ಟೀ ಮತ್ತು ಸಿಗರೇಟ್ ಸೇದುವ ಅಭ್ಯಾಸ  
ಲೈಫ್‌ಸ್ಟೈಲ್

ಟೀ ಜೊತೆ ಸಿಗರೇಟ್ ಸೇದುತ್ತೀರಾ? ಹಾಗಿದ್ರೆ ಇಂದೇ ಬಿಟ್ಟುಬಿಡಿ! ಇಲ್ಲದಿದ್ರೆ ಜೀವ ತಿನ್ನುವ ಕಾಯಿಲೆಗಳು ಬರೋದು ಖಚಿತ | Tea Cigerette ​

Tea Cigerette: ಈಗಿನ ಕಾಲಘಟ್ಟದಲ್ಲಿ ಬಹುತೇಕ ಮಂದಿ ಬೆಳಗ್ಗೆ ಎದ್ದ ಕೂಡಲೇ ಟೀ ಜೊತೆ ಒಂದು ಸಿಗರೇಟ್​ ಸೇದುವ ದುಶ್ಚಟಕ್ಕೆ ದಾಸರಾಗಿದ್ದಾರೆ. ನಿದ್ರೆಯಿಂದ ಎದ್ದಾಗ, ಕೆಲಸಕ್ಕೆ ಹೋಗುವಾಗ, ಹೋದ ಬಳಿಕ ಮತ್ತು ಯಾವುದೋ ಕಾರಣಕ್ಕೆ ಟೆನ್ಶನ್​ ಎಂಬ ನೆಪ ಹೇಳಿ ಅದಕ್ಕೊಂದು ಧಮ್​, ಹೀಗೆ ಸುಖಾಸುಮ್ಮನೆ ಒಂದಲ್ಲ ಒಂದು ಕಾರಣಕ್ಕೆ ಸಿಗರೇಟ್​ ಸೇದುವ ಜನರು, ಟೀ ಮತ್ತು ಕಾಫಿ ಜೊತೆಯಲ್ಲಿ ಹೊಗೆ ಬೀಡುವ ಚಾಳಿಯನ್ನು ರೂಢಿಸಿಕೊಂಡಿದ್ದಾರೆ. ಇದು ಮೇಲ್ನೋಟಕ್ಕೆ ಏನು ಸಮಸ್ಯೆಯಿಲ್ಲ ಎಂದು ಅನಿಸಿದರೂ, ಸ್ಲೋ ಪಾಯ್ಸನ್​ನಂತೆ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬುದು ಇನ್ನೂ ಅನೇಕರಿಗೆ ತಿಳಿದಿಲ್ಲ.
ಸಿಗರೇಟ್​ ಸೇದುತ್ತಾ ಟೀ ಕುಡಿಯೋದು ಆ ಕ್ಷಣಕ್ಕೆ ರಿಲೀಫ್​ ಅಂತ ಅನಿಸಿದರೂ ಆರೋಗ್ಯ ತಜ್ಞರು ಈ ರೀತಿ ಮಾಡುವುದರಿಂದ ಆರೋಗ್ಯಕ್ಕೆ ದೊಡ್ಡ ಕುತ್ತು ಎಂದು ಎಚ್ಚರಿಸಿದ್ದಾರೆ. ವಿಶೇಷವಾಗಿ ಬಿಸಿ ಚಹಾ ಜೊತೆಗೆ ಸಿಗರೇಟ್ ಸೇದುವುದರಿಂದ ದೇಹಕ್ಕೆ ಕ್ಯಾನ್ಸರ್​ ಕಾಯಿಲೆಗಳಂತಹ ಹಲವು ಜೀವ ತಿನ್ನುವ ರೋಗಗಳು ಆವರಿಸಿಕೊಳ್ಳುತ್ತವೆ. ಪ್ರಮುಖ ಸಂಶೋಧನಾ ವರದಿಯ ಪ್ರಕಾರ, ಬಿಸಿ ಪಾನೀಯಗಳು ಗಂಟಲು ಮತ್ತು ಅನ್ನನಾಳದ ಅಂಗಾಂಶಗಳನ್ನು ಹಾನಿಗೊಳಿಸಿದರೆ, ಸಿಗರೇಟ್‌ಗಳಲ್ಲಿರುವ ಕ್ಯಾನ್ಸರ್ ಜನಕ ರಾಸಾಯನಿಕಗಳು ಆ ಹಾನಿಯನ್ನು ಇನ್ನಷ್ಟು ದೊಡ್ಡದಾಗಿಸುತ್ತವೆ.

