ಸಾಮಾನ್ಯವಾಗಿರುವ ವಕ್ರದಂತ ಸಮಸ್ಯೆಯು ಮುಖದ ಅಂದ ಕುಂದಿಸುತ್ತದೆ. ಇದರಿಂದಾಗಿ ಹಲವು ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ಕಾಣಬಹುದು. ವಕ್ರದಂತ ಸಮಸ್ಯೆಯಿಂದಾಗಿ ಆಹಾರವನ್ನು ಅಗಿಯಲು ತೊಂದರೆಯಾಗುತ್ತದೆ. ಬಾಯಿಯ ಆರೋಗ್ಯ ಉತ್ತಮ ಸ್ಥಿತಿಯಲ್ಲಿರಿಸಲು ಕಷ್ಟವಾಗುತ್ತದೆ. ಹಲ್ಲು ಹುಳುಕಾಗುವ ಸಾಧ್ಯತೆ ಹೆಚ್ಚು.
ದಂತವೈದ್ಯಶಾಸ್ತ್ರದಲ್ಲಿ ವಕ್ರದಂತ ಸಮಸ್ಯೆಯನ್ನು ಸರಿಪಡಿಸುವ ವೈದ್ಯರನ್ನು ಆಥೋಡೆಂಟಿಸ್ಟ್ (ಸುದಂತ ಯೋಜಕ) ಎಂದು ಕರೆಯುತ್ತಾರೆ. ವಕ್ರದಂತವನ್ನು ಸರಿಪಡಿಸಲು ಹಲವು ಚಿಕಿತ್ಸಾವಿಧಾನಗಳಿದ್ದು ಚಿಕಿತ್ಸೆಯು ಪೂರ್ಣಗೊಳ್ಳಲು ಒಂದರಿಂದ ಮೂರು ವರ್ಷಗಳು ಬೇಕಾಗುತ್ತವೆ. ಇದು ಸಮಸ್ಯೆಯ ತೀವ್ರತೆಯ ಮೇಲೆ ಅವಲಂಬಿಸಲ್ಪಟ್ಟಿರುತ್ತದೆ. ದವಡೆಯ ಮೂಳೆಗಳಲ್ಲಿ ವ್ಯತ್ಯಾಸವಿದ್ದಲ್ಲಿ ಇದನ್ನು ಸರಿಪಡಿಸಲು ಹೆಡ್ಗಿಯರ್ (ಶೀರ್ಷಕ) ಎಂಬ ಉಪಕರಣಗಳನ್ನು ಬಳಸಿಕೊಂಡು ತಕ್ಕ ಚಿಕಿತ್ಸೆಯನ್ನು ನೀಡಬಹುದು. ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ತೀವ್ರ ಪ್ರಮಾಣದಲ್ಲಿ ವಕ್ರಗೊಂಡ ಹಲ್ಲುಗಳನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯ ಅಗತ್ಯವಿದ್ದಲ್ಲಿ ವೈದ್ಯರೇ ಸೂಚಿಸುತ್ತಾರೆ. ನಂತರ ಆಥೋಡೆಂಟಿಕ್ ಚಿಕಿತ್ಸೆಯ ಮೂಲಕ ಹಲ್ಲುಗಳನ್ನು ಸರಿಪಡಿಸಬಹುದು. ಸ್ಥಿರ ಅಥವಾ ತೆಗೆಯಬಹುದಾದ ಉಪಕರಣಗಳನ್ನು ಬಳಸಿಕೊಂಡು ವಕ್ರದಂತ ಚಿಕಿತ್ಸೆ ಮಾಡಬಹುದಾಗಿದೆ. ಸಾಮಾನ್ಯವಾಗಿ ಸ್ಥಿರ ಉಪಕರಣಗಳನ್ನು ಬಳಸಲಾಗುತ್ತದೆ. ಹಲ್ಲುಗಳಿಗೆ ಬ್ರ್ಯಾಕೆಟ್ ಫಿಕ್ಸ್ ಮಾಡಿ ತಂತಿಯ ಸಹಾಯದಿಂದ ಅವುಗಳ ಚಲನೆಯನ್ನು ನಿಯಂತ್ರಿಸಬಹುದಾಗಿದೆ. ಸಾಮಾನ್ಯವಾಗಿ ಹಲ್ಲಿನ ಮುಂಭಾಗದಲ್ಲಿ ಬ್ರ್ಯಾಕೆಟ್ ಇರಿಸಲಾಗುತ್ತದೆ. ಕೆಲವು ಬಾರಿ ಹಲ್ಲಿನ ಒಳಭಾಗದಿಂದಲೂ ಚಿಕಿತ್ಸೆಯನ್ನು ನೀಡಬಹುದು. ಆದರೆ ಇದರಿಂದ ಮಾತನಾಡಲು ತೊಂದರೆಯಾಗುತ್ತದೆ ಮತ್ತು ಬಾಯಿಯ ನೈರ್ಮಲ್ಯವನ್ನು ಕಾಪಾಡಲು ಕಷ್ಟವಾಗುತ್ತದೆ. ಬ್ರ್ಯಾಕೆಟ್ಗಳಲ್ಲಿ ಹಲವು ಬಗೆಗಳಿದ್ದು, ಸಾಮಾನ್ಯವಾಗಿ ಮೆಟಲ್ ಮತ್ತು ಸಿರಾಮಿಕ್ನಿಂದ ತಯಾರಾದವುಗಳನ್ನು ಉಪಯೋಗಿಸುತ್ತಾರೆ. ಕೆಲವರಲ್ಲಿ ಎಲ್ಲ ಶಾಶ್ವತ ಹಲ್ಲುಗಳಿಗೆ ಸಾಕಷ್ಟು ಸ್ಥಳಾವಕಾಶವಿರುವುದಿಲ್ಲ. ಇಂಥ ಸಂದರ್ಭದಲ್ಲಿ ವೈದ್ಯರು ಕೆಲವು ಹಲ್ಲುಗಳನ್ನು ತೆಗೆಯಲು ಸೂಚಿಸುತ್ತಾರೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ.
ಕೆಲವರು - ಮುಖ್ಯವಾಗಿ ಹದಿಹರೆಯದವರು ಮತ್ತು ವಯಸ್ಕರು - ಬ್ರ್ಯಾಕೆಟ್ಗಳು ಬೇಡ ಎಂದು ಚಿಕಿತ್ಸೆ ಪಡೆಯಲು ಹಿಂಜರಿಯುತ್ತಾರೆ. ಇಂಥವರು ಪಾರದರ್ಶಕ ಅಲೇನರ್ಗಳ ಮೂಲಕ ಚಿಕಿತ್ಸೆಯನ್ನು ಪಡೆಯಬಹುದು. ಇದರಿಂದ ಸೌಮ್ಯ ಪ್ರಮಾಣದ ವ್ಯತ್ಯಾಸಗಳನ್ನು ಸರಿಪಡಿಸಬಹುದು.
ಚಿಕಿತ್ಸಾವಧಿಯಲ್ಲಿ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ. ಹಲ್ಲು ಮತ್ತು ಒಸಡಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ವೈದ್ಯರ ಸೂಚನೆಗಳನ್ನು ಸರಿಯಾಗಿ ಪಾಲಿಸುವುದು ಆವಶ್ಯಕ. ಇದಕ್ಕೆಂದೇ ವಿಶೇಷವಾದ ಟೂಥ್ಬ್ರಷ್ಗಳು ದೊರೆಯುತ್ತವೆ. ಅವುಗಳನ್ನು ಬಳಸುವುದರಿಂದ ಹಲ್ಲು ಮತ್ತು ಒಸಡಿನ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬಹುದು. ಚಿಕಿತ್ಸೆ ಪೂರ್ಣಗೊಂಡ ನಂತರ ಅಳವಡಿಸಿದ್ದ ಕ್ಲಿಪ್ಗಳನ್ನು ವೈದ್ಯರು ತೆಗೆದ ಮೇಲೆ ಹಲ್ಲುಗಳು ಪುನಃ ಮೊದಲ ಸ್ಥಾನಕ್ಕೇ ಹಿಂದಿರುಗುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಪ್ಪಿಸಲು ಹಲ್ಲುಗಳನ್ನು ಹಿಡಿದಿಡುವ ಸಲಕರಣೆಯನ್ನು ಸೂಚಿಸಲಾಗುತ್ತಾದೆ. ಇದನ್ನು ತಪ್ಪದೆ ಬಳಸಬೇಕು. ಇಲ್ಲವಾದಲ್ಲಿ ಚಿಕಿತ್ಸೆ ಸಫಲವಾಗದೆ ವಕ್ರದಂತ ಸಮಸ್ಯೆ ಮರುಕಳಿಸುತ್ತದೆ.