Bread : ನಮ್ಮ ದೈನಂದಿನ ಆಹಾರದಲ್ಲಿ ಬ್ರೆಡ್ ಒಂದು ಸಾಮಾನ್ಯ ಆಹಾರವಾಗಿದೆ. ತಕ್ಷಣವೇ ಉಪಯೋಗಿಸಬಹುದಾದ ಹಾಗೂ ಸುಲಭವಾಗಿ ಲಭ್ಯವಿರುವ ಈ ಬ್ರೆಡ್ ಹಲವಾರು ರೂಪಗಳಲ್ಲಿ, ಬಣ್ಣಗಳಲ್ಲಿ ಮತ್ತು ಪೌಷ್ಠಿಕತೆಯ ಮಟ್ಟಗಳಲ್ಲಿ ತಯಾರಾಗುತ್ತದೆ. ಹಾಗಾಗಿ ಇಲ್ಲಿ ಕಾಡುವ ಒಂದು ಪ್ರಶ್ನೆಯೆಂದರೆ, ವಿವಿಧ ಬಗೆಯ ಬ್ರೆಡ್ಗಳು ಆರೋಗ್ಯಕರವೇ ಎಂಬುದು. ಅದರಲ್ಲೂ ವಿಶೇಷವಾಗಿ ಬಿಳಿ ಮತ್ತು ಕಂದು ಬಣ್ಣದ ಬ್ರೆಡ್ ಬಗ್ಗೆ ನೀವು ಬಹಳಷ್ಟು ಕೇಳಿರುತ್ತೀರಿ. ಆದರೆ ಈ ಎರಡರಲ್ಲಿ ಅನೇಕ ಮಂದಿ ಕಂದು ಬ್ರೆಡ್ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಹಾಗಾದರೆ, ಇದು ನಿಜಾನಾ? ಈ ಪ್ರಶ್ನೆ ನಿಮ್ಮಲ್ಲಿ ಇನ್ನೂ ಇದ್ದರೆ ಚಿಂತಿಸಬೇಡಿ. ಸೂಕ್ತ ಉತ್ತರ ಇಲ್ಲಿದೆ.
ಅಂದಹಾಗೆ ಇಷ್ಟು ದಿನ ಬಿಳಿ ಬ್ರೆಡ್ ಕೆಡಕು ಹಾಗೂ ಕಂದು ಬ್ರೆಡ್ ಉತ್ತಮ ಎಂಬ ಅಭಿಪ್ರಾಯವನ್ನು ಹೊಂದಿದ್ದವರಿಗೆ ಪೌಷ್ಟಿಕತಜ್ಞರು ಹೇಳುವುದೇನು? ಬಿಳಿ, ಕಂದು ಬಣ್ಣ ಇರುವುದರಿಂದ ಯಾವ ಬ್ರೆಡ್ ಉತ್ತಮ ಎಂದು ನಿರ್ಧರಿಸುವುದು ಸರಿಯಲ್ಲ. ಸತ್ಯ ತಿಳಿದುಕೊಳ್ಳುವ ಮುನ್ನ ಎರಡು ಬ್ರೆಡ್ಗಳ ಅರ್ಥವನ್ನು ನಾವು ಸರಳವಾಗಿ ತಿಳಿದುಕೊಳ್ಳೋಣ.
ಬಿಳಿ ಬ್ರೆಡ್ ಅನ್ನು ಸಾಮಾನ್ಯವಾಗಿ ಮೈದಾ ಅಥವಾ ಶುದ್ಧೀಕರಿಸಿದ ಗೋಧಿಯಿಂದ ತಯಾರಿಲಾಗುತ್ತದೆ. ಈ ಹಿಟ್ಟಿನಲ್ಲಿ ಗೋಧಿಯ ಹೊರ ಪದರು ಮತ್ತು ಅಂತರಂಗದ ಭಾಗವನ್ನು ತೆಗೆದುಹಾಕಲಾಗಿರುತ್ತದೆ. ಈ ಕಾರಣಕ್ಕೆ ಹಿಟ್ಟಿನಲ್ಲಿ ಫೈಬರ್, ವಿಟಮಿನ್ಗಳು ಮತ್ತು ಖನಿಜಗಳು ಕಡಿಮೆ ಇರುತ್ತದೆ.
ಕಂದು ಬ್ರೆಡ್ ಎಂದರೆ ಎಲ್ಲ ಸಮಯದಲ್ಲಿಯೂ ಉತ್ತಮ ಪದಾರ್ಥಗಳಿಂದ ಮಾಡಿದ ಬ್ರೆಡ್ ಎಂದರ್ಥವಲ್ಲ. ಕೆಲವೊಮ್ಮೆ ಕಂದು ಬಣ್ಣ ತೋರಿಸಲು ಇದರಲ್ಲಿ ಕ್ಯಾರಮೆಲ್ ಬಣ್ಣ ಅಥವಾ ಮಾಲ್ಟ್ ಸಿರಪ್ ಅನ್ನು ಸೇರಿಸಲಾಗುತ್ತದೆ. ಆದ್ದರಿಂದ, ಈ ಬಣ್ಣವು ನಿಮ್ಮ ಆಯ್ಕೆಯಲ್ಲಿ ದಾರಿ ತಪ್ಪಿಸಬಹುದು. ಹಾಗಾಗಿ, ನಿಮ್ಮ ದೇಹಕ್ಕೆ ನಿಜವಾದ ಲಾಭ ನೀಡುವ ಬ್ರೆಡ್ ಯಾವುದು ಎಂಬುದನ್ನು ಗುರುತಿಸಲು ಕೇವಲ ಬಣ್ಣವನ್ನೇ ನಂಬುವುದು ಸೂಕ್ತವಲ್ಲ.
ಕಂದು ಬಣ್ಣವಿದ್ದ ಮಾತ್ರಕ್ಕೆ ಅದು ಹೋಲ್ ಗ್ರೇನ್ ಎಂದರ್ಥವಲ್ಲ. ಬ್ರೆಡ್ನ ಪ್ಯಾಕ್ ಮೇಲೆ ಶೇ. 100 ರಷ್ಟು Whole Wheat Flour ಅಥವಾ Whole Grain ಎಂಬ ಲೇಬಲ್ ಇರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾಯೇ ಮುಖ್ಯ ಪದಾರ್ಥ ಪಟ್ಟಿ ನೋಡಿದಾಗ ಮೊದಲನೆಯದು ಹೋಲ್ ವೀಟ್ ಹಿಟ್ಟಾಗಿರಬೇಕು.
ಒಂದು ಪ್ಯಾಕೆಟ್ನಲ್ಲಿ ಕನಿಷ್ಠ 3 ಗ್ರಾಂ ಫೈಬರ್ ಇದ್ದರೆ ಅದು ಉತ್ತಮ ಆಯ್ಕೆಯಾಗಿರುತ್ತದೆ. ಯಾಕೆಂದರೆ ಹೆಚ್ಚು ಫೈಬರ್ ಹೊಂದಿರುವ ಬ್ರೆಡ್ ನಿಂದ ಜೀರ್ಣಕ್ರಯೆ ಸುಗಮವಾಗುತ್ತದೆ ಹಾಗೂ ಮಲಬದ್ಧತೆ ಕಡಿಮೆಯಾಗುತ್ತದೆ. ಜತೆಗೆ ಗಂಟಲಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ವೃದ್ಧಿಯಾಗುತ್ತದೆ.
ಮಲ್ಟಿಗ್ರೇನ್, ಹೆಲ್ತಿ, ಬ್ರೌನ್ ಬ್ರೆಡ್ ಎಂಬ ಪದಗಳನ್ನು ಬಳಸುವುದು ಕೆಲವೊಮ್ಮೆ ಕೇವಲ ಮಾರ್ಕೆಟಿಂಗ್ ತಂತ್ರವಾಗಿರುತ್ತದೆ ಎಂಬುದನ್ನು ಗಮನಿಸಬೇಕು. ನಿಜವಾದ ಆರೋಗ್ಯವನ್ನು ನಿರ್ಧರಿಸಲು ಪೌಷ್ಠಿಕ ಮಾಹಿತಿ ಪಟ್ಟಿಯನ್ನು ಓದುವುದು ಅತ್ಯಗತ್ಯ ಎಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ.
ಕಂದು ಬ್ರೆಡ್ ಯಾವಾಗಲೂ ಉತ್ತಮವಲ್ಲ. ಬಣ್ಣದ ಮೇಲೆ ಅವಲಂಬಿಸಬೇಡಿ. ನಿಜವಾದ ಸಂಪೂರ್ಣ ಗೋಧಿ ಹಿಟ್ಟಿನಿಂದ ತಯಾರಿಸಿದ ಬ್ರೆಡ್ನ್ನು ಆರಿಸಿಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಆದ್ದರಿಂದ ಇನ್ನುಮುಂದೆ ಬ್ರೆಡ್ ಖರಿದೀಸುವಾಗ ಕೇವಲ ಬಣ್ಣ ನೋಡದೆ ಅದರಲ್ಲಿ ಇರುವ ಘಟಕಾಂಶಗಳ ಪಟ್ಟಿ, ಫೈಬರ್ ಪ್ರಮಾಣ ಮತ್ತು ಲೇಬಲ್ ನೋಡಿ ಆರಿಸಿಕೊಳ್ಳಿ. ಆರೋಗ್ಯಕರ ಬ್ರೆಡ್ ಎಂದರೆ ಕೇವಲ ಕಂದು ಅಥವಾ ಮಲ್ಟಿಗ್ರೇನ್ ಎನ್ನುವುದು ಅಲ್ಲ, ಅದು ನಿಜವಾಗಿಯೂ ಹೋಲ್ ಗ್ರೇನ್ ಆಗಿದೆಯಾ ಎಂಬುದನ್ನು ತಿಳಿದು ಖರಿದಿಸಿ ಮತ್ತು ಆರೋಗ್ಯ ಕಾಪಾಡಿಕೊಳ್ಳಿ. (ಏಜೆನ್ಸೀಸ್)