Lifestyle  
ಲೈಫ್‌ಸ್ಟೈಲ್

ನಿಮಗೆ ಪದೇ ಪದೇ ಜ್ವರ, ನೆಗಡಿ ಆಗ್ತಿದೆಯಾ? ಮಾತ್ರೆ ಹುಡುಕೋ ಮುನ್ನ Lifestyle ಒಮ್ಮೆ ಚೇಂಜ್ ಮಾಡಿ ನೋಡಿ!

ಬೆಂಗಳೂರು: "ಹವಾಮಾನ ಸ್ವಲ್ಪ ಬದಲಾದರೂ ಸಾಕು ನನಗೆ ನೆಗಡಿ, ಕೆಮ್ಮು ಶುರುವಾಗುತ್ತೆ", "ತಿಂಗಳಿಗೆ ಕನಿಷ್ಠ ಒಂದು ಬಾರಿಯಾದರೂ ಜ್ವರ ಬಂದು ಮಾತ್ರೆ ನುಂಗಲೇಬೇಕು"– ಇತ್ತೀಚಿನ ದಿನಗಳಲ್ಲಿ ಇಂತಹ ಮಾತುಗಳು ಹಲವರಿಂದ ಕೇಳಿಬರುತ್ತಿವೆ. ಹವಾಮಾನ ವೈಪರೀತ್ಯ ಅಥವಾ ವೈರಸ್ ದಾಳಿಯಿಂದ ನಮಗೆ ಕಾಯಿಲೆ ಬರುತ್ತದೆ ಎಂದು ನಾವು ಮೇಲ್ನೋಟಕ್ಕೆ ದೂಷಿಸುತ್ತೇವೆ. ಆದರೆ ವೈದ್ಯಕೀಯ ಸಂಶೋಧನೆಗಳ ಪ್ರಕಾರ, ನೀವು ಪದೇ ಪದೇ ಕಾಯಿಲೆ ಬೀಳುತ್ತಿದ್ದರೆ ಅದಕ್ಕೆ ಹೊರಗಿನ ವಾತಾವರಣಕ್ಕಿಂತ, ನಿಮ್ಮದೇ ತಪ್ಪು ಜೀವನಶೈಲಿ (Lifestyle) ಮತ್ತು ದಿನಚರಿ ಪ್ರಮುಖ ಕಾರಣವಾಗಿರಬಹುದು!
ಹೌದು, ನಮ್ಮ ದೇಹದ ರೋಗನಿರೋಧಕ ಶಕ್ತಿ (Immunity) ನಮ್ಮ ದೈನಂದಿನ ಅಭ್ಯಾಸಗಳ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ. ನಾವು ದಿನನಿತ್ಯ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ನಮ್ಮ ದೇಹದ ರಕ್ಷಣಾ ಕವಚವನ್ನು ದುರ್ಬಲಗೊಳಿಸುತ್ತವೆ. ಹಾಗಾದರೆ ಪದೇ ಪದೇ ಅನಾರೋಗ್ಯಕ್ಕೆ ಈಡುಮಾಡುವ ಆ ರಹಸ್ಯ ಕಾರಣಗಳು ಯಾವುವು? ಅವುಗಳನ್ನು ಸರಿಪಡಿಸಿಕೊಳ್ಳುವುದು ಹೇಗೆ? ಇಲ್ಲಿದೆ ಕಣ್ಣು ತರೆಸುವ ಮಾಹಿತಿ.

1. ಅರೆಬರೆ ನಿದ್ದೆ, ರೋಗಗಳಿಗೆ ಮುನ್ನುಡಿ

ಇಂದಿನ ಡಿಜಿಟಲ್ ಜಗತ್ತಿನಲ್ಲಿ ತಡರಾತ್ರಿಯವರೆಗೆ ಮೊಬೈಲ್ ವೀಕ್ಷಣೆ ಅಥವಾ ಒಟಿಟಿ ಸರಣಿಗಳನ್ನು ನೋಡುವುದು ಸಾಮಾನ್ಯವಾಗಿದೆ. ಆದರೆ ನೆನಪಿರಲಿ, ದಿನಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ತೃಪ್ತಿಕರ ನಿದ್ದೆ ಮಾಡದಿದ್ದರೆ ದೇಹಕ್ಕೆ ತೀವ್ರ ಆಯಾಸವಾಗುತ್ತದೆ. ನಾವು ಮಲಗಿದಾಗ ನಮ್ಮ ದೇಹವು ರೋಗಗಳ ವಿರುದ್ಧ ಹೋರಾಡುವ 'ಸೈಟೊಕಿನ್ಸ್' ಎಂಬ ಪ್ರೋಟೀನ್‌ಗಳನ್ನು ಬಿಡುಗಡೆ ಮಾಡುತ್ತದೆ. ನಿದ್ದೆ ಕಡಿಮೆಯಾದಾಗ ಇವುಗಳ ಉತ್ಪತ್ತಿ ಕುಂಠಿತಗೊಂಡು, ದೇಹವು ಸುಲಭವಾಗಿ ವೈರಸ್‌ಗಳ ದಾಳಿಗೆ ತುತ್ತಾಗುತ್ತದೆ.

2. ಅತಿಯಾದ ಮಾನಸಿಕ ಒತ್ತಡ

ಕಚೇರಿಯ ಕೆಲಸದ ಒತ್ತಡ ಅಥವಾ ವೈಯಕ್ತಿಕ ಜೀವನದ ಚಿಂತೆಗಳು ನಮ್ಮನ್ನು ಸದಾ ಕಾಡುತ್ತಿದ್ದರೆ, ದೇಹದಲ್ಲಿ 'ಕಾರ್ಟಿಸೋಲ್' ಎಂಬ ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆ. ಈ ಹಾರ್ಮೋನ್ ದೀರ್ಘಕಾಲದವರೆಗೆ ದೇಹದಲ್ಲಿ ಅಧಿಕವಾಗಿದ್ದರೆ, ಅದು ಶ್ವೇತ ರಕ್ತಕಣಗಳ (WBC) ದಕ್ಷತೆಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಸಣ್ಣ ಸೋಂಕುಗಳೂ ದೊಡ್ಡ ಕಾಯಿಲೆಯಾಗಿ ರೂಪಾಂತರಗೊಳ್ಳುತ್ತವೆ.

3. ಜಂಕ್ ಫುಡ್ ವ್ಯಾಮೋಹ

ಮನೆಯ ಊಟವನ್ನು ಬಿಟ್ಟು ಪಿಜ್ಜಾ, ಬರ್ಗರ್, ಬೇಕರಿ ತಿಂಡಿಗಳು ಹಾಗೂ ಸಂಸ್ಕರಿಸಿದ (Processed) ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಕೇವಲ ಕ್ಯಾಲೊರಿ ಸಿಗುತ್ತದೆಯೇ ಹೊರತು ಅಗತ್ಯ ವಿಟಮಿನ್‌ಗಳು ಸಿಗುವುದಿಲ್ಲ. ಮುಖ್ಯವಾಗಿ ವಿಟಮಿನ್ ಸಿ, ವಿಟಮಿನ್ ಡಿ ಮತ್ತು ಜಿಂಕ್ ಕೊರತೆಯಾದಾಗ ದೇಹದ ಇಮ್ಯೂನಿಟಿ ಪವರ್ ತಳ ಮುಟ್ಟುತ್ತದೆ. ತರಕಾರಿ, ಹಣ್ಣುಗಳು ಹಾಗೂ ಸೊಪ್ಪನ್ನು ಕಡೆಗಣಿಸುವುದೇ ಪದೇ ಪದೇ ಜ್ವರ ಬರಲು ಮುಖ್ಯ ಕಾರಣ.

4. ದೈಹಿಕ ಶ್ರಮವಿಲ್ಲದ ಜಡ ಜೀವನ

ದಿನಪೂರ್ತಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು, ದೈಹಿಕವಾಗಿ ಯಾವುದೇ ಚಟುವಟಿಕೆ ಇಲ್ಲದಿರುವುದು ರಕ್ತ ಪರಿಚಲನೆಯನ್ನು ಕುಂಠಿತಗೊಳಿಸುತ್ತದೆ. ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ನಡಿಗೆ, ಯೋಗ ಅಥವಾ ವ್ಯಾಯಾಮ ಮಾಡದಿದ್ದರೆ ದೇಹದಲ್ಲಿರುವ ರೋಗನಿರೋಧಕ ಕಣಗಳು ಇಡೀ ದೇಹಕ್ಕೆ ಸರಿಯಾಗಿ ಹರಡುವುದಿಲ್ಲ. ವ್ಯಾಯಾಮವು ದೇಹದ ಕಸವನ್ನು (ಟಾಕ್ಸಿನ್) ಹೊರಹಾಕಲು ನೆರವಾಗುತ್ತದೆ.

5. ಕಡಿಮೆ ನೀರು ಕುಡಿಯುವುದು

ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಜೀರ್ಣಕ್ರಿಯೆ ಹದಗೆಡುತ್ತದೆ ಮತ್ತು ಮೂತ್ರಪಿಂಡಗಳು ಕಲ್ಮಶಗಳನ್ನು ಹೊರಹಾಕಲು ಕಷ್ಟಪಡುತ್ತವೆ. ದಿನಕ್ಕೆ 3 ಲೀಟರ್ ನೀರು ಕುಡಿಯದಿದ್ದರೆ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಇದರೊಂದಿಗೆ ಊಟಕ್ಕೆ ಮುನ್ನ ಕೈಗಳನ್ನು ಸರಿಯಾಗಿ ತೊಳೆಯದಿರುವುದು, ಹೊರಗಿನಿಂದ ಬಂದ ತಕ್ಷಣ ಸ್ವಚ್ಛವಾಗದಿರುವುದು ಬ್ಯಾಕ್ಟೀರಿಯಾಗಳು ಸುಲಭವಾಗಿ ದೇಹ ಸೇರಲು ದಾರಿ ಮಾಡಿಕೊಡುತ್ತದೆ.

ಪರಿಹಾರವೇನು?

ಪದೇ ಪದೇ ಆಸ್ಪತ್ರೆಗೆ ಅಲೆದಾಡಿ ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ನುಂಗುವ ಬದಲು, ನಿಮ್ಮ ದಿನಚರಿಯಲ್ಲಿ ಬದಲಾವಣೆ ತನ್ನಿ. ಪೌಷ್ಟಿಕ ಆಹಾರ, ಸಮಯಕ್ಕೆ ಸರಿಯಾಗಿ ನಿದ್ದೆ, ಯೋಗ ಹಾಗೂ ಸದಾ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡರೆ ಯಾವುದೇ ಕಾಯಿಲೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ,(ಏಜೆನ್ಸೀಸ್​).