ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ದಿನಕ್ಕೊಂದು ಟೀ ಕುಡಿಯದಿದ್ದರೂ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.
ಟೀ ಜತೆ ಸಮೋಸ, ಬಿಸ್ಕತ್ತು ಹಾಗೂ ಪಕೋಡದಂತಹ ತಿಂಡಿಗಳನ್ನು ತಿನ್ನುವುದು ಸಾಮಾನ್ಯ. ಆದರೆ, ಚಹಾದೊಂದಿಗೆ ಈ ತಿಂಡಿಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂಬುದು ಎಷ್ಟೋ ಮಂದಿಗೆ ತಿಳಿದಿಲ್ಲ. ತುಂಬಾ ರುಚಿ ಅನ್ನೋ ಕಾರಣಕ್ಕೆ ತಿಂದು ಅನಾರೋಗ್ಯ ತಂದುಕೊಳ್ಳುತ್ತಿದ್ದಾರೆ. ಆರೋಗ್ಯ ತಜ್ಞರ ಸಲಹೆಯಂತೆ ಚಹಾ ಜೊತೆಗೆ ಈ ತಿಂಡಿಗಳನ್ನು ಸೇವಿಸುವಾಗ ನಮ್ಮ ಆರೋಗ್ಯಕ್ಕೆ ಅವು ಸುರಕ್ಷಿತವೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ.
ನಾವು ಸಾಮಾನ್ಯವಾಗಿ ಚಹಾದೊಂದಿಗೆ ಹೆಚ್ಚು ಎಣ್ಣೆಯುಕ್ತ ಆಹಾರವನ್ನು ಸೇವಿಸುತ್ತೇವೆ. ಆದರೆ, ಇದು ಖಂಡಿತವಾಗಿಯೂ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಡೀಪ್ ಫ್ರೈ ಮಾಡಿದ ತಿಂಡಿಗಳನ್ನು ಚಹಾದೊಂದಿಗೆ ತಿನ್ನಲೇಬಾರದು. ಮಳೆಗಾಲದಲ್ಲಿ ಬಿಸಿಬಿಸಿ ಚಹಾದೊಂದಿಗೆ ಪಕೋಡ ಹಾಗೂ ಸಮೋಸ ತಿನ್ನುವ ಅಭ್ಯಾಸ ಹಲವರಿಗೆ ಇದೆ. ಇದೊಂದು ರೀತಿಯ ಬಯಕೆ ಎನ್ನಬಹುದು. ಆದರೆ, ಈ ಡೀಪ್ ಫ್ರೈಡ್ ತಿಂಡಿಗಳನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ ಎಂಬುದು ನೆನೆಪಿರಲಿ. ಇದರಿಂದಾಗಿ ಆ ತಿಂಡಿಗಳಲ್ಲಿ ಎಣ್ಣೆಯ ಅಂಶವು ತುಂಬಾ ಹೆಚ್ಚಾಗಿರುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದ್ದು, ಹಲವಾರು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ, ಆಮ್ಲೀಯತೆ, ಮಲಬದ್ಧತೆ ಮತ್ತು ಹೊಟ್ಟೆ ಉಬ್ಬುವಿಕೆಗೆ ಕಾರಣವಾಗುತ್ತದೆ.
ಇನ್ನು ಚಹಾದೊಂದಿಗೆ ಕಬ್ಬಿಣಾಂಶ ಹೆಚ್ಚಿರುವ ಆಹಾರವನ್ನು ಸಹ ಸೇವಿಸಬೇಡಿ. ಆರೋಗ್ಯ ತಜ್ಞರ ಪ್ರಕಾರ ಚಹಾದಲ್ಲಿ ಆಕ್ಸಲೇಟ್ ಅಂಶ ಇದೆ. ಇದು ಕಬ್ಬಿಣಾಂಶಭರಿತ ಆಹಾರದಿಂದ ಕಬ್ಬಿಣಾಂಶ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಆದ್ದರಿಂದ ಟೀ ಜೊತೆಗೆ ಕಬ್ಬಿಣಾಂಶವಿರುವ ಪಾಲಕ್, ಕಡಲೆ ಇತ್ಯಾದಿ ಆಹಾರಗಳನ್ನು ಸೇವಿಸಬೇಡಿ.
ಇನ್ನೊಂದು ಪ್ರಮುಖ ವಿಷಯವೆಂದರೆ ಹೆಚ್ಚು ಚಹಾ ಕುಡಿಯುವುದನ್ನು ತಪ್ಪಿಸುವುದು ಒಳ್ಳೆಯದು. ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೆಚ್ಚು ಚಹಾವನ್ನು ಕುಡಿಯುವುದು ನಿದ್ರಾಹೀನತೆ ಅಥವಾ ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಸೀಮಿತ ಪ್ರಮಾಣದಲ್ಲಿ ಮಾತ್ರ ಚಹಾ ಸೇವಿಸಿ. (ಏಜೆನ್ಸೀಸ್)