ಬೆಂಗಳೂರು: ಇಂದಿನ ಆಧುನಿಕ ಜೀವನಶೈಲಿಯಲ್ಲಿ ಚಿಕನ್ ನಮ್ಮ ದೈನಂದಿನ ಆಹಾರದ ಒಂದು ಮುಖ್ಯ ಭಾಗವಾಗಿ ಮಾರ್ಪಟ್ಟಿದೆ. ಮಾಂಸಾಹಾರಿ ಪ್ರಿಯರಲ್ಲಿ ಚಿಕನ್ ಇಷ್ಟಪಡದವರೇ ಇಲ್ಲ ಎನ್ನಬಹುದು. ಆದರೆ, ಹೆಚ್ಚಿನ ಜನರು ಚಿಕನ್ ಖರೀದಿಸುವಾಗ ಬ್ರೆಸ್ಟ್ ಪೀಸ್‌ಗಳಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು 'ಚಿಕನ್ ಲಿವರ್' (ಕೋಳಿ ಯಕೃತ್ತು)(ChickenLiver) ತಿನ್ನಲು ಕೊಡುವುದಿಲ್ಲ. ಆದರೆ, ಆಹಾರ ಮತ್ತು ಆರೋಗ್ಯ ತಜ್ಞರ ಪ್ರಕಾರ, ಚಿಕನ್ ಬ್ರೆಸ್ಟ್ ಪೀಸ್‌ಗಳಿಗಿಂತ ಚಿಕನ್ ಲಿವರ್‌ನಲ್ಲಿ ಅತಿ ಹೆಚ್ಚು ಪೋಷಕಾಂಶಗಳು ಹಾಗೂ ಆರೋಗ್ಯ ಪ್ರಯೋಜನಗಳು ಅಡಗಿವೆ.
ರಕ್ತಹೀನತೆ ನಿವಾರಣೆಗೆ ರಾಮಬಾಣ
ಚಿಕನ್ ಲಿವರ್‌ನಲ್ಲಿ ಕಬ್ಬಿಣದ ಅಂಶ (ಐರನ್) ಹೇರಳವಾಗಿ ಕಂಡುಬರುತ್ತದೆ. ಇದು ನಮ್ಮ ದೇಹದಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ರಕ್ತಹೀನತೆಯಿಂದ (ಅನಿಮಿಯಾ) ಬಳಲುತ್ತಿರುವವರಿಗೆ ಇದು ಅತ್ಯುತ್ತಮ ಆಹಾರವಾಗಿದೆ. ಗರ್ಭಿಣಿಯರು ವೈದ್ಯರ ಸಲಹೆಯ ಮೇರೆಗೆ ಸರಿಯಾದ ಪ್ರಮಾಣದಲ್ಲಿ ಚಿಕನ್ ಲಿವರ್ ಸೇವಿಸುವುದರಿಂದ, ಅವರ ದೇಹದಲ್ಲಿ ಫೋಲಿಕ್ ಆಸಿಡ್ ಮಟ್ಟ ಹೆಚ್ಚಾಗಿ ರಕ್ತಹೀನತೆ ಗಣನೀಯವಾಗಿ ಕಡಿಮೆಯಾಗುತ್ತದೆ.
ತೂಕ ನಿಯಂತ್ರಣ ಮತ್ತು ರೋಗನಿರೋಧಕ ಶಕ್ತಿ
ಸಾಮಾನ್ಯ ಚಿಕನ್ ತುಂಡುಗಳಿಗೆ ಹೋಲಿಸಿದರೆ ಚಿಕನ್ ಲಿವರ್‌ನಲ್ಲಿ ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಪ್ರೋಟೀನ್ ಇರುತ್ತದೆ. ಇದನ್ನು ತಿಂದಾಗ ಹೊಟ್ಟೆ ಬೇಗ ತುಂಬಿದಂತಾಗಿ, ಅತಿಯಾಗಿ ತಿನ್ನುವುದು ತಪ್ಪುತ್ತದೆ. ಇದು ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ, ಇದರಲ್ಲಿರುವ 'ಲೈಸಿನ್' ಎಂಬ ಅಮೈನೋ ಆಸಿಡ್ ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ವಿಟಮಿನ್ ಎ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಮೂಳೆ, ಹಲ್ಲು ಮತ್ತು ಕಣ್ಣಿನ ಆರೋಗ್ಯಕ್ಕೆ ಉತ್ತಮ
ಹಲ್ಲು ಮತ್ತು ಮೂಳೆಗಳ ಆರೋಗ್ಯವನ್ನು ಸುಧಾರಿಸಲು ಚಿಕನ್ ಲಿವರ್ ತುಂಬಾ ಉಪಯುಕ್ತವಾಗಿದೆ. ಸುಮಾರು 3.5 ಔನ್ಸ್ ಚಿಕನ್ ಲಿವರ್‌ನಲ್ಲಿ 12 ಮೈಕ್ರೋಗ್ರಾಂನಷ್ಟು ವಿಟಮಿನ್ K2 ಲಭ್ಯವಿದ್ದು, ಇದು ಎಲುಬುಗಳನ್ನು ಬಲಪಡಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ ದೇಹದ ಚಯಾಪಚಯ ಕ್ರಿಯೆಯನ್ನು (ಮೆಟಬಾಲಿಸಂ) ಚುರುಕುಗೊಳಿಸುತ್ತದೆ. ವಿಟಮಿನ್ ಎ ಅಂಶವು ಕಣ್ಣು, ಚರ್ಮ, ಕೂದಲು ಮತ್ತು ಉಗುರುಗಳ ಆರೋಗ್ಯವನ್ನು ಅದ್ಭುತವಾಗಿ ಸುಧಾರಿಸುತ್ತದೆ.
ಚಿಕನ್ ಲಿವರ್‌ನಲ್ಲಿ ವಿಟಮಿನ್ ಎ ಅಧಿಕವಾಗಿರುತ್ತದೆ. ಗರ್ಭಿಣಿಯರು ಇದನ್ನು ಅತಿಯಾಗಿ ಸೇವಿಸಿದರೆ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಗರ್ಭಿಣಿಯರು ಮತ್ತು ಆರೋಗ್ಯ ಸಮಸ್ಯೆ ಇರುವವರು ವೈದ್ಯರ ಸೂಕ್ತ ಸಲಹೆ ಪಡೆದೇ ಇದನ್ನು ಸೇವಿಸುವುದು ಒಳ್ಳೆಯದು,(ಏಜೆನ್ಸೀಸ್).