ಲೈಫ್‌ಸ್ಟೈಲ್

ಧನ್ವಂತರಿ; ನೀರು ಎಂಬ ಸರ್ವ ಜೀವರಕ್ಷಕ

ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ನಮ್ಮ ದೇಹಕ್ಕೆ ಹೆಚ್ಚಿನ ನೀರಿನ ಆವಶ್ಯಕತೆ ಉಂಟಾಗುತ್ತದೆ. ಬೆವರಿನ ಮೂಲಕ ಸಹ ದೇಹದಲ್ಲಿನ ನೀರಿನಂಶ ಕಡಿಮೆಯಾಗುತ್ತದೆ. ಆದ್ದರಿಂದ ನೀರಿನ ಬಳಕೆಯ ಬಗ್ಗೆ ತಿಳಿಯೋಣ.

ಅಷ್ಟಾಂಗಸಂಗ್ರಹ ಗ್ರಂಥದಲ್ಲಿ ಆಚಾರ್ಯ ವಾಗ್ಭಟರು ‘ರೋಗಿಯಾಗಿರಲಿ ಅಥವಾ ಸ್ವಸ್ಥನೇ ಆಗಿರಲಿ ನೀರಿಲ್ಲದೆ ಇರಲು ಸಾಧ್ಯವಿಲ್ಲ’ (ನ ಹಿ ತೋಯಾತ್ ವಿನಾ ವೃತ್ತಿಃ ಸ್ವಸ್ಥಸ್ಯ ವ್ಯಾಧಿತಸ್ಯ ವಾ |), ‘ಅಜೀರ್ಣದಲ್ಲಿ ನೀರು ಔಷಧವಾದರೆ ಜೀರ್ಣವಾದ ನಂತರ ನೀರು ಬಲವನ್ನು ಹೆಚ್ಚಿಸುವ ಕಾರ್ಯ ಮಾಡುತ್ತದೆ (ಅಜೀರ್ಣೆ ಭೇಷಜಂ ವಾರಿ ಜೀರ್ಣೆ ವಾರಿ ಬಲಪ್ರದಮ್ ಎಂದಿದ್ದಾರೆ. ಬಾಯಾರಿಕೆಯಾದಾಗ ನೀರನ್ನು ಸೇವಿಸದೆ ತಡೆಗಟ್ಟುವುದರಿಂದ ಅನೇಕ ತೊಂದರೆಗಳುಂಟಾಗುತ್ತವೆ. ಆದ್ದರಿಂದ ತೃಷೆಯಾದಾಗ ನೀರನ್ನು ಕುಡಿಯುವುದು ಅಗತ್ಯ.

ನಮ್ಮ ದೇಹದ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದೆ. ಮಾಡುವ ಕೆಲಸ ಸುಲಭವಾಗಿದ್ದರೆ ನೀರು ಕುಡಿದಷ್ಟು ಸುಲಭ ಕೆಲಸ ಎಂಬ ಮಾತನ್ನು ಎಷ್ಟೋ ಬಾರಿ ಹೇಳಿಕೊಳ್ಳುತ್ತೇವೆ. ಆದರೆ ಅನೇಕರಿಗೆ ನೀರನ್ನು ಕುಡಿಯುವುದೇ ಕಷ್ಟದ ಕೆಲಸವಾಗಿಬಿಟ್ಟಿದೆ. ನಿತ್ಯವೂ ನಾವು ಎಷ್ಟು ಪ್ರಮಾಣದಲ್ಲಿ ಘನ ಪದಾರ್ಥವನ್ನು ಸೇವಿಸುತ್ತೇವೆಯೋ ಅದರ ಮೂರು ಪಟ್ಟು ನೀರನ್ನು ಕುಡಿಯಬೇಕು. ಆದ್ದರಿಂದಲೇ ದಿನಕ್ಕೆ ಕನಿಷ್ಠ 3ರಿಂದ 4 ಲೀಟರ್ ನೀರು ಕುಡಿಯುವುದು ಅಗತ್ಯ ಎನ್ನಲಾಗುತ್ತದೆ. ಅದರಲ್ಲಿಯೂ ಹೆಚ್ಚು ಬಿಸಿಲಿನ ವಾತಾವರಣದಲ್ಲಿಯೇ ಕೆಲಸ ಮಾಡುವವರು ಕನಿಷ್ಠ 4 ಲೀಟರ್ ನೀರನ್ನು ಪ್ರತಿದಿನ ಕುಡಿಯುವುದು ಅವಶ್ಯ.

ಊಟ ಮಾಡುವಾಗ ಅತೀ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಒಳ್ಳೆಯದಲ್ಲ. ಆಹಾರವನ್ನು ಒಳಕ್ಕೆ ಕಳಿಸಲು ಕಷ್ಟವಾದ ಸಂದರ್ಭದಲ್ಲಿ ಸ್ವಲ್ಪ ಸ್ವಲ್ಪ ನೀರು ಕುಡಿಯಬಹುದು. ಆದರೆ ಊಟ ಮಾಡಲು ಕುಳಿತಾಗ, ಊಟದಿಂದ ಏಳುವಾಗ ಒಮ್ಮೆಲೇ ಲೋಟಗಟ್ಟಲೆ ನೀರು ಸೇವನೆಯು ತಪ್ಪು.

ಅನೇಕರಿಗೆ ನೀರನ್ನು ಅತಿ ತಂಪಾಗಿಸಿಕೊಂಡು ಕುಡಿಯುವ ರೂಢಿ ಆಗಿರುತ್ತದೆ. ಬೇಸಿಗೆಯಲ್ಲಿ ನೀರನ್ನು ಫ್ರಿಡ್ಜ್​ನಲ್ಲಿಟ್ಟೇ ಕುಡಿಯುವ ಅಭ್ಯಾಸ. ಇದು ಒಳ್ಳೆಯದಲ್ಲ. ಪ್ರಕೃತಿಯು ನಮಗೆ ನೀರನ್ನು ಹೇಗೆ ಕೊಡುತ್ತದೆಯೋ ಅದನ್ನು ಹಾಗೆಯೇ ಸ್ವೀಕರಿಸಿದರೆ ಉತ್ತಮ. ಕಲುಷಿತ ನೀರನ್ನು ಶುದ್ಧ ಮಾಡಿ ಕುಡಿಯುವ ಅನಿವಾರ್ಯತೆ ನಮಗೆದುರಾದರೂ ನೀರಿನ ತಾಪಮಾನವನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಆವಶ್ಯಕತೆ ಇರುವುದಿಲ್ಲ.

ಅಂತಹ ನೀರಿನ ಸೇವನೆಯಿಂದ ಮುಂದೊಂದು ದಿನ ಆಟೋ-ಇಮ್ಯೂನ್ ಕಾಯಿಲೆಗಳು ಕಾಡುವ ಸಾಧ್ಯತೆ ಹೆಚ್ಚು. ಚರ್ಮಸಂಬಂಧಿತ ಸಮಸ್ಯೆಗಳ ರೂಪದಲ್ಲಿ ರುಮಟಾಯ್್ಡ ಆರ್ಥರೈಟಿಸ್​ನ ರೂಪದಲ್ಲಿಯೂ ಕಾಡಬಹುದು.

ತಣ್ಣನೆಯ ನೀರನ್ನು ಕುಡಿಯಲೇಬಾರದು, ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಬೇಕೆಂಬ ಕಲ್ಪನೆ ಎಷ್ಟೋ ಜನರಲ್ಲಿದೆ. ಇದು ಪೂರ್ಣ ಸರಿಯಲ್ಲ. ಆದರೆ ಅಸ್ತಮಾ, ಅಜೀರ್ಣ, ಅಲರ್ಜಿ, ಸಂದುನೋವು, ಬಿಗಿತ ಇರುವಾಗ ತಾಳಿಕೊಳ್ಳಲು ಸಾಧ್ಯವಾಗುವಷ್ಟು ಬಿಸಿನೀರನ್ನು ಕುಡಿಯುವುದು ಅನುಕೂಲಕರ. ಹಗಲಿನಲ್ಲಿ ಚೆನ್ನಾಗಿ ನೀರು ಕುಡಿಯುವುದರಿಂದ ದೇಹ ಶುದ್ಧಿಗೆ, ದೇಹದ ಎಲ್ಲ ಕಾರ್ಯಗಳಿಗೆ ಒಳ್ಳೆಯದು. ಆದರೆ ರಾತ್ರಿ ಮಲಗುವಾಗ ಅಧಿಕ ನೀರು ಕುಡಿಯುವುದರಿಂದ ಮೂತ್ರವಿಸರ್ಜನೆಯು ನಮ್ಮಿಂದ ಕಡಿಮೆಯಾಗಿರುವುದರಿಂದ ಮೂತ್ರಕೋಶಕ್ಕೆ ಕಾಲಾಂತರದಲ್ಲಿ ಸಮಸ್ಯೆ ಆಗಬಹುದು.

ನೀರಿನ ಸಂಗ್ರಹಕ್ಕಾಗಿ ಆದಷ್ಟು ಪ್ಲಾಸ್ಟಿಕ್ ತ್ಯಜಿಸುವುದು ಉತ್ತಮ. ಕ್ಯಾನ್ಸರ್, ಬಂಜೆತನ ಇತ್ತೀಚೆಗೆ ಹೆಚ್ಚಾಗಲು ಪ್ಲಾಸ್ಟಿಕ್​ನಲ್ಲಿ ಸಂಗ್ರಹವಾಗಿರುವಂತಹ ನೀರನ್ನು ಹೆಚ್ಚು ಬಳಕೆ ಮಾಡುವುದು ಕಾರಣ ಎಂದು ಅನೇಕ ಸಂಶೋಧನೆಗಳು ಹೇಳಿವೆ. ಆದ್ದರಿಂದ ಸಾಮಾನ್ಯವಾಗಿ ಸ್ಟೀಲ್ ಪಾತ್ರೆಗಳ ಬಳಕೆ ಅನುಕೂಲಕಾರಿ. ಮಣ್ಣಿನ ಮಡಿಕೆ ಸಹ ಉತ್ತಮ.

ಬೇಸಿಗೆಯಲ್ಲಿ ಅನೇಕ ರೀತಿಯ ತಂಪು ಪಾನೀಯಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇದು ದೇಹಕ್ಕೆ ಅಧಿಕ ಅನನುಕೂಲಗಳನ್ನೇ ತಂದೊಡ್ಡುತ್ತದೆ. ಅದರ ಬದಲಾಗಿ ನೀರಿಗೆ ಲಾವಂಚವನ್ನು ಹಾಕಿ ಕುದಿಸಬೇಕು. ನೀರು ಕುದಿಸಿ ಇಳಿಸಿದ ಕೂಡಲೇ ಆ ನೀರಿಗೆ ಸ್ವಲ್ಪ ಸೋಗದೆಬೇರಿನ ಪುಡಿಯನ್ನು (4 ಚಿಟಿಕೆ) ಹಾಕಿ ಮುಚ್ಚಿಡಬೇಕು. ಇದನ್ನು ಪೂರ್ಣವಾಗಿ ತಣ್ಣಗಾಗಿಸಿ ಕುಡಿಯುವುದರಿಂದ ದೇಹವು ನಿಜವಾದ ಅರ್ಥದಲ್ಲಿ ತಂಪಾಗುತ್ತದೆ. ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿಡಬಹುದು.