ಲೈಫ್‌ಸ್ಟೈಲ್

ಧನ್ವಂತರಿ: ಹಿತಭಾಷಿ, ಮಿತಭಾಷಿ, ಸುಭಾಷಿ

‘ಯಾವ ವ್ಯಕ್ತಿಯ ಮನಸ್ಸಿನಲ್ಲಿ ಒಂದು, ಮಾತಿನಲ್ಲೂ ಅದೇ, ಕೃತಿಯಲ್ಲಿಯೂ ಅದುವೇ ಇದ್ದು ಮೂರೂ ಒಂದೇ ಆಗಿರುತ್ತದೋ ಅಂತಹ ಸಜ್ಜನರು ಮಹಾತ್ಮರಾಗುತ್ತಾರೆ. ಮನಸ್ಸಿನಲ್ಲಿ ಒಂದು, ಮಾತಿನಲ್ಲಿ ಇನ್ನೊಂದು, ನಡೆಯಲ್ಲಿ ಮತ್ತೊಂದು ಅಭಿವ್ಯಕ್ತಿಯಿರುವ ವ್ಯಕ್ತಿಗಳು ದುರಾತ್ಮರಾಗುತ್ತಾರೆ’ ಎಂಬುದು ಸುಪ್ರಸಿದ್ಧ ಸುಭಾಷಿತವೊಂದರ ತಿರುಳು. ಇದುವೇ ನಿಜಾರ್ಥದಲ್ಲಿ ಸರಳ ಬದುಕು. ಮಾತಿಗೆ ಅದರದೇ ಆದ ಪಾವಿತ್ರ್ಯದೆ. ಪ್ರಮಾಣ ಮಾಡಿ ಹೇಳಿದರೆ ಮಾತ್ರ ಅದು ಖಾತರಿಯಾಗಿ ಮಾತುಗಳಿಗೆ ಮಹತ್ವ ಬರುವುದಲ್ಲ. ಆಡಿದ ಮಾತುಗಳೆಲ್ಲವೂ ಪ್ರಮಾಣವಾಗಿರಬೇಕು. ಅದುವೇ ಸ್ವಾಸ್ಥ್ಯ ಪ್ರತಿಫಲನ ಎಂದು ವಾಚಿಕ ಸದ್​ವೃತ್ತವನ್ನು ವಿವರಿಸುತ್ತ ಆಯುರ್ವೆದವು ಶ್ರುತಪಡಿಸಿದೆ.

ಸತ್ಯವನ್ನೇ ಆಡಬೇಕು, ಪ್ರಿಯವಾದುದನ್ನೇ ಹೇಳಬೇಕು, ಸತ್ಯವನ್ನು ಇನ್ನೊಬ್ಬರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಹೇಳಬಾರದು, ಹಿತವಾಗಿದ್ದರೂ ಅಸತ್ಯವೆಂದೂ ಬಾಯಿಯಿಂದ ಹೊರಬೀಳಬಾರದೆಂಬ ಉಪನಿಷತ್ತಿನ ವಾಕ್ಯಗಳು ಸನಾತನ ಭಾರತೀಯ ಪರಂಪರೆಯ ಉತ್ಕೃಷ್ಟತೆಯ ದ್ಯೋತಕವಾಗಿದೆ. ಇದನ್ನೇ ಆಯುರ್ವೆದದ ಮೂಲಗ್ರಂಥಗಳಲ್ಲೂ ಕಾಣಬಹುದು. ಆಯುರ್ವೆದದ ಆದಿಗ್ರಂಥ ಚರಕಸಂಹಿತೆಯ ಮಾತಿನ ಶಿಷ್ಟಾಚಾರ ಪ್ರಾರಂಭವಾಗುವುದೇ ‘ನ ಅನೃತಂ ಬ್ರೂಯಾತ್’ ಅರ್ಥಾತ್ ‘ಅಸತ್ಯವನ್ನು ಹೇಳಬೇಡ’ ಎಂಬ ವಚನದೊಂದಿಗೆ! ಮುಂದುವರಿಯುತ್ತ, ವ್ಯಕ್ತಿಯು ತೂಕವಿಲ್ಲದ ಮಾತುಗಳನ್ನಾಡುವ ವಾಚಾಳಿಯಾಗಬಾರದು. ಹಾಗೆಂದು ಬಂಧುಗಳೊಡನೆ, ಅನುಯಾಯಿಗಳೊಡನೆ, ಕಷ್ಟಕಾಲದಲ್ಲಿ ಸಹಾಯಕ್ಕೆ ನಿಂತುಕೊಳ್ಳುವವ ರೊಂದಿಗೆ, ವೈಯಕ್ತಿಕ ಅಥವಾ ಕುಟುಂಬದ ಗೌಪ್ಯ ವಿಚಾರಗಳನ್ನು ತಿಳಿದವರೊಂದಿಗೆ ಸಂಬಂಧವನ್ನು ಕಡಿದುಕೊಳ್ಳಲೂ ಬಾರದು. ಬೇರೆಯವರ ದೋಷಗಳನ್ನಾಗಲೀ ರಹಸ್ಯಗಳನ್ನಾಗಲೀ ಇತರರೆದುರು ಮಾತನಾಡಬಾರದು. ಇಂದಿಗೂ ಅಷ್ಟೇ. ಯಾವುದೋ ಚಿಲ್ಲರೆ ಕಾರಣ ನೀಡಿ ತಮ್ಮ ಆಪ್ತ ಬಂಧುಗಳಿಗೆ ಬಹಿಷ್ಕಾರ ಹಾಕಿ ಸದಾಕಾಲ ಘರ್ಷಣೆಗೆ ಇಳಿಯುವವರು ಸಮಾಜದಲ್ಲಿ ಸಾಕಷ್ಟು ಜನರಿರುತ್ತಾರೆ. ಈ ವಿಚಾರಕ್ಕೆ ಸಂಬಂಧವೇ ಇಲ್ಲದ ಅನೇಕ ಪೀಳಿಗೆಗಳವರೆಗೆ ಈ ಬಹಿಷ್ಕಾರ ಮುಂದುವರಿಯುವುದು ವಿಪರ್ಯಾಸ. ಇದರಿಂದ ಮನೆಯ ಆರೋಗ್ಯವೂ ಹಾಳು, ಸಮಾಜದ ಆರೋಗ್ಯವೂ ಹಾಳು, ಸ್ವಾಸ್ಥ್ಯ ಸಾಧನೆ ಆಗುವುದಿಲ್ಲವೆಂಬುದು ಚರಕಸಂಹಿತೆಯ ಕಾಲದ ಮಾತು! ಇನ್ನು ಪರರ ನಿಂದೆ ಮಾಡುವ ಚಟವಿರುವವರ ಮನಸ್ಸೇ ಸರಿಯಿಲ್ಲವೆಂದರ್ಥ, ಸ್ವಾಸ್ಥ್ಯಂತೂ ಅವರಿಗೆ ದೂರದ ಮಾತು.

ನಾವು ಸದಾ ಸತ್ಯಸಂಧರಾಗಿರಬೇಕು, ಶಾಂತಚಿತ್ತರಾಗಿರ ಬೇಕು, ಪರರ ಮಾತುಗಳನ್ನು ಸಹಿಸುವವರಾಗಿರಬೇಕು, ಸಿಡಿಮಿಡಿಗೊಳ್ಳುವ ಮನಸ್ಸನ್ನು ನಿಯಂತ್ರಿಸಲು ಬರುವವರಾಗ ಬೇಕು, ಪ್ರಶಾಂತ ಗುಣದರ್ಶಿಗಳಾಗಿರಬೇಕು, ಮೋಹ ಹಾಗೂ ದ್ವೇಷ ಎರಡನ್ನೂ ಮೀರಿ ನಿಲ್ಲುವ ಹೃನ್ಮನಗಳನ್ನು ಹೊಂದಿದ್ದರೆ ಮಾತ್ರವೇ ಸ್ವಸ್ಥಜೀವನ ಸಾಧ್ಯ ಎಂಬುದನ್ನು ವಿವರಿಸಿದ ಪರಿಯಂತೂ ಆರೋಗ್ಯವಂತ ಸಮಾಜದ ಒಕ್ಕಣಗೆ ವಿಭಿನ್ನ ಭಾಷ್ಯ ಬರೆದಂತಿದೆ. ಜ್ಞಾನಿ ಎನಿಸಿಕೊಂಡವ ಇತರರನ್ನು ಓಲೈಸಿಕೊಳ್ಳಬೇಕಾದರೆ ಜನರ ಮನ ತಿಳಿದು ಮಾತನಾಡಲು ಕಲಿಯಬೇಕು ಎಂದಿದೆ ಭಾವಪ್ರಕಾಶ ಗ್ರಂಥ. ಮಾತನ್ನೂ ಆಹಾರವನ್ನೂ ತುಲನೆ ಮಾಡಿ ವಿಮಶಿಸಿರುವುದು ರೋಚಕವಾಗಿದೆ. ಮಾತು ಹೇಗಿರಬೇಕು, ಆಹಾರ ಹೇಗಿರಬೇಕು ಎಂಬ ಎರಡು ಪ್ರಶ್ನೆಗಳಿಗೂ ಉತ್ತರ ಒಂದೇ! ಹಿತವಾಗಿರಬೇಕು, ಮಿತವಾಗಿರಬೇಕು, ಸತ್ತ್ವಭರಿತವಾಗಿರಬೇಕು, ಇಂದ್ರಿಯಕ್ಕೆ ಆಪ್ಯಾಯಮಾನವಾಗಿರಬೇಕು, ಕಾಲಕ್ಕೆ ತಕ್ಕುದಾಗಿರಬೇಕು ಹಾಗೂ ಸುಮಧುರವಾಗಿರಬೇಕು! ಇಂತಹ ಜೀವನ ನಮ್ಮೆಲ್ಲರದಾಗಿರಲಿ.