ಕೊಲುಕ್ಕುಮಲೈ ಶಿಖರ  
ಲೈಫ್‌ಸ್ಟೈಲ್

ಎಲ್ಲಿದೆ ಭೂಮಿ ಮೇಲಿನ ಈ ಸ್ವರ್ಗ? ಮೋಡಗಳ ಹಾಸಿಗೆಯಲ್ಲಿ ಸೂರ್ಯೋದಯ ನೋಡಲು 2 ಕಣ್ಣುಗಳು ಸಾಲದು

ಪ್ರಮುಖ ಮುಖ್ಯಾಂಶಗಳು

  • ಜೂನ್​ ಕೊನೆ ವಾರದಿಂದ ಮಳೆಗಾಲ ಆರಂಭ
  • ಈಗಲಿಂದಲೇ ಎಲ್ಲಿಗೆ ಟ್ರಿಪ್​ ಹಾಕೋಣ ಎಂಬ ಪ್ಲ್ಯಾನ್​ ಹಲವರದ್ದು
  • ವಿಶ್ವದ ಅತಿ ಎತ್ತರದ ಟೀ ಎಸ್ಟೇಟ್​ ಬಗ್ಗೆ ತಿಳಿದರೆ ಈಗಲೇ ಸ್ನೇಹಿತರು/ ಫ್ಯಾಮಿಲಿ ಜೊತೆ ಹೊರಡ್ತೀರಿ
  • ಮೋಡಗಳ ಹಾಸಿಗೆಯ ಮೇಲೆ ಸೂರ್ಯೋದಯ ನೋಡುವುದೇ ಒಂದು ಅದ್ಭುತ
Kolukkumalai: ಒಂದೆರೆಡು ನಿಮಿಷ ಯಾವುದೇ ಸಣ್ಣ ಶಬ್ದವಿಲ್ಲದೆ, ಮೌನವಾಗಿ ಕುಳಿತು ಹಚ್ಚ ಹಸಿರಿನಿಂದ ಹೊದ್ದು ಮಲಗಿರುವ ಪ್ರಕೃತಿಯನ್ನು ಕಣ್ತುಂಬಿಕೊಳ್ಳುವುದು ಮನಸ್ಸಿಗೆ ಎಷ್ಟು ಉಲ್ಲಾಸ, ಉತ್ಸಾಹ ನೀಡುತ್ತದೆ ಎಂದರೆ, ಅದನ್ನು ಪದಗಳಲ್ಲಿ ಹೇಳಿದರೆ ಪ್ರಯೋಜವಿಲ್ಲ. ಆ ಜಾಗದಲ್ಲಿದ್ದು ಅನುಭವಿಸುವುದೇ ಲೇಸು. ಶುದ್ಧ ಗಾಳಿ, ತಿಳಿ ನೀರು, ಅಂಗಳದಂತ ಬಾನು ನೋಡಿದಾಗ, ಈ ಕಣ್ಣುಗಳು ಎಷ್ಟು ಪುಣ್ಯ ಮಾಡಿದವೋ ಎಂದು ಅನಿಸುವುದರಲ್ಲಿ ಕಿಂಚಿತ್ತು ಅನುಮಾನ ಬೇಡ.
ಪ್ರಕೃತಿಯ ಮಡಿಲಲ್ಲಿ ಕುಳಿತು ಅಥವಾ ಶಿಖರದ ತುತ್ತ ತುದಿಗೆ ತಲುಪಿ, ಅಲ್ಲಿಂದ ಕಾಣುವ ಮತ್ತೊಂದು ಪ್ರಪಂಚ ಅಥವಾ ಭೂಮಿ ಮೇಲಿರುವ ಸ್ವರ್ಗವನ್ನು ನೋಡಲು ಅನೇಕರು ಮೊದಲು ಆಯ್ಕೆ ಮಾಡಿಕೊಳ್ಳುವುದೇ ಹೆಸರಾಂತ ಗಿರಿಧಾಮಗಳು. ಇಂದಿನ ಕಾಲಘಟಕ್ಕೆ ತಕ್ಕಂತೆ ಹೇಳುವುದಾದರೆ ಟ್ರೆಕ್ಕಿಂಗ್​ ಸ್ಪಾಟ್​ಗಳು. ಕರ್ನಾಟಕದಲ್ಲಿ ಹಲವಾರು ಗಿರಿಶಿಖರಗಳಿವೆ. ಇವುಗಳಲ್ಲಿ ಒಂದಕ್ಕಿಂತ ಒಂದು ಬೆಟ್ಟ ಅದ್ಭುತವಾಗಿವೆ. ಆದರೆ, ನಾವಿಲ್ಲಿ ತಿಳಿಸಲು ಹೊರಟಿರುವ ಈ ತಾಣ ಮಾತ್ರ ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.
