ಹಾಗಾದರೆ ಹಿರಿಯ ನಾಗರಿಕರಲ್ಲಿ ಸಾಮಾನ್ಯವಾಗಿ ಕಾಣುವ ಹಲ್ಲಿನ ಸಮಸ್ಯೆಗಳು ಯಾವುವು ಎಂದು ನೋಡೋಣ. ಬಾಯಿ ಒಣಗಿದಂತಾಗುವುದು, ಹಲ್ಲಿನ ಬೇರುಗಳಲ್ಲಿ ಹುಳುಕು, ವಸಡಿನ ಕಾಯಿಲೆ, ಹಲ್ಲು ಸೂಕ್ಷ್ಮಗೊಳ್ಳುವುದು (sensitivity) ಹಾಗೂ ಹಲ್ಲು ಬೀಳುವುದು.
ಲಾಲಾರಸದ ಹರಿವು ಕಡಿಮೆಯಾದಾಗ ಬಾಯಿಯು ಒಣಗಿದಂತಾಗುತ್ತದೆ. ಇದು ಕೆಲವು ಔಷಧಗಳ ಅಡ್ಡಪರಿಣಾಮಗಳಿಂದ ಆಗಬಹುದು ಅಥವಾ ಕ್ಯಾನ್ಸರ್ ಚಿಕಿತ್ಸೆ, ಮಧುಮೇಹ, sjogren's syndromeನಿಂದಲೂ ಒಣಬಾಯಿ ಉಂಟಾಗಬಹುದು.
ಇದನ್ನು ನಿವಾರಿಸಲು ಪದೇಪದೆ ನೀರನ್ನು ಕುಡಿಯುವುದು, ಸಕ್ಕರೆರಹಿತ ಕ್ಯಾಂಡಿ ಅಥವಾ ಚ್ಯೂಯಿಂಗ್ ಗಮ್ ಸೇವನೆ ಸಹಾಯ ಮಾಡುತ್ತದೆ. ವೈದ್ಯರೊಂದಿಗೆ ಸಮಾಲೋಚಿಸಿ ಸರಿಯಾದ ಚಿಕಿತ್ಸೆಯನ್ನು ಪಡೆಯಬಹುದು. ಮತ್ತೂ ಕೆಲವರಲ್ಲಿ ಆಹಾರದ ರುಚಿ ಗ್ರಹಿಸುವುದರಲ್ಲಿಯು ಕಷ್ಟವಾಗುತ್ತದೆ.
ವಯಸ್ಸಾದಂತೆ ಕೆಲವರಲ್ಲಿ ಹಲ್ಲಿನ ಸುತ್ತಲಿರುವ ವಸಡು ಕೆಳಗೆ ಜರುಗಿ ಹಲ್ಲಿನ ಬೇರುಗಳು ಕಾಣತೊಡಗುತ್ತವೆ. ಇದರಿಂದ sensitivity ಉಂಟಾಗುತ್ತದೆಯಲ್ಲದೆ ಬೇರುಗಳಲ್ಲಿ ಹುಳುಕು ಕಾಣಿಸಿಕೊಳ್ಳುತ್ತದೆ. ಇನ್ನು ಹಲ್ಲುಗಳನ್ನು ಸರಿಯಾಗಿ ಶುಚಿಗೊಳಿಸದಿದ್ದರೆ ಹಲ್ಲಿನ ಮೇಲೆ ಪದರವುಂಟಾಗಿ ವಸಡಿನ ಕಾಯಿಲೆಗೆ ಕಾರಣವಾಗುತ್ತದೆ. ಇದರಿಂದಾಗಿ ವಸಡಿನಲ್ಲಿ ಬಾವು ಉಂಟಾಗಿ ರಕ್ತಸ್ರಾವವಾಗಬಹುದು. ಈ ಸೋಂಕು ಹಲ್ಲಿನ ಸುತ್ತಲಿನ ಮೂಳೆಯನ್ನು ತಲುಪಿದಲ್ಲಿ ಹಲ್ಲು ಸಡಿಲಗೊಂಡು ಬೀಳಬಹುದು. ಕಳೆದುಕೊಂಡ ಹಲ್ಲುಗಳನ್ನು ತಕ್ಷಣ ಕೃತಕ ಹಲ್ಲುಗಳನ್ನು ಅಳವಡಿಸದಿದ್ದಲ್ಲಿ ಅಕ್ಕಪಕ್ಕದ ಹಲ್ಲುಗಳು ಆ ಜಾಗವನ್ನು ತುಂಬುತ್ತವೆ. ಇದರಿಂದ ದವಡೆ ಮೂಳೆಗಳು ಸವೆಯುತ್ತದೆ.
ಇನ್ನು ಕೆಲವರಲ್ಲಿ ಹಲ್ಲುಗಳು ಸವೆದಿರುತ್ತವೆ. ಇವು ಬಹಳ ಸುಲಭವಾಗಿ ಮುರಿತಕ್ಕೆ ಒಳಗಾಗುತ್ತವೆ. ಮತ್ತೆ ಕೆಲವರಲ್ಲಿ ಕೇವಲ ಬೇರುಗಳು ಮಾತ್ರ ಉಳಿದುಕೊಂಡಿರುತ್ತವೆ. ಇವುಗಳನ್ನು ತೆಗೆಸಿಕೊಳ್ಳುವುದು ಸೂಕ್ತ. ಇಲ್ಲವಾದಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೃತಕ ಹಲ್ಲುಗಳನ್ನು ಬಳಸುತ್ತಿದ್ದಲ್ಲಿ ಅದು ಬಾಯಿಗೆ ಸರಿಯಾಗಿ ಹೊಂದಿಕೊಂಡಿರುವುದೇ ಎಂದು ಪರೀಕ್ಷಿಸಬೇಕು. ಹೊಂದಿಕೊಂಡಿಲ್ಲವಾದಲ್ಲಿ (ಬಿಗಿಯಾಗಿದ್ದರೆ) ಕೂಡಲೇ ದಂತವೈದ್ಯರನ್ನು ಕಂಡು ಸರಿಪಡಿಸಿಕೊಳ್ಳಬೇಕು. ವೈದ್ಯರ ಸಲಹೆಯಂತೆ ಪ್ರತಿದಿನವೂ ಅದನ್ನು ಸ್ವಚ್ಛಗೊಳಿಸಿ ಬಳಸಬೇಕು.
ಹಿರಿಯರು ಹಲ್ಲುಗಳ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು? ದೈಹಿಕ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲನ ಮತ್ತು ಪೌಷ್ಟಿಕಾಂಶವುಳ್ಳ ಆಹಾರವು ಬಹು ಮುಖ್ಯ. ಪ್ರತಿದಿನ ಎರಡು ಸಲ ಮೃದುವಾದ ಬ್ರಷ್ನಿಂದ ಹಲ್ಲುಗಳನ್ನು ಶುಚಿಗೊಳಿಸಬೇಕು. ಅಲ್ಲದೆ ದಿನಕ್ಕೆ ಒಮ್ಮೆಯಾದರೂ ದಾರವನ್ನು ಬಳಸಿ ಹಲ್ಲುಗಳ ನಡುವಣ ಸಂದುಗಳನ್ನು ಶುಚಿಗೊಳಿಸಬೇಕು. ಜತೆಗೆ ಆಂಟಿಸೆಪ್ಟಿಕ್ ಮೌತ್ ವಾಷ್ ಬಳಸಬಹುದು. ನಂತರ ವಸಡನ್ನು ಬೆರಳಿನಿಂದ ಮಸಾಜ್ ಮಾಡುವುದರಿಂದ ರಕ್ತಸಂಚಾರವು ಉತ್ತಮಗೊಳ್ಳುತ್ತದೆ. ಕನಿಷ್ಠ ಆರು ತಿಂಗಳಿಗೆ ಒಮ್ಮೆಯಾದರೂ ನಿಯತಯಾಗಿ ದಂತವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಪಡೆಯುವುದು ಉತ್ತಮ.