ಕೆಲವರಿರುತ್ತಾರೆ, ಯಾವಾಗ ನೋಡಿದರೂ ಮುಖವನ್ನು ಗಂಟಿಕ್ಕಿಕೊಳ್ಳುತ್ತಾರೆ. ಇಂತಹವರದು ಗಂಟು ಮೋರೆ, ಸಿಡುಕು ಮುಖ, ಗಡಸು ಮುಖ. ಇನ್ನು ಕೆಲವರದು ಜೋಲು ಮುಖ, ಸಪ್ಪೆ ಮುಖ. ಇಂತಹವರ ಬಳಿ ಹೋಗಲು, ಮಾತನಾಡಲು ಮನಸ್ಸೇ ಆಗುವುದಿಲ್ಲ. ಈ ಕಾರಣದಿಂದ ಜನ ಇವರಿಂದ ದೂರ ಉಳಿಯುತ್ತಾರೆ. ಇಂತಹವರಿಗೆ ಗೆಳೆಯರೂ, ಅಭಿಮಾನಿಗಳೂ ಕಡಿಮೆ. ಇಂತಹವರು ಏನೋ ಒಂದು ಚಿಂತೆಯಲ್ಲಿ, ಯೋಚನೆಯಲ್ಲಿ ಮುಳುಗಿರುತ್ತಾರೆ. ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಮುಖದ ಮೇಲೆ ವ್ಯಕ್ತಪಡಿಸುತ್ತಿರುತ್ತಾರೆ. ಸಣ್ಣ ಸಣ್ಣ ವಿಚಾರಗಳಿಗೂ ಆಕಾಶವೇ ಕಳಚಿ ಬಿದ್ದಂತೆ, ಟೆನ್ಶನ್ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಸದಾ ಹಸನ್ಮುಖಿಗಳಾಗಿರುತ್ತಾರೆ. ತಮ್ಮೊಳಗಿನ ಸಂಕಟ-ಸಮಸ್ಯೆಗಳೇನೇ ಇರಲಿ, ಅದನ್ನು ಇತರರಿಗೆ ತೋರ್ಪಡಿಸುವುದಿಲ್ಲ.
ವೈಜ್ಞಾನಿಕವಾಗಿ ನೋಡಿದರೂ, ಗಂಟು ಮೋರೆ ಹಾಕಿಕೊಳ್ಳಲು ವ್ಯಯವಾಗುವ ಶಕ್ತಿ, ಮಂದಸ್ಮಿತರಾಗಲು ವ್ಯಯವಾಗುವ ಶಕ್ತಿಗಿಂತ ಎಷ್ಟೋ ಪಟ್ಟು ಜಾಸ್ತಿ. ಮಂದಹಾಸ ಬೀರಲು ಕೆಲವೇ ಸ್ನಾಯುಗಳು ಸಾಕಾದರೆ, ಮುಖ ಗಂಟಿಕ್ಕಿಕೊಳ್ಳಲು ಹಲವಾರು ಸ್ನಾಯುಗಳು ಕೆಲಸ ಮಾಡಬೇಕಾಗುತ್ತದೆ. ಅಂದ ಮೇಲೆ ಮಂದಸ್ಮಿತರಾಗಿರೋದು ಆರೋಗ್ಯದ ದೃಷ್ಟಿಯಿಂದಲೂ ಲಾಭದಾಯಕ.
ಇನ್ನೊಂದು ಸತ್ಯ ಸಂಗತಿ ಎಂದರೆ, ಮಂದಸ್ಮಿತರಾದಾಗ ಎಂತಹ ಕುರೂಪಿಯೂ ಸುಂದರವಾಗಿ ಕಾಣುತ್ತಾನೆ. ಸಿಟ್ಟು ಮಾಡಿಕೊಂಡಾಗ ಎಂತಹ ಸುಂದರ ವ್ಯಕ್ತಿಯೂ ಕುರೂಪಿಯಾಗಿ ಕಾಣುತ್ತಾನೆ. ಒಬ್ಬರಿನ್ನೊಬ್ಬರನ್ನು ಭೇಟಿಯಾದಾಗ ಮುಗುಳ್ನಗೆ ಬೀರುವುದೆಂದರೆ, ಹತ್ತಿರ ಬರಲು, ಬಂದು ಮಾತನಾಡಿಸಲು ಆಹ್ವಾನ ನೀಡಿದಂತೆ. ಹತ್ತಡಿ ದೂರವಿದ್ದವರೂ ಒಂದಡಿ ಹತ್ತಿರ ಬರುತ್ತಾರೆ. ನಮ್ಮ ಮುಖದಲ್ಲಿ ಮುಗುಳ್ನಗೆಯೊಂದು ಮಿಂಚಿದರೆ, ಅದು ಎದುರಿಗಿರುವಾತನ ಮುಖದಲ್ಲೂ ಪ್ರತಿಬಿಂಬಿಸುತ್ತದೆ. ಆತನೂ ಮುಗುಳ್ನಕ್ಕು ಅದನ್ನು ಸ್ವಾಗತಿಸುತ್ತಾನೆ.
ಮುಗುಳ್ನಗೆ ನಮ್ಮ ಮುಖದ ಕಾಂತಿಯನ್ನು ವೃದ್ಧಿಸುವುದಲ್ಲದೆ, ಜನರ ಪ್ರೀತಿ ವಿಶ್ವಾಸಗಳನ್ನು ಗಳಿಸುವಲ್ಲೂ ನೆರವಾಗುತ್ತದೆ. ಸದಾ ನಗುಮುಖ ಇರುವ ವ್ಯಕ್ತಿ ಎಲ್ಲರ ಪ್ರೀತಿ ಸ್ನೇಹಗಳಿಗೆ ಪಾತ್ರನಾಗುತ್ತಾನೆ. ಸಂಬಂಧಗಳನ್ನು ಬೆಸೆಯುವಲ್ಲಿ, ಗಟ್ಟಿಗೊಳಿಸುವಲ್ಲಿ ಕೂಡ ಮುಗುಳ್ನಗೆ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅಸಹನೆ-ಅಸಮಾಧಾನ, ಕೋಪ-ತಾಪ, ದ್ವೇಷ-ಕೋಪ, ತಾತ್ಸಾರ-ಇವೆಲ್ಲವನ್ನೂ ತಣಿಸುವ, ಮಣಿಸುವ ಶಕ್ತಿ ಮುಗುಳ್ನಗೆಗೆ ಇದೆ.
ಸಾರ್ವಜನಿಕರ ಸೇವೆ, ಸಂಪರ್ಕದಲ್ಲಿರಬೇಕಾದ ವ್ಯಕ್ತಿಯಲ್ಲಂತೂ ಮುಗುಳ್ನಗೆ ಅತ್ಯವಶ್ಯಕ. ಆದರೆ ನಮ್ಮ ಮುಗುಳ್ನಗೆ ವಿಮಾನದಲ್ಲಿನ ಗಗನಸಖಿಯರ ಮುಗುಳ್ನಗೆಯಂತೆ ಕೃತಕವಾಗಿರಬಾರದು; ಅದು ಪ್ರಾಮಾಣಿಕವಾಗಿರಬೇಕು; ನೈಜವಾಗಿರಬೇಕು; ಸಹಜ ಸ್ವಾಭಾವಿಕವಾಗಿರಬೇಕು; ಒತ್ತಾಯದ ನಗುವಾಗಿರಬಾರದು.
ಸಿಡುಕು ಮುಖವಿರುವ ವ್ಯಕ್ತಿಗಳನ್ನು ಮಾತನಾಡಿಸಲು ಜನ ಭಯಪಡುತ್ತಾರೆ. ಆದರೆ ಮಂದಸ್ಮಿತರನ್ನು ಮಾತನಾಡಿಸಲು ಜನ ಇಷ್ಟಪಡುತ್ತಾರೆ. ಆದುದರಿಂದ, ನಮ್ಮೊಳಗಿನ ತಳಮಳಗಳೇನೇ ಇರಲಿ, ಮುಖದ ಮೇಲೊಂದು ಮಂದಹಾಸ ಮಿಂಚುತಿರಲಿ. ಇದರಿಂದ ನಮಗೆ ಲಾಭವೇ ಹೊರತು ನಷ್ಟವಂತೂ ಖಂಡಿತ ಇಲ್ಲ. ಕೆಲವರಿಗಂತೂ ಮಂದಹಾಸ ಬೀರಲು ಸಾಧ್ಯವಾಗುವುದೇ ಇಲ್ಲ. ಇದು ಒಂದು 'ಮ್ಯಾನುಫಾಕ್ಟರಿಂಗ್ ಡಿಫೆಕ್ಟ್'. ಹಾಗೆಂದು ದಿನವಿಡೀ ಮುಗುಳ್ನಗೆ ಬೀರುತ್ತಿರುವುದು ಇಲ್ಲವೇ ಗಂಭೀರ ಸನ್ನಿವೇಶಗಳಲ್ಲೂ ಮಂದಸ್ಮಿತರಾಗಿಯೇ ಇರುವುದು ಸರಿ ಎನಿಸದು. ಮುಖ್ಯವಾಗಿ ಒಬ್ಬರಿನ್ನೊಬ್ಬರನ್ನು ಭೇಟಿಯಾದಾಗ ಹಾಗೂ ಒಬ್ಬರಿನ್ನೊಬ್ಬರ ಜೊತೆ ಮಾತನಾಡುವಾಗ ಮಂದಹಾಸವಿದ್ದರೆ ಚೆನ್ನ.
ಈ ಸತ್ಯವನ್ನೇ ಡಿ.ವಿ.ಜಿ.ಯವರು ಹೀಗೆಂದರು:
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |ಹಿತವಿರಲಿ ವಚನದಲಿ, ಋತವ ಬಿಡದಿರಲಿ ||ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ||
ಭಗವಂತನನ್ನು ವರ್ಣಿಸುವಾಗಲೂ ನಾವು ‘ಪ್ರಸನ್ನವದನಂ’ ಎಂಬುದಾಗಿಯೇ ಸಂಬೋಧಿಸುತ್ತೇವೆ. ತಾತ್ಪರ್ಯ ಇಷ್ಟೆ: ಮುಖದ ಮೇಲೊಂದು ಮಂದಹಾಸವೇ ಬಲು ದೊಡ್ಡ ಸಿಂಗಾರ. ಆದುದರಿಂದ ಈ ಕಲೆಯನ್ನು ರೂಢಿಸಿಕೊಳ್ಳೋಣ. ಹಾಗೆಂದು ಅದು ಒತ್ತಡದ, ವಿಷಾದದ, ವಿಕಾರದ ಮುಗುಳ್ನಗೆಯಾಗಿರಬಾರದು. ಸಹಜ ಸ್ವಾಭಾವಿಕವಾದ ನೈಜ ಮುಗುಳ್ನಗೆಯಾಗಿರಲಿ.