ಸಾಂದರ್ಭಿಕ ಚಿತ್ರ 
ಲೈಫ್‌ಸ್ಟೈಲ್

ಕೆಮಿಕಲ್ ಇಲ್ಲದೆ ತಾಮ್ರ-ಹಿತ್ತಾಳೆ ಪಾತ್ರೆಗಳನ್ನು ಹೊಸದರಂತೆ ಮಿನುಗಿಸುವುದು ಹೇಗೆ? ಗೃಹಿಣಿಯರಿಗಾಗಿ ಇಲ್ಲಿದೆ ಸೂಪರ್ ಟಿಪ್ಸ್! Copper Utensils

Copper Utensils: ನಮ್ಮ ಸಾಂಪ್ರದಾಯಿಕ ಭಾರತೀಯ ಜೀವನಶೈಲಿಯಲ್ಲಿ ತಾಮ್ರ (Copper) ಮತ್ತು ಹಿತ್ತಾಳೆ (Brass) ಪಾತ್ರೆಗಳಿಗೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಈ ಪಾತ್ರೆಗಳು ಕೇವಲ ನಮ್ಮ ಅಡುಗೆಮನೆ ಮತ್ತು ಪೂಜಾ ಕೊಠಡಿಯ ಅಂದವನ್ನು, ಸುಂದರತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ನಮ್ಮ ಆರೋಗ್ಯಕ್ಕೂ ಹತ್ತಾರು ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದು ದೇಹದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಆಯುರ್ವೇದದಲ್ಲೂ ಹೇಳಲಾಗಿದೆ.
ಆದಾಗ್ಯೂ, ಈ ಪಾತ್ರೆಗಳ ನಿರ್ವಹಣೆ ಒಂದು ದೊಡ್ಡ ಸವಾಲಿನ ಕೆಲಸ. ತಾಮ್ರ ಮತ್ತು ಹಿತ್ತಾಳೆ ಪಾತ್ರೆಗಳನ್ನು ಬಳಸಲು ಆರಂಭಿಸಿದ ಕೆಲವೇ ದಿನಗಳಲ್ಲಿ ಅವುಗಳ ಮೇಲೆ ಕಪ್ಪು ಮತ್ತು ಹಸಿರು ಬಣ್ಣದ ಕಲೆಗಳು ಅಥವಾ ಪದರಗಳು ರೂಪುಗೊಳ್ಳಲು ಆರಂಭಿಸುತ್ತವೆ. ಅವುಗಳನ್ನು ಸ್ವಚ್ಛಗೊಳಿಸಲು, ಮಾರುಕಟ್ಟೆಯಲ್ಲಿ ವಿವಿಧ ರಾಸಾಯನಿಕ ಪುಡಿಗಳು ಲಭ್ಯವಿದೆ. ಆದರೆ, ಇವುಗಳ ಬಳಕೆಯು ಕ್ರಮೇಣ ಪಾತ್ರೆಗಳ ನೈಸರ್ಗಿಕ ಹೊಳಪನ್ನು ತೆಗೆದುಹಾಕುವುದರ ಜೊತೆಗೆ ಕೈಗಳಿಗೂ ಹಾನಿ ಮಾಡುತ್ತದೆ.
ನಿಮ್ಮ ಮನೆಯಲ್ಲಿ ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳೂ ಕೂಡಾ ಮಸುಕಾಗಿದ್ದರೆ, ಅವುಗಳನ್ನು ಮೊದಲಿನಂತೆ ಹೊಳೆಯುವಂತೆ ಮಾಡಬೇಕಾದರೆ, ಈ ಸರಳ ಅಡುಗೆ ವಸ್ತುಗಳನ್ನು ಬಳಸಿರಿ. ಇದು ಪಾತ್ರೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ಹೊಳೆಯುವಂತೆ ಮಾಡುತ್ತದೆ.

* ನಿಂಬೆ ಮತ್ತು ಉಪ್ಪಿನ ಮಿಶ್ರಣ

1 ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ. ಕತ್ತರಿಸಿದ ಜಾಗಕ್ಕೆ ಸ್ವಲ್ಪ ಬಿಳಿ ಉಪ್ಪನ್ನು ಸಿಂಪಡಿಸಿಕೊಳ್ಳಿ. ಅದನ್ನು ಮಸುಕಾದ ತಾಮ್ರ ಅಥವಾ ಹಿತ್ತಾಳೆ ಪಾತ್ರೆಯ ಮೇಲೆ ನಿಧಾನವಾಗಿ ಉಜ್ಜಿ. ಉಪ್ಪು ಮತ್ತು ನಿಂಬೆಯಲ್ಲಿರುವ ಆಮ್ಲವು ಕಲೆಯನ್ನು ತಕ್ಷಣವೇ ತೆಗೆದುಹಾಕಲು ಸಹಾಯ ಮಾಡುತ್ತದೆ. ನಂತರ, ಪಾತ್ರೆಯನ್ನು ಶುದ್ಧ ನೀರಿನಿಂದ ತೊಳೆಯಿರಿ ಮತ್ತು ಒಣ ಬಟ್ಟೆಯಿಂದ ಒರೆಸಿ.

* ಹುಣಸೆ ನೀರು

ಹುಣಸೆಹಣ್ಣನ್ನು ಬಿಸಿ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಸಿ, ನಂತರ ಅದನ್ನು ಮಿಶ್ರಣ ಮಾಡಿ ದಪ್ಪ ತಿರುಳನ್ನು ರೂಪಿಸಿ. ಈ ತಿರುಳನ್ನು ಪಾತ್ರೆಗಳಿಗೆ ಹಚ್ಚಿ 5 ನಿಮಿಷಗಳ ಕಾಲ ಬಿಡಿ. ನಂತರ ನೀರಿನಿಂದ ಪಾತ್ರೆಯನ್ನು ತೊಳೆಯಿರಿ. ಇದರಲ್ಲಿರುವ ಆಮ್ಲೀಯತೆಯು ಕಪ್ಪು ಬಣ್ಣವನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ.

* ಬಿಳಿ ವಿನೆಗರ್ ಮತ್ತು ಉಪ್ಪಿನ ದ್ರಾವಣ

2 ಚಮಚ ಬಿಳಿ ವಿನೆಗರ್​ಗೆ 1 ಚಮಚ ಉಪ್ಪು ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಗೋಧಿ ಹಿಟ್ಟು ಸೇರಿಸಿ ಪೇಸ್ಟ್​ ಮಾಡಿಕೊಳ್ಳಿ. ನಂತರ ಅದನ್ನು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳ ಮೇಲೆ ಹಚ್ಚಿ 10 ನಿಮಿಷಗಳ ಕಾಲ ಬಿಡಿ. ಸ್ವಲ್ಪ ಒಣಗಿದ ನಂತರ, ಸ್ಕ್ರಬ್ಬರ್ ನಿಂದ ನಿಧಾನವಾಗಿ ಉಜ್ಜಿ ನೀರಿನಿಂದ ತೊಳೆಯಿರಿ.

*ವಿನೆಗರ್ ಮತ್ತು ಅಡಿಗೆ ಸೋಡಾದ ಬಳಕೆ

ಒಂದು ಬಟ್ಟಲಿನಲ್ಲಿ 2 ಚಮಚ ಬಿಳಿ ವಿನೆಗರ್ ಮತ್ತು 1 ಚಮಚ ಅಡಿಗೆ ಸೋಡಾವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್​ನ್ನು ತಾಮ್ರ ಮತ್ತು ಹಿತ್ತಾಳೆ ಬಟ್ಟಲಿಗೆ ಹಚ್ಚಿ 5-10 ನಿಮಿಷಗಳ ಕಾಲ ಬಿಟ್ಟು ಮೃದುವಾದ ಬ್ರಷ್​ನಿಂದ ಸ್ಕ್ರಬ್​ ಮಾಡಿ ನೀರಿನಿಂದ ತೊಳೆಯಿರಿ.
ಪಾತ್ರೆಗಳನ್ನು ನೀರಿನಿಂದ ತೊಳೆದ ನಂತರ, ತಕ್ಷಣ ಅವುಗಳನ್ನು ಒಣ ಹತ್ತಿ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಪಾತ್ರೆಗಳು ಒದ್ದೆಯಾಗಿದ್ದರೆ, ಕಪ್ಪು ಕಲೆಗಳು ಮತ್ತೆ ಕಾಣಿಸಿಕೊಳ್ಳಲು ಕಾರಣವಾಗುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.