Breast Cancer ಸಾಂದರ್ಭಿಕ ಚಿತ್ರ
- ವಿಶ್ವದಾದ್ಯಂತ ಮಹಿಳೆಯರನ್ನು ಕಾಡುತ್ತಿರುವ ಅತ್ಯಂತ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಸ್ತನ ಕ್ಯಾನ್ಸರ್ ಮೊದಲ ಸಾಲಿನಲ್ಲಿದೆ
- ಕಿಮೊಥೆರಪಿ ಅತ್ಯಂತ ಪರಿಣಾಮಕಾರಿಯಾಗಿದ್ದರೂ, ಅದರ ತೀವ್ರವಾದ ಅಡ್ಡಪರಿಣಾಮಗಳು ರೋಗಿಗಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಸುತ್ತವೆ
- ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ ಕೀಮೋಥೆರಪಿಯಿಂದ ಯಾವುದೇ ಹೆಚ್ಚುವರಿ ಪ್ರಯೋಜನ ಸಿಗುವುದಿಲ್ಲ
- ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಮೊದಲ ಮಾರ್ಗವೆಂದರೆ ಶಸ್ತ್ರಚಿಕಿತ್ಸೆ, ಇದು ಗೆಡ್ಡೆಯನ್ನು ತೆಗೆದುಹಾಕುತ್ತದೆ
Breast Cancer: ವಿಶ್ವದಾದ್ಯಂತ ಮಹಿಳೆಯರನ್ನು ಕಾಡುತ್ತಿರುವ ಅತ್ಯಂತ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಸ್ತನ ಕ್ಯಾನ್ಸರ್ ಮೊದಲ ಸಾಲಿನಲ್ಲಿದೆ. ಸದ್ಯಕ್ಕೆ ಇದಕ್ಕೆ ಲಭ್ಯವಿರುವ ಚಿಕಿತ್ಸೆಗಳಲ್ಲಿ ಕಿಮೊಥೆರಪಿ ಅತ್ಯಂತ ಪರಿಣಾಮಕಾರಿಯಾಗಿದ್ದರೂ, ಅದರ ತೀವ್ರವಾದ ಅಡ್ಡಪರಿಣಾಮಗಳು ರೋಗಿಗಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಸುತ್ತವೆ. ಆದರೆ, ಈಗ ವೈದ್ಯಕೀಯ ಜಗತ್ತಿನಲ್ಲಿ ಒಂದು ಕ್ರಾಂತಿಕಾರಿ ಪ್ರಗತಿ ಸಂಭವಿಸಿದೆ. ಹೊಸದಾಗಿ ಸಂಶೋಧಿಸಲಾದ ಡಿಎನ್‌ಎ ಪರೀಕ್ಷೆಯು, ಯಾವ ಸ್ತನ ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ಅಗತ್ಯವಿದೆ ಮತ್ತು ಯಾರಿಗೆ ಅದರ ಅವಶ್ಯಕತೆ ಇಲ್ಲ ಎಂಬುದನ್ನು ನಿಖರವಾಗಿ ನಿರ್ಧರಿಸಲು ನೆರವಾಗಲಿದೆ.
ಲಂಡನ್ ವಿಶ್ವವಿದ್ಯಾಲಯದ (UCL) ನೇತೃತ್ವದ ಅಂತರರಾಷ್ಟ್ರೀಯ ಅಧ್ಯಯನವು, ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಹೊಂದಿರುವ ಅನೇಕ ರೋಗಿಗಳಿಗೆ ಕೀಮೋಥೆರಪಿಯಿಂದ ಯಾವುದೇ ಹೆಚ್ಚುವರಿ ಪ್ರಯೋಜನ ಸಿಗುವುದಿಲ್ಲ. ಬದಲಿಗೆ ಅವರನ್ನು ಕೇವಲ ಹಾರ್ಮೋನು ಚಿಕಿತ್ಸೆಯ ಮೂಲಕವೇ ಅತ್ಯಂತ ಪರಿಣಾಮಕಾರಿಯಾಗಿ ಗುಣಪಡಿಸಬಹುದು ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ವಿಜ್ಞಾನಿಗಳು ಯುಕೆ, ನಾರ್ವೆ, ಸ್ವೀಡನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಥೈಲ್ಯಾಂಡ್‌ನಿಂದ 40 ವರ್ಷಕ್ಕಿಂತ ಮೇಲ್ಪಟ್ಟ 4,000 ಕ್ಕೂ ಹೆಚ್ಚು ಹೊಸದಾಗಿ ರೋಗನಿರ್ಣಯ ಮಾಡಿದ ಸ್ತನ ಕ್ಯಾನ್ಸರ್ ರೋಗಿಗಳ ಮೇಲೆ ಈ ಅಧ್ಯಯನವನ್ನು ನಡೆಸಲಾಯಿತು. ಇದಕ್ಕೆ ಸಂಶೋಧಕರು ಪ್ರೊಸಿಗ್ನಾ ಎಂಬ ಜೀನ್ ಪರೀಕ್ಷೆಯನ್ನು ಬಳಸಿದರು. ಇದು ಕ್ಯಾನ್ಸರ್ ಬೆಳವಣಿಗೆಗ ಸಂಬಂಧಿಸಿದ 50 ಜೀನ್ಗಳ ಚಟುವಟಿಕೆಯನ್ನು ವಿಶ್ಲೇಷಿಸುತ್ತದೆ. ಜೊತೆಗೆ ರೋಗವು ಮರುಕಳಿಸುವ ಅಪಾಯವನ್ನು ಅಂದಾಜು ಮಾಡುತ್ತದೆ.
ಮೂರನೇ ಎರಡರಷ್ಟು ರೋಗಿಗಳಿಗೆ ಕಿಮೊಥೆರಪಿ ನೀಡಿಲ್ಲ!
ಆದಾಗ್ಯೂ, ಕಡಿಮೆ ಅಪಾಯದಲ್ಲಿರುವ ರೋಗಿಗಳಿಗೆ ಕಿಮೊಥೆರಪಿ ನೀಡಲಾಗಿಲ್ಲ. ಬದಲಾಗಿ ಈ ಗುಂಪಿನಲ್ಲಿ ಒಟ್ಟು ಭಾಗವಹಿಸುವವರಲ್ಲಿ ಮೂರನೇ ಎರಡರಷ್ಟು ಜನರಿಗೆ ಮಾತ್ರ ಹಾರ್ಮೋನು ಚಿಕಿತ್ಸೆಯನ್ನು ನೀಡಲಾಯಿತು.
ಐದು ವರ್ಷಗಳ ಸುದೀರ್ಘ ಅವಧಿಯ ನಂತರ ಸಂಶೋಧಕರು ಪ್ರಕಟಿಸಿರುವ ಬದುಕುಳಿಯುವಿಕೆಯ ಪ್ರಮಾಣ ನಿಜಕ್ಕೂ ಆಶ್ಚರ್ಯಕರವಾಗಿದೆ.
* ಕೀಮೋಥೆರಪಿ ಇಲ್ಲದೆ (ಕೇವಲ ಹಾರ್ಮೋನ್ ಚಿಕಿತ್ಸೆ ಪಡೆದ) ರೋಗಿಗಳ ಬದುಕುಳಿಯುವಿಕೆಯ ಪ್ರಮಾಣ: 93.7%
* ಕೀಮೋಥೆರಪಿ ಪಡೆದ ರೋಗಿಗಳ ಬದುಕುಳಿಯುವಿಕೆಯ ಪ್ರಮಾಣ: 94.9%
ಈ ಎರಡು ಅಂಕಿಗಳ ನಡುವಿನ ವ್ಯತ್ಯಾಸವು ಕೇವಲ ಶೇಕಡಾ 1.2 ರಷ್ಟು ಮಾತ್ರ. ವೈದ್ಯಕೀಯ ಮತ್ತು ಸಂಶೋಧನಾ ದೃಷ್ಟಿಕೋನದಿಂದ ಈ ವ್ಯತ್ಯಾಸವು ತುಂಬಾ ಚಿಕ್ಕದಾಗಿದೆ ಎಂದು ಸಂಶೋಧಕರು ಹೇಳುತ್ತಾರೆ. ಆದಾಗ್ಯೂ, ಕೀಮೋಥೆರಪಿ ಇಲ್ಲದೆಯೂ ಸಹ ರೋಗಿಗಳು ಬಹುತೇಕ ಅದೇ ಮಟ್ಟದ ಅತ್ಯುತ್ತಮ ಫಲಿತಾಂಶ ಹಾಗೂ ದೀರ್ಘಾಯುಷ್ಯವನ್ನು ಸಾಧಿಸಬಹುದು ಎಂದು ಅಂಕಿ-ಅಂಶ ನಿಸ್ಸಂದೇಶವಾಗಿ ಸಾಬೀತುಪಡಿಸಿದೆ.
ಕೀಮೋಥೆರಪಿಯ ಅಡ್ಡಪರಿಣಾಮಗಳು
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೀಮೋಥೆರಪಿ ಪ್ರಮುಖ ಪಾತ್ರ ವಹಿಸುತ್ತದೆ, ಆದರೆ ಇದು ಅನೇಕ ಅಡ್ಡಪರಿಣಾಮಗಳನ್ನು ಸಹ ಹೊಂದಿದೆ. ರೋಗಿಗಳು ಆಯಾಸ, ವಾಕರಿಕೆ, ಕೂದಲು ಉದುರುವಿಕೆ, ಸೋಂಕಿನ ಅಪಾಯ ಮತ್ತು ಫಲವತ್ತತೆ ಸಮಸ್ಯೆಗಳನ್ನು ಅನುಭವಿಸಬಹುದು.
ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಮೊದಲ ಮಾರ್ಗವೆಂದರೆ ಶಸ್ತ್ರಚಿಕಿತ್ಸೆ, ಇದು ಗೆಡ್ಡೆಯನ್ನು ತೆಗೆದುಹಾಕುತ್ತದೆ. ನಂತರ ರೋಗಿಗಳಿಗೆ ಈ ಸಮಸ್ಯೆ ಪುನಃ ಬರದಂತೆ ತಡೆಯಲು ಕೀಮೋಥೆರಪಿಯನ್ನು ಪಡೆಯುತ್ತಾರೆ. ಆದಾಗ್ಯೂ, ಸಾಮಾನ್ಯ ರೀತಿಯ ಸ್ತನ ಕ್ಯಾನ್ಸರ್ ಹೊಂದಿರುವ ಎಲ್ಲಾ ರೋಗಿಗಳಿಗೆ ಈ ಚಿಕಿತ್ಸೆ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.
ಸಾವಿರಾರು ರೋಗಿಗಳಿಗೆ ವರದಾನ!
ಯುಸಿಎಲ್ ಪ್ರಕಾರ, ಈ ಪರೀಕ್ಷೆಯನ್ನು ವ್ಯಾಪಕವಾಗಿ ಬಳಸಲು ಪ್ರಾರಂಭಿಸಿದರೆ, ಯುಕೆಯು ರಾಷ್ಟ್ರೀಯ ಆರೋಗ್ಯ ಸೇವೆ ಒಂದರಲ್ಲೇ ಪ್ರತಿ ವರ್ಷ 5,000 ಕ್ಕೂ ಹೆಚ್ಚು ರೋಗಿಗಳು ಕಿಮೊಥೆರಪಿಯಿಂದ ಪಾರಾಗಬಹುದು.
ಕಾರ್ಡಿಫ್‌ನ 64 ವರ್ಷದ ಕರೆನ್ ಬೊನ್‌ಹ್ಯಾಮ್ ಕೂಡ ಈ ಪ್ರಯೋಗದಲ್ಲಿ ಭಾಗವಹಿಸಿದ್ದರು. ಪ್ರೊಸಿಗ್ನಾ ಅವರನ್ನು ಪರೀಕ್ಷಿಸಿದ ನಂತರ, ಅವರಿಗೆ ಕೀಮೋಥೆರಪಿಯಿಂದ ವಿನಾಯಿತಿ ನೀಡಲಾಯಿತು. ಜೊತೆಗೆ ಎಂಟು ವರ್ಷಗಳಿಂದ ರೇಡಿಯೊಥೆರಪಿ ಮತ್ತು ಹಾರ್ಮೋನ್ ಚಿಕಿತ್ಸೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಫಲಿತಾಂಶಗಳು ತನಗೆ ಭಾರಿ ನಿರಾಳತೆಯನ್ನು ನೀಡಿವೆ ಎಂದು ಅವರು ಹೇಳಿದರು.
ಚಿಕಿತ್ಸೆ ಬದಲಾಗಬಹುದು; ತಜ್ಞರ ಸೂಚನೆ!
ಕ್ಯಾನ್ಸರ್ ತಜ್ಞ ಪ್ರೊಫೆಸರ್ ಡೇವಿಡ್ ಮೈಲ್ಸ್ ಈ ಸಂಶೋಧನೆಯನ್ನು ಚಿಕಿತ್ಸೆಯಲ್ಲಿ ಒಂದು ಮಹತ್ವದ ತಿರುವು ಎಂದು ಬಣ್ಣಿಸಿದ್ದಾರೆ. ಕಿಮೊಥೆರಪಿಯಿಂದ ಯಾವ ರೋಗಿಗಳು ಪ್ರಯೋಜನ ಪಡೆಯುತ್ತಾರೆ ಮತ್ತು ಯಾರು ಪಡೆಯುವುದಿಲ್ಲ ಎಂಬುದನ್ನು ವೈದ್ಯರು ಈಗ ಹೆಚ್ಚು ವಿಶ್ವಾಸದಿಂದ ಗುರುತಿಸಬಹುದು ಎಂದು ಹೇಳುತ್ತಾರೆ.
ಮುನ್ನೆಚ್ಚರಿಕೆಯಿಂದಾಗಿ ಅನೇಕ ಮಹಿಳೆಯರಿಗೆ ಈ ಹಿಂದೆ ಕಿಮೊಥೆರಪಿ ನೀಡಲಾಗಿತ್ತು ಆದರೆ, ಅವರಲ್ಲಿ ಹೆಚ್ಚಿನವರಿಗೆ ಅದರ ಅಗತ್ಯವಿರಲಿಲ್ಲ. ಹೊಸ ಡಿಎನ್‌ಎ ಪರೀಕ್ಷೆಯು ಅಂತಹ ರೋಗಿಗಳನ್ನು ಮತ್ತು ಅದರ ಅಡ್ಡಪರಿಣಾಮಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಈ ಫಲಿತಾಂಶವು 40 ವರ್ಷದೊಳಗಿನ ರೋಗಿಗಳಿಗೆ ಅನ್ವಹಿಸುತ್ತದೆಯೇ ಎಂಬುದು ಈವರೆಗೂ ತಿಳಿದುಬಂದಿಲ್ಲ (ಏಜೆನ್ಸೀಸ್).