Mrunal Thakur: ಭಾರತದಲ್ಲಿ ಬೇಸಿಗೆ ಎಂದರೆ ಕೇವಲ ಕಡು ಬಿಸಿಲಲ್ಲ, ಅದರಾಚೆಗೆ ಬಾಲ್ಯದ ಸುಂದರ ನೆನಪುಗಳನ್ನು ಮತ್ತು ನಾಸ್ಟಾಲ್ಜಿಯಾವನ್ನು ಹುಟ್ಟುಹಾಕುವ ಅದ್ಭುತ ಕಾಲೋಚಿತ ಸುವಾಸನೆಗಳ ಕಾಲ. ಮಾವಿನ ಹಣ್ಣಿನಷ್ಟೇ ತೀವ್ರವಾಗಿ ನಮ್ಮ ಹಳೆಯ ನೆನಪುಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಮತ್ತೊಂದು ವಿಶಿಷ್ಟ ಹಣ್ಣು ಎಂದರೆ ಅದು 'ನೇರಳೆ ಹಣ್ಣು'. ಈ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ, ಅದರ ವಿಶಿಷ್ಟ ಬಣ್ಣ ಮತ್ತು ಒಗರು-ಸಿಹಿ ಮಿಶ್ರಿತ ರುಚಿ ಪ್ರತಿಯೊಬ್ಬರಲ್ಲೂ ಬಾಲ್ಯದ ನೆನಪುಗಳನ್ನು ಜಾಗೃತಗೊಳಿಸುತ್ತದೆ.
ಈ ಸುಂದರವಾದ ನೇರಳೆ ಬಣ್ಣದ ಹಣ್ಣಿನ ಆಗಮನವನ್ನು ಅತ್ಯಂತ ವಿಭಿನ್ನವಾಗಿ ಆಚರಿಸಿರುವ ಜಾಗತಿಕ ಮಟ್ಟದ ಪ್ರಸಿದ್ಧ ಸೆಲೆಬ್ರಿಟಿ ಬಾಣಸಿಗ ಖನ್ನಾ, ಬಾಲಿವುಡ್‌ನ ಜನಪ್ರಿಯ ನಟಿ ಮೃಣಾಲ್ ಠಾಕೂರ್ ಅವರಿಗೆ ಮೀಸಲಾದ ವಿಶೇಷ ಮತ್ತು ರಿಫ್ರೆಶ್ ಪಾನೀಯವೊಂದನ್ನು ಅನಾವರಣಗೊಳಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ ಪಾನೀಯ ತಯಾರಿಸುವ ಪ್ರಕ್ರಿಯೆಯನ್ನು ಹಂಚಿಕೊಂಡ ಖನ್ನಾ, ಭಾರತದ ಪ್ರತಿ ಬೇಸಿಗೆಯಲ್ಲಿ, ನೇರಳೆ ಹಣ್ಣಿನ ಆಗಮನವು ಋತುವೇ ಪಿಸುಗುಟ್ಟುವ ರಹಸ್ಯದಂತೆ ಭಾಸವಾಗುತ್ತದೆ. ಮಕ್ಕಳ ನಾಲಿಗೆ ನೇರಳೆ ಬಣ್ಣಕ್ಕೆ ತಿರುಗುತ್ತದೆ. ನೆನಪುಗಳು ಸಹ ಆ ಆಳವಾದ ನೇರಳೆ ಕಲೆಯನ್ನು ಹೊತ್ತಿರುವಂತೆ ತೋರುತ್ತದೆ. ಇಂದು, ನಾವು ಆ ಹಳೆ ನೆನಪನ್ನು ನಟಿ ಮೃಣಾಲ್ ಮೂಲಕ ಮರುಸೃಷ್ಟಿಸುತ್ತಿದ್ದೇವೆ. ಇದಕ್ಕೆ ಕೇವಲ ನೇರಳೆ ಹಣ್ಣು, ಯುಜು ನಿಂಬೆ, ಕೆವ್ರಾ ಮತ್ತು ಕಪ್ಪು ಉಪ್ಪಿನ ರಿಫ್ರೆಶ್ ಮಿಶ್ರಣವಿದ್ದರೆ ಸಾಕು ಎಂದು ಬರೆದಿದ್ದಾರೆ.
