ಆಹಾರ ಎಂಬುದಕ್ಕೆ ವಿಶಾಲ ಅರ್ಥವಿದೆ. ಋಷಿಮುನಿಗಳ ದರ್ಶನಭಾಗ್ಯವು ಕಣ್ಣುಗಳಿಗೆ ಸಾತ್ವಿಕ ಆಹಾರ. ಭಜನೆ, ಕೀರ್ತನೆ, ವೇದಾದಿಗಳ ಉಪನ್ಯಾಸಗಳೆಲ್ಲ ಕಿವಿಗೆ, ಗುರುಚರಣ ಸ್ಪರ್ಶವು ತ್ವಚೆಗೆ, ಸುವಾಸನೆಯ ಹೂವುಗಳು ಮೂಗಿಗೆ ಸಾತ್ವಿಕ ಆಹಾರವಾಗಿವೆ. ಪ್ರಶಾಂತ ಮನಸ್ಸಿನೊಂದಿಗೆ, ಅಧ್ಯಾತ್ಮ ಚಿಂತನೆಯೊಂದಿಗೆ ಸ್ವೀಕರಿಸಿದರೆ ನಾಲಿಗೆಗೆ ಸಾತ್ವಿಕ ಆಹಾರವಾಗುತ್ತದೆ. ಮನಸ್ಸಿಗೆ ತೋಚಿದಂತೆ ತಿನ್ನುತ್ತ ಹೋದರೆ ಅದು ಸಮ್ಯಕ್ ರೀತಿಯಲ್ಲಿ ಪಚನವಾಗುವುದಿಲ್ಲ. ಆಹಾರದ್ರವ್ಯಗಳ ಆಯ್ಕೆ, ಅವುಗಳ ಮೂಲ, ಬೆಳೆದ ವಿಧಾನ, ತಯಾರಿಯ ಪ್ರಕ್ರಿಯೆ, ಸೇವನಾ ವಿಧಿಗಳೆಲ್ಲವನ್ನೂ ಒಟ್ಟಾಗಿ ಆಹಾರಸಂಸ್ಕಾರ ಎನ್ನಬಹುದು.
ಆಹಾರದಿಂದ ಮನಸ್ಸಿನ ಮೇಲಾಗುವ ಪರಿಣಾಮ ವಿಶ್ಲೇಷಣೆ ರೋಚಕವಾಗಿದೆ. ಹಣ್ಣುಗಳು ಸಾಮಾನ್ಯವಾಗಿ ಸಾತ್ವಿಕ ಗುಣವನ್ನು ಹೊಂದಿರುತ್ತವೆ. ಹಣ್ಣುಗಳಿಂದ ತಯಾರಿಸಿದ ಉಪ್ಪಿನಕಾಯಿ ರಾಜಸಿಕವಾಗಿದೆ! ಅದೇ ಹಣ್ಣುಗಳಿಂದ ತಯಾರಿಸಿದ ಮದ್ಯವು ತಾಮಸಿಕವಾಗುತ್ತದೆ! ಸತ್ಚಿಂತನೆ, ಮಂತ್ರಗಳೊಂದಿಗೆ ಸೇವಿಸಿದರೆ ಆಹಾರವು ಸಾತ್ವಿಕ ಗುಣ ಹೊಂದಿರುತ್ತದೆ. ಹರಟೆ ಹೊಡೆಯುತ್ತ ಆಹಾರ ಸೇವಿಸಿದರೆ ಅದು ರಾಜಸಿಕ ಗುಣ ಪಡೆಯುತ್ತದೆ! ಅದೇ ಆಹಾರವನ್ನು ಮದ್ಯಪಾನ ಮಾಡುತ್ತ ತಿಂದರೆ ತಾಮಸಿಕ ಗುಣದಿಂದ ಕೂಡಿದ ಹೀನ ಆಹಾರವಾಗುತ್ತದೆ! ದುರ್ನಡತೆ ಉಳ್ಳವರು ಕೊಡುವ ಆಹಾರವೂ ತಾಮಸಿಕವೇ. ಬಂಧುಮಿತ್ರರು ನೀಡುವ ಆಹಾರವು ರಾಜಸಿಕವಾದರೆ ಸಜ್ಜನರಿಂದ ನಡೆಯುವ ಅನ್ನಸಂತರ್ಪಣೆ ಸಾತ್ವಿಕವಾಗಿದ್ದು ಶರೀರ, ಮನಸ್ಸಿಗೆ ಹಿತವಾಗುತ್ತದೆ. ಅತೃಪ್ತ ಜನರು, ವಿರೋಧಿಗಳು, ಮೋಸಗಾರರು, ದ್ವೇಷ ಹಾಗೂ ಅಸೂಯೆಪೀಡಿತರು ಬಡಿಸುವ ಅಥವಾ ಅಂತಹವರ ಸ್ಥಳದಲ್ಲಿ ಉಣ್ಣುವ ಆಹಾರವು ತಾಮಸಿಕವಾಗಿರುತ್ತದೆ. ಸಮಾರಂಭಗಳಲ್ಲಿ, ಸತ್ಕಾರಕೂಟಗಳಲ್ಲಿ ಉಪಾಹಾರ ಗೃಹಗಳಲ್ಲಿ ಸಿಗುವ ಆಹಾರವು ಮನಸ್ಸಿನಲ್ಲಿ ರಜೋಗುಣವನ್ನು ಹೆಚ್ಚಿಸುತ್ತವೆ. ದೇವಾಲಯಗಳಲ್ಲಿ, ಸಾಧುಸಂತರಿಂದ, ವಿದ್ವಜ್ಜನರಿಂದ, ಗುರುವರೇಣ್ಯರಿಂದ ಪ್ರಸಾದರೂಪದಲ್ಲಿ ಸ್ವೀಕರಿಸುವ ಆಹಾರವು ಸಾತ್ವಿಕವಾಗಿದ್ದು ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಆರೋಗ್ಯ ಲಭಿಸುವುದು ಜನರಿಗೆ ಅನುಭವ ವೇದ್ಯ ಸಂಗತಿ.
ಎಲಚಿಹಣ್ಣು: ರಕ್ತಶುದ್ಧಿ ಮಾಡುತ್ತದೆ. ಅಲಸಂಡೆ: ಹೊಟ್ಟೆಹುಳ ನಿಯಂತ್ರಕ. ಒಣಶುಂಠಿ: ಮಲಬದ್ಧತೆ ಪರಿಹಾರಕ. ಮೆಕ್ಕೆಜೋಳ: ಮೂತ್ರಪ್ರವಾಹ ಸಲೀಸಾಗಿಸುತ್ತದೆ. ಧಾತಕಿ ಪುಷ್ಪ: ಗರ್ಭಾಶಯವನ್ನು ಶಾಂತಗೊಳಿಸುವುದು.
ಅರ್ಧ ಚಮಚ ಕಾಳುಮೆಣಸು, ನಾಲ್ಕು ಚಮಚ ಹೆಸರುಬೇಳೆ, ಶುಂಠಿ ಸೇರಿಸಿದ ಪೇಯ ಕುಡಿದರೆ ಜ್ವರ ನಿಯಂತ್ರಣ.