ಲೈಫ್‌ಸ್ಟೈಲ್

ತ್ರಿದೋಷ ನಿವಾರಕ ಅಮೃತಬಳ್ಳಿ; ಇದರಿಂದ ಎಷ್ಟೆಲ್ಲ ಉಪಯೋಗವಿದೆ ಗೊತ್ತಾ...

ಔಷಧಿಯ ಬಳ್ಳಿಗಳಲ್ಲಿ ಅಮೃತಬಳ್ಳಿಯು ಪ್ರಸಿದ್ಧವಾದುದು. ಮನೆಯಲ್ಲಿಯೇ ಸುಲಭವಾಗಿ ಬೆಳೆಯಬಹುದಾದ ಇದರ ಎಲೆ, ಕಾಂಡ ಮತ್ತು ಬೇರು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ಇದರ ವೈಜ್ಞಾನಿಕ ಹೆಸರು Tinospora cordifolia. ಹೆಚ್ಚಾಗಿ ಮನೆಯ ಹಿತ್ತಲಲ್ಲಿ, ತೋಟದ ಬೇಲಿಗಳ ಮೇಲೆ ಹಬ್ಬಿರುವ ಇದರ ಕಾಂಡವು ಮೃದುವಾಗಿದ್ದು, ಎಲೆ ಹೃದಯದ ಆಕಾರದಲ್ಲಿರುತ್ತದೆ. ವಾತ, ಪಿತ್ತ, ಕಫ - ಈ ಮೂರು ದೋಷಗಳನ್ನೂ ಅಮೃತಬಳ್ಳಿಯು ಶಮನ ಮಾಡುವ ಗುಣವುಳ್ಳದ್ದು.

  1. ಮಜ್ಜಿಗೆಗೆ ಅಮೃತಬಳ್ಳಿ ರಸವನ್ನು ಸೇರಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ.
  2. ಅಮೃತಬಳ್ಳಿ ಮತ್ತು ಆಡುಸೋಗೆಯ ಜ್ಯೂಸ್​ಗೆ ಬೆಲ್ಲ ಹಾಕಿ ಕುಡಿಯುವುದರಿಂದ ವಾಯುಬಾಧೆ ನಿವಾರಣೆಯಾಗುತ್ತದೆ. 
  3. ಅಮೃತಬಳ್ಳಿ ಎಲೆಯ ರಸಕ್ಕೆ ಮಜ್ಜಿಗೆ ಹಾಗೂ ಓಮಕಾಳಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆಯುರಿ ಕಡಿಮೆಯಾಗುತ್ತದೆ.
  4. ಅಮೃತಬಳ್ಳಿಯ ಎಲೆ ಹಾಗೂ ಕಾಂಡವನ್ನು ಜಜ್ಜಿ, ಪೇಸ್ಟ್ ಮಾಡಿಕೊಂಡು ಚರ್ಮಕ್ಕೆ ಲೇಪಿಸಿಕೊಳ್ಳುವುದರಿಂದ ಚರ್ಮರೋಗಗಳನ್ನು ದೂರವಿಡಬಹುದು.
  5. ಎರಡು ಚಮಚ ಅಮೃತಬಳ್ಳಿಯ ರಸವನ್ನು ತುಪ್ಪದೊಡನೆ ಬೆರೆಸಿ ಒಂದು ತಿಂಗಳ ಕಾಲ ಬೆಳಗ್ಗೆ ಮತ್ತು ಸಂಜೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
  6. ಒಂದು ಚಮಚ ಜೇನುತುಪ್ಪ ಬೆರಸಿದ ಎರಡು ಚಮಚ ಅಮೃತಬಳ್ಳಿ ಕಾಂಡದ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಧುಮೇಹ ಕ್ರಮೇಣ ಹತೋಟಿಗೆ ಬರುತ್ತದೆ.
  7. ಅಮೃತಬಳ್ಳಿಯ ತುಂಡನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ಸ್ವಲ್ಪ ಕಾಲ ನೆನೆಸಿಡಬೇಕು. ನಂತರ ಅದನ್ನು ಕಿವುಚಿ ತೆಗೆದು ಸೋಸಿ, ಆ ನೀರನ್ನು ಸೇವಿಸುವುದರಿಂದ ವಾಂತಿಯನ್ನು ಕಡಿಮೆ ಮಾಡಬಹುದು.
  8. ಜಜ್ಜಿದ ಅಮೃತಬಳ್ಳಿಯನ್ನು ಕೊಬ್ಬರಿ ಎಣ್ಣೆ ಜೊತೆ ಸೇರಿಸಿ, ಕುದಿಸಿ, ಆರಿಸಿ ಇಟ್ಟುಕೊಳ್ಳಬೇಕು. ಆ ಎಣ್ಣೆಯನ್ನು ಪ್ರತಿನಿತ್ಯ ತಲೆಗೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
  9. ಅಮೃತಬಳ್ಳಿಯ ಕಾಂಡವನ್ನು ಜಜ್ಜಿ, ನೀರಿನಲ್ಲಿ ಹಾಕಿ ಕುದಿಸಿ, ಕಷಾಯ ಮಾಡಿ ಕುಡಿಯುವುದರಿಂದ ಜ್ವರ ಕಡಿಮೆಯಾಗುತ್ತದೆ. ಇದರ ಕಾಂಡದ ರಸವನ್ನು ಜೇನುತುಪ್ಪದೊಂದಿಗೆ ದಿನಕ್ಕೆ ಮೂರು ಬಾರಿ ಆಹಾರಸೇವನೆಯ ಮೊದಲೇ ಸೇವಿಸುವುದರಿಂದ ಜ್ವರ, ಶೀತ ಕಡಿಮೆಯಾಗುತ್ತದೆ.