Shopaholic : ಹೊಸ ಡ್ರೆಸ್ ಕಂಡರೆ ಸಾಕು, ತಕ್ಷಣ ಖರೀದಿಸಬೇಕು ಎನಿಸುತ್ತದೆ. ಈಗಾಗಲೇ ಮನೆಯಲ್ಲಿ ಸಾಕಷ್ಟು ಸ್ಕಿನ್ಕೇರ್ ಉತ್ಪನ್ನಗಳಿದ್ದರೂ ಮತ್ತೊಂದು ಹೊಸ ಪ್ರಾಡಕ್ಟ್ ಕಣ್ಣಿಗೆ ಬಿದ್ದರೆ ಆರ್ಡರ್ ಮಾಡಬೇಕೆಂಬ ಆಸೆ ಹುಟ್ಟುತ್ತದೆ. ಇಷ್ಟವಾದ ಶೂ, ಸುಂದರವಾದ ಬ್ಯಾಗ್ ಅಥವಾ ಆಕರ್ಷಕ ಆಭರಣ ಕಂಡಾಗ ಮನಸ್ಸು ಖರೀದಿಯತ್ತ ವಾಲುತ್ತದೆ. ಅದರಲ್ಲೂ ಆನ್ಲೈನ್ ಶಾಪಿಂಗ್ನಲ್ಲಿ Place Order ಬಟನ್ ಒತ್ತಿದ ಕ್ಷಣ ಸಿಗುವ ಖುಷಿಯೇ ಬೇರೆ ಪಾರ್ಸೆಲ್ ಮನೆಗೆ ಬರುವವರೆಗೂ ಅದರದ್ದೇ ಯೋಚನೆ. ಆದರೆ ವಸ್ತು ಕೈ ಸೇರಿದ ಕೆಲವೇ ದಿನಗಳಲ್ಲಿ ಅದರ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ. ಮತ್ತೆ ಹೊಸ ವಸ್ತುವಿನ ಹುಡುಕಾಟ ಶುರುವಾಗುತ್ತದೆ. ಅಷ್ಟಕ್ಕೂ ನಮಗೆ ನಿಜವಾಗಿಯೂ ಆ ವಸ್ತು ಬೇಕಿರುತ್ತದೆಯೇ? ಅಥವಾ ಖರೀದಿಸುವ ಪ್ರಕ್ರಿಯೆಯೇ ನಮಗೆ ಖುಷಿ ನೀಡುತ್ತಿದೆಯೇ?
ಶಾಪಿಂಗ್ನ ಸಂತೋಷ ಕೇವಲ ಹೊಸ ವಸ್ತುವನ್ನು ಹೊಂದುವುದರಲ್ಲಿ ಇರುವುದಿಲ್ಲ. ಅದನ್ನು ಹುಡುಕುವುದು, ವಿವಿಧ ಆಯ್ಕೆಗಳನ್ನು ನೋಡುವುದು, ಇಷ್ಟವಾದದ್ದನ್ನು ಕಾರ್ಟ್ಗೆ ಸೇರಿಸುವುದು, ರಿಯಾಯಿತಿಗಾಗಿ ಕಾಯುವುದು ಮತ್ತು ಕೊನೆಗೆ ಆರ್ಡರ್ ಮಾಡುವುದು ಕೂಡ ಈ ಅನುಭವದ ಭಾಗಗಳಾಗಿವೆ.
ಇಲ್ಲಿ ಪ್ರಮುಖ ಪಾತ್ರ ವಹಿಸುವುದು ಡೋಪಮೈನ್ ಇದು ಮೆದುಳಿನಲ್ಲಿ ಕಾರ್ಯನಿರ್ವಹಿಸುವ ನರಸಂದೇಶವಾಹಕ ರಾಸಾಯನಿಕ. ಪ್ರೇರಣೆ, ಕಲಿಕೆ, ನಿರೀಕ್ಷೆ ಮತ್ತು ಪ್ರತಿಫಲಕ್ಕೆ ಸಂಬಂಧಿಸಿದ ಮೆದುಳಿನ ಚಟುವಟಿಕೆಗಳಲ್ಲಿ ಇದರ ಪಾತ್ರವಿದೆ. ಇದನ್ನು ಕೇವಲ ಸಂತೋಷದ ರಾಸಾಯನಿಕ ಎಂದು ಕರೆಯುವುದು ಸರಿಯಲ್ಲ. ನಮಗೆ ಇಷ್ಟವಾಗಬಹುದೆಂದು ನಿರೀಕ್ಷಿಸುವ ವಸ್ತುವನ್ನು ಹುಡುಕುವ ಆಸೆ ಮತ್ತು ಅದನ್ನು ಪಡೆಯುವ ಉತ್ಸಾಹದಲ್ಲಿಯೂ ಡೋಪಮೈನ್ ಪಾತ್ರ ವಹಿಸುತ್ತದೆ. ಹೀಗಾಗಿಯೇ ಕೆಲವೊಮ್ಮೆ ವಸ್ತು ಕೈಗೆ ಸಿಕ್ಕಿದ ನಂತರಕ್ಕಿಂತ ಅದು ಮನೆಗೆ ಬರುವುದನ್ನು ಕಾಯುವ ಸಮಯವೇ ಹೆಚ್ಚು ರೋಚಕವಾಗಿ ಅನಿಸುತ್ತದೆ.
ಮೊದಲೆಲ್ಲ ಶಾಪಿಂಗ್ ಮಾಡಲು ಅಂಗಡಿಗಳಿಗೆ ಹೋಗಬೇಕಿತ್ತು. ಆದರೆ ಈಗ ಮೊಬೈಲ್ನಲ್ಲೇ ನೂರಾರು ಉತ್ಪನ್ನಗಳು ಕಣ್ಣಮುಂದೆ ಬರುತ್ತವೆ. ಫ್ಲ್ಯಾಶ್ ಸೇಲ್, ಸೀಮಿತ ಅವಧಿಯ ರಿಯಾಯಿತಿ, ವೈಯಕ್ತಿಕ ಆಯ್ಕೆಗೆ ತಕ್ಕ ಜಾಹೀರಾತುಗಳು ಮತ್ತು ಸುಲಭ ಪಾವತಿ ವ್ಯವಸ್ಥೆಗಳು ಕ್ಷಣಾರ್ಧದಲ್ಲಿ ಖರೀದಿ ಮಾಡುವಂತೆ ಪ್ರೇರೇಪಿಸುತ್ತವೆ.
2024ರಲ್ಲಿ ಜರ್ನಲ್ ಆಫ್ ಕನ್ಸ್ಯೂಮರ್ ಬಿಹೇವಿಯರ್ ನಲ್ಲಿ ಪ್ರಕಟವಾದ ವ್ಯವಸ್ಥಿತ ವಿಮರ್ಶೆಯೊಂದು 1,39,545 ಜನರನ್ನು ಒಳಗೊಂಡ 75 ಸಂಶೋಧನಾ ಪ್ರಬಂಧಗಳನ್ನು ವಿಶ್ಲೇಷಿಸಿದೆ. ಆನ್ಲೈನ್ ಖರೀದಿಯ ಸಂದರ್ಭದಲ್ಲಿ ಮಾರುಕಟ್ಟೆ ತಂತ್ರಗಳು, ಶಾಪಿಂಗ್ ವೇದಿಕೆಗಳ ವಿನ್ಯಾಸ ಮತ್ತು ಗ್ರಾಹಕರ ವೈಯಕ್ತಿಕ ಗುಣಲಕ್ಷಣಗಳು ಅನಿರೀಕ್ಷಿತ ಖರೀದಿಯ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಈ ಅಧ್ಯಯನ ಗುರುತಿಸಿದೆ. ಅಂದರೆ, ನಮಗೆ ಬೇಕಾದ ವಸ್ತುವನ್ನು ಮಾತ್ರ ಹುಡುಕುವ ಬದಲು, ನಮಗೆ ಬೇಡದ ವಸ್ತುಗಳನ್ನೂ ಖರೀದಿಸುವಂತೆ ಆನ್ಲೈನ್ ವೇದಿಕೆಗಳು ಪ್ರೇರೇಪಿಸಬಹುದು.
ಕೆಲವರಿಗೆ ಕೆಲಸದ ಒತ್ತಡ, ಮನಸ್ತಾಪ ಅಥವಾ ಒಂಟಿತನ ಕಾಡಿದಾಗ ಶಾಪಿಂಗ್ ಮಾಡಬೇಕೆನಿಸುತ್ತದೆ. ಹೊಸ ವಸ್ತುವೊಂದನ್ನು ಖರೀದಿಸುವುದರಿಂದ ತಾತ್ಕಾಲಿಕ ಉತ್ಸಾಹ ಮತ್ತು ಮನಸ್ಸಿಗೆ ಸಮಾಧಾನ ಸಿಗಬಹುದು. ಇದನ್ನೇ ರಿಟೇಲ್ ಥೆರಪಿ ಎಂದು ಕರೆಯುತ್ತಾರೆ. ಆದರೆ ಇಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ನಮಗೆ ಬೇಕಾಗಿರುವುದು ಹೊಸ ಬಟ್ಟೆಯೋ, ಹೊಸ ಬ್ಯಾಗೋ ಆಗಿರದೆ, ಮನಸ್ಸಿಗೆ ಸ್ವಲ್ಪ ನೆಮ್ಮದಿ, ಸಂತೋಷ ಅಥವಾ ಬದಲಾವಣೆಯಾಗಿರಬಹುದು. ಭಾವನಾತ್ಮಕ ಖಾಲಿತನವನ್ನು ವಸ್ತುಗಳನ್ನು ಖರೀದಿಸುವ ಮೂಲಕ ತುಂಬಲು ಪ್ರಯತ್ನಿಸಿದಾಗ ಈ ಅಭ್ಯಾಸ ಪದೇಪದೆ ಮುಂದುವರಿಯಬಹುದು.
ಶಾಪಿಂಗ್ ಮಾಡುವಾಗ ವಸ್ತುವಿನ ಆಕರ್ಷಣೆ ಮತ್ತು ಅದನ್ನು ಪಡೆಯುವ ಉತ್ಸಾಹ ಹೆಚ್ಚಿರುತ್ತದೆ. ಆದರೆ ಖರೀದಿಸಿದ ನಂತರ ಅದರ ನಿಜವಾದ ಉಪಯೋಗದ ಬಗ್ಗೆ ಯೋಚನೆ ಶುರುವಾಗುತ್ತದೆ. ಈಗಾಗಲೇ ಇದೇ ರೀತಿಯ ಮೂರು ಡ್ರೆಸ್ಗಳಿವೆ, ಈ ಬ್ಯಾಗ್ ನಿಜವಾಗಿಯೂ ಬೇಕಿತ್ತಾ, ಇಷ್ಟು ಹಣ ಖರ್ಚು ಮಾಡುವ ಅಗತ್ಯವಿತ್ತಾ ಎಂಬ ಪ್ರಶ್ನೆಗಳು ಕಾಡುತ್ತವೆ. ಇದನ್ನು ಖರೀದಿಯ ನಂತರದ ಪಶ್ಚಾತ್ತಾಪ ಎಂದು ಕರೆಯಬಹುದು. ಕೆಲವರಿಗೆ ಈ ಅನುಭವದ ನಂತರವೂ ಮತ್ತೊಂದು ಖರೀದಿಯ ಆಸೆ ಮೂಡುತ್ತದೆ. ಹೀಗೆ ಸಂತೋಷ, ಖರೀದಿ, ಪಶ್ಚಾತ್ತಾಪ ಮತ್ತು ಮತ್ತೆ ಖರೀದಿ ಎಂಬ ಚಕ್ರ ಮುಂದುವರಿಯಬಹುದು.
ಹೊಸ ವಸ್ತುಗಳನ್ನು ಖರೀದಿಸುವುದು ತಪ್ಪಲ್ಲ. ಆದರೆ ಖರೀದಿಸುವ ಆಸೆ ನಮ್ಮ ಹಣಕಾಸು ಮತ್ತು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವಂತಾಗಬಾರದು. ಅನಗತ್ಯ ಖರೀದಿಗಳನ್ನು ಕಡಿಮೆ ಮಾಡಲು ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಹೊಸ ವಸ್ತುವನ್ನು ಖರೀದಿಸುವುದರಲ್ಲಿ ತಪ್ಪಿಲ್ಲ. ಆದರೆ ಪ್ರತಿ ಬಾರಿ ಖುಷಿಯಾಗಲು ಹೊಸ ವಸ್ತುವೇ ಬೇಕು ಎನ್ನುವ ಸ್ಥಿತಿ ಬರಬಾರದು. ಏಕೆಂದರೆ ಪಾರ್ಸೆಲ್ ಬರುವವರೆಗಿನ ಸಂಭ್ರಮ ಕೆಲವೇ ಕ್ಷಣಗಳದ್ದಾಗಿರಬಹುದು, ಆದರೆ ಅನಗತ್ಯ ಖರೀದಿಯಿಂದ ಆಗುವ ಹಣಕಾಸಿನ ಹೊರೆ ದೀರ್ಘಕಾಲ ಉಳಿಯಬಹುದು