ಲೈಫ್‌ಸ್ಟೈಲ್

ಪುಷ್ಟಿದಾಯಕ ಕ್ಯಾರಟ್ ಇತಿಹಾಸ ನಿಮಗೆಷ್ಟು ಗೊತ್ತು?

ಭಾಗ 1

ಕೇಸರಿ ಬಣ್ಣದಿಂದ ಗಮನ ಸೆಳೆಯುವ ಕ್ಯಾರಟ್ ಬಗ್ಗೆ ಗೊತ್ತಿಲ್ಲದವರಾರು? ಕನ್ನಡದಲ್ಲಿ ಗಜ್ಜರಿ ಎಂಬ ಹೆಸರಿದ್ದರೂ ಇದು ಕ್ಯಾರಟ್ ಎಂಬ ಹೆಸರಿನಿಂದಲೇ ಜನಪ್ರಿಯವಾಗಿದೆ. ಅಂಬೆಲಿಫೆರೀ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ನಾಮಧೇಯ ಡಾಕಸ್ ಕೆರೋಟ. ಹೆಚ್ಚಿನ ಪರಿಮಾಣದ ಆಹಾರ ಶೇಖರಣೆಯಿಂದ ಬಹಳ ದಪ್ಪವಾಗಿ ಬೆಳೆಯುವ ತಾಯಿಬೇರು ಭಾಗವೇ ತರಕಾರಿಯಾಗಿ ಉಪಯೋಗಿಸಲ್ಪಡುತ್ತವೆ.

ಪಿಷ್ಟ ಮತ್ತು ಎ ವಿಟಮಿನ್​ನ ಪೂರ್ವಗಾಮಿ ವಸ್ತುಗಳಾದ ಕ್ಯಾರಟೀನುಗಳು ಈ ಭಾಗಗಳಲ್ಲಿ ಅತ್ಯಧಿಕ ಪರಿಮಾಣದಲ್ಲಿ ಸಂಗ್ರಹವಾಗಿವೆ. ಇವು ಬಹಳ ಪುಷ್ಟಿದಾಯಕ ವಸ್ತುಗಳು. ಕ್ಯಾರಟ್ಟಿನ ಬಣ್ಣಕ್ಕೆ ಕ್ಯಾರಟೀನೇ ಕಾರಣ. ಕ್ಯಾರಟ್​ನ ಎಲೆಗಳಲ್ಲೂ ಪ್ರೋಟೀನು, ಖನಿಜ, ವಿಟಮಿನ್​ಗಳು ಇರುವುದರಿಂದ ಇವು ಕೂಡ ಪುಷ್ಟಿದಾಯಕವಾಗಿವೆ.ಮಧ್ಯ ಏಷ್ಯ ಮೂಲದ್ದು ಎನ್ನಲಾಗುವ ಕ್ಯಾರಟ್​ನ ಉಗಮಸ್ಥಾನ ಪಂಜಾಬ್ ಇಲ್ಲವೆ ಕಾಶ್ಮೀರದ ಪರ್ವತಪ್ರದೇಶಗಳು ಎಂಬುದು ಒಂದು ಅಂದಾಜು.

ಜರ್ಮನಿ ಮತ್ತು ಫ್ರಾನ್ಸ್​ಗಳಲ್ಲಿ ಕ್ರಿಸ್ತಪೂರ್ವದಲ್ಲೇ ಇದನ್ನು ಬೆಳೆಸಲಾಗುತ್ತಿತ್ತೆಂದು ಹೇಳಲಾಗಿದೆ. ಚೀನಾದಲ್ಲಿ ಕ್ಯಾರಟ್ಟಿನ ಬೇಸಾಯ 13ನೇ ಶತಮಾನದಲ್ಲಿ ಆರಂಭವಾಯಿತು. 16ನೇ ಶತಮಾನದಲ್ಲಿ ಇಂಗ್ಲೆಂಡಿಗೆ ಕಾಲಿಟ್ಟ ಕ್ಯಾರಟ್ ನಂತರ ಅಮೆರಿಕವನ್ನು ಪ್ರವೇಶಿಸಿತು. ಪ್ರಮುಖವಾಗಿ ಸಮಶೀತೋಷ್ಣವಲಯಗಳಲ್ಲಿ ಇದರ ಬೇಸಾಯ ಮಾಡಲಾಗುತ್ತದೆ.

ಕ್ಯಾರಟ್​ನಲ್ಲಿ ಪ್ರಮುಖವಾಗಿ ಯುರೋಪಿಯನ್ ಮತ್ತು ಏಷ್ಯನ್ ಎಂಬ ಎರಡು ಬಗೆಗಳಿವೆ. ಒಂದೊಂದರಲ್ಲೂ ಹಲವಾರು ತಳಿಗಳಿವೆ. ಇವುಗಳ ಬೇರುಗಳ ಬಣ್ಣ, ಗಾತ್ರ ಮತ್ತು ಆಕಾರಗಳಲ್ಲಿ ವೈವಿಧ್ಯವಿದೆ. ಬಣ್ಣ ಬಿಳಿ ಇಲ್ಲವೆ ಹಳದಿಯಿಂದ ಕಿತ್ತಳೆ, ನಸು ಊದಾ, ಕಡುಗೆಂಪು ಮತ್ತು ಕಡು ನೇರಳೆಯವರೆಗೆ ವ್ಯತ್ಯಾಸವಾಗುತ್ತದೆ. ಆಕಾರದಲ್ಲಿ ಕೆಲವು ಶಂಕುವಿನಂತಿದ್ದರೆ ಇನ್ನು ಕೆಲವು ಉರುಳೆಯಂತಿವೆ. ಕ್ಯಾರಟೀನ್ ಅಷ್ಟೇ ಅಲ್ಲದೆ ಇದರಲ್ಲಿ ಬೇರೆ ಪೌಷ್ಟಿಕಾಂಶಗಳೂ ಹೇರಳವಾಗಿವೆ.

ಶೇ. 80.6ರಷ್ಟು ತೇವಾಂಶ, ಶೇ. 0.9ರಷ್ಟು ಪ್ರೋಟೀನು, ಶೇ. 0.1ರಷ್ಟು ಕೊಬ್ಬು, ಶೇ. 10.7ರಷ್ಟು ಕಾರ್ಬೆಹೈಡ್ರೇಟು, ಶೇ. 1.1ರಷ್ಟು ಖನಿಜಪದಾರ್ಥ, ಶೇ. 1.2ರಷ್ಟು ನಾರಿನ ಅಂಶ, ಶೇ. 0.08ರಷ್ಟು ಕ್ಯಾಲ್ಸಿಯಂ, ಶೇ. 0.03ರಷ್ಟು ರಂಜಕ ಪೋಷಕಾಂಶಗಳಿವೆ. ಸಿ ವಿಟಮಿನ್​ಗಳೂ ಇವೆ. ಜಾವಾ ದೇಶದವರಲ್ಲಿ ಕ್ಯಾರಟ್​ನ ಎಲೆಗಳನ್ನು ತಿನ್ನುವ ಕ್ರಮವಿದೆ. ಅಲ್ಲದೆ ಬೇರು ಹಾಗೂ ಎಲೆಗಳು ದನಗಳಿಗೆ ಮತ್ತು ಕುದುರೆಗಳಿಗೆ ಒಳ್ಳೆಯ ಆಹಾರವೆಂದು ಹೆಸರಾಗಿವೆ.