ಭೂಮಿ ಮೇಲಿರುವ ಈ ಸ್ವರ್ಗ, ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿದೆ. ಕೇರಳದ ಗಡಿಯಲ್ಲಿರುವ ವಿಶ್ವದ ಅತಿ ಎತ್ತರದ ಟೀ ಎಸ್ಟೇಟ್ 'ಕೊಲುಕ್ಕುಮಲೈ', ಸಮುದ್ರ ಮಟ್ಟದಿಂದ ಸುಮಾರು 7,130 ಅಡಿ ಎತ್ತರದಲ್ಲಿರುವ ಸುಂದರ ಹಾಗೂ ಅದ್ಭುತ ಪ್ರವಾಸಿ ತಾಣ. ಇಲ್ಲಿನ ಬೆಟ್ಟದ ಮೇಲೆ ಹೋಗಿ, ನಿಟ್ಟುಸಿರು ಬಿಡುತ್ತಿದ್ದಂತೆ ನಿಮಗೆ ಕಾಣುವುದು ಮೋಡಗಳ ಹಾಸಿಗೆ. ಇಲ್ಲಿಂದ ಬೆಳಗ್ಗಿನ ಸೂರ್ಯೋದಯ ನೋಡಿದರಂತು ನಿಂತಲ್ಲೇ ವಾವ್​ ಎನ್ನುತ ಮನಸೋಲುವುದು ಖಚಿತ.
ವಿಶ್ವದ ಅತಿ ಎತ್ತರದ ಟೀ ಎಸ್ಟೇಟ್​ ಕೊಲುಕ್ಕುಮಲೈನ ದೊಡ್ಡ ಮನ್ನಣೆಗೆ ಪಾತ್ರವಾಗಿದೆ. ತಂಪಾದ ವಾತಾವರಣದಿಂದ ಕೂಡಿರುವ ಈ ಬೆಟ್ಟದಲ್ಲಿ ಚಹಾ ಎಲೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇವು ವಿಶಿಷ್ಟ ರುಚಿ ಮತ್ತು ಸುವಾಸನೆಯಿಂದ ಕೂಡಿದೆ. ಇಲ್ಲಿಗೆ ಇದು ಸಿಕ್ಕಾಪಟ್ಟೆ ಜನಪ್ರಿಯತೆ. ಇದೇ ಸ್ಥಳದಲ್ಲಿ ಟೀ ಫ್ಯಾಕ್ಟರಿ ಕೂಡ ಇದ್ದು, ಕಾರ್ಖಾನೆಯು ಚಹಾ ಪುಡಿಯನ್ನು ತಯಾರಿಸಲು ಸಾಂಪ್ರದಾಯಿಕ ವಿಧಾನವನ್ನೇ ಇಂದಿಗೂ ಅನುಸರಿಸುತ್ತಿದೆ. ಈ ಸ್ಥಳಕ್ಕೆ ಹೋಗುವ ಪ್ರವಾಸಿಗರು, ಈ ಕಾರ್ಖಾನೆಗೂ ಭೇಟಿ ನೀಡಬಹುದು ಮತ್ತು ನೇರವಾಗಿಯೇ ಟೀ ಪುಡಿ ತಯಾರಿಸುವ ಪ್ರಕ್ರಿಯೆಯನ್ನು ನೋಡಬಹುದು.

ಜೀಪ್ ಸಫಾರಿ, ಸಾಹಸಮಯ ಪ್ರಯಾಣ

ಕೊಲುಕ್ಕುಮಲೈ ತಲುಪುವುದು ಅಷ್ಟು ಸುಲಭವಿಲ್ಲ. ಇಲ್ಲಿಗೆ ಹೋಗಲು ಏಕೈಕ ಮಾರ್ಗವೆಂದರೆ ಅದು 'ಆಫ್-ರೋಡ್' ಜೀಪ್‌ಗಳ ಮೂಲಕವೇ. ಇದನ್ನು ಕೇಳಿದೊಡನೆ ಹಲವರಿಗೆ ಸಖತ್ ಥ್ರಿಲ್​​ ಆಗಿರುತ್ತೆ. ಕಲ್ಲುಬಂಡೆಗಳು ಮತ್ತು ಗುಂಡಿಗಳಿಂದ ಕೂಡಿದ ಮಣ್ಣಿನ ರಸ್ತೆಯಲ್ಲಿ ಸುಮಾರು 17 ಕಿ.ಮೀ.ವರೆಗೆ ಜೀಪಿನಲ್ಲಿ ಪ್ರಯಾಣಿಸುವುದು ನಿಜಕ್ಕೂ ಅದ್ಭುತ ಸಾಹಸ. ಹಚ್ಚ ಹಸಿರಿನ ಕಣಿವೆಗಳು, ದಟ್ಟವಾದ ಮಂಜಿನಿಂದ ಕೂಡಿರುವ ಸ್ಥಳಕ್ಕೆ ಹೋಗುವುದು ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುವುದರಲ್ಲಿ ಎರಡನೇ ಮಾತಿಲ್ಲ.
ಮೋಡದ ಹಾಸಿಗೆ, ಸೂರ್ಯೋದಯ
ಕೊಲುಕ್ಕುಮಲೈ ಪ್ರವಾಸದ ಪ್ರಮುಖ ಆಕರ್ಷಣೆ ಸೂರ್ಯೋದಯ (ಸನ್​ರೈಸ್​) ನೀವು ಬೆಳಗ್ಗೆ ಬೇಗನೆ ಈ ಸ್ಥಳಕ್ಕೆ ತಲುಪಿದರೆ, ಮೋಡದ ಹಾಸಿಗೆಯಿಂದ ನಿಧಾನವಾಗಿ ಹೊರಬರುವ ಸೂರ್ಯನ ಉದಯವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿ ಮೋಡಗಳು ನಿಮ್ಮ ಪಾದಗಳ ಕೆಳಗೆ ಸಾಗರದಂತೆ ಹರಡಿದ್ದರೆ, ನಿಮಗೆ ನಾವೇನೋ ಮೋಡಗಳ ಮೇಲೆಯೇ ನಿಂತಿದ್ದೇವೆ ಎಂದು ಭಾಸವಾಗುತ್ತದೆ. ಇದರೊಟ್ಟಿಗೆ, ಪ್ರವಾಸಿಗರು ಇಲ್ಲಿರುವ 'ಸಿಂಗಪರೈ' (ಸಿಂಹ ಮುಖದ ಆಕಾರದ ಬಂಡೆ) ಬಳಿ ಸೆಲ್ಫಿ, ಫೋಟೋಗಳನ್ನು ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ.

ಇಲ್ಲಿಗೆ ಹೋಗೋದು ಹೇಗೆ?

ಈ ಸ್ಥಳಕ್ಕೆ ನೀವು ಹೋಗಬೇಕಾದರೆ, ಮೊದಲು ಕೇರಳದ ಮುನ್ನಾರ್​ಗೆ ತಲುಪಬೇಕು. ಅಲ್ಲಿಂದ ಸೂರ್ಯನೆಲ್ಲಿ ಎಂಬ ಗ್ರಾಮಕ್ಕೆ ತೆರಳಬೇಕು. ಇಲ್ಲಿಗೆ ಹೋದ ಮೇಲೆ, ನೀವು ಸ್ಥಳೀಯ ಜೀಪ್‌ಗಳನ್ನು ಬಾಡಿಗೆಗೆ ಪಡೆದು ಕೊಲುಕ್ಕುಮಲೈ ಬೆಟ್ಟಕ್ಕೆ ಆಫ್​-ರೋಡಿಂಗ್ ಅನುಭವವನ್ನು ಪಡೆಯುತ್ತಾ ತಲುಪಬಹುದು. ಭೂಮಿ ಮೇಲಿರುವ ಈ ಸ್ವರ್ಗದ ತಾಣಕ್ಕೆ ಹೋಗಲು ಮಳೆ ಮತ್ತು ಚಳಿಗಾಲ ಉತ್ತಮ. ಮಳೆಗಾಲದಲ್ಲಿ ಹೋಗುವುದು ಹೆಚ್ಚು ಚಾಲೆಂಜಿಂಗ್ ಆಗಿದ್ದರೂ ರೋಚಕವಾಗಿರುತ್ತದೆ. ಆದರೆ, ಸೆಪ್ಟೆಂಬರ್​ನಿಂದ ಜನವರಿ ಸಮಯದಲ್ಲಿ ತೆರಳುವುದೇ ಉತ್ತಮ.