ಸೃಷ್ಟಿಯ ಹಿಂದಿನ ಪ್ರಯಾಣದ ಭಾಗವಾಗಿದ್ದಕ್ಕಾಗಿ ಬಾಣಸಿಗ ಮೃಣಾಲ್ ಠಾಕೂರ್ ಅವರಿಗರ ಧನ್ಯವಾದ ತಿಳಿಸಿದ್ದಾರೆ. ಆದಾಗ್ಯೂ, ನಟಿ ತನ್ನ ಹೆಸರಿನ ಆ ಪಾನೀಯವನ್ನು ಸ್ವತಃ ರುಚಿ ನೋಡಿದ ನಟಿ, ಅದು "ತುಂಬಾ ರುಚಿಕರವಾಗಿದೆ" ಎಂದು ಮನಸಾರೆ ಹೊಗಳಿದ್ದು, ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕಳೆದ ತಿಂಗಳು, ಪ್ರಸಿದ್ಧ ಶೆಫ್ ವಿಕಾಸ್ ಖನ್ನಾ ಅವರು ಒಡಿಶಾದ ಸಾಂಪ್ರದಾಯಿಕ ಆಹಾರವಾದ 'ದಹಿಬರಾ ಆಲೂದಮ್' ಅನ್ನು ನ್ಯೂಯಾರ್ಕ್‌ನಲ್ಲಿರುವ ತಮ್ಮ 'ಬಂಗಲೋ' (Bungalow) ರೆಸ್ಟೋರೆಂಟ್‌ಗೆ ಪರಿಚಯಿಸಿದರು. ಇದಕ್ಕೆ ಗ್ರಾಹಕರಿಂದ ತಕ್ಷಣವೇ ಮತ್ತು ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಅನೇಕ ಗ್ರಾಹಕರು ಇದನ್ನು ಮೊದಲ ಬಾರಿಗೆ ಸವಿದು, ಇದರ ವಿಶಿಷ್ಟ ಮಸಾಲೆ ಮತ್ತು ರುಚಿಯನ್ನು ತುಂಬಾ ಇಷ್ಟಪಟ್ಟರು.
ಜನರು ಈ ಖಾದ್ಯವನ್ನು ಸವಿಯುತ್ತಿರುವ ವಿಡಿಯೋ ಒಂದನ್ನು ಖನ್ನಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರೆಸ್ಟೋರೆಂಟ್‌ಗೆ ಹರಿದುಬಂದ ಭಾರಿ ಜನಸಂದಣಿ ಮತ್ತು ಗ್ರಾಹಕರ ನಿರಂತರ ವಿನಂತಿಗಳ ಕಾರಣದಿಂದಾಗಿ, ನಿಗದಿಪಡಿಸಿದ ದಿನಾಂಕಗಳಿಗಿಂತಲೂ ಹೆಚ್ಚಿನ ದಿನಗಳ ಕಾಲ ಈ ಖಾದ್ಯವನ್ನು ಗ್ರಾಹಕರಿಗೆ ಉಣಬಡಿಸಲಾಯಿತು.
ನಾವು 'ಭಾರತವನ್ನು ಸಂಭ್ರಮಿಸುವ ಅಭಿಯಾನದ ಭಾಗವಾಗಿ, ಪ್ರತಿ ದಿನ ಒಂದು ನಿರ್ದಿಷ್ಟ ಪ್ರದೇಶದ ಒಂದು ವಿಶೇಷ ಖಾದ್ಯಕ್ಕೆ ಗೌರವ ಸಲ್ಲಿಸುತ್ತಿದ್ದೇವೆ. ನಿನ್ನೆ ಒಡಿಶಾದ ಸಾಂಪ್ರದಾಯಿಕ 'ದಹಿ ಬರಾ ಆಲೂ ದಮ್' ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿತ್ತು. ಆದರೆ ನಮ್ಮ ಗ್ರಾಹಕರಿಂದ ಬಂದ ಅಪಾರ ಪ್ರೀತಿ ಮತ್ತು ವಿಶೇಷ ವಿನಂತಿಗಳ ಕಾರಣದಿಂದಾಗಿ, ನಮ್ಮ 'ಟೀಮ್ ಬಂಗಲೋ' ಇದನ್ನು ಮತ್ತೊಂದು ದಿನಕ್ಕೆ ವಿಸ್ತರಿಸುತ್ತಿದೆ. ಆದ್ದರಿಂದ ಇಂದು ರಾತ್ರಿಯೂ ನಾವು ಒಡಿಶಾದ ಕಟಕ್‌ನ ಬೀದಿಗಳ ಈ ಅದ್ಭುತ ರುಚಿಯನ್ನು ನ್ಯೂಯಾರ್ಕ್‌ನ ಈಸ್ಟ್ ವಿಲೇಜ್‌ನಲ್ಲಿ ಉಣಬಡಿಸುವುದನ್ನು ಮುಂದುವರಿಸಲಿದ್ದೇವೆ. ಇದು ಕೇವಲ ಆಹಾರವಲ್ಲ; ನೆನಪು, ಮಸಾಲೆ, ಆಪ್ತತೆ ಮತ್ತು ಸಂಭ್ರಮದಲ್ಲಿ ಬೇರೂರಿರುವ ಒಂದು ಅಪರೂಪದ ಖಾದ್ಯವಾಗಿದೆ ಎಂದು ಪೋಸ್ಟ್ನ್ನು ಹಂಚಿಕೊಂಡಿದ್ದರು (ಏಜೆನ್ಸೀಸ್).