ಶ್ವಾಸಕೋಶ ಕ್ಯಾನ್ಸರ್

ಸಿಗರೇಟ್ ಸೇದುವುದು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಸಲಿಗೆ, ಇದನ್ನು ಸ್ವತಃ ಆಯಾ ಸಿಗರೇಟ್​ ಕಂಪನಿಗಳು ಪ್ಯಾಕೆಟ್​ ಮೇಲೆ ಎಚ್ಚರಿಕೆಯ ಸಂದೇಶವನ್ನಾಗಿ ಮುದ್ರಿಸಿರುತ್ತವೆ. ಇಷ್ಟಾದರೂ ಕೇರ್​ ಮಾಡದ ಜನರು, ಬಿಸಿ ಟೀ-ಕಾಫಿ ಜೊತೆ ಧಮ್​ ಎಳೆಯುತ್ತಾರೆ. ಇದು ಮತ್ತಷ್ಟು ಅಂಗಾಂಶ ಹಾನಿಯನ್ನುಂಟುಮಾಡುತ್ತದೆ. ದೀರ್ಘಾವಧಿಯಲ್ಲಿ ಕ್ಯಾನ್ಸರ್ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಬ್ರೇನ್​ ಸ್ಟ್ರೋಕ್​ ಅಪಾಯ

ನಿಕೋಟಿನ್ ಮತ್ತು ಕೆಫೀನ್ ಎರಡೂ ರಕ್ತನಾಳಗಳನ್ನು ಬ್ಲಾಕ್​ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದು ರಕ್ತದೊತ್ತಡವನ್ನು ಹೆಚ್ಚಿಸುವುದಲ್ಲದೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯಕ್ಕೂ ಕಾರಣ. ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಅಥವಾ ಅಧಿಕ ರಕ್ತದೊತ್ತಡ ಇರುವವರಲ್ಲಿ ಪಾರ್ಶ್ವವಾಯು ಅಪಾಯವು ಹೆಚ್ಚು.

ಅನ್ನನಾಳದ ಕ್ಯಾನ್ಸರ್

ಬಿಸಿ ಚಹಾವನ್ನು ಆಗಾಗ್ಗೆ ಕುಡಿಯುವುದರಿಂದ ಅನ್ನನಾಳದ ಒಳಪದರಕ್ಕೆ ಹಾನಿ ಆಗುತ್ತದೆ. ಅಲ್ಲದೆ, ಸಿಗರೇಟ್ ಹೊಗೆಯಲ್ಲಿರುವ ವಿಷಕಾರಿ ರಾಸಾಯನಿಕಗಳು ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತವೆ. ಈ ಎರಡೂ ಒಟ್ಟಾಗಿ ಅನ್ನನಾಳದ ಕ್ಯಾನ್ಸರ್ ಅಪಾಯವನ್ನು ಉಲ್ಬಣಿಸುತ್ತದೆ.

ಹೊಟ್ಟೆ ಹುಣ್ಣು

ಚಹಾ ಹೊಟ್ಟೆಯಲ್ಲಿ ಆಮ್ಲ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ನಿಕೋಟಿನ್ ಹೊಟ್ಟೆಯ ರಕ್ಷಣಾತ್ಮಕ ಪದರವನ್ನು ಡ್ಯಾಮೇಜ್​ ಮಾಡುತ್ತದೆ. ಇದರಿಂದಾಗಿ, ಹೊಟ್ಟೆ ಹುಣ್ಣು, ಅಜೀರ್ಣ, ಉರಿಯೂತ ಮತ್ತು ವಾಕರಿಕೆಯಂತಹ ಮುಂತಾದ ಸಮಸ್ಯೆಗಳು ಉಂಟಾಗಬಹುದು.

ಗಂಟಲು ಕ್ಯಾನ್ಸರ್

ಗಂಟಲು ಬಿಸಿ ಪಾನೀಯಗಳು ಮತ್ತು ಹೊಗೆ ಎರಡಕ್ಕೂ ಬಹಳ ಸೂಕ್ಷ್ಮ. ಸಿಗರೇಟಿನಲ್ಲಿರುವ ಫಾರ್ಮಾಲ್ಡಿಹೈಡ್ ಮತ್ತು ಬೆಂಜೀನ್‌ನಂತಹ ಹಾನಿಕಾರಕ ಕೆಮಿಕಲ್​ಗಳು ಗಂಟಲಿನ ಅಂಗಾಂಶವನ್ನು ಹಾನಿಗೊಳಿಸುತ್ತವೆ. ಬಿಸಿ ಚಹಾದೊಂದಿಗೆ ಸೇರಿ, ಇವು ದೀರ್ಘಕಾಲದ ಗಂಟಲು ಊತ, ಧ್ವನಿಯಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು ಮತ್ತು ಕಡೆಗಣಿಸಿದರೆ ಗಂಟಲು ಕ್ಯಾನ್ಸರ್​ಗೆ ತಿರುಗಬಹುದು.

ಹೃದಯಕ್ಕೆ ಹಾನಿ

ಸಿಗರೇಟಿನಲ್ಲಿರುವ ನಿಕೋಟಿನ್ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಚಹಾದಲ್ಲಿರುವ ಕೆಫೀನ್ ಅತಿಯಾಗಿ ಸೇವಿಸಿದರೆ ಹೃದಯದ ಮೇಲೆ ಒತ್ತಡ ಹೇರುತ್ತದೆ. ಎರಡರ ಪರಿಣಾಮಗಳು ರಕ್ತನಾಳಗಳಿಗೆ ದೊಡ್ಡ ಮಟ್ಟದ ಹಾನಿ ಉಂಟುಮಾಡಬಹುದು. ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಸಂತಾನೋತ್ಪತಿಗೂ ಸಮಸ್ಯೆ

ಧೂಮಪಾನವು ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ ಮತ್ತು ಪುರುಷರಲ್ಲಿ ವೀರ್ಯಾಣು ಸಂಖ್ಯೆಯನ್ನು ಕಡಿತಗೊಳಿಸುತ್ತದೆ. ಇದು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಆರೋಗ್ಯದ ಮೇಲೂ ಪರಿಣಾಮ ಬೀರುತ್ದೆ. ಅತಿಯಾದ ಕೆಫೀನ್ ಸೇವನೆಯು ಈ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ ಎನ್ನುತ್ತಾರೆ ತಜ್ಞರು.

ಮೆಮೋರಿ ಲಾಸ್​

ಸಿಗರೇಟ್ ಸೇದುವುದರಿಂದ ಮೆದುಳಿಗೆ ರಕ್ತದ ಹರಿವು ಕ್ರಮೇಣವಾಗಿ ಕಡಿಮೆಯಾಗುತ್ತದೆ. ಹೆಚ್ಚು ಚಹಾ ಕುಡಿಯುವುದರಿಂದ ತಲೆನೋವು ಮತ್ತು ತಲೆತಿರುಗುವಿಕೆ ಮುಂತಾದ ಸಮಸ್ಯೆಗಳು ಉಂಟಾಗಬಹುದು. ದೀರ್ಘಾವಧಿಯಲ್ಲಿ, ಈ ಅಭ್ಯಾಸವು ಸ್ಮರಣ ಶಕ್ತಿ ನಷ್ಟ ಮತ್ತು ಏಕಾಗ್ರತೆಯ ಕೊರತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ತಜ್ಞರ ಎಚ್ಚರಿಕೆ

ಟೀ ಮತ್ತು ಸಿಗರೇಟ್ ಇವೆರೆಡೂ ಅನೇಕ ಜನರ ಜೀವನದ ಭಾಗವಾಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ತಜ್ಞರು ಹೇಳುವಂತೆ ಎರಡನ್ನೂ ಒಂದೇ ಸಮಯದಲ್ಲಿ ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ. ಧೂಮಪಾನವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದು ಅತ್ಯಂತ ಒಳ್ಳೆಯ ನಿರ್ಧಾರ. ಅದು ಸಾಧ್ಯವಾಗದಿದ್ದರೆ, ಚಹಾ ಕುಡಿಯುವಾಗ ಕನಿಷ್ಠ ಸಿಗರೇಟ್‌ನಿಂದ ದೂರವಿರುವುದು ಒಳಿತು ಎಂದು ತಜ್ಞರು ಸೂಚಿಸುತ್ತಾರೆ.
ಇದಲ್ಲದೆ, ಅತ್ಯಂತ ಬಿಸಿ ಪಾನೀಯಗಳ ಬದಲಿಗೆ ಬೆಚ್ಚಗಿನ ಪಾನೀಯಗಳನ್ನು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ದಿನಚರಿಯಲ್ಲಿ ಒಂದಷ್ಟು ಅಭ್ಯಾಸಗಳಲ್ಲಿ ಸಣ್ಣ ಬದಲಾವಣೆಗಳನ್ನು ತರುವ ಮೂಲಕ ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ತಡೆಗಟ್ಟಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ,(ಏಜೆನ್ಸೀಸ್).
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.