ ಬಾಗಿಲುಗಳಿದ್ದರೆ, ಅವುಗಳ ತೂಕವು ಗೋಡೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತೆ ಎಂಬುದು ಅಂದಿನ ಟೆಕ್ನಾಲಜಿ. ಕಾಲಾನಂತರದಲ್ಲಿ, ಅದೇ ಗೋಡೆಗಳು ದುರ್ಬಲಗೊಳ್ಳುತ್ತಿದ್ದವು ಅದು ಸಾಮಾನ್ಯ. ಆದರೆ, ಸಣ್ಣ ಬಾಗಿಲುಗಳನ್ನು ನಿರ್ಮಿಸುವ ಮೂಲಕ, ತೂಕವನ್ನು ಸಮವಾಗಿ ಇಡುತ್ತಿದ್ದರಿಂದ ಹಲವು ವರ್ಷಗಳ ಕಾಲ ಮನೆಯನ್ನು ಬಲವಾಗಿರಿಸುತ್ತಿತ್ತು.
ಕುಟುಂಬದ ಗೌಪ್ಯತೆ
ಆಗೆಲ್ಲ ಕಿಟಿಕಿಗಳು ಇಂದಿನಂತೆ ಇರಲಿಲ್ಲ. ಸಣ್ಣ ಬಾಗಿಲುಗಳು ಹೊರಗೆ ನಿಂತಿರುವ ಜನರಿಗೆ ಮನೆಯೊಳಗೆ ಸುಲಭವಾಗಿ ನೋಡಲು ಸಾಧ್ಯವಾಗುತ್ತಿರಲಿಲ್ಲ. ಇದು ಕುಟುಂಬ ಸದಸ್ಯರ ಖಾಸಗಿ ಜೀವನವು ಬಹಿರಂಗಗೊಳ್ಳುವ ಸಾಧ್ಯತೆಗಳು ತೀರ ಕಡಿಮೆಯಿತ್ತು,(ಏಜೆನ್ಸೀಸ್).