ಬೇಕಾಗುವ ಸಾಮಾನುಗಳು : 1 ಕಪ್ ಹುರಿದ ಗೋಧಿನುಚ್ಚು, ಅರ್ಧ ಕಪ್ ಹೆಸರುಬೇಳೆ, 1 ಚಮಚ ಜೀರಿಗೆ, 3 ರಿಂದ 4 ಹಸಿಮೆಣಸಿನಕಾಯಿ, 2 ಚಮಚ ತುಪ್ಪ, ಒಂದು ಟೊಮಾಟೋ, 1 ಚಮಚ ತುರಿದ ಹಸಿ ಶುಂಠಿ, 1 ಚಮಚ ನಿಂಬೆ ರಸ.
ತಯಾರಿಸುವುದು ಹೀಗೆ : ಒಂದು ಕುಕ್ಕರ್ ಪ್ಯಾನ್‍ಗೆ ತುಪ್ಪ, ಜೀರಿಗೆ, ಟೊಮೊಟೋ, ಶುಂಠಿ, ಹಸಿಮೆಣಸಿನಕಾಯಿಯನ್ನು ಒಗ್ಗರಣೆ ಮಾಡಿಕೊಂಡು ನಂತರ ಹೆಸರುಬೇಳೆ ಮತ್ತು ಗೋಧಿ ನುಚ್ಚನ್ನು ಹಾಕಬೇಕು. ನಂತರ 3 ಕಪ್ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮುಚ್ಚುಳ ಮುಚ್ಚಿ 3 ಸಲ ಕೂಗಿಸಿದರೆ ಗೋಧಿ ನುಚ್ಚಿನ ಕಿಚಡಿ ತಯಾರಾಗುತ್ತದೆ, ರುಚಿಗೆ 1 ಚಮಚ ನಿಂಬೆರಸ ಬೆರೆಸಿ.
ಬೇಕಾಗುವ ಸಾಮಾನುಗಳು : 1 ಕಪ್ ಹುರಿದ ಗೋಧಿನುಚ್ಚು, 2 ಚಮಚ ಎಣ್ಣೆ, 2 ಸಣ್ಣಗೆ ಕತ್ತರಿಸಿದ ಬೀನ್ಸ್, ಕ್ಯಾರೆಟ್, ಈರುಳ್ಳಿ, ಹಸಿ ಶೇಂಗ ಸ್ವಲ್ಪ, 1 ಚಮಚ ಕೊತ್ತಂಬರಿ ಪುಡಿ, 1 ಚಮಚ ಜೀರಿಗೆ ಪುಡಿ, 2 ಚಮಚ ಗರಂ ಮಸಾಲ ಪುಡಿ, 2 ಚಮಚ ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವುದು ಹೀಗೆ : ಕುಕ್ಕರ್ ಪ್ಯಾನ್‍ಗೆ ಎಣ್ಣೆ ಹಾಕಿ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಪ್ರೈ ಮಾಡಿ ನಂತರ ಅದಕ್ಕೆ ಬೀನ್ಸ್, ಕ್ಯಾರೆಟ್, ಹಸಿ ಶೇಂಗವನ್ನು ಹಾಕಿ 2-3 ನಿಮಿಷ ಬಾಡಿಸಿದ ನಂತರ ಮೇಲಿನ ಎಲ್ಲಾ ಪುಡಿಗಳ ಜೊತೆಗೆ ಹೆಸರುಬೇಳೆ ಮತ್ತು ಗೋಧಿನುಚ್ಚನ್ನು ಹಾಕಿ, 2 ಲೋಟ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಕುದಿಸಿದ ನಂತರ ಮುಚ್ಚಳ ಮುಚ್ಚಿ 3 ಸಲ ಕೂಗಿಸಿದರೆ ಗೋಧಿ ನುಚ್ಚಿನ ಬಾತ್ ತಯಾರಾಗುತ್ತದೆ.
ಬೇಕಾಗುವ ಸಾಮಾನುಗಳು : 1 ಕಪ್ ಹುರಿದ ಗೋಧಿ ನುಚ್ಚು, ಸಣ್ಣಗೆ ಕತ್ತರಿಸಿದ ಬೀನ್ಸ್, ಕ್ಯಾರೇಟ್, ನವಿಲ್ ಕೋಸು, ಈರುಳ್ಳಿ, ಕಾಲು ಕಪ್ ಹಸಿ ಬಟಾಣಿ, 4 ಚಮಚ ಎಣ್ಣೆ, (ಮಸಾಲೆಗೆ ರುಬ್ಬಲು : ಶುಂಠಿ, ಬೆಳ್ಳುಳ್ಳಿ,) 3-4 ಹಸಿಮೆಣಸಿನಕಾಯಿ ಕಾಲು ಕಪ್ ಪುದೀನಸೊಪ್ಪು ಮತ್ತು ಮಧ್ಯಮ ಗಾತ್ರದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವುದು ಹೀಗೆ : ಮೊದಲು ಕುಕ್ಕರ್ ಪಾನ್‍ಗೆ ಎಣ್ಣೆ ಹಾಕಿ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಹಸಿವಾಸನೆ ಹೋಗುವ ತನಕ ಹುರಿಯಿರಿ. ಮೇಲಿನ ಎಲ್ಲಾ ತರಕಾರಿಗಳು, ಬಟಾಣಿ ಮತ್ತು ಗೋಧಿನುಚ್ಚನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ, 2 ಕಪ್ ನೀರು ಹಾಕಿ ಸ್ವಲ್ಪ ಕುದಿಯುವ ತನಕ ಬಿಟ್ಟು ನಂತರ ಮುಚ್ಚಳ ಮುಚ್ಚಿ 3 ಸಲ ಕೂಗಿಸಿದರೆ ಬಿಸಿ ಬಿಸಿ ಗೋಧಿ ನುಚ್ಚಿನ ಪಲಾವ್ ರೆಡಿ.
ಬೇಕಾಗುವ ಸಾಮಾನುಗಳು : 1 ಕಪ್ ಗೋಧಿ ನುಚ್ಚು, 1 ಕಪ್ ಕಾಯಿಹಾಲು, 1ಳಿ ಬೆಲ್ಲದ ಪುಡಿ, 2 ಕಪ್ ನೀರು, ದ್ರಾಕ್ಷಿ, ಗೋಡಂಬಿ, 2 ಚಮಚ ತುಪ್ಪ.
ತಯಾರಿಸುವುದು ಹೀಗೆ : ಮೊದಲು ಒಂದು ಪಾತ್ರೆಯಲ್ಲಿ ನೀರು ಹಾಕಿ ಗೋಧಿ ನುಚ್ಚನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಆಮೇಲೆ ಅದಕ್ಕೆ ಬೆಲ್ಲದ ಪುಡಿಯನ್ನು ಹಾಕಿ ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿ ಬೆಲ್ಲ ಪೂರ್ತಿಯಾಗಿ ಕರಗಿದ ನಂತರ ಕಾಯಿ ಹಾಲನ್ನು ಸೇರಿಸಿ ಚೆನ್ನಾಗಿ ಕುದಿಸಿ. ತುಂಬಾ ಗಟ್ಟಿಯಾದರೆ 1 ಕಪ್ ಹಾಲನ್ನು ಸೇರಿಸಬಹುದು ನಂತರ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿಯನ್ನು ಹಾಕಿ ಸವಿಯಲು ನೀಡಿ.
ಬೇಕಾಗುವ ಸಾಮಾನುಗಳು : 3 ಚಮಚ ಎಣ್ಣೆ, 2 ಚಮಚ ಸಾಸಿವೆ, 1 ಕಪ್ ಹುರಿದ ಗೋಧಿ ನುಚ್ಚು, ಅರ್ಧ ಕಪ್ ತೊಗರಿಬೇಳೆ, ಸಣ್ಣಗೆ ಹೆಚ್ಚಿದ ಬೀನ್ಸ್, ಕ್ಯಾರೆಟ್, ಟೊಮಾಟ್ಯೋ, ಈರುಳ್ಳಿ, 3 ಚಮಚ ಶೇಂಗ, 2 ಚಮಚ ಮೆಣಸಿನ ಪುಡಿ, 4 ಚಮಚ ಬಿಸಿಬೇಳೆ ಬಾತ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವುದು ಹೀಗೆ : ಕುಕ್ಕರ್ ಪ್ಯಾನ್‍ಗೆ ಎಣ್ಣೆ ಅದಕ್ಕೆ ಸಾಸಿವೆ ಸಿಡಿದ ನಂತರ ಈರುಳ್ಳಿ ಹಾಗೂ ಎಲ್ಲಾ ತರಕಾರಿಗಳನ್ನು ಹಾಕಿ ಬಾಡಿಸಿ ನಂತರ 2 ಕಪ್ ನೀರು ಹಾಕಿ ಮೆಣಸಿನ ಪುಡಿ ಬಿಸಿಬೇಳೆ ಬಾತ್ ಪುಡಿಯೊಂದಿಗೆ ತೊಗರಿಬೇಳೆ ಮತ್ತು ಗೋಧಿನುಚ್ಚನ್ನು ಸೇರಿಸಿ,ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕುದಿಸಿದ ನಂತರ ಮುಚ್ಚುಳ ಮುಚ್ಚಿ 2 ಸಲ ಕೂಗಿಸಿ ಕೊನೆಯಲ್ಲಿ ಬಡಿಸುವಾಗ ಹುರಿದ ಶೇಂಗವನ್ನು ಹಾಕಿದರೆ ಬಿಸಿಬೇಳೆ ಬಾತ್ ರೆಡಿ.
ನಾಗಶ್ರೀ ಪ್ರಶಾಂತ್, ಮೈಸೂರು.