ಲೈಫ್‌ಸ್ಟೈಲ್

ಡೆಂಟಲ್​ ಕೇರ್​; ದಂತಚಿಕಿತ್ಸೆ ಮತ್ತು ತಪ್ಪುಕಲ್ಪನೆಗಳು

ಆರೋಗ್ಯಕರ ಜೀವನಶೈಲಿ ನಮ್ಮದಾಗಿಸಿಕೊಳ್ಳಬೇಕಾದರೆ ಬಾಯಿಯ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಇಷ್ಟಾಗಿಯೂ ಕೆಲವರಲ್ಲಿ ದಂತಚಿಕಿತ್ಸೆಯ ಬಗ್ಗೆ ಭಯ, ಆತಂಕಗಳಿವೆ. ಹಲವು ಬಗೆಯ ತಪ್ಪು ಕಲ್ಪನೆಗಳಿಂದಾಗಿ ವೈದ್ಯರ ಬಳಿ ಹೋಗದೆ ಚಿಕಿತ್ಸೆಯನ್ನು ಮುಂದೂಡುತ್ತಾರೆ. ಇದರಿಂದಾಗಿ ಅವರ ಬಾಯಿಯ ಆರೋಗ್ಯವು ಕುಂಠಿತಗೊಳ್ಳುತ್ತದೆ. ಇದರ ಹೊರತಾಗಿಯೂ ಸಾಮಾನ್ಯ ಜನರಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬ ಹಲವು ಗೊಂದಲಗಳಿವೆ. ಅವುಗಳಲ್ಲಿ ಕೆಲವನ್ನು ತಿಳಿದುಕೊಳ್ಳೋಣ.

1. ಗಟ್ಟಿಯಾದ ಬ್ರಷ್​ನಿಂದ ಅಥವಾ ಗಟ್ಟಿಯಾಗಿ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲುಗಳು ಹೆಚ್ಚು ಸ್ವಚ್ಛವಾಗುತ್ತವೆ

ಗಟ್ಟಿಯಾದ ಬ್ರಷ್​ನಿಂದ ಅಥವಾ ಗಟ್ಟಿಯಾಗಿ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲು ಸ್ವಚ್ಛವಾಗುತ್ತದೆ. ಆದರೆ ಇದರಿಂದಾಗಿ ಬಾಯಿಯಲ್ಲಿ ರಕ್ತಸ್ರಾವ ಉಂಟಾಗಬಹುದು ಮತ್ತು ಗಟ್ಟಿಯಾದ ಬ್ರಷ್​ನ ಬಿರುಗೂದಲುಗಳು ವಸಡುಗಳಿಗೆ ಹಾನಿಯನ್ನು ಮಾಡುತ್ತವೆ. ಅಲ್ಲದೆ ಸರಿಯಾದ ಕ್ರಮದಲ್ಲಿ ಹಲ್ಲುಗಳನ್ನು ಶುಚಿಗೊಳಿಸದಿದ್ದರೆ ವಸಡು ಕೆಳಜಾರಿ, ಇದರಿಂದ ಸಂವೇದನೆ ಸೂಕ್ಷ್ಮಗೊಳ್ಳಬಹುದು. ಆದ್ದರಿಂದ ಮೃದುವಾದ ಅಥವಾ ಅಲ್ಪ ಪ್ರಮಾಣದಲ್ಲಿ ಬಿರುಸಾಗಿರುವ ಬ್ರಷ್ ಉಪಯೋಗಿಸುವುದು ಉತ್ತಮ. ಇದರ ಜತೆಯಲ್ಲಿ ನಾಲಿಗೆ ಮತ್ತು ವಸಡುಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಬಹಳ ಮುಖ್ಯ.

2. ಸ್ವಚ್ಛ (ಸ್ಕ್ಯಾಲಿಂಗ್) ಮಾಡಿಸಿಕೊಂಡರೆ ಹಲ್ಲುಗಳು ಸಡಿಲವಾಗುತ್ತವೆ

ಇದು ಬಹಳ ಜನರನ್ನು ಕಾಡುವ ಪ್ರಶ್ನೆ. ಆದರೆ ಇದು ಕೇವಲ ತಪ್ಪು ಕಲ್ಪನೆ. ಹಲ್ಲುಗಳನ್ನು ಸ್ವಚ್ಛ ಮಾಡಿಸುವುದು ಒಂದು ರೋಗನಿರೋಧಕ ಚಿಕಿತ್ಸೆಯಾಗಿದೆ. ವಸಡಿನಲ್ಲಿ ಸೋಂಕು ಇದ್ದಾಗ ಅಥವಾ ಅಧಿಕವಾದಲ್ಲಿ ಮೂಳೆಗಳು ಸವೆದು ಹಲ್ಲುಗಳು ಸಡಿಲಗೊಳ್ಳುತ್ತವೆ.

ಇದನ್ನು ತಪ್ಪಿಸಲು ಪ್ರತಿ ಆರು ತಿಂಗಳಿಗೆ ಒಮ್ಮೆಯಾದರೂ ವೈದ್ಯರ ಬಳಿ ಹಲ್ಲುಗಳನ್ನು ಶುಚಿಗೊಳಿಸಿಕೊಳ್ಳುವುದು ಉತ್ತಮ. ಇನ್ನು ಹಲ್ಲುಗಳ ಮೇಲೆ ಹಲದಿ ಬಣ್ಣದ ಪೊರೆ ಅಥವಾ ಇನ್ನಿತರ ಕಶ್ಮಲಗಳಿದ್ದು ಅವುಗಳನ್ನು ಸ್ಕ್ಯಾಲಿಂಗ್ ಮೂಲಕ ತೆಗೆಯದಿದ್ದಲ್ಲಿ ವಸಡಿನ ಕಾಯಿಲೆಗೆ ದಾರಿಯಾಗುತ್ತದೆ ಮತ್ತು ಹಲ್ಲುಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

3. ಹಲ್ಲುಗಳನ್ನು ಕೀಳುವಾಗ ಕಣ್ಣುಗಳಿಗೆ ತೊಂದರೆಯಾಗುತ್ತದೆ

ಬಹಳಷ್ಟು ಜನರಲ್ಲಿ ಈ ಅನುಮಾನವಿದೆ. ಹಲ್ಲುಗಳು ಮತ್ತು ಕಣ್ಣುಗಳಿಗೆ ಪ್ರತ್ಯೇಕ ನರಗಳಿದ್ದು ಹಲ್ಲುಗಳನ್ನು ತೆಗೆಯುವಾಗ ಕಣ್ಣಿಗೆ ಅಥವಾ ದೃಷ್ಟಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.

  • ನನ್ನ ಅಮ್ಮನಿಗೆ ಹಲ್ಲುಗಳಲ್ಲಿ ಬೇನೆಯಿದ್ದು, ಊಟ ಮಾಡುವಾಗ ನೋಯುತ್ತವೆ. ವಸಡುಗಳು ಸಡಿಲಗೊಂಡಂತೆ ಅನಿಸುತ್ತದೆ. ಪರಿಹಾರ ತಿಳಿಸಿ.

| ಗಿರೀಶ್ ಚಿನಿವಾಲ್

ನೀವು ತಾಯಿಯ ವಯಸ್ಸನ್ನು ತಿಳಿಸಿಲ್ಲ. ಒಮ್ಮೆ ಸ್ಕ್ಯಾಲಿಂಗ್ ಮತ್ತು ಪಾಲಿಷಿಂಗ್ ಮಾಡಿಸಿಕೊಳ್ಳಬಹುದು. ವಸಡು ಸಡಿಲಗೊಂಡ ಹಾಗೆ ಅನ್ನಿಸುತ್ತಿದ್ದರೆ ದವಡೆಯ ಮೂಳೆ ಸವೆದಿದೆಯೇ ಎಂದು ಪರೀಕ್ಷಿಸಬೇಕಾಗುತ್ತದೆ. ಆದ್ದರಿಂದ ವೈದ್ಯರನ್ನು ಭೇಟಿ ಮಾಡಿ ತಕ್ಕ ಚಿಕಿತ್ಸೆಯನ್ನು ಪಡೆಯುವುದು ಉತ್ತಮ.

ನೀವೂ ಪ್ರಶ್ನೆ ಕೇಳಿ

ಮನುಷ್ಯನ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಕಾರಣವಾಗುವ ಶರೀರದ ಬಹು ಮುಖ್ಯ ಭಾಗಗಳಲ್ಲಿ ಹಲ್ಲು ಕೂಡ ಒಂದು. ಓದುಗರು ಹಲ್ಲುಗಳ ಕುರಿತ ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆಯ ಮೇರೆಗೆ ದಂತವೈದ್ಯರು ಸಲಹೆ, ಸೂಚನೆ ನೀಡಲಿದ್ದಾರೆ.

ವಿಳಾಸ: ಸಂಪಾದಕರು, ಡೆಂಟಲ್ ಕೇರ್, ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲನೇ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ,  ಬೆಂಗಳೂರು - 560 018