ಲೈಫ್‌ಸ್ಟೈಲ್

ಧನ್ವಂತರಿ| ಧರ್ಮಸಾಧನೆಗೆ ಶರೀರವೇ ಮೂಲ

ಮಾನವನಿಗೆ ಇಂದು ಒಳ್ಳೆಯ ಕಾರ್ಯಗಳ ಅನುಷ್ಠಾನದ ವಿಚಾರ ಬಂದಾಗ ಯಾವುದಕ್ಕೂ ಸಮಯವೇ ಇಲ್ಲ ಎಂಬಂತೆ ವರ್ತಿಸಲು ಆರಂಭಿಸುವುದನ್ನು ನೋಡುತ್ತಿದ್ದೇವೆ. ಬೆಳಗ್ಗೆ ಹನ್ನೊಂದು ಗಂಟೆಯ ಹೊತ್ತಿಗೆ ಕೂಡಾ ಬೆಳಗಿನ ಆಹಾರವನ್ನು ಇನ್ನೂ ಸ್ವೀಕರಿಸದೆ ಇರುವವರು ಸಿಗುತ್ತಾರೆ. ಯಾಕೆ ಸೇವಿಸಿಲ್ಲ ಎಂದರೆ ದೇವರಿಗೆ ಪೂಜೆ, ನೈವೇದ್ಯ ಆಗದೆ ನಾವು ಆಹಾರ ಸೇವಿಸುವುದಾದರೂ ಹೇಗೆ ಎಂಬ ಪ್ರತಿಪ್ರಶ್ನೆಯನ್ನು ನಮ್ಮೆಡೆಗೆ ತೂರಿಬಿಡುತ್ತಾರೆ.

ನಿತ್ಯಕರ್ಮಗಳನ್ನು ಮುಗಿಸಿಕೊಂಡು ಹನ್ನೆರಡು ಗಂಟೆಗೆ ಪ್ರಥಮ ಆಹಾರವನ್ನು ತೆಗೆದುಕೊಳ್ಳುತ್ತಾರೆ. ಮಧ್ಯಾಹ್ನದ ಊಟವನ್ನು ಸಂಜೆ 4-5 ಗಂಟೆಗೆ ಪೂರೈಸುತ್ತಾರೆ. ಮತ್ತೆ ತಡರಾತ್ರಿ ಭರ್ಜರಿ ಊಟ ಮಾಡಿ ತಡವಾಯಿತೆಂದು ಬೇಗನೆ ಮಲಗಿಬಿಡುತ್ತಾರೆ. ಕೆಲಸಕ್ಕೆ ಹೊರಹೋಗುವವರು ದಿನಚರಿಯನ್ನು ಈ ರೀತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.

ದಿನಪೂರ್ತಿ ಮನೆಯಲ್ಲೇ ಕೆಲಸಮಾಡುವವರಲ್ಲಿ ಇಂತಹ ಪ್ರವೃತ್ತಿ ಹೆಚ್ಚಾಗಿರುತ್ತದೆ. ಕೆಲವರ ದೇಹ ಇದನ್ನೆಲ್ಲ ತಡೆದುಕೊಳ್ಳುವ ಶಕ್ತಿಯನ್ನು ಪಡೆದಿರುತ್ತದೆ. ಆದರೆ ಹಲವರು ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ತೊಂದರೆಗೆ ಸಿಲುಕಿ ವ್ಯಥೆಪಡಲು ಆರಂಭಿಸುತ್ತಾರೆ. ಹಾಗೆಂದು ಆಹಾರ ಸೇವನೆಯ ಸಮಯವನ್ನು ಸರಿದಾರಿಗೆ ತರಲು ಮನಸ್ಸು ಮಾಡುವುದಿಲ್ಲ. ‘ಸರ್ವೆ ರೋಗಾಪಿ ಮಂದಾಗ್ನೌ’ ಎಂಬಂತೆ ಮೊತ್ತಮೊದಲು ಪಚನ ಪ್ರಕ್ರಿಯೆ ಶಕ್ತಿಗುಂದುತ್ತದೆ. ಆ ಬಳಿಕ ತರಹೇವಾರಿ ಕಾಯಿಲೆಗಳು ದೇಹವನ್ನು ಬಾಧಿಸಲು ಆರಂಭಿಸುತ್ತದೆ. ನಿತ್ಯ ಮಾಡುತ್ತಿದ್ದ ಧರ್ಮಕರ್ಮಗಳ ಅನುಷ್ಠಾನ ತ್ರಾಸದಾಯಕವಾಗುತ್ತದೆ. ಹಾಗಿದ್ದರೆ ನಾವು ಎಡವಿದ್ದೆಲ್ಲಿ?

ಇಂದಿನ ದಿನಮಾನದಲ್ಲಿ ಎಂಟುಗಂಟೆಯ ಹೊತ್ತಿಗೆ ಪ್ರಥಮ ಆಹಾರವನ್ನು ಸೇವಿಸುವುದು ಕ್ಷೇಮಕರ. ಪೂಜಾದಿಗಳನ್ನು ಆ ಬಳಿಕವೂ ಮಧ್ಯಾಹ್ನದ ತನಕ ಮಾಡಬಹುದಲ್ಲ? ಉಪವಾಸದಲ್ಲೇ ಮಾಡಬೇಕಾದ 3-4 ವ್ರತಗಳಂದು ಧರ್ಮಕರ್ಮಗಳನ್ನು ಪೂರೈಸಿದ ನಂತರವೇ ಆಹಾರ ಸೇವಿಸಬಹುದು. ಉಳಿದೆಲ್ಲ ದಿನಗಳಲ್ಲಿ ದೇಹವನ್ನು ದಂಡಿಸಬೇಕಾದ ಅಗತ್ಯವಿಲ್ಲ. ಕ್ಲಪ್ತಕಾಲಕ್ಕೆ ಸಮ್ಯಕ್ ಪ್ರಮಾಣದಲ್ಲಿ ಆಹಾರ ಸೇವಿಸಬೇಕು.

ಸುಪ್ರಸಿದ್ಧ ದೇವಸ್ಥಾನಗಳಲ್ಲಿ ರಾತ್ರಿ ಪೂಜೆಯೂ ಇರುತ್ತದೆ. ಅಲ್ಲಿಯ ಅರ್ಚಕರು ಬೆಳಗಿನಿಂದ ಖಾಲಿ ಹೊಟ್ಟೆಯಲ್ಲಿ ಇರುವುದಿಲ್ಲ ಎಂಬ ಸೂಕ್ಷ್ಮದ ಅರಿವು ನಮಗಿರಬೇಕು. ನಾವು ಮಾಡುವ ನಿತ್ಯಪೂಜೆ ಅದಕ್ಕಿಂತ ದೊಡ್ಡದೇ ಎಂಬುದನ್ನು ಆಲೋಚಿಸಬೇಕು. ಹಿಂದಿನ ಕಾಲದಲ್ಲಿ ದಿನಕ್ಕೆರಡೇ ಬಾರಿ ಆಹಾರ ಸೇವಿಸುವ ಪದ್ಧತಿಯಿತ್ತು.

ದಿನದ ಇಪ್ಪತ್ತನಾಲ್ಕು ಗಂಟೆ ಬೆಳಕಿನ ಕೃತಕ ವ್ಯವಸ್ಥೆಯಿರುವ ಈ ಕಾಲದಲ್ಲಿ ಪರಿಸ್ಥಿತಿ ಹಾಗಿಲ್ಲ. ದಿನಕ್ಕೆ ಮೂರು ಬಾರಿ ಆಹಾರ ಸೇವಿಸುವುದೇ ರೂಢಿಯಾಗಿದೆ. ಹಾಗಿರುವಾಗ ಅದಕ್ಕೆ ಸರಿಯಾಗಿ ನಮ್ಮ ಆಹಾರಪದ್ಧತಿಯನ್ನು ವ್ಯವಸ್ಥೆಗೊಳಿಸಿರಬೇಕು. ಇದನ್ನರಿತೇ ಪ್ರಾಚೀನ ಮಹರ್ಷಿಗಳು ಶರೀರದ ಕಾಳಜಿಯ ಮಹತ್ವವನ್ನು ಒತ್ತಿಹೇಳಿರಬೇಕು.

ಜೀವನದಲ್ಲಿ ಚತುರ್ವಿದ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳ ಸಾಧನೆಗೆ ಆರೋಗ್ಯವು ಮೂಲತಃ ಉತ್ತಮವಾಗಿರಬೇಕು ಎಂಬುದು ಪ್ರಾಚೀನ ಭಾರತದ ಋಷಿಪುಂಗವರ ನಿಖರ ವಾಣಿ. ಇಲ್ಲಿ ಧರ್ಮ ಎಂದರೆ ಕರ್ತವ್ಯಗಳ ಪಾಲನೆ ಎಂಬುದು ಸ್ಥೂಲಾರ್ಥ. ಶಾಸ್ತ್ರಕಾರರು ಧರ್ವನುಷ್ಠಾನಕ್ಕಂತೂ ಶರೀರವನ್ನು ಮೊದಲಾಗಿ ಸರಿಯಿಟ್ಟುಕೊಳ್ಳಬೇಕು ಎಂಬ ವಿಚಾರವನ್ನು ಒತ್ತುಕೊಟ್ಟು ಪ್ರಸ್ತಾಪಿಸಿದ್ದಾರೆ. ಶರೀರವನ್ನು ಸಮಸ್ಥಿತಿಯಲ್ಲಿ ಕಾಯ್ದುಕೊಂಡರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬಹುದು.