ಭಾಗ 2
ಕ್ಯಾರಟ್ ಬಗ್ಗೆ ಇನ್ನಷ್ಟು ತಿಳಿಯೋಣ. ಕ್ಯಾರಟ್ನ ಎಲೆಗಳನ್ನು ದನಗಳಿಗೆ ತಿನ್ನಿಸುವುದರಿಂದ ಹಾಲಿನ ಉತ್ಪನ್ನ ಹೆಚ್ಚುವುದೆಂದೂ, ಕೋಳಿಗಳಿಗೆ ತಿನ್ನಿಸಿದರೆ ಅವುಗಳ ಮೊಟ್ಟೆಗಳಲ್ಲಿ ವಿಟಮಿನ್ ಎ ಅಂಶ ಹೆಚ್ಚುವುದೆಂದೂ ತಿಳಿದುಬಂದಿದೆ. ಕ್ಯಾರಟ್ ಎಲೆಗಳು ಒಳ್ಳೆಯ ಹಸಿರುಗೊಬ್ಬರವೂ ಹೌದು. ಬೇರಿನಿಂದ ರಸವನ್ನೂ ತೆಗೆಯಬಹುದು. ಕ್ಯಾರಟ್ನಲ್ಲಿರುವ ಎಲ್ಲ ಪೌಷ್ಟಿಕಾಂಶಗಳೂ ಇದರಲ್ಲಿದ್ದು ಇದು ಒಳ್ಳೆಯ ಪಾನೀಯವೆಂದು ಹೆಸರಾಗಿದೆ.
ಹಸಿಯಾಗಿಯೂ ಕ್ಯಾರಟ್ ತಿನ್ನಬಹುದು, ಬೇಯಿಸಿಯೂ ತಿನ್ನಬಹುದು. ಸಾರು, ಸಾಂಬಾರ್ ಇತ್ಯಾದಿಗಳಿಗೆ ತರಕಾರಿಯಾಗಿ ಬಳಸಬಹುದು, ಜ್ಯೂಸ್ ಮಾಡಿಯೂ ಕುಡಿಯಬಹುದು. ಆದರೆ ಹಸಿಯಾಗಿ ತಿಂದಾಗ ಹೆಚ್ಚಿನ ಪ್ರಯೋಜನ ದೊರೆಯುತ್ತದೆ. ಕ್ಯಾರಟ್ ಸೇವನೆಯಿಂದ ಕೊಲೆಸ್ಟರಾಲ್ ಮಟ್ಟ ಕುಗ್ಗುತ್ತದೆ.
ಕ್ಯಾರಟ್ ಜ್ಯೂಸ್ ಸೇವಿಸುವುದರಿಂದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುವುದಲ್ಲದೆ ತೂಕವನ್ನು ಇಳಿಸಲು ನೆರವಾಗುತ್ತದೆ. * ಇದರಲ್ಲಿರುವ ವಿಟಮಿನ್ ಎ ಕಣ್ಣುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ನಿಯಮಿತವಾಗಿ ಕ್ಯಾರಟ್ ಸೇವಿಸಿದರೆ ಕಣ್ಣಿನ ಕೆಲವು ಕಾಯಿಲೆಗಳಿಂದಲೂ ರಕ್ಷಣೆ ಪಡೆಯಬಹುದು.* ವಯಸ್ಸಾದಂತೆ ಸ್ಮರಣಶಕ್ತಿ ಕುಂದುವುದು, ಮರೆಗುಳಿತನ, ಅಲ್ಜೈಮರ್ಸ್ ಮೊದಲಾದ ಕಾಯಿಲೆಗಳು ಎದುರಾಗುವುದನ್ನು ಕ್ಯಾರಟ್ ಸೇವನೆಯಿಂದ ತಗ್ಗಿಸಬಹುದು. ಜತೆಗೆ ಮಿದುಳಿನ ಕ್ಷಮತೆಯನ್ನು ಹೆಚ್ಚಿಸಲೂ ಸಹಾಯಕವಾಗಿದೆ.* ನಿತ್ಯ ಕ್ಯಾರಟ್ ಸೇವನೆಯಿಂದ ತ್ವಚೆಯ ತೊಂದರೆಗಳು ಬೇಗ ಪರಿಹಾರವಾಗುತ್ತವೆ. ಚರ್ಮದ ಉರಿ, ಸೋರಿಯಾಸಿಸ್, ಎಕ್ಸಿಮಾ ಮೊದಲಾದ ಕಾಯಿಲೆಗಳು ಬೇಗ ಕಡಿಮೆಯಾಗುತ್ತವೆ.* ತ್ವಚೆಯ ಬಣ್ಣ ಮತ್ತು ನುಣುಪುತನವನ್ನು ಕ್ಯಾರಟ್ ಸೇವನೆಯಿಂದ ಕಾಪಾಡಿಕೊಳ್ಳಬಹುದು.
ಕ್ಯಾರಟ್ ಅರೆದು ಮುಖಕ್ಕೆ ಲೇಪಿಸಿಕೊಂಡು ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.* ಕ್ಯಾರಟ್ನಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟ್ಯಾಶಿಯಂ, ಫೋಲೇಟ್, ವಿಟಮಿನ್ ಎ, ವಿಟಮಿನ್ ಸಿ ಪೋಷಕಾಂಶಗಳು ಗರ್ಭಿಣಿಯರ ಆರೋಗ್ಯಕ್ಕೆ ಪೂರಕ. ಅಲ್ಲದೆ ಗರ್ಭದಲ್ಲಿರುವ ಮಗುವಿನ ಆರೋಗ್ಯವನ್ನು ಕಾಪಾಡುವಲ್ಲೂ ಇದು ಸಹಾಯಕ. ಕ್ಯಾರಟ್ ತಿನ್ನುವ ಮೊದಲು ಸ್ವಚ್ಛವಾಗಿ ತೊಳೆಯುವುದರ ಜತೆಗೆ ಮೇಲಿನ ಸಿಪ್ಪೆಯನ್ನು ಕೆತ್ತಿಯೇ